ಉಪ್ಪಿನಂಗಡಿ ಬೆಳ್ತಂಗಡಿ ಹೆದ್ದಾರಿಯಲ್ಲಿ ಗೇರು ಕಟ್ಟೆಯಿಂದ ಒಂದು ಕಿ.ಮೀ ಮುಂದೆ ಸಾಗಿದಾಗ ಸಿಗುವ ಎಡ ರಸ್ತೆಯಲ್ಲಿ ಮೂರು ಕಿ.ಮೀ ಕ್ರಮಿಸಿದಾಗ ಗೇರು ಕಟ್ಟೆ ಪೋಸ್ಟಿಗೆ ಸೇರಿದ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ಹೇರೋಡಿ ಗುತ್ತು ಮನೆಯಿದೆ. ಸುತ್ತು ಮುದಲಿನಿಂದ ಕೂಡಿದ ಉಪ್ಪರಿಗೆಯುಳ್ಳ ಬಹು ವಿಶಾಲವಾದ ಮತ್ತು ಸುಂದರವಾದ ಈ ಗುತ್ತು ಮನೆ ಸುಸ್ಥಿತಿಯಲ್ಲಿದೆ. ಒಂದು ಕಾಲದಲ್ಲಿ ಬಹಳ ಶ್ರೀಮಂತಿಕೆಯ ವೈಭವದಿಂದ ಮೆರೆದ ಬೇಸಾಯದ ಈ ಗುತ್ತು ಮನೆ ಪಡಿಪ್ಪಿರೆಯಿಂದ ಕೂಡಿ ಮನೋಹರವಾಗಿದೆ.
ಮೂಡಣ ದಿಕ್ಕಿಗೆ ಮುಖವಾಗಿರುವ ಹೆಬ್ಬಾಗಿಲಿನಿಂದ ಒಳಕ್ಕೆ ಹೊಕ್ಕಾಗ ವಿಶಾಲ ಒಳ ಅಂಗಣವಿದ್ದು ಉಪ್ಪರಿಗೆಯ ಸುಂದರವಾದ ಸುಸ್ಥಿತಿಯಲ್ಲಿ ಇರುವ ಭೋದಿಗೆ ಕಂಬಗಳಿಂದ ಕೂಡಿದ ಮನೆಯ ಚಾವಡಿ ಎದುರಾಗುತ್ತದೆ. ಗುತ್ತಿನ ಉತ್ತರ ದಿಕ್ಕಿನಲ್ಲಿ ಬಾಕಿಮಾರಿಗೆ ಇಳಿಯಲು ಮತ್ತೊಂದು ಬಾಗಿಲಿದೆ. ಗುತ್ತಿನ ಹೊರಸುತ್ತಿನ ಪೂರ್ವದ ಮುಖದ ಮುಖ್ಯ ಬಾಗಿಲು ಎತ್ತರವಾದ ಪಡಿಪ್ಪಿರೆ ಎನ್ನುವ ತುಳು ಸಂಸ್ಕೃತಿಯ ಹೆಬ್ಬಾಗಿಲನ್ನು ಹೊಂದಿದೆ. ಈ ಹೆಬ್ಬಾಗಿಲು ಗುತ್ತು ಮನೆಯ ಎದುರಿನ ಹೊರ ಸುತ್ತು ಪೌಳಿಯ ಮಧ್ಯಭಾಗದಲ್ಲಿ ಗುತ್ತಿನ ಚಾವಡಿಗೂ ಮಧ್ಯಸ್ಥಾನಕ್ಕೂ ಅಭಿಮುಖವಾಗಿ ಇದೆ. ಈ ಪಡಿಪ್ಪಿರೆಯ ಭಾಗವು ಪೌಳಿಯ ಉಳಿದ ಎಡಬಲದ ಮಾಡಿನ ಭಾಗಕ್ಕಿಂತ ಎತ್ತರವಾಗಿ ಮಾಳಿಗೆಯಿಂದ ಕೂಡಿ ಮನೋಹರವಾಗಿದೆ. ಈ ಮಾಳಿಗೆಯ ಎಡಬಲದ ಪೌಳಿಯ ಮಾಡು ಮಾಳಿಗೆ ರಹಿತವಾಗಿದ್ದು ಉದ್ದಕ್ಕೆ ಹರಡಿಕೊಂಡಿದೆ.
ಈ ಬಾಗಿಲನ್ನು ದಾಟಿ ಅಂಗಳವನ್ನು ಮುಟ್ಟುತ್ತೇವೆ. ಪಡಿಪ್ಪಿರೆ ಇರುವ ಸ್ಥಾನದ ಒಳಭಾಗದಲ್ಲಿ ಎರಡೂ ಬದಿಗಳಲ್ಲಿ ಸುಂದರವಾದ ಎತ್ತರದ ಚಾವಡಿಗಳಿವೆ. ಉಳಿದಂತೆ ಪೌಳಿಯ ಒಳಭಾಗದ ಎಡಬಲಗಳಲ್ಲಿ ಕೋಣೆಗಳಿವೆ. ಹೆಬ್ಬಾಗಿಲ ಚಾವಡಿಯಲ್ಲಿ ಎತ್ತರದ ಕಂಬಗಳು ಮತ್ತು ಎತ್ತರದ ಬಾಗಿಲು ಗುತ್ತು ಮನೆಗೆ ಶೋಭೆ ಹಾಗೂ ಗಾಂಭೀರ್ಯವನ್ನು ತಂದುಕೊಟ್ಟಿದೆ. ಚಾವಡಿಯ ಮೇಲ್ಚಾವಣಿಗೆ ಇಟ್ಟ ಮರದ ದಪ್ಪ ಕರಿ ಹಲಗೆ ಮತ್ತು ದೊಡ್ಡ ದೊಡ್ಡ ತೊಲೆಗಳಿಂದ ಸುಶೋಭಿತವಾಗಿದೆ.
ಈ ಗುತ್ತಿನವರು ಬಂಗೇರ ಬಳಿಯವರು. ಗುತ್ತಿನಲ್ಲಿ ಒಂದು ಕಾಲದಲ್ಲಿ ಸಂತಾನ ಇಲ್ಲದಂತಹ ಸಂಧರ್ಭದಲ್ಲಿ ಅಬ್ಬಕ್ಕು ಎಂಬ ಹೆಣ್ಣು ಮಗುವನ್ನು ಪ್ರತಿಷ್ಥಿತ ಮುಗ್ಗ ಗುತ್ತಿನಿಂದ ದತ್ತು ಪಡೆಯುತ್ತಾರೆ. ಅದೇ ಅಬ್ಬಕ್ಕು ಕುಟುಂಬದ ಪೀಳಿಗೆ ಇಲ್ಲಿ ಈಗ ಮುಂದುವರಿದಿದೆ. ಸುಮಾರು ನೂರು ಮುಡಿಗೂ ಹೆಚ್ಚು ಸ್ವಂತ ಭೂಮಿಯನ್ನು ಹೊಂದಿದ್ದ ಈ ಗುತ್ತಿನ ಕೆಲವು ಭೂಮಿ ಒಕ್ಕಲು ಮಸೂದೆಯ ಕಾರಣದಿಂದ ಒಕ್ಕಲುಗಳ ಪಾಲಾಗಿದೆ. ೨೫ ಮುಡಿಯ ಆಸ್ತಿ ಈಗ ಮನೆಯ ಸ್ವಾಧೀನದಲ್ಲಿದೆ. ಮುರ್ತೊಟ್ಟು, ಪಜತಡ್ಕ, ಕಲ್ಲಾಪು, ಅಡ್ಡಕೊಡಂಗೆ, ನಲ್ಕೆತ್ತಾರು ಎಂಬವುಗಳು ಒಕ್ಕಲು ಮನೆ ಗಳಾಗಿದ್ದ ವು. ಹೇರೋಡಿ ಗುತ್ತಿನಲ್ಲಿ ಕಂಬಳದ ಕೋಣಗಳಿದ್ದು ಬಾಳೆಹಾಕುವ ಮತ್ತು ಪೂಕರೆ ಹಾಕುವ ಗದ್ದೆಗಳಿವೆ. ಈ ಗುತ್ತಿನಲ್ಲಿ ೪೦ ಕ್ಕೂ ಹೆಚ್ಚು ಕುಟುಂಬಸ್ಥರು ಕೂಡಿ ಬಾಳುತ್ತಿದ್ದ ಕಾಲವೊಂದಿತ್ತು. ಈಗ ಯಾರು ವಾಸಗಿಲ್ಲ. ಗುತ್ತಿನ ಚಾವಡಿಯಲ್ಲಿ ನ್ಯಾಯ ಪಂಚಾಯತಿಗಳು ನಡೆಯುತ್ತಿದ್ದವು. ಚಾವಡಿಯಲ್ಲಿ ಲೆಕ್ಕೇಸಿರಿ, ದೈವಂಕುಳು, ಮೈಸಂದಾಯ ಮತ್ತು ಪಂಜುರ್ಲಿ ದೈವಗಳಿವೆ.
ಬಲಭಾಗದ ಪಾರ್ಶ್ವದಲ್ಲಿ ಕಲ್ಲುರ್ಟಿ, ಪಂಜುರ್ಲಿ,ಮಂತ್ರಜಾವದೆ, ಕುಪ್ಪೆಟ್ಟು ದೈವಗಳು, ನುದರ ಕೊರತಿ ದೈವಗಳಿವೆ. ಹೊರಗಡೆಯಿಂದ ಗುಳಿಗ ಸಾನಿಧ್ಯವಿದೆ. ಗುತ್ತಿನ ಉಪ್ಪರಿಗೆಯಲ್ಲಿ ಗುತ್ತಿನ ಹೆಂಗಸರಿಗೆ ಗುತ್ತಿಗೆ ಅಪರಿಚಿತರು ಬಂದಾಗ ನೋಡಲು ಒಂದು ಕಿಟಕಿಯ ವ್ಯವಸ್ಥೆಯಿದೆ. ಇಲ್ಲಿ ವಾರ್ಷಿಕವಾಗಿ ಅಗೇಲು ಪರ್ವಗಳು ಮತ್ತು ನಾಗ ತಂಬಿಲ, ಪಾಡ್ಯತಂಬಿಲ, ಸೋಣ ಶನಿವಾರ ಮುಂತಾದ ಸೇವೆಗಳು ನಡೆಯುತ್ತದೆ. ಇಲ್ಲಿಂದ ದೈವಂಕುಲು ದೈವದ ಭಂಡಾರ ಹೋಗಿ ಗ್ರಾಮದಲ್ಲಿ ನೇಮವಾಗುತ್ತಿದ್ದ ಬಗೆಗೆ ಮನೆಯವರು ನೆನಪಿಸಿಕೊಂಡು ಮಾಹಿತಿ ನೀಡಿದರು. ಇದು ಬಿಟ್ಟರೆ ಹೆಚ್ಚಿನ ಮಾಹಿತಿಯಾಗಲಿ ಮನೆತನದ ಪ್ರಾಚೀನ ಇತಿಹಾಸವಾಗಲಿ ಮನೆಯವರಿಗೆ ತಿಳಿದಂತಿಲ್ಲ. ಪ್ರಸ್ತುತ ಕೆ.ಗೋಪಣ್ಣ ಬಂಗೇರ ಮತ್ತು ಕೆ.ಬಾಸ್ಕರ ಬಂಗೇರರ ಮುಂದಾಳುತ್ವದಲ್ಲಿ ಇಲ್ಲಿನ ಎಲ್ಲಾ ಕಾರ್ಯಗಳ ನಡೆದುಕೊಂಡು ಬರುತ್ತಿದೆ.
ಇಲ್ಲಿನ ಸೇವೆಗಳ ದಿನದಂದು ಇಲ್ಲಿ ಕುಟುಂಬಿಕರು ಬಂದು ಸೇರುತ್ತಾರೆ. ರಾಜಕೀಯ ಮತ್ತು ಸಾಮಾಜಿಕ ಸೇವೆಗಳಲ್ಲಿ ಈ ಗುತ್ತು ಮನೆಯ ಕೆಲವು ಸದಸ್ಯರು ತೊಡಗಿಸಿಕೊಂಡಿದ್ದಾರೆ. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಮತ್ತು ನಿವೃತ್ತ ಪೋಲಿಸ್ ವರಿಷ್ಠಾಧಿಕಾರಿ ಪಿತಾಂಬರ ಹೇರಾಜೆ ಈ ಗುತ್ತು ಮನೆಯ ಸದಸ್ಯರು. ಈ ಗುತ್ತು ಮನೆಯ ಜೀರ್ಣೋದ್ಧಾರದ ಬಗೆಗೆ ಚಿಂತನೆಗಳು ನಡೆಯುತ್ತಿದೆ.
ಸಹಕಾರ : Shailu Birwa Agathady Barke (ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) ಬರಹ- ಸಂಕೇತ್ ಪೂಜಾರಿ
0 comments: