Thursday, January 11, 2018

ಬಿಲ್ಲವರ ಗುತ್ತು ಮತ್ತು ಐತಿಹಾಸಿಕ ಮನೆತನಗಳು (ಪೇರಿ ಗುತ್ತು)

ಬೆದ್ರ(ಮೂಡ ಬಿದಿರೆ) ಸಮೀಪದ ಪೊಸಂಗಡಿ‌ ಗ್ರಾಮದ ಪೆರಿಂಜೆ‌ ಎಂಬ ಗ್ರಾಮದಲ್ಲಿ ‌ಸುವರ್ಣ ಬಳಿಯವರಿಗೆ‌ ಸೇರಿದ ಪೇರಿ ಗುತ್ತು ಮನೆ ಇದೆ‌. ಇದಕ್ಕೆ ಸಂಬಂಧಿಸಿದ ಮೂರು‌ ಮನೆತನಗಳಿದ್ದು‌ ಅವುಗಳೆಂದರೆ‌ ಪುಚ್ಚೇರಿ ಲೆಕ್ಕಿ,‌ನೆಕ್ಕಿಲ, ಕೆಮ್ಮಾರ್. ಈ ಮೂರು ಮನೆತನಗಳಿಗೂ ಮೂಲ ಮನೆಯಾಗಿ ಪೇರಿ ಗುತ್ತು ಇದೆ‌. ನಾಲ್ಕು ಸುತ್ತಿನ ಈ ಮನೆಯ ಒಂದು ಪಾರ್ಶ್ವ ಬಿಟ್ಟರೆ ಉಳಿದ ಭಾಗಗಳು ಸುಸ್ತಿತಿಯಲ್ಲಿ ಇವೆ.

ಪ್ರಧಾನ ಚಾವಡಿಯಲ್ಲಿ ಬೃಹತ್ ಗಾತ್ರದ ಸುಂದರವಾದ ಭೋದಿಗೆ ಕಂಬಗಳಿವೆ. ಹಿಂದೆ ಈ ಚಾವಡಿಯಲ್ಲಿ ಊರಿನ ಸಣ್ಣ ಪುಟ್ಟ ನ್ಯಾಯ ಪಂಚಾಯತಿಗಳು ನಡೆಯುತ್ತಿದ್ದವು ಎಂದು ಗುತ್ತಿನ ಈಗಿನ ಯಜಮಾನರಾಗಿರುವ ಪದ್ಮರಾಜರು ತಿಳಿಸಿದರು. ಕೆಮ್ಮಾರು ಮತ್ತು ಪೇರಿ ಅಕ್ಕ ತಂಗಿಯರ ಮನೆಗಳಾಗಿದ್ದು ಪೇರಿ ಗುತ್ತಿನಲ್ಲಿ ದೈವಗಳ ಪರ್ವ ಆಗುವಾಗ ಕೆಮ್ಮಾರಿನ ಒಂದು ಮಗುವಾದರೂ ಇಲ್ಲಿ ಉಪಸ್ಥಿತಿ ಇರಬೇಕೆಂಬುದು ನಿಯಮ. ಇದನ್ನು ಈಗಲೂ ಪಾಲಿಸುತ್ತಿದ್ದಾರೆ. ಉಳಿದ ಮನೆಗಳಿಗೂ ಈ ಗುತ್ತಿಗೂ ನಿಕಟ ಸಂಬಂಧಗಳಿವೆ.

ಹಿಂದೆ ಈ ಗುತ್ತಿನಲ್ಲಿ ಕೃಷಿಕಾಯಕ ಸಮೃದ್ಧವಾಗಿತ್ತು. ಅದಕ್ಕೆ ಗುತ್ತಿನಲ್ಲಿ ಉಳಿದುಕೊಂಡಿರುವ ಬಹುದೊಡ್ಡ ಹಟ್ಟಿಯೇ ಸಾಕ್ಷಿ ನುಡಿಯುತ್ತದೆ. ಈ ಗುತ್ತಿನ ಬಾಕಿಮಾರಿನಲ್ಲಿ ನಲ್ವತ್ತು ಜೋಡಿ ಕೋಣಗಳು ಉಳುತ್ತ ಇದ್ದುದು ನೋಡಲು ಹಬ್ಬವೇ   ಆಗಿರುತ್ತಿತ್ತು‌ ಎಂದು ಹೇಳುತ್ತಾರೆ ಪದ್ಮರಾಜರು. ಪಡ್ಯಾರಬೆಟ್ಟಿನ ಕೊಡಮಣಿತ್ತಾಯ ಮೂಲ ದೇವಸ್ಥಾನದಲ್ಲಿ ಈ ಮನೆತನಕ್ಕೆ ಗೌರವದ ಕರೆ ಇದೆ. ಕೊಡಮಣಿತ್ತಾಯ ದೈವವು ಈ ಮನೆತನದ ಹಿರಿಯರಾದ ಕಾಂತು ಬೈದ್ಯರ ಹೆಸರನ್ನು ಸಂಭೋಧಿಸುತ್ತದೆ. ಕಾಂತು ಬೈದ್ಯರು ಈ ಗುತ್ತಿನ ಮೂಲ ಪುರುಷರು. ಇವರಿಗೆ ಅರಸು ದೈವ ಒಲಿದು ಬಂದು. ಇವರು ಈಗಿನ ಪೇರಿ ಗುತ್ತಿನ ಪ್ರದೇಶಕ್ಕೆ ಬಂದಾಗ ಒಂದು ದನವು ತನ್ನ ಕೆಚ್ಚಲಿನ ಹಾಲನ್ನು ನೆಲದಲ್ಲೆ ಹರಿಯ ಬಿಟ್ಟಿತ್ತಂತೆ.

ಇದನ್ನು ನೋಡಿ ಆಶ್ಚರ್ಯಗೊಂಡು ಪ್ರಶ್ನೆ ನಿಮಿತ್ತ ಕೇಳಿದಾಗ ಅರಸು ದೈವ ಬಂದಿದೆ ಅದಕ್ಕೆ ದೈವಸ್ಥಾನ ನಿರ್ಮಾಣವಾಗಬೇಕು ಎಂದು ತೋರಿ ಬಂತು‌. ಹಾಗೇ ಹಾಲು ಚೆಲ್ಲಿದ ಸ್ಥಳದಲ್ಲಿ ದೈವಸ್ಥಾನ ನಿರ್ಮಾಣವಾಯಿತು. ತುಳುವಿನಲ್ಲಿ ಹಾಲಿಗೆ ಪೇರ್ ಎಂದು ಹೇಳುತ್ತಾರೆ. ಅದ್ದರಿಂದ ಹಾಲು ಚೆಲ್ಲಿದ ಜಾಗವೆ ಪೇರಿ ಎಂದು ಹೆಸರಾಯಿತು‌. ಮುಂದಕ್ಕೆ ಕಾಂತು ಬೈದ್ಯರು ಇಲ್ಲಿ ಗುತ್ತಿನ ಮನೆ ಕಟ್ಟಿ ಇಲ್ಲೇ ನೆಲೆಸಿದರು. ಅರಸು ದೈವದ ದೈವಸ್ಥಾನ ಜೀರ್ಣೋದ್ಧಾರಗೊಂಡು ಸುಂದರವಾಗು ನಿರ್ಮಾಣಗೊಂಡಿದೆ. ಇದರೊಳಗೆ ಅರಸು ದೈವ, ಕೊಡಮಣಿತ್ತಾಯ ಮತ್ತು ಮೈಸಂದಾಯ ದೈವಗಳಿವೆ.

ಪಕ್ಕದಲ್ಲಿ ಕಲ್ಲುರ್ಟಿ ಪಂಜುರ್ಲಿ ದೈವಗಳ ಸ್ಥಾನವಿದೆ. ಅದರ ಪಕ್ಕದಲ್ಲಿ ಖಂಡಿಗೆ ಪಂಜುರ್ಲಿಯ ಸ್ಥೂಪದ ರೀತಿಯ ಗುಡಿ ಇದೆ. ಇದು ರಾಜನ್ ದೈವವಾಗಿದೆ. ಇದು ಕಂಡಿಗೆಯಿಂದ ಇಲ್ಲಿಗೆ ಬಂದು ನೆಲೆಯಾದ ದೈವ. ಪೇರಿಗುತ್ತಿನ ಚಾವಡಿಯ ಎಡಭಾಗದಲ್ಲಿ ಗುತ್ತಿನ ಪ್ರಧಾನ ದೈವ ದುಗ್ಗಲಾಯನ ಬೃಹತ್ ಗಾತ್ರದ ಮಣೆ ಮಂಚವಿದ್ದು ಇದರಲ್ಲಿ ಆನೆಯ ಮೇಲೆ ಕುಳಿತಿರುವ ದುಗ್ಗಲಾಯನ ಸುಂದರವಾದ ಪ್ರಾಚೀನ ಮೂರ್ತಿ ಇದೆ. ಬೆಳ್ಳಿ ಮತ್ತು ಬಂಗಾರದ ಮುಚ್ಚಿಗೆ ಇರುವ ಸುಂದರವಾದ ಗುರಾಣಿ ಮತ್ತು ಕಡ್ತಲೆಗಳು ಬಹು ಆಕರ್ಷಣೀಯವಾಗಿದೆ. ಪಕ್ಕದ ಮಣೆಮಂಚದಲ್ಲಿ ಗುತ್ತಿನ ಹಿರಿಯಾಯ ಕಾಂತು ಬೈದ್ಯರ ಮೂರ್ತಿ ಇದ್ದು ಪ್ರಾಚೀನ ಕಾಲದ ಮೂರ್ತಿಯಾಗಿದೆ. ಇದರ ಪಕ್ಕದ ಇನ್ನೊಂದ ಮಂಚದಲ್ಲಿ ಲೆಕ್ಕೇಸಿರಿ ದೈವ ಇದೆ. ಈ ಕೋಣೆಯ ಪಕ್ಕದ ಕೋಣೆಯಲ್ಲಿ ಕುಪ್ಪೆಟ್ಟು ದೈವಗಳಿವೆ. ಮನೆಯ ಹಿಂದಿನ ಗುಡ್ಡದ ಬನದಲ್ಲಿ ಎರಡು ದೈವಸ್ಥಾನಗಳಿದ್ದು ಇವುಗಳಲ್ಲಿ ಬಟಾರ್ಲು ಎಂಬ ದೈವಗಳಿವೆ‌. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾದರೂ ಸಾರಮಾನಿ ದೈವಗಳು ಎಂದೂ ಕರೆಯುತ್ತಾರೆ.

ಈ ದೈವಸ್ಥಾನದ ಒಳಗಡೆ ಕಲ್ಲುಗಳಿದ್ದು ದೈವಸ್ಥಾನ ಜೀರ್ಣಾವಸ್ಥೆಯಲ್ಲಿದೆ. ಈ ಎರಡು ದೈವಸ್ಥಾನಗಳಲ್ಲಿ ಒಂದು ಕೆಮ್ಮಾರಿನ ಪಾಲಿನ ದೈವಸ್ಥಾನವೆಂದು ಹೇಳುತ್ತಾರೆ. ಈ ದೈವಕ್ಕೆ ಪರ್ವ ಸೇವೆಯೂ ಒಂದು ರೀತಿಯ ವಿಶೇಷತೆಯಿಂದ ಕೂಡಿದೆ. ಅದೇನೆಂದರೆ ಪರ್ವ ನಡೆಯುವ ದಿನದಂದು ಮನೆಯಿಂದ ಪರ್ಬಕ್ಕೆ ಬೇಕಾದ‌ ಸಾಮಗ್ರಿಗಳನ್ನು ತೆಗೆದಕೊಂಡು‌ ಹೋಗಿತ್ತಾರೆ. ಹಾಗೆ ತೆಗೆಯುವಾಗ ಯಾವುದೇ‌ ಅಳತೆ‌ ಮಾಡದೇ ಕೈಗೆ‌‌ ಸಿಕ್ಕಿದಷ್ಟು ಬಾಳೆ‌ ಎಲೆ‌ ಅವಲಕ್ಕಿ‌ ಹೊದ್ದಲು‌ ಬಾಳೆ‌ಹಣ್ಣು ಮುಂತಾದವುಗಳನ್ನು ತೆಗೆದು‌ ಕೊಂಡು‌ ಹೊಗಿ ದೈವಸ್ಥಾನದ‌ ಹೊರಗಿನಿಂದ ಒಬ್ಬ ವ್ಯಕ್ತಿಯು ಹಿಂದೆ‌ ನೋಡದೆ ಪರ್ವ ಬಡಿಸುತ್ತಾ ಹೋಗ ಬೇಕು‌. ಹೀಗೆ‌ ಬಡಿಸಿದ ಕೂಡಲೆ ಹಿಂದಿನಿಂದ ಅಲ್ಲಿ ಸೇರಿದ ವ್ಯಕ್ತಿಗಳು ಅದನ್ನು‌ ಎತ್ತಿಕೊಂಡು ಹೋಗಿ ಸೇವಿಸಬೇಕು. ದೈವಸ್ಥಾನದ ಒಳಗಡೆ ಕೂಡ ಪರ್ವ ಹಾಕಲಾಗುತ್ತದೆ. ಪೇರಿ ಗುತ್ತಿನ ಹಿರಿಯರು ಮಾರೂರು ರಾಜರ ಪಂಚಾತಿಕೆಯಲ್ಲಿ ಮುಖ್ಯ ಪಾತ್ರ ವಾಸಿಸುತ್ತಿದ್ದರಂತೆ. ಕೆಮ್ಮಾರಿನಲ್ಲಿ ಈ ಗುತ್ತು ಮನೆಯವರಾಗಿರುವ ರಾಮು ಎಂಬುವವರು ಕೀರ್ತಿಗಳಿಸಿದ್ದರು. ಈ ಮನೆಯ ಆದಪ್ಪ ಪೂಜಾರಿಯವರು ಶಿಕಾರಿಯಲ್ಲಿ ಪ್ರಸಿದ್ಧರಾಗಿದ್ದರು. ನಾಡಿಗೆ ಬಂದು ಊರವರನ್ನು ಪೀಡಿಸುತ್ತಿದ್ದ ಹುಲಿ ಚಿರತೆಗಳನ್ನು ಕೊಲ್ಲುತ್ತಿದ್ದರಂತೆ.

೧೯೬೮ ರಲ್ಲಿ ಸಮೀಪದ ನದಿಯಲ್ಲಿದ್ದ ಭಾರೀ ಗಾತ್ರದ ಮೊಸಳೆಯಿಂದ ಊರ ಜನ ಕಂಗಾಲಾಗಿದ್ದಾಗ ಅದನ್ನು ಈ ಮನೆತನದ ಕೊರಗಪ್ಪ ಪೂಜಾರಿಯವರು ಕೊಂದಿದ್ದರಂತೆ. ಅದರ ಎಲುಬು ಭುವನೇಂದ್ರ ಕಾಲೇಜಿನ ಸಂಗ್ರಹಾಲಯದಲ್ಲಿ ಇಟ್ಟಿದ್ದಾರೆಂದು ಪದ್ಮರಾಜರು ತಿಳಿಸಿದರು.

ಪೇರಿ ಗುತ್ತಿನಲ್ಲಿ ಅನೇಕ ವರ್ಷಗಳ ಹಿಂದೆ ಪರಿಂಜೆಯ ಕೊಡಮಣಿತ್ತಾಯ ದೈವಕ್ಕೆ ಧರ್ಮನೇಮ ಸಲ್ಲಿತ್ತು. ಪಡ್ಯೋಡಿ ಗುತ್ತಿನಿಂದ ಭಂಡಾರ ಬಂದು ಇಲ್ಲಿ ನೇಮವಾಗಿತ್ತಂತೆ‌. ಹೀಗೆ ಭಂಡಾರ ಬಂದಾಗ ಅದನ್ನು ಇಡುತ್ತಿದ್ದಂತಹ ಬೃಹತ್ ಗಾತ್ರದ ಮಂಚಮ ಈಗ ಅಟ್ಟಸೇರಿದೆ.

ಪೇರಿಗುತ್ತಿನ ಪದ್ಮರಾಜರು ಭತ್ತ ಬೆಳೆ ಬೆಳೆಸುವುದರಲ್ಲಿ ತಾಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದ ಕೃಷಿಕರು. ಇವರನ್ನು ಚೀನಾದ ಕೃಷಿ ಕಾಯಕಗಳ ಅಧ್ಯಯನಕ್ಕಾಗಿ  ಸರ್ಕಾರ ಚೀನಾಕ್ಕೆ ಕಳುಹಿಸಿತ್ತು‌. ಚೀನಾದ ಬೇಸಾಯದ ಮತ್ತಿತರ ವಿಷಯಗಳ ಅನುಭವಗಳನ್ನು ನಮ್ಮಲ್ಲಿ ಹಂಚಿಕೊಂಡರು. ಈ ಮನೆತನದ ತಿಮ್ನಪ್ಪ ಪೂಜಾರಿಯವರು ಸುರತ್ಕಲ್ಲಿನಲ್ಲಿ ಇಂಜಿನಿಯರ್ ಆಗಿ ಸೂರತ್ ನಲ್ಲಿ ಇದ್ದರು. ಹಾಗೇ ನಾಗಪ್ಪ ಡಿ‌ಸಿ ಮತ್ತು ವಿಜಯ ಪ್ರಕಾಶ್ ಸಿ.ಇ‌.ಒ ಪ್ರಸಿದ್ಧರು.

ಪೇರಿ ಗುತ್ತಿನ ಮನೆಯೊಡತಿ ಮತ್ತು ಗುತ್ತಿನ ಕೆಲಸ ಮೂಲದ ಮಹಿಳೆ ಒಟ್ಡಿಗೆ ಕುಳಿತು ಒಂದೇ ಮನೆಯ ಅಕ್ಕ ತಂಗಿಯರಂತೆ ಊಟ ಮಾಡುತ್ತಿದ್ದ ದೃಶ್ಯ ಕಂಡು ಆಶ್ಚರ್ಯವೂ ಸಂತೋಷವೂ ಆಯಿತು. ಶ್ರೀ ನಾರಾಯಣ ಗುರುಗಳ ಪ್ರಭಾವವೋ ಅಥವಾ ಗಾಂಧೀಜಿಯವರ ಪ್ರಭಾವವೋ ಅವರನ್ನು ಜಾತೀಯತೆಯನ್ನು ಮೀರಿ‌‌ ಸಮಾನತೆಯ ಅನುಬಂಧದ ಸಂಬಂಧದಲ್ಲಿ‌ ಬೆಸೆದಿರಬಹುದು.‌ ಈ ಗುತ್ತಿಗೆ‌‌ ಮೂರು‌ ನಾಗ‌ ಬನಗಳಿದ್ದು‌ ಒಂದು ಕುಟುಂಬದ‌ ಬನ‌, ಇನ್ನೊಂದು ಜಾಗದ‌ ಬನ ಮತ್ತು ಮೂಲದ ಆಳುಗಳ‌ ಕುಟುಂಬದ‌ ನಾಗ. ಹಿಂದಿನ‌ ಕಾಲದಲ್ಲಿ‌ ನಾಗನಿಗೆ‌ ಬ್ರಾಹ್ಮಣರು‌ ಹಾಲೆರೆಯಲು ಬರುತ್ತಿದ್ದಾಗ ಅವರ ಊಟೋಪಾಚಾರಕ್ಕೆ ಬೇಕಾಗಿ ವಿಶ್ವಕರ್ಮ ಸಮುದಾಯ ಒಂದು ಕುಟುಂಬಕ್ಕೆ ಉಂಬಳಿ ‌ನೀಡಿ ಇಲ್ಲಿ ಅಲ್ಲಿ ಅವರಿಗೆ ವಾಸಕ್ಕೆ ವ್ಯವಸ್ಥೆ‌ಮಾಡಲಾಯಿಗಿತ್ತಂತೆ‌.

ಆ ಭೂಮಿ ಈಗಲೂ ಇದೆ‌. ಕ್ರಮೇಣ ಆ ಕುಟುಂಬ ದೊಡ್ಡದಾಗಿ ಅವರು ಕೂಡ ತಮ್ಮ‌ ಒಂದು ಕುಟುಂಬಕ್ಕೆ‌ ನಾಗ‌ನ ಕಲ್ಲು ಮಾಡಿಸಿ ಪೇರಿ ಗುತ್ತಿನ ನಾಗಬನದಲ್ಲಿಯೇ ಅದನ್ನು‌ ಇಟ್ಟರಂತೆ. ಆ ನಂತರ ಹಲವು ವರ್ಷಗಳಾದ ಮೇಲೆ ಅವರ ಕುಟುಂಬ ಬೇರೆಡೆ‌ ಹೊದಾಗ‌ ಅವರಿಗೆ‌ ಕುಟುಂಬದ ನಾಗ ದೋಷ‌ ಕಂಡು ಅವರು ಕುಟುಂಬದ‌ ನಾಗನಿಗೆ‌‌ ಹಾಲೆರಯ ಬೇಕೆಂದು ತೋಚಿ ಪ್ರಶ್ನೆ‌ ನಿಮಿತ್ತ ನೋಡಿದಾಗ‌ ಪೇರಿಗುತ್ತಿ ನಾಗ‌ಬನದ‌ಲ್ಲಿ ಅವರ ಕುಟುಂಬದ ನಾಗನೂ‌‌ ಇದ್ದಾನೆ‌ ಎಂದು ತೋಚಿತಂತೆ. ಪ್ರಶ್ನೆಯಲ್ಲಿ‌ ತೋರಿದಂತಹ ಪ್ರದೇಶವನ್ನು ಹುಡುಕಿಕೊಂಡು‌ ಬಂದಾಗ ಅದು‌ ಪೇರಿ ಗುತ್ತಿನ ನಾಗ ಬನವೇ‌ ಆಗಿತ್ತಂತೆ. ಅದ್ದರಿಂದ‌ ಈಗಲೂ‌ ಆ ವಿಶ್ವ ಕರ್ಮ ಕುಟುಂಬಿಕರು ಇಲ್ಲಿನ ನಾಗ ಬನದಲ್ಲಿ‌ ಬಂದು ಪೇರಿಗುತ್ತಿನ ಕುಟುಂಬದವರೊಂದಿಗೆ ಸೇರಿ‌ ಹಾಲೆರೆಯುತ್ತಾರೆ‌. ಈ ಎರಡು ಕುಟುಂಬಗಳೂ‌ ಒಂದೇ‌ ಕುಟುಂಬದಂತೆ ಸೇರಿ‌ ಇಲ್ಲಿ‌‌ ನಾಗರ‌ ಪಂಚಮಿ ಹಬ್ಬ ಆಚರಿಸುತ್ತಾರೆ. ಪೇರಿ ಗುತ್ತು ಜಾತಿ ಸೌಹಾರ್ದತೆಗೆ ನಿಜಕ್ಕೂ ಒಂದು ಸಾಕ್ಷಿಯಾಗಿ ನಿಂತಿರುವ ಅಪರೂಪದ‌ ಮನೆತನ.

(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) ಬರಹ - ಸಂಕೇತ್ ಪೂಜಾರಿ

0 comments: