Wednesday, January 10, 2018

ಬಿಲ್ಲವರ ಗುತ್ತು ಮನೆತನಗಳು (ಪುಂಚಾಡಿ ಬರ್ಕೆ)

ಪುಂಚಾಡಿ ಬರ್ಕೆ ಕಾಂತಾವರದ ಬೇಲಾಡಿ ಗ್ರಾಮದಲ್ಲಿ ಇದೆ. ಈ ಮನೆಯವರು ಕೋಟ್ಯಾನ್ ಬಳಿಯವರು. ಈ ಮನೆಗೆ ಸುಮಾರು ೨೫೦ ವರ್ಷಗಳ ಇತಿಹಾಸ ವಿದೆ. ಎಲ್ ಆಕಾರದಲ್ಲಿರುವ ಮನೆಯು ದೊಡ್ಡದಾಗಿ ಸುಂದರವಾಗಿದೆ. ಮನೆಯ ಹಿರಿಯವರಾದ ಆನಂದ ಪೂಜಾರಿಯವರಿಗೆ ಈಗ ೯೦ ವರ್ಷ ಪ್ರಾಯ. ಮುಂಬಯಿಯಲ್ಲಿ ನಲೆಸಿರುವ ಅರ್. ಎಸ್ ಪೂಜಾರಿಯವರು ಈ ಮನೆಗೆ ಬಂದಿದ್ದು ಈ ಬರ್ಕೆ ಮನೆಯ ಬಗ್ಗೆ ಮಾಹಿತಿ ನೀಡಿ ಸಹಕರಿಸಿದರು. ಈ ಮನೆಯ ಇನ್ನಿತರ ಬಂಧುಗಳು ನಮ್ಮ ಸಂದರ್ಶನದ ಸಮಯದಲ್ಲಿ ಮನೆಯಲ್ಲಿದ್ದು ಮಾಹಿತಿ ನೀಡುವುದರಲ್ಲಿ ಸಹಕರಿಸಿದರು.

ಪುಂಚಾಡಿ ಬರ್ಕೆಯ ಮೂಲ ಯಜಮಾನ್ತಿಯಾಗಿದ್ದವರು ಶ್ರೀಮತಿ ಮಾನ್ಯಪ್ಪು ಪೂಜಾರ್ತಿಯವರು. ಇವರ ಮಗ ಯೇದು ಪೂಜಾರಿಯವರ ಕಾಲದಲ್ಲಿ ಈ ಬರ್ಕೆ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಊರಿನಲ್ಲಿ ವಿಶೇಷ ಸ್ಥಾನವನ್ನು ಆ ಕಾಲದಲ್ಲಿಯೇ ಪಡೆದಿತ್ತು. ಯೇದು ಪೂಜಾರಿಯವರು ಓದು ಬರಹ ಬರದಿದ್ದರು ಸಮಾಜಕ್ಕೆ ಬಹುಮುಖ ಸೇವೆ ಸಲ್ಲಿಸಿ ಎಲ್ಲರಿಂದಲೂ ಸೈ ಅನಿಸಿಕೊಂಡು ಎಲ್ಲರ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು. ಕಳೆದ ಶತಮಾನದ ಆರಂಭದಲ್ಲಿ ಬೇಲಾಡಿಯಲ್ಲಿ ಶಾಲೆಯನ್ನು ಸ್ಥಾಪಿಸಿ ತನ್ನ ಮಗ ಶ್ರೀಧರನ ನೇತೃತ್ವದಲ್ಲಿ ಅದನ್ನು ಸುಸಾಂಗವಾಗಿ ನಡೆಸಿದರು. ಈ ಶಾಲೆ ಈಗ ಬೇಲಾಡಿ ಶಾಲೆಯೆಂದೇ ಪ್ರಸಿದ್ಧವಾಗಿದೆ.

ಸಮಾಜದ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸಿದ ಮಹಾನುಭಾವರು ಯೇದು ಪೂಜಾರಿಯವರು. ಊರಿನ ಯಾವುದೇ ಸಮಸ್ಯೆ ಜಗಳಗಳನ್ನು ಬಗೆಹರಿಸಿ ನ್ಯಾಯ ತೀರ್ಮಾನ ಮಾಡುತ್ತಿದ್ದರು. ಊರಿನ ಎಷ್ಟೊ ಸಮಸ್ಯೆಗಳು ಈ ಮನೆಯ ಚಾವಡಿಯಲ್ಲಿ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳುತ್ತಿತ್ತು. ಕೃಷಿಕರೂ, ಶ್ರಮ ಜೀವಿಯೂ ಆಗಿದ್ದ ಇವರು ಅವಿಭಕ್ತ ಕುಟುಂಬದ ಪ್ರೀತಿ ಪಾತ್ರರಾಗಿ ಕುಟುಂಬದಲ್ಲಿ ಪ್ರೀತಿ, ಗೌರವ ಪಡೆದಿದ್ದರು.

೧೯೩೪ ರ ಮಾರ್ಚ್ ತಿಂಗಳಲ್ಲಿ ಈ ದೊಡ್ಡ ಮನೆಯಲ್ಲಿ ತನ್ನ ಗಂಡು, ಹೆಣ್ಣು ಮಕ್ಕಳು, ಸೋದರಳಿಯರು, ಒಬ್ಬಳು ಸೋದರ ಸೊಸೆ ಮತ್ತು ಮೊಮ್ಮಕ್ಕಳು ಕೂಡಿದಂತೆ ಒಟ್ಟು ಹದಿಮೂರು ಜೋಡಿ ಮದುವೆಯನ್ನು ಒಟ್ಟಿಗೆ ನೆರೆವೇರಿಸಿದ್ದರು. ಈ ಮದುವೆ ಬಹಳ ವಿಜೃಂಭಣೆಯಿಂದ ನಡೆದಿತ್ತು. ಎಲ್ಲಾ ಹದಿಮೂರು ಜೋಡಿಗಳ ಮದುವೆಯ ಫೋಟೋ ತೆಗೆಸಿ ಇಟ್ಟಿದ್ದಾರೆ.

ಬ್ರಿಟಿಷರ ಕಾಲದಲ್ಲಿ ಇವರಿಗೆ ಬಂದೂಕು ಇಟ್ಟುಕೊಳ್ಳುವ ಪರವಾನಿಗೆ ಇತ್ತು. ಸಾಮಾಜಿಕ ಕಳಕಳಿ ಇದ್ದ ಯೇದು ಪೂಜಾರಿಯವರು ತನ್ನ ಊರಿನ ಜಾತಿ ಭಾಂದವರನ್ನು ಒಟ್ಟು ಸೇರಿಸಿ ಊರಿನ ದೇವಸ್ಥಾನಕ್ಕೆ ಪ್ರವೇಶ ಕೊಡಬೇಕೆಂದು ಹೋರಾಟ ಮಾಡಿದ್ದರು. ಆ ಹೋರಾಟದ ನಾಯಕತ್ವ ಯೇದು ಪೂಜಾರಿಯವರೇ ವಹಿಸಿದ್ದರು. ವಿದ್ಯಾಪಕ್ಷಪಾತಿಗಳಾದ ಯೇದು ಪೂಜಾರಿಯವರು ಸ್ಥಾಪಿಸಿದ ಶಾಲೆ ಇಂದು ರಾಜ್ಯ ಮಟ್ಟದಲ್ಲಿ ಹೆಸರುಗಳಿಸಿದೆ. ಕಾಂತಾವರ ಕನ್ನಡ ಬೆಳ್ಳಿ ಬೆಳಕು ಸಂಚಿಕೆಯಲ್ಲಿ ಡಾ. ನಾ ಮೊಗಸಾಲೆಯವರು ದಿ. ಯೇದು ಪೂಜಾರಿಯವರ ವ್ಯಕ್ತಿತ್ವವನ್ನು ಬಣ್ಣಿಸಿದ್ದಾರೆ. ತಮ್ಮ ಮನೆ, ಕುಟುಂಬದ ಬಂಧುಗಳ ಹಾಗೂ ಎಲ್ಲಾ ವರ್ಗದ ಜನರ ಸುಖ ಮತ್ತು ಏಳಿಗೆಗಾಗಿ ಶ್ರಮಿಸಿದ ಯೇದು ಪೂಜಾರಿಯವರನ್ನು ಊರಿನವರು ಇಂದೂ ಸ್ಮರಿಸುತ್ತಾರೆ.

ಈಗ ಈ ಮನೆಯ ಯಜಮಾನರಾದ ಆನಂದ ಪೂಜಾರಿಯವರು ಕೃಷಿಕಾರ್ಯ ಮತ್ತು ದೈವ ದೇವರ ಪೂಜೆ ಪುನಸ್ಕಾರವನ್ನು ಸಮರ್ಥವಾಗಿ ಮಾಡುತ್ತಾರೆ. ೪೮ ಎಕ್ರೆ ಭೂಮಿಯ ಆಸ್ತಿ ೬ ಕವಲುಗಳಲ್ಲಿ ಪಾಲಾಗಿದೆ. ಪುಂಚಾಡಿ ಮನೆ ಬೈದೇರುಗಳ ದರ್ಶನಕ್ಕೆ ನಿಲ್ಲುವ ಹಕ್ಕಿನ ಮನೆಯಾಗಿತ್ತು. ಬೈದೇರುಗಳ ಸುರಿಯ ಈ ಮನೆಯಲ್ಲಿ ಇದ್ದಿತ್ತಂತೆ. ಯೇದು ಪೂಜಾರಿ, ದೇವು ಪೂಜಾರಿ, ಪದ್ಮ ಪೂಜಾರಿ ಮುಂತಾದವರು ಈ ಮನೆತನದವರ ನೆನೆಪಿನಂಗಳದಲ್ಲಿ ಚಿರಸ್ಥಾಯಿಯಾಗಿ ಉಳಿದ ಹಿರಿಯ ವ್ಯಕ್ತಿಗಳು. ಈ ಬರ್ಕೆಯಲ್ಲಿ ಉಂರ್ದರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಧರ್ಮಜಾವದೆ, ಸತ್ಯಜಾವದೆ, ಪಡ್ಕಂತಾಯ, ಲೆಕ್ಕೇಸಿರಿ, ಮೈಸಂದಾಯ, ಪಂಜುರ್ಲಿ ಹಾಗೂ ಗುಳಿಗ ದೈವಗಳಿವೆ. ಮೂಲ ನಾಗ ಬನ ಮನೆಯ ಪಶ್ಚಿಮ ಭಾಗದಲ್ಲಿದೆ. ಇರ್ವತ್ತೂರು ಏಲಡ್ಕ ಬರ್ಕೆಯೂ ಹಿಂದೆ ಈ ಮನೆಯ ಯಜಮಾನನ ಆಡಳಿತದಲ್ಲಿತ್ತು ಎಂಬ ಮಾಹಿತಿ ಇದೆ.

ಸ್ವಂತ ಸಾಮರ್ಥ್ಯ ಮತ್ತು ವರ್ಚಸ್ಸಿನಿಂದ ಸಮಾಜದಲ್ಲಿ ಗಣ್ಯ ಸ್ಥಾನಕ್ಕೇರಿದ ಮನೆತನವಾಗಿ ಪುಂಚಾಡಿ ಬರ್ಕೆ ಗಮನ ಸೆಳೆಯುತ್ತದೆ. (ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) Pc- Renuka Salian Punchadi Barke ಬರಹ : ಸಂಕೇತ್ ಪೂಜಾರಿ

0 comments: