ತುಳುನಾಡಿನ ಜನರಿಗೆ ಬಹುಷ ಹಬ್ಬ ಹರಿದಿನ ಇಲ್ಲದ ಮಾಸವೇ ಇಲ್ಲ ಅನ್ನಬಹುದು. ದಿನಕ್ಕೊಂದು ಸಂತೋಷದ ಕೂಟ. ಆಟಿ ಅಮವಾಸ್ಯೆ ಬಂತೆಂದರೆ ಹಾಳೆಯ ಕಹಿ ಮದ್ದು ಕುಡಿಯುವ ಆತುರ, ಮೆಂತೆ ಗಂಜಿ ಉಣ್ಣುವ ಸುಸಂದರ್ಭ, ಗುಡ್ಡೆಯ ರಾವುಗೆ ತಂಬಿಲ ಬಡಿಸುವ ಸಡಗರ ಅದರ ಒಟ್ಟಿಗೆ ಪುತ್ತೂರು,ಬೆಳ್ತಂಗಡಿ ಮತ್ತು ಸುಳ್ಯ ಕಡೆ ವಿಶಿಷ್ಟ ಆಚರಣೆಯಾದ ದಾನ ಬಿಟ್ಟು ತೀರ್ಥ ಸ್ನಾನ ಮಾಡುವ ಸಂಪ್ರದಾಯ. ಮಂಜಾನೆ ಬೇಗ ಎದ್ದು ನಿತ್ಯ ಕರ್ಮ ಮುಗಿಸಿ ಕುಡಿ ಬಾಳೆ ಎಲೆಯಲ್ಲಿ ತಾವು ಬೆಳೆದ ದವಸ ಧಾನ್ಯ, ಅಡಿಕೆ, ವೀಳ್ಯದೆಲೆ,ಕಾಡು ಹೂಗಳು(ರಥ ಹೂ), ಸವೆದ ನಾಣ್ಯ ಮತ್ತು ದೀಪದ ಬತ್ತಿ ಉರಿಸಿ ಮೂರು ಸುತ್ತು ತಲೆ ಮೇಲೆ ಬರಿಸಿ ಬಾಳೆ ಎಲೆ ತುದಿಯನ್ನು ಕೆಲ ಮುಖವಾಗಿ ಇಟ್ಟು ಅದನ್ನು ನೋಡದೆ ನೀರಿಗೆ ಬಿಟ್ಟು ನನ್ನ ಎಲ್ಲ ಗ್ರಹಚಾರ ದೋಷಗಳು ನಾನು ಬಿಡುವ ದಾನದೊಂದಿಗೆ ಹೋಗಲಿ ಎಂದು ಹೇಳುತ್ತಾ ಮೂರು ಸಲ ಮುಳುಗಿ ಎದ್ದು ಮನೆಗೆ ಹೋಗಿ ಹಾಳೆ ಮರದ ಕಷಾಯ ಮತ್ತು ಮೆಂತೆ ಗಂಜಿಯನ್ನು ಉಣ್ಣುವುದು ವಾಡಿಕೆ.
ಈ ರೀತಿಯಲ್ಲಿ ದಾನ ಬಿಡುವ ಉದ್ದೇಶವು ಇನ್ನೊಂದು ಇದೆ. ಮೊಟ್ಟೆ ಇಟ್ಟು ಕ್ಷೀಣವಾದ ಮೀನುಗಳಿಗೆ ಆಹಾರವಾಗಿ ದಾನದ ರೂಪದಲ್ಲಿ ಯತೇಚ್ಚವಾಗಿ ದವಸ ಧಾನ್ಯ ಸುರಿಯುವುದು ಹಾಗೂ ದಾನದ ರೂಪದಲ್ಲಿ ಸುರಿದ ಧಾನ್ಯಗಳು ಎಲ್ಲಾದರು ಒಂದು ಕಡೆ ಹುಟ್ಟಿಕೊಳ್ಳಲಿ ಅಹಾರದ ಸಮಸ್ಯೆ ನೀಗಲಿ ಎನ್ನುವುದು ಹಿರಿಯರ ಭವಿಷ್ಯದ ಯೋಚನೆ. ಅದೇ ರೀತಿಯಲ್ಲಿ ಸವೆದ ನಾಣ್ಯಗಳನ್ನು ನೀರಿಗೆ ಬಿಡುವ ಉದ್ದೇಶವು ಅಷ್ಟೆ ಭೂಮಿಯಿಂದ ಪಡೆದದ್ದನ್ನು ಭೂಮಿಗೆ ಮರಳಿ ನೀಡುವ ಉದಾರ ಮನೋಭಾವನೆ. ಪೂರ್ವಿಕರು ಮಾಡಿದ ಯಾವುದೇ ಆಚರಣೆಗಳು ಯಾವುದು ಅರ್ಥ ರಹಿತವಾದುದ್ದು ಅಲ್ಲ. ನಾಗರೀಕತೆಯ ಸೋಗಿನಲ್ಲಿ ಇಂತಹ ಎಲ್ಲ ಆಚರಣೆಗಳು ನಶಿಸಿಹೋಗುತ್ತಿವೆ. ಉಳಿಸುವ ಜವಬ್ದಾರಿಯು ನಮ್ಮ ಮೇಲೆ ಇದೆ. ಬರಹ: ಶೈಲು ಬಿರ್ವ ಅಗತ್ತಾಡಿ ದೋಲ ಬರ್ಕೆ
0 comments: