ತುಳುನಾಡಿನ ದೈವಾರಾಧನೆಗೂ ಬಿಲ್ಲವರಿಗೂ ಬಹಳ ವಿಶೇಷವಾದ ನಂಟು. ಹೆಚ್ಚಿನ ದೈವಗಳ ಎಲ್ಲಾ ಪಾಡ್ದನಗಳಲ್ಲಿ ನಾನಾ ಕಾರಣಗಳಿಗಾಗಿ ಬಿಲ್ಲವರ ಉಲ್ಲೇಖಗಳು ಬರುತ್ತವೆ. ಬಿಲ್ಲವ ಸಮಾಜದಲ್ಲಿ ದೈವತ್ವ ಪಡೆದು ಪೂಜೆಗೆ ಒಳಗಾದವರಷ್ಟು ಅನ್ಯ ಸಮಾಜಗಳಲ್ಲಿ ಬಹಳ ವಿರಳ. ನಾವು ಸಂದರ್ಶಿಸಿದ ಬಹಳಷ್ಟು ಗುತ್ತು ಬರ್ಕೆ ಮನೆಗಳಲ್ಲಿ ದೈವತ್ವ ಪಡೆದವರ ಪ್ರತಿಮೆಗಳು ಪೂಜೆಗೆ ಒಳಗಾದುದನ್ನು ನೋಡಿದ್ದೇವೆ. ಅಷ್ಟು ಮಾತ್ರವಲ್ಲದೆ ಅ ದೈವಗಳಲ್ಲಿ ಕೆಲವಕ್ಕೆ ಪಾಡ್ದನಗಳೂ ನೇಮಗಳೂ ಇರುತ್ತವೆ. ಇಂತಹ ವಿಶೇಷತೆಯನ್ನು ಹೊಂದಿರುವ ಮನೆಗಳಲ್ಲಿ ಹೆನ್ನೂರು ಬರ್ಕೆಯೂ ಒಂದು. ಕುಪ್ಪೆಟ್ಟು ಬರ್ಕೆಯಿಂದ ಪ್ರಸಿದ್ದವಾದ ಕುಪ್ಪೆಟ್ಟು ದೈವಗಳು ತುಳುನಾಡಿನಾದ್ಯಂತ ಆರಾಧನೆ ಪಡೆಯುತ್ತಿವೆ. ಈ ದೈವಗಳ ಮೂಲ ನೆಲೆ ಕುಪ್ಪೆಟ್ಟು ಬರ್ಕೆ.
ಕುಪ್ಪೆಟ್ಟು ದೈವಗಳೊಂದಿಗೆ ಅರಾಧನೆ ಪಡೆಯುವ ಕುಪ್ಪೆಟ್ಟು ಬರ್ಕೆಯ ಯಜಮಾನರಾಗಿದ್ದ ಕೊರಗ ಬೈದ್ಯರು (ಹಿರಿಯಜ್ಜ) ತಮ್ಮ ಜೀವಿತಾವಧಿಯಲ್ಲಿ ತನ್ನ ಹೆಣ್ಣು ಮಕ್ಕಳಿಗೆ ನೀಡಿದ ಭೂಮಿ ಮತ್ತು ಮನೆತನವೇ ಈ ಹೆನ್ನೂರು ಬರ್ಕೆ. ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದಲ್ಲಿ ಹೆನ್ನೂರು ಬರ್ಕೆ ಮನೆಯಿದೆ. ಸುಮಾರು ೧೦೦ ವರ್ಷಗಳಷ್ಟು ಹಳೆಯದಾದ ಈಗಿರುವ ಬರ್ಕೆ ಮನೆ ಉಪ್ಪರಿಗೆಯಿಂದ ಕೂಡಿದ್ದು ಹಂಚು ಹೊದಿಸಲಾಗಿದೆ. ಇದರ ತಳಮಾಳಿಗೆ ಮತ್ತು ಉಪ್ಪರಿಗೆ ಎಲ್ ಆಕಾರದಲ್ಲಿದೆ. ಬರ್ಕೆಯ ಮುಖ್ಯ ದ್ವಾರ ಪ್ರವೇಶಿಸುವಾಗಲೇ ಬೆಳ್ಳಿಯ ಮುಚ್ಚಿಗೆಯ ದಾರಂದವುಳ್ಳ ದೈವಗಳ ಚಾವಡಿಯ ಕೋಣೆ ಎದುರಾಗುತ್ತದೆ. ಇದರ ಒಳಗೆ ಕುಪ್ಪೆಟ್ಟು ಪಂಜುರ್ಲಿಯು ಬಹಳ ಅಪರೂಪದ ಮತ್ತು ದೊಡ್ಡ ಗಾತ್ರದ ಮೊಗ ಮತ್ತು ಪ್ರತಿಮೆಗಳಿವೆ. ಎಡ ಬದಿಯಲ್ಲಿ ಹಿರಿಯಜ್ಜರಾದ ಕೊರಗ ಬೈದ್ಯರ ಪ್ರತಿಮೆ ಇದೆ.
ಅದರ ಪಕ್ಕದಲ್ಲೇ ಬರ್ಕೆಯ ಮೂಲ ಪುರುಷರಾಗಿ ಹಾಗೂ ಪ್ರಸಿದ್ದ ನಾಟಿ ವೈದ್ಯರಾಗಿ ಬಾಳಿದ ಬೋಗ್ರ ಪೂಜಾರಿಯವರ ಪ್ರತಿಮೆಯೂ ಇದೆ. ಇವರು ದೈವತ್ವ ಪಡೆದು ಇಲ್ಲಿನ ದೈವಗಳೊಂದಿಗೆ ಆರಾಧನೆಗೆ ಒಳಗಾಗಿದ್ದಾರೆ. ಈ ಮನೆಯಲ್ಲಿ ಎರಡು ಹಿರಿಯಜ್ಜರು ಎಂದು ಈ ಮನೆತನದವರು ಹೇಳಿಕೊಳ್ಳುತ್ತಾರೆ. ಒಂದು ಕುಪ್ಪೆಟ್ಟು ಬರ್ಕೆಯ ಕೊರಗ ಬೈದ್ಯರಾದರೆ ಮತ್ತೊಂದು ಬೋಗ್ರ ಪೂಜಾರಿಯವರು. ಕುಪ್ಪೆಟ್ಟು ಪಂಜುರ್ಲಿಯ ಬಲ ಭಾಗಕ್ಕೆ ಕುಪ್ಪೆಟ್ಟು ಕಲ್ಲುರ್ಟಿ ಮತ್ತು ಕುಟುಂಬದ ಕಲ್ಲುರ್ಟಿ ಪಂಜುರ್ಲಿ ದೈವಗಳಿವೆ. ಈ ದೈವಗಳ ಕೋಣೆಯ ಬಲಭಾಗಕ್ಕೆ ಭೋದಿಗೆ ಕಂಬಗಳ ಚಾವಡಿ ಇದೆ. ಇಲ್ಲಿ ಹಿಂದೆ ಊರಿನ ಕೆಲವು ನ್ಯಾಯ ತೀರ್ಮಾನಗಳು ನಡೆಯುತ್ತಿದ್ದವು.
ಈ ಬರ್ಕೆ ಮನೆಯವರು ಕೋಟ್ಯಾನ್ ಬಳಿಗೆ ಸೇರಿದವರಾಗಿದ್ದಾರೆ. ಈ ಬರ್ಕೆಗೆ ಸುಮಾರು ೨೫ ಎಕ್ರೆ ಜಮೀನು ಇದೆ. ಎರಡು ಒಕ್ಕಲು ಮನೆಗಳು ಇದ್ದವು. ಸುಮಾರು ೮ ರಿಂದ ೧೦ ಕಟ್ಟು ಓಲೆ ಬೆಲ್ಲ ತಯಾರಾಗುತ್ತಿತ್ತು. ಈ ಬರ್ಕೆಯ ಲಿಂಗಪ್ಪ ಪೂಜಾರಿಯವರಿಗೆ ಕುಪ್ಪೆಟ್ಟು ಪಂಜುರ್ಲಿಯ ಗಡಿ ಪಟ್ಟವಾಗಿದೆ.
ಇಲ್ಲಿ ಎರಡು ಜೋಡಿ ಕಂಬಳದ ಕೋಣಗಳು ಇದ್ದವು. ಸುಮಾರು ೨೫ ರಿಂದ ೩೦ ಮಂದಿ ಕುಟುಂಬ ಸದಸ್ಯರು ಕೂಡಿ ಬಾಳಿದ ಮನೆ ಇದಾಗಿದ್ದು ಈಗ ೧೭ ಮಂದಿ ಈ ಬರ್ಕೆ ಮನೆಯಲ್ಲಿ ವಾಸಮಾಡುತ್ತಿದ್ದು ಇದೊಂದು ಕೂಡು ಕುಟುಂಬವಾಗಿದೆ. ಈ ಬರ್ಕೆಗೆ ಗ್ರಾಮದ ದೈವಸ್ಥಾನ ಮತ್ತು ದೇವಸ್ಥಾನಗಳಲ್ಲಿ ವಿಶೇಷ ಗೌರವಗಳಿವೆ.
ಈ ಮನೆತನಕ್ಕೆ ಸುಮಾರು ೨೫೦ ವರ್ಷಗಳ ಇತಿಹಾಸ ಇರಬಹುದು ಎಂಬ ಹೇಳಿಕೆ ಈ ಮನೆಯವರದ್ದು. ಈ ಬರ್ಕೆಗೆ ಈಗ ಮೋಂಟ ಪೂಜಾರಿ ಮತ್ತು ಚಂದಯ್ಯ ಪೂಜಾರಿ ಎಂಬ ಇಬ್ಬರು ಯಜಮಾನರಿದ್ದು ದೈವಗಳ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಾರೆ.ಈ ಕುಟುಂಬವು ದೈವಗಳ ನೇಮ ಕೋಲಕ್ಕೆ ಬೇಕಾದ ಎಲ್ಲಾ ಆಭರಣಗಳನ್ನು ಮೊದಲೇ ಮಾಡಿಸಿಟ್ಟಿದ್ದಾರೆ. ಹಾಗೆಯೇ ಗ್ರಾಮದ ಇತರ ಮನೆಗಳ ನೇಮಕ್ಕೂ ಇಲ್ಲಿನ ಆಭರಣಗಳನ್ನು ತೆಗೆದುಕೊಂಡು ಹೋಗುವುದು ಇದೆ. ಮನೆಯ ಹೊರಗಡೆಯಿಂದ ಲೆಕ್ಕೇಸಿರಿ ಮೈಸಂದಾಯ ದೈವಗಳ ಗುಡಿ ಇದೆ.
ಅದಲ್ಲದೇ ಮಂತ್ರಜಾವದೆ, ಜಾಗದ ಕಲ್ಲುರ್ಟಿ, ಗುಳಿಗ - ಚಾಮುಂಡಿ, ಒಂಟಿ ಗುಳಿಗ, ಸನ್ಯಾಸಿ ಮಂತ್ರಜಾವದೆ, ಅಮ್ನೋರು- ಬೈರವ ದೈವಗಳಿವೆ. ಪಗ್ಗು ತಿಂಗಳ ೧೮ ಸಲುವಂದು ಇಲ್ಲಿ ವರ್ಷಾವಧಿ ನೇಮ ಮತ್ತು ಪರ್ವಗಳು ನಡೆಸಲಾಗುತ್ತದೆ. ಈ ಮನೆತನಕ್ಕೆ ಕುಪ್ಪೆಟ್ಟು ಬರ್ಕೆಯಲ್ಲದೆ ಪಿಲಿಮೊಗರು ಗುತ್ತು, ಪೊನ್ನೆಂಗಿಲ ಗುತ್ತು, ಬೊಟ್ಟಿ ಕಂಡ ಬರ್ಕೆ ಮುಂತಾದ ಗುತ್ತು ಮನೆತನಗಳೊಂದಿಗೆ ಕೌಟಿಂಬಿಕ ಸಂಬಂಧವಿದೆ.
ಸಹಕಾರ- PK Biruva Parnda Guthu Dinesh Suvarna Rayee (ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) -ಬರಹ - ಸಂಕೇತ್ ಪೂಜಾರಿ
0 comments: