Tuesday, January 30, 2018

ಬಿಲ್ಲವರ ಗುತ್ತು ಮನೆತನಗಳು (ಕೈರೋಳಿ ಗುತ್ತು)

ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯಲ್ಲಿ ಸುಮಾರು ೫ ಕಿ.ಮೀ ಕ್ರಮಿಸಿದರೆ ಒಳ ದಾರಿಯಲ್ಲಿ ಸುತ್ತ ಗುಡ್ಡ ತೋಟಗಳಿಂದ ಕೂಡಿದ ಹಚ್ಚ ಹಸಿರಿನ ಪ್ರದೇಶದಲ್ಲಿ ಕೈರೋಳಿ ಗುತ್ತು ಮನೆ ಇದೆ. ಕೈರೋಳಿ ಗುತ್ತು ಬಂಗೇರ ಬಳಿಯವರ ಮೂಲ ಸ್ಥಾನವಾಗಿದೆ.

ಸುಮಾರು ೧೦೦ ಎಕ್ರೆಗಿಂತಲೂ ಹೆಚ್ಚು ಭೂಮಿ ಹೊಂದಿದ್ದ ಈ ಮನೆತನವು ಭೂಮಸುದೆಯ ಕಾಯ್ದೆಯನ್ವಯ ಕೆಲವು ಭೂಮಿಯನ್ನು ಕಳೆದು ಕೊಂದಿದೆ. ಇನ್ನು ಕೆಲವು ಪಾಲು ಪಾಟ್ಟಿಯಾಗಿದೆ. ಈ ಮನೆಗೆ ೧೦ಕ್ಕಿಂತಲೂ ಹೆಚ್ಚು ಒಕ್ಕಲು ಮನೆಗಳು ಇದ್ದವು. ಜೈನರ ಕೈಯಲ್ಲಿದ್ದ ಈ ಮನೆ ಮತ್ತು ಭೂಮಿಯನ್ನು ೪೦೦ ವರ್ಷಗಳ ಹಿಂದೆ ಈ ಕುಟುಂಬದವರು ಖರೀದಿಸಿದರು. ಹಿಂದೆ ಸುತ್ತು ಮುದಲಿನ ಮನೆಯಾಗಿದ್ದ ಇದು ಉಪ್ಪರಿಗೆಯನ್ನು ಹೊಂದಿತ್ತು.

ಈಗ ಉಪ್ಪರಿಗೆ ತೆಗೆದು ಬೇರೆ ಮನೆಮಾಡಿದ್ದಾರೆ. ಮನೆಯ ಬಲ ಪಾರ್ಶ್ವದ ಪಂಚಾಂಗ ಈಗಲೂ ನೋಡಬಹುದು. ಬಹುದೊಡ್ಡ ದನದ ಕೊಟ್ಟಿಗೆ ಹೊಂದಿತ್ತು. ಹೆರಿಗೆ ಕೋಣೆ, ಬೆಲ್ಲದ ಕೋಣೆಗಳಿದ್ದವು. ಮೂರ್ತೆದಾರಿಕೆ ಇತ್ತು. ಮನೆಯ ಚಾವಡಿಯಲ್ಲಿ ಬೋಧಿಗೆ ಕಂಬಗಳಿವೆ. ಮನೆಯ ಮುಂದೆ ಗುಡ್ಡ ತೋಟಗಳಿವೆ. ಹಾಗೆ ಸಣ್ಣ ಹೊಳೆ ಇದೆ.ಈ ಮನೆತನಕ್ಕೆ ಕೊಯಿಲ, ಬಾಡೊಟ್ಟು, ಮದ್ದಾಜೆಗಳಿಂದ ಗೇಣಿ ಬರುತಿತ್ತು. ಸಾಂತಪಳಿಕೆ, ಬಜಿರೋಡಿಯಲ್ಲಿ ಮೂಲಗೇಣಿ ಇತ್ತು. ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಮನೆತನಕ್ಕೆ ವಿಶೇಷ ಗೌರವವಿದೆ. ಹಾಗೆ ಗ್ರಾಮದೈವ ಕೊಡಮಂದಾಯ, ಜುಮಾದಿ, ಮೈಸಂದಾಯ ದೈವಸ್ಥಾನದಲ್ಲಿ ಗೌರವದ ಕರೆ ಇದ್ದು, ಕೈರೋಳಿ ಬರ್ಕೆ ಬಾಲು ಪೂಜಾರಿ ಎಂದು ದೈವಗಳು ಕರೆಯುತ್ತದೆ.

ಹಾಗೆ ಇವರಿಗೆ ನೇಮೋತ್ಸವದ ಸಂದರ್ಭದಲ್ಲಿ ಅಲ್ಲಿ ಒಂದು ಆಸನವು ಇದೆ. ಗ್ರಾಮದ ನೇಮದ ಕೋಳಿ ಗುಂಟವು ಈ ಮನೆತನದವರ ಮುಖಾಂತರ ನಡೆಯುವುದು ವಾಡಿಕೆ. ಗ್ರಾಮದ ಶುಭ ಸಮಾರಂಭಗಳಿಗೆ ಇಲ್ಲಿಗೆ ವಿಶೇಷ ಹೇಳಿಕೆ ಇದೆ.ಸುಮಾರು 400 ವರ್ಷಗಳ ಹಿಂದೆ ಜೈನಾಶ್ರಯದಲ್ಲಿದ್ದಾಗ ಈ ಮನೆಯೂ ಕೈರೋಳಿ ಗುತ್ತುಯೆಂದು ಕರೆಯಲ್ಪಡುತ್ತಿತ್ತು. ಆದರೆ ಬಿಲ್ಲವರಿಗೆ ಬಂದನಂತರ ಬರ್ಕೆ ಆದುದು ವಿಪರ್ಯಾಸವೇ ಸರಿ. ಕೆಲವು ಇದೇ ರೀತಿಯ ಬಿಲ್ಲವರ ಗುತ್ತಿನ ಮನೆಗಳು ಬರ್ಕೆಯಾದದ್ದು ನಮ್ಮ ಅಧ್ಯಯನದ ಸಂದರ್ಭದಲ್ಲಿ ಕಂಡು ಬಂದಿದೆ. ಇದಕ್ಕೆ ಮುಖ್ಯ ಕಾರಣ ಒಂದು ಕಾಲದಲ್ಲಿ ಬಿಲ್ಲವರ ಮೇಲೆ ಆದಂತಹ ಮೇಲ್ವರ್ಗದವರೆನಿಸಿ ಕೊಂಡವರ ಒಂದು ರೀತಿಯ ಆಕ್ರಮಣ ಹಾಗೂ ಬಿಲ್ಲವರ ಅಭಿಮಾನದ ಕೊರತೆ.

ಇದು ಗುತ್ತು ಮನೆಯೆನ್ನಲೂ ಈಗಲೂ ಇಲ್ಲಿ ಕುರುಹುಗಳಿವೆ. ಹಾಗೆ ಮನೆಯವರೂ ಇದನ್ನು ಗುತ್ತು ಮನೆಯಾಗಿಗೇ ಉಳಿಸಿಕೊಂಡಿದ್ದಾರೆ. ಗ್ರಾಮ ದೈವಸ್ಥಾನದಲ್ಲಿ ಬರ್ಕೆ ಎಂದು ಕರೆದರೆ ಇಲ್ಲಿನ ದೈವಗಳು ನೇಮದ ಸಂದರ್ಭದಲ್ಲಿ ಇದನ್ನು ಕೈರೋಳಿ ಗುತ್ತು ಎಂದೇ ಕರೆಯುತ್ತವೆ.

ಇಲ್ಲಿನ ದೈವಗಳ ನೇಮೋತ್ಸವಕ್ಕೆ.ಬಳಸುವ ಅಣಿಗೆ ಕಟ್ಟುವಂತಹ ಕೆಂಪು ಬಟ್ಟೆಯಲ್ಲಿ ಕೈರೋಳಿ ಗುತ್ತು ಎಂದು ಬರೆದಿದ್ದಾರೆ. ಇದು ಹಲವು ವರ್ಷಗಳ ಹಿಂದೆ ಮಾಡಿಟ್ಟಂತಹ ಬಟ್ಟೆಯಾಗಿದೆ.ಈ ಕುಟುಂಬದ ಚೆನ್ನಪ್ಪ ಪೂಜಾರಿಯವರು ಮತ್ತು ಬಾಬು ಪೂಜಾರಿಯವರು ಇಲ್ಲಿ ಪ್ರಸಿದ್ದರಾಗಿ ಹೋದವರು. ಇವರಲ್ಲಿ ಚೆನ್ನಪ್ಪ ಪೂಜಾರಿಯವರು ಬಹಳ ಪ್ರಭಾವಶಾಲಿ ವ್ಯಕ್ತಿಯಾಗಿದ್ದು ಮಂತ್ರವಿದ್ಯೆ ಮತ್ತು ನಾಟಿ ವೈದ್ಯ ವಿದ್ಯೆಯನ್ನು ತಿಳಿದಿದ್ದರು.

ಇವರ ದೂಪೆ( ಸಮಾಧಿ) ಮನೆಯ ಹಿಂದಿನ ಗದ್ದೆಯಲ್ಲಿದ್ದು, ಚೆನ್ನಪ್ಪ ಪೂಜಾರಿಯವರು ಸುಮಾರು ೧೨೫ ವರ್ಷಗಳ ಕಾಲ ಬದುಕಿದ್ದರಂತೆ. ಈ ಗುತ್ತಿನ ಚಾವಡಿಯಲ್ಲಿ ನ್ಯಾಯ ತೀರ್ಮಾನಗಳು ನಡೆಯುತ್ತಿದ್ದು ಇವರು ನ್ಯಾಯ ತೀರ್ಮಾನವನ್ನು ಮಾಡುತ್ತಿದ್ದರಂತೆ. ಚೆನ್ನಪ್ಪ ಪೂಜಾರಿಯವರು ಕಂಬಳದ ೫ ರಿಂದ ೬ ಕೋಣಗಳನ್ನು ಸಾಕುತ್ತಿದ್ದರಂತೆ. ಇವರ ನಂತರ ಬಾಲು ಪೂಜಾರಿಯವರು, ಈಶ್ವರ ಪೂಜಾರಿ, ಇಲ್ಲಿ ಪ್ರಸಿದ್ಧರಾಗಿ ಬಾಳಿದವರು. ಇವರು ಇದೇ ಗುತ್ತಿನ ಭೂಮಿಯಾಗಿದ್ದ ಮದ್ದಾಜೆಯಲ್ಲಿ ವಾಸಿಸುತ್ತಿದ್ದರು. ಚೆನ್ನಪ್ಪ ಪೂಜಾರಿಯವರಿಗೆ ಏಳನೇ ಪಟ್ಟೆಯಾಗಿತ್ತು.

ಮಂತ್ರವಾದಿಯಾಗಿದ್ದ ಚೆನ್ನಪ್ಪ ಪೂಜಾರಿಯವರ ಬೆಳ್ಳಿಯ ಪಾಪೆ ಮನೆಯ ದೈವಗಳ ಕೋಣೆಯಲ್ಲಿ ಇದೆ. ಬಹಳ ಸುಂದರವಾದ ಕುಳಿತ ಭಂಗಿಯಲ್ಲಿರುವ ಈ ಮೂರ್ತಿ ಬಹಳ ವಿಶೇಷವಾಗಿದೆ.

ಈ ಗುತ್ತಿನ ಪ್ರಧಾನ ದೈವಗಳಾದ ಲೆಕ್ಕೇಸಿರಿ ಮತ್ತು ಮೈಸಂದಾಯನ ನವೀಕೃತ ಗುಡಿ ಮನೆಯ ಹಿಂದೆ ಸ್ವಲ್ಪ ದೂರದಲ್ಲಿದೆ.ಚಾವಡಿಯ ಬಲಭಾಗದ ಕೋಣೆಯಲ್ಲಿ ದೈವಗಳ ಸಂಕೀರ್ಣವೇ ಇದೆ. ಇಲ್ಲಿ ಕುಪ್ಪೆಟ್ಟು ದೈವಗಳಾದ ಕುಪ್ಪೆಟ್ಟು ಪಂಜುರ್ಲಿ, ಹಿರಿಯಜ್ಜ( ಕೊರಗ ಬೈದ್ಯ), ಕುಪ್ಪೆಟ್ಟು ಕಲ್ಲುರ್ಟಿ, ಪಂಜುರ್ಲಿ, ಬಂಟ ದೈವ, ಕಲ್ಲುರ್ಟಿ, ಪಡ್ಕಂತಾಯ, ಮಂತ್ರಜಾವದೆ ದೈವಗಳಿವೆ. ಮನೆಯ ಹೊರಗಿನಿಂದ ಜಾಗದ ಜಾಗದ ಕಲ್ಲುರ್ಟಿ ಪಂಜುರ್ಲಿ, ಎರಡು ಗುಳಿಗ, ಬೈರವ ದೈವಗಳಿವೆ. ಚೆನ್ನಪ್ಪ ಪೂಜಾರಿಯವ ಕಾಲದಿಂದ ದೈವಗಳಿಗೆ ಮಾಡಿಸಲ್ಪಟ್ಟ ಆಪಾರ ಬೆಳ್ಳಿ ಬಂಗಾರದ ಭಂಡಾರ ಇಲ್ಲಿವೆ.

ಪ್ರತೀ ವರ್ಷ ನೇಮ ನಡೆಯುತ್ತಿದ್ದು ಈಗ ಮೂರು ವರ್ಷಗಳಿಗೊಮ್ಮೆ ನಡೆಯುತ್ತಿದೆ. ಮನೆಯ ಮುಂದಿನ ಗುಡ್ಡದ ಮೂಲಕ ಹಾದು ಹೋದರೆ ಕುಟುಂಬದ ನಾಗ ಬನ ಇದ್ದು. ಬಹಳ ಅಪರೂಪ ಮತ್ತು ವಿಶೇಷವಾದ ನಾಗ ಬನ ಇದಾಗಿದೆ. ಎರಡು ದೊಡ್ಡ ಬಂಡೆಗಳ ಮಧ್ಯೆ ಸಿಲುಕಿಕೊಂಡಂತಿರುವ ಮತ್ತೊಂದು ಬೃಹತ್ ಬಂಡೆಯ ಮೇಲೆ ಎರಡು ನಾಗನ ಕಲ್ಲುಗಳಿವೆ. ಈ ಬಂಡೆಗಳ ಸುತ್ತ ಕೊಳವಿದೆ. ಇದು ನೀರಿನ ಮಧ್ಯೆ ಇದ್ದು ಸುತ್ತಲೂ ಗುಡ್ಡಗಳಿಂದ ಕೂಡಿ ನೈಸರ್ಗಿಕವಾಗಿ ರೂಪುಗೊಂಡ ನಾಗ ಬನವಾಗಿದೆ. ಇವತ್ತಿನ ಕಾಲದ ಸಿಮೆಂಟಿನ ನಾಗನ ಕಟ್ಟೆಯಲ್ಲಿ ಬಿಸಿಲ ಬೇಗೆಗೆ ಬೇಯುತ್ತಿರುವ ನಾಗನು ಇಲ್ಲಿ ತಂಪು ವಾತಾವರಣದಲ್ಲಿ ಆರಾಧನೆ ಪಡೆಯುತ್ತಿರುವುದನ್ನು ನೋಡುವುದೇ ಒಂದು ರೀತಿಯ ಸಂತೋಷ.

ಈ ಬಂಡೆಕಲ್ಲಿನ ಮುಂದೆ ಅನೇಕ ಬಂಡೆ ಕಲ್ಲುಗಳಿದ್ದು ಒಂದೆಡೆ ಒಂದು ಸಣ್ಣ ಗುಹೆ ಇದೆ. ಸುಮಾರು ಹತ್ತು ವರ್ಷಗಳ ಹಿಂದೆ ಹೊರ ಜಿಲ್ಲೆಯಿಂದ ಬಂದ ಭಿಕ್ಷುಕರು ಈ ಬನದ ಹತ್ತಿರ ಬಂದಾಗ ಅಲ್ಲಿ ಒಂದು ಉಡ ಕಂಡರಂತೆ. ಅದನ್ನು ಹಿಡಿಯಲು ಹೋದಾಗ ಅದು ಅ ಗುಹೆಯ ಒಳಗೆ ಹೋಯಿತಂತೆ. ಇವರೂ ಕೂಡ ಅದನ್ನು ಹಿಡಿಯಲು ಆ ಗುಹೆಯ ಒಳಗೆ ಹೋದಾಗ ಬೃಹತಾದ ೭ ಹೆಡೆಯ ರೀತಿಯ ಸರ್ಪವೊಂದು ಹೆಡೆಯೆತ್ತಿ ನಿಂತಿದ್ದನ್ನು ಕಂಡು ಭಯಬೀತಿ ಕೊಂಡು ಅಲ್ಲಿ ಓಡಿದರಂತೆ ಹಾಗೆ ಬಂದವರು ಬೆವರಿಳಿಸಿಕೊಂಡು ಅಲ್ಲೇ ದೂರದಲ್ಲಿದ್ದ ಮನೆಯವರ ಬಳಿ ವಿಷಯ ತಿಳಿಸಿದರಂತೆ.

ಇದನ್ನು ಮನೆಯ ಮುಖ್ಯ ಸದಸ್ಯರಾದ ತಿಮ್ಮಪ್ಪ ಪೂಜಾರಿಯವರು ತಿಳಿಸಿದರು. ಒಂದು ಕಾಲದಲ್ಲಿ ಈ ಮನೆಯಲ್ಲಿ ಸುಮಾರು ೬೦ ಜನರ ಕುಟುಂಬ ಒಟ್ಟಿಗೆ ಬಾಳಿ ಬದುಕುತ್ತಿತ್ತು. ಚೆನ್ನಪ್ಪ ಪೂಜಾರಿಯವರ ಕಾಲದಲ್ಲಿ ಈ ಮನೆಯಲ್ಲಿ ೪ ಜೋಡಿ ಮದುವೆಗಳು ಏಕ ಕಾಲದಲ್ಲಿ ನಡೆದಿವೆಯಂತೆ. ಮನೆಯಲ್ಲಿ ತಿಮ್ಮಪ್ಪ ಪೂಜಾರಿಯವರ ತಾಯಿ ಮನೆಯ ಯಜಮಾನಿ ಚೆಲುವಮ್ಮ ಯಾನೆ ಕೊರೊಪೊಳು ಅವರು ಇದ್ದಾರೆ. ಇವರೊಂದಿಗೆ ತಿಮ್ಮಪ್ಪ ಪೂಜಾರಿಯವರ ಕುಟುಂಬ ಇಲ್ಲಿ ವಾಸಿಸುತ್ತಿದ್ದಾರೆ. Article by- Sanketh Poojary

0 comments: