ಕಾರ್ಕಳ ಕಲ್ಯಾ ಕೈರೊಟ್ಟು ಬೋಂಟ್ರ ಮನೆತನದ ಇತಿಹಾಸ ಪ್ರಾಚೀನ ವೈಭವ ಕುತೂಹಲಕಾರಿ. ಈ ಮನೆತನಕ್ಕೆ ಹೇಳುವ 600 ವರ್ಷಗಳ ಮೌಖಿಕ ಇತಿಹಾಸ ವಿಜಯನಗರದ ತುಳುವಂಶದ ಕಾಲ ಘಟ್ಟವನ್ನು ಸೂಚಿಸುತ್ತದೆ. ಬೋಂಟ್ರ ಎಂಬುದು ಬಿಲ್ಲವರ ಉಪನಾಮಗಳಲ್ಲಿ ಒಂದು. ಈ ಉಪನಾಮ ಇರುವ ಬಿಲ್ಲವ ಮನೆತನಗಳು ಕಾರ್ಕಳದ ಕೆಲವೆಡೆಗಳಲ್ಲಿ ಇರುವಂತೆ ಬೆಳ್ತಂಗಡಿ ತಾಲೂಕಿನಲ್ಲೂ ಪ್ರಾಚೀನ ಗುತ್ತು ಬರ್ಕೆ ಮನೆಗಳಿವೆ. ಅಪಾರ ಭೂಮಿ ಹೊಂದಿದ ಬೆಸಾಯಗಾರ ಮನೆತನಗಳಿವು. ಬೋಂಟ್ರರು ವರ್ಗ ಭೂಮಿ ಉಳ್ಳ ಭೂಮಾಲಿಕ ಕೃಷಿಕರೆನ್ನುತ್ತಾರೆ ಶೀನಪ್ಪ ಹೆಗ್ಗಡೆ ಮತ್ತು ಎಸ್.ಎನ್ ಕಿಲ್ಲೆಯವರು.
ಬೋಂಟೆ ಎನ್ನುವ ತುಳುವಿನ ಶಬ್ಧದಿಂದ ಬೋಂಟ್ರರಾಗಿರಬೇಕೇಂಬುದು ಕೆಲವರ ಅಭಿಪ್ರಾಯ. ಬೋಂಟ್ರ ಮನೆತನಕ್ಕೆ ಸಾವಿರಾರು ಎಕ್ರೆ ವರ್ಗ ಭೂಮಿ ಇದ್ದು ನೂರಾರು ಒಕ್ಕಲುಗಳು, ಕೃಷಿಕ ಕಾರ್ಮಿಕರು ಇದ್ದ ಕಾರಣ ನಿಸ್ಸಂದೇಹವಾಗಿ ಬೋಂಟ್ರರು ಬೇಸಾಯಗಾರರಾಗಿದ್ದರು ಎನ್ನಬಹುದು.
ಕೈರೊಟ್ಟು ಮನೆತನದಲ್ಲಿ 600 ಕ್ಕೂ ಹೆಚ್ಚು ಯುದ್ಧ ತರಬೇತಿಗೊಂಡ ಯೋಧರಿರುತ್ತಿದ್ದರು. ಅವರು ಗರಡಿಯಲ್ಲಿ ಸಾಧನೆ ಮಾಡುತ್ತಿದ್ದರು. ಸ್ಥಳೀಯ ರಾಜರ ಪರಸ್ಪರ ಯುದ್ಧದಲ್ಲಿ ಭಾಗವಹಿಸುತ್ತಿದ್ದರು. ವಿಜಯನಗರದವರ ಯುದ್ಧಗಳಲ್ಲಿಯೂ ಈ ಮನೆತನಗಳ ಯೋಧರು ಭಾಗವಹಿಸಿದ್ದಿರಬೇಕು. ಈ ಬಗ್ಗೆ ಕೈರೊಟ್ಟು ಬೋಂಟ್ರ ಮನೆಯ ಎಗ್ಗಜ್ಜ ಬೊಗ್ಗಜ್ಜರ ಇತಿಹಾಸ ಹೇಳುತ್ತದೆ. ಕೈರೊಟ್ಟು ನೇರ್ಲ ಗ್ರಾಮದ ಭೂಮಿ ಬೋಂಟ್ರರಿಗೆ ಸೇರಿತ್ತು. ಕೃಷಿ, ಸಾಗುವಳಿಗಾಗಿ ಪರಿಷಿಷ್ಟ ವರ್ಗದ 60 ಕ್ಕೂ ಹೆಚ್ಚು ಕುಟುಂಬಗಳಿಗೆ ಕೇರಿ ನಿರ್ಮಿಸಿಕೊಡಲಾಗಿತ್ತು. ಅವರಿಗೆ ದೀಪಾವಳಿ ಹಬ್ಬ ಆಚರಿಸಲು ಭೂಮಿ ಉಂಬಳಿ ಬಿಟ್ಟಿದ್ದರು. ಕಂಬಳ ಮತ್ತು ದೈವಗಳ ನೇಮ ಕಟ್ಟುವ ಕುಟುಂಬಗಳಿಗೂ ಉಂಬಳಿಯಿತ್ತು.
ನಂದಳಿಕೆಯ ಮಹಾಲಿಂಗೇಶ್ವರ ದೇವಸ್ಥಾನದ ಸಿರಿ ಜಾತ್ರೆಗೆ ಚಪ್ಪರ ತೋರಣಕ್ಕೆ ಮರ ಕಡಿಯುವ ಮುನ್ನ ವೃಕ್ಷ ಪೂಜೆಯ ಸಂಪ್ರದಾಯ ಕೈರೊಟ್ಟು ಬೋಂಟ್ರ ಮನೆಯಲ್ಲಿ ನಡೆಯುತ್ತಿತ್ತು ಎಂದು ಹೇಳುತ್ತಾರೆ. ವೃಕ್ಷ ಪೂಜೆಗೆ ಮುನ್ನ ಹರಿಜನರು ಕೈರೊಟ್ಟು ಮನೆಗೆ ಬಂದು ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ಹೂವು ಹಣ್ಣುಗಳನ್ನು ಬಾಳೆ ಎಲೆಯಲ್ಲಿ ಇಟ್ಟು ದೈವ ದೇವರುಗಳಿಗೆ ಪ್ರಾರ್ಥಿಸಿ ಪೂಜಿಸಿ ಕಾಣಿಕೆ ಪಡೆದು ನಂತರ ಪೂಜಿಸಿದ ಪ್ರಸಾದವನ್ನು ಕಡಿಯುವ ಮರಕ್ಕೆ ಹಾಕಿ ಪ್ರಾರ್ಥಿಸಿ ಮರ ಕಡಿಯುವ ಸಂಪ್ರದಾಯವಿದೆ ಎನ್ನುತ್ತಾರೆ ಹಿರಿಯರು.
ನಂದಳಿಕೆ ಅರಮನೆಯ ಕಂಬಳದ ನಂತರ ಕಂಬಳತ್ತಾಯ ದೈವ ವೇಷಸಹಿತ ನಂದೊಳ್ಗೆ ಪೊಸ ಇಲ್ಲ್ ಮನೆಯ(ಕೈರೊಟ್ಟು ಮನೆಯ ಕವಲು) ಮಾಯಂದಾಲ್ ಗುಡಿಗೆ ಬಂದು ಅಗೇಲ್ ಸೇವೆಯಾಗಿ ಕುಣಿಯುವುದು ಸಂಪ್ರದಾಯ. ಆಗ ನಂದಿಗೊಣನಿಗೆ ಭತ್ತ, ತೆಂಗಿನಕಾಯಿ ಮತ್ತು ಬಂಟ ನಿಗೆ ಅಗೇಲು ನೀಡುತ್ತಾರೆ. ನೇಮಕ್ಕೆ ಎಣ್ಣೆಕೊಡುವುದು ಪೊಸ ಇಲ್ಲ್ ನಲ್ಲಿಯೇ . ಮಹಾಲಿಂಗೇಶ್ವರ ದೇವಸ್ಥಾನದ ರಾಶಿ ಪೂಜೆ ಮೇ 1ಅಥವಾ ಪಗ್ಗು 18 ರಂದು. ಅಂದು ಅಬ್ಬಗ ದಾರಗ ಜನ್ಮೋತ್ಸವ -ಉರ್ಕಿದೊಟ್ಟಿನಲ್ಲಿ 9 ದಿನಗಳ ರಾಶಿ ಪೂಜೆ. ಈ ಪೂಜಾ ಪ್ರಸಾದವನ್ನು ಮಂಚದಲ್ಲಿಟ್ಟು ನಂತರ ವಾದ್ಯವೈಭವದೊಂದಿಗೆ ಪೊಸ ಇಲ್ಲ್ ಬೋಂಟ್ರ ಮನೆಗೆ ತರುತ್ತಿದ್ದ ಪದ್ದತಿಯನ್ನು ಸುಮಾರು 30 ವರ್ಷಗಳ ಹಿಂದೆ ನಿಲ್ಲಿಸಲಾಗಿದೆಯಂತೆ. ಕಲ್ಯಾ ಕೈರೊಟ್ಟು ನೇಲ್ಯದ ರಾಜು ಬೊಂಟ್ರರಿಗೂ ಕಾನೊಟ್ಟು ಹೆಗ್ಗಡೆ ಮನೆತನದ ಬಂಟ ಮಹಿಳೆಗೂ ಆದ ವ್ಯಾಜ್ಯದಿಂದ ಪೊಸ ಇಲ್ಲ್ ಮನೆಯ ಪ್ರಸಾದದ ಗೌರವವನ್ನು ತಡೆಯಲಾಯಿತಂತೆ. ರಾಜು ಬೋಂಟ್ರರು ದೇವಸ್ಥಾನಕ್ಕೆ ವಂತಿಗೆ ಕಾಣಿಕೆ ನಿಲ್ಲಿಸಿದರು. ಮುಂದೆ ದೇವರ ಅಪ್ಪಣೆಯಂತೆ ವಂತಿಗೆ ಸಲ್ಲಿಸಲು ಆರಂಭಿಸಿದರಂತೆ.
ತುಲಾಯಿ ಬೋಂಟ್ರ ಕೈರೊಟ್ಟು ನೇಲ್ಯ ಮನೆತನದ ಮೂಲ ಪುರುಷ ಎನ್ನುತ್ತಾರೆ. ಈ ಮನೆತನದ ಆದಿ ಮನೆ ಕೈರೊಟ್ಟಿನಲ್ಲೇ ಸ್ವಲ್ಪ ದೂರದಲ್ಲಿದೆ. ಶಿವಪ್ಪ ಬೋಂಟ್ರ, ಪಕೀರ ಬೋಂಟ್ರ, ದಾದು ಬೋಂಟ್ರ, ಹೊನ್ನಯ ಬೋಂಟ್ರ ಈ ಮನೆತನದ ಪ್ರಸಿದ್ದರು. ಸಿಂಹ ಆಯದ ಈ ಮನೆಯಲ್ಲಿ ನಾಯಕರಿಗೆ ಪಟ್ಟವಾಗುತ್ತಿತ್ತು. ದಾದು ಬೋಂಟ್ರರ ಕಾಲದಲ್ಲಿ ಸುಮಾರು 65 ಒಕ್ಕಲುಗಳಿದ್ದವು. ಕಲ್ಯಾ ಗ್ರಾಮ ಈ ಮನೆತನದ ಒಡೆತನಕ್ಕೆ ಸೇರಿತ್ತು. ಸುಮಾರು 5000 ಸಾವಿರ ಮುಡಿ ಅಕ್ಕಿಯ ಭೂಮಿ ಈ ಮನೆತನಕ್ಕೆ ಇತ್ತು. ಸುಮಾರು 100 ಕ್ಕೂ ಹೆಚ್ಚು ಮಂದಿ ಸದಸ್ಯರ ಕೂಡು ಕುಟುಂಬ ಇದಾಗಿತ್ತಂತೆ. ಇದಕ್ಕೆ ಈ ಮನೆಯಲ್ಲಿದ್ದ 100 ಕಂಚಿನ ಬಟ್ಟಲುಗಳೇ ಸಾಕ್ಷಿ. ಬ್ರಿಟೀಷರ ಕಾಲದಲ್ಲಿ 1001 ರೂಪಾಯಿ ತೆರಿಗೆ ಕಟ್ಟುತ್ತಿದ್ದ ಅತೀ ಶ್ರೀಮಂತ ಮತ್ತು ಮೊದಲನೇಯ ಮನೆತನ ಇದಾಗಿತ್ತು. ಎರಡನೆ ಮನೆ ಕರ್ನಿರೆ ಕೊಪ್ಪಲಮನೆ ಮುಲ್ಕಿ ಮಂಗಳೂರು.
ಅತೀ ಹೆಚ್ಚು ತೀರ್ವೆ ಕಟ್ಟುತ್ತಿದ್ದ ಮನೆತನಗಳಿಗೆ ಬ್ರಿಟಿಷ್ ಸರಕಾರದಲ್ಲಿ ವಿಶೇಷ ಗೌರವಗಳಿದ್ದವು. ಈ ಮನೆತನಕ್ಕೆ ಪಟೇಲಿಕೆ ಇತ್ತು. ದಾದು ಬೋಂಟ್ರರು ನಕ್ರೆ ಗ್ರಾಮದ ಪಟೇಲರಾಗಿದ್ದರು. ಹಾಗೆಯೇ ಮುದ್ದಣ್ಣ ಬೋಂಟ್ರರು ಪಟೇಲರಾಗಿದ್ದರು. ದುಗ್ಗಣ್ಣ ಬೋಂಟ್ರರು ಕಳೆದ ಶತಮಾನದಲ್ಲಿ ತಾಲೂಕು ಬೋರ್ಡ್ ಪ್ರೆಸಿಡೆಂಟ್ ಆದವರು. ಈ ಮನೆತನದ ಮೂಲ ಬಳಿ ಕರ್ಕೇರ. ತುಲಾಯಿ ಬೋಂಟ್ರರ ಕಾಲದಲ್ಲಿ ಅವರ ಅಳಿಯಂದಿರು ಯುದ್ದಕ್ಕೆ ಹೋಗುವ ಪ್ರಸಂಗ ಬಂತು. ಯುದ್ದದಲ್ಲಿ ಗೆದ್ದು ಬಂದುದರಿಂದ ಇದು ಬಂಗೇರ ಬಳಿಯವರಿಗೆ ಸೇರಿತು. ಈ ಮನೆತನದ ಎಗ್ಗಜ್ಜ ಬೊಗ್ಗಜ್ಜ ಎಂಬ ವೀರರು ವಿಜಯ ನಗರಕ್ಕೂ ಹೋಗಿ ಯುದ್ದದಲ್ಲಿ ಭಾಗವಹಿಸಿದ್ದರೆಂಬ ಹೇಳಿಕೆಯೂ ಇದೆ.
ಈ ಮನೆತನ ಶತಮಾನಗಳಿಂದಲೂ ಶೌರ್ಯ ಸಾಹಸ, ಆಡಳಿತಕ್ಕೆ ಹೆಸರಾಗಿತ್ತು. ಮನೆಯ ಮುಂದಿನ ಗದ್ದೆಯಲ್ಲಿ ಸುಮಾರು 20 ವರ್ಷಗಳ ಹಿಂದಿನವರೆಗೂ ಪೂಕರೆ ಹಾಕಿ ಕಂಬಳ ನಡೆಯುತ್ತಿತ್ತು. ಈ ಮನೆಯ ಆದಿ ಮನೆಯಲ್ಲಿ ಕಂಬಳತ್ತಾಯ ದೈವದ ಅರದಾಲ ಹಾಕುತ್ತಿದ್ದರು. ಕಂಬಳಕ್ಕೆ ಕುದುರೆ, ನಂದಿಗೋಣನ ವೇಷವನ್ನು ಹಾಕುತ್ತಿದ್ದರೆಂದು ಅರ್ಜುನ್ ದೇವ್ ಕಲ್ಲೆಯವರು ತಿಳಿಸಿದರು. ಅರಸು ಪಟ್ಟದ ಸಂಪ್ರದಾಯ ಆದಿ ಮನೆಯಲ್ಲಿ ಅಗುತ್ತಿತ್ತು. ನಾರಾಯಣ ಕಲ್ಲೆಯವರದ್ದು ಕೊನೆಯ ಪಟ್ಟಾಭಿಷೇಕವಾಗಿತ್ತು. ನಾರಾಯಣ ಕಲ್ಲೆಯವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾರಕರೂ ಆಗಿದ್ದರು. ಇವರ ಮಗ ಶಿವಶಂಕರ ಬೋಂಟ್ರ.
ಈ ಮನೆತನದ ಸದಸ್ಯರು ಡಾಕ್ಟರು, ವಕೀಲರು ಉದ್ಯಮಿಗಳಾಗಿ ವಿವಿಧ ಊರುಗಳಲ್ಲಿ ನೆಲೆ ನಿಂತಿದ್ದಾರೆ. ದಯಾನಂದ ಬೋಂಟ್ರ ಭಕ್ತವತ್ಸಲ ಬೋಂಟ್ರ ಗುಜರಾತಿನಲ್ಲಿ ನಾಮಾಂಕಿತ ಉದ್ಯಮಿಗಳು . ಈ ಬೋಂಟ್ರ ಮನೆತನದವರು ಸಾರ್ವಜನಿಕ ಶಿಕ್ಷಣಕ್ಕಾಗಿ ಶತಮಾನದ ಮೊದಲ ಶಾಲೆಯನ್ನು ತೆರೆದವರು.
ಕಲ್ಯಾ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮುಖ್ಯಸ್ಥರಾಗಿ ಈ ಕೈರೊಟ್ಟು ಮನೆತನದವರು ಇದ್ದಾರೆ. ಇಲ್ಲಿನ ಜಾತ್ರಾ ಸಂದರ್ಭದಲ್ಲಿ ಮತ್ತು ಗರಡಿಯ ನೇಮದ ಸಂದರ್ಭದಲ್ಲಿ ಹಾಗೂ ಈ ಮನೆತನದ ಪಿಲಿಚಾಮುಂಡಿ ದೈವದ ನೇಮದ ಸಂದರ್ಭದಲ್ಲಿ ದೇವಿಯನ್ನು ಗದ್ದಿಗೆ ರೂಪದಲ್ಲಿ ಈ ಮನೆಗೆ ತಂದು ಎದುರಿನ ಬಾಕ್ಯಾರಿನಲ್ಲಿ ಇಟ್ಟು ನಂತರ ಅಲ್ಲಿ ಪೂಜೆಯಾಗಿ ಗರಡಿಗೆ ಮತ್ತು ದೈವಸ್ಥಾನಕ್ಕೆ ಕೊಂಡೊಯ್ಯವ ಸಂಪ್ರದಾಯ ಇದೆ. ದೇವಿಗೆ ಒಂದು ಬಲಗೈ ಬಂಟನಾಗಿ ದೈವ ಬೇಕು ಎಂದು ತೋರಿದಂತೆ ಕುಕ್ಕುಂದೂರು ಎಂಬಲ್ಲಿನ ಪಿಲಿಚಾಮುಂಡಿ ದೈವಸ್ಥಾನದಿಂದ ಪಿಲಿಚಾಮುಂಡಿ ಮತ್ತು ಬಂಟ ದೈವಗಳನ್ನು ಶಿವಪ್ಪ ಬೊಂಟ್ರರು ತಂದು ಈ ಮನೆಯಲ್ಲಿ ಆರಾಧಿಸಿದರಂತೆ. ಮನೆಯ ಒಳ ಪ್ರವೇಶಿಸುವಾಗ ನಮ್ಮ ಎಡ ಭಾಗದಲ್ಲಿ ಇರುವ ಕೋಟೆಯಲ್ಲಿ ಪಿಲಿಚಾಂಡಿ ಬಂಟ ದೈವಗಳ ಮೂರ್ತಿ ಇದೆ. ಬೆಳ್ಳಿಯ ಮೊಗ ಮತ್ತು ದೈವದ ಚಿನ್ನಾಭರಣಗಳನ್ನು ಲಾಕರ್ ನಲ್ಲಿ ಇಡಲಾಗಿದೆ. ಇದೇ ಕೋಣೆಯಲ್ಲಿ ಹಿರಿಯಾಯ ಎಂಬ ನೆಲೆಯಲ್ಲಿ ಆರಾಧನೆಗೊಳ್ಳುವ ಶಿವಪ್ಪ ಬೋಂಟ್ರರ ಮರದ ಮತ್ತು ಬೆಳ್ಳಿಯ ಮೂರ್ತಿಗಳಿವೆ. ಇವರಿಗೆ ತರಕಾರಿ ಅಡುಗೆಯ ಅಗೇಲು ಬಡಿಸುತ್ತಾರೆ. ಪಿಲಿಚಾಮುಂಡಿ ಮತ್ತು ಬಂಟ ದೈವಗಳಿಗೆ ನೆಲ್ಲಿಗುಡ್ಡೆ ಎಂಬಲ್ಲಿ ದೇವಸ್ಥಾನವಿದ್ದು ಪ್ರತೀ ವರ್ಷ ಕೈರೊಟ್ಟು ನೇಲ್ಯದಿಂದ ಭಂಡಾರ ಹೋಗಿ ನೇಮವಾಗುತ್ತದೆ.
ಕೈರೊಟ್ಟು ನೇರ್ಲ ದೊಡ್ಡ ಮನೆಯು ಹೆಸರಿಗೆ ತಕ್ಕಂತೆ ಬೃಹದಾಕಾರದ ಅನೇಕ ಬೋದಿಗೆ ಕಂಬಗಳುಳ್ಳ ದಪ್ಪನೆಯ ಮರದ ಮುಚ್ಚಿಗೆ ಉಪ್ಪರಿಗೆ ಮನೆ. ಸುತ್ತುಮುದಲಿನ ಮನೆಯ ಮುಖ್ಯ ದ್ವಾರದಲ್ಲಿ ಸುಮಾರು 8 ಬೃಹತ್ ಗಾತ್ರದದ ಸುಂದರ ಕೆತ್ತನೆಗಳುಳ್ಳ ಬೋದಿಗೆ ಕಂಬಳಿವೆ. ಸುಂದರ ಕೆತ್ತನೆ ಎರಡು ಕಿಟಕಿಗಳಿವೆ. ಆನೆಬಾಗಿಲು ಎತ್ತರವಾಗಿದ್ದು ಸುಂದರವಾಗಿದೆ. ಒಳ ಪ್ರವೇಶಿಸುತ್ತಿಂದಂತೆ ಮತ್ತೆ ಒಳಜಗಲಿ ಇದ್ದು ಇಲ್ಲಿಯೂ ನಾಲ್ಕು ಸುಂದರವಾದ ಭೋದಿಗೆ ಕಂಬಗಳಿವೆ. ಅಂಗಳ ಇಳಿದು ಮುಂದಕ್ಕೆ ಎತ್ತರದ ಚಾವಡಿ ಇದೆ. ಇಲ್ಲಿ ಎಲ್ಲಾ ಕಂಬಳಿಗಿಂತಲೂ ತುಸು ದೊಡ್ಡ ಗಾತ್ರದ ಬೋಧಿಗೆ ಕಂಬಗಳಿದ್ದು ಚಾವಡಿಗೆ ಮೆರುಗನ್ನು ನೀಡಿದೆ. ಅಪೂರ್ವ ಕೆತ್ತನೆಗಳುಳ್ಳ ಈ ಕಂಬಗಳು ಮನೆತನದ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ಚಾವಡಿಯ ಎಡಭಾಗದಲ್ಲಿ ಒಂದು ಬಾಗಿಲು ಇದ್ದು ಚಾವಡಿಯ ಹಿಂದಿನ ಕೋಣೆಯ ಬಾಗಿಲು ಇದಾಗಿದೆ. ಇದರೊಳಗೆ ಬೈದೇರುಗಳ ಭಂಡಾರವಿದೆ. ಮನೆಯ ಎದುರಿನ ಪಡಿಪ್ಪಿರೆಯಲ್ಲಿರುವ ಸಾಲು ಸಾಲು ಕಂಬಗಳು ಮನೆಗೆ ಅರಮನೆಯ ಶೋಭೆಯನ್ನು ತಂದಿವೆ. ಮನೆಯ ಎದುರುಗಡೆ ಬೈದೇರುಗಳ ಬಾಕ್ಯಾರು ಎಂಬ ಗದ್ದೆ ಇದೆ. ಮನೆಯ ಬಲಭಾಗದಲ್ಲಿ ಪ್ರಸೂತಿ ಗೃಹ ಇತ್ತು.
ಮನೆಯ ಮಧ್ಯ ಭಾಗದಲ್ಲಿ ಹಿಂದಿನ ಕಾಲದ ಆಯುಧಗಳನ್ನಿಡುವ ಸ್ಥಳವಿದೆ. ಮನೆಯ ಮುಂಭಾಗದ ಉಪ್ಪರಿಗೆಯುಳ್ಳ ಬೃಹತ್ ಪಡಿಪ್ಪಿರೆಯನ್ನು ದಾದು ಬೋಂಟ್ರರು ಕಟ್ಟಿಸಿದ್ದಾರೆ. ಹಳೆಕಟ್ಟೆ ಬೈದೇರುಗಳ ಗರಡಿ ನೇಮಕ್ಕೆ ಇಲ್ಲಿಂದ ಬೈದೇರುಗಳ ಭಂಡಾರ ಹೋಗುತ್ತದೆ. ಹಾಗೇಯೇ ಪರಾಡಿ ಜೈನ ಮನೆತನದಿಂದ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಗಳ ಭಂಡಾರ ಹೋಗುತ್ತದೆ. ಕೈರೊಟ್ಟುವಿನಿಂದ ಭಂಡಾರ ಹೋಗುವುದು ಕೆಲವು ವರ್ಷಗಳ ಹಿಂದೆ ಕಾರಣಾಂತರಗಳಿಂದ ನಿಂತು ಹೋಗಿತ್ತು. ಈಗ ಪುನರಾರಂಭಗೊಂಡಿದೆ. ಸುಮಾರು 60 ಕ್ಕೂ ಹೆಚ್ಚು ಒಕ್ಕಲು ಮನೆಗಳಲ್ಲದೆ ಪರಿಶಿಷ್ಟ ವರ್ಗದ 60 ಮಂದಿ ಕಟ್ಟಾಳುಗಳಿದ್ದರು. ಈ ಮನೆತನದ ಆಡಳಿತಕ್ಕೊಳಪಟ್ಟ ಕಲ್ಯಾ ದುರ್ಗಾಪರಮೇಶ್ವರಿ ದೇವಸ್ಥಾನ ಕ್ಕೆ ಮಹಾನವಮಿ ಮತ್ತು ವಾರ್ಷಿಕ ಪೂಜೆಗೆ ಪೌರೋಹಿತ್ಯ ನಿರ್ವಹಿಸಲು 42 ಮುಡಿ ಅಕ್ಕಿ ಉಂಬಳಿ ನೀಡಿ ಬ್ರಾಹ್ಮಣರನ್ನು ತರಿಸಿ ಇಲ್ಲಿ ಉಳಿಸಿಕೊಂಡಿದ್ದರು. ಉಳಿದ ಸಮಯದಲ್ಲಿ ಮರಾಠಿ ನಾಯ್ಕರು ಪೂಜೆಯನ್ನು ಮಾಡುತ್ತಾರೆ. ಇಲ್ಲಿ ಧ್ವಜಾರೋಹಣ ಆಗಿ ಮೂರು ದಿನದ ಉತ್ಸವ ನಡೆಸುತ್ತಾರೆ. 1955 ರಲ್ಲಿ ನಾರಾಯಣ ಕಲ್ಲೆಯವರು ಇಲ್ಲಿ ಕೈರೊಟ್ಟು ಹಿರಿಯ ಪ್ರಾಥಮಿಕ ಶಾಲೆಯನ್ನು ಕಟ್ಟಿಸಿದರು.
ಕಾರ್ಕಳ ಕೈರಬೆಟ್ಟು ಬೋಂಟ್ರ ಅರಸು ಮನೆತನ ನಂದಳಿಕೆ ಅರಸರಿಗೆ ಸಮಾನವಾದ ಅಂತಸ್ತು ವೈಭವ ಗೌರವಗಳನ್ನು ಹೊಂದಿದ್ದ ಮನೆತನ. ಈ ಮನೆತನದಲ್ಲಿ ಹುಟ್ಟಿದವರು ಶಿವು ಬೋಂಟ್ರ, ತಮ್ಮ ಅಗಾಧವಾದ ಶಕ್ತಿ, ಪರಾಕ್ರಮ ಮತ್ತು ನ್ಯಾಯಪರತೆಯಿಂದ ತಮ್ಮದೇ ಪ್ರಭಾವಲಯವನ್ನು ರೂಪಿಸಿಕೊಂಡವರು. ಊರಿನ ನ್ಯಾಯ ಪಂಚಾತಿಕೆಗಳನ್ನು ತಮ್ಮ ಮನೆಯಲ್ಲಿ ಮಾಡುತ್ತಿದ್ದ ಇವರು ನ್ಯಾಯದಲ್ಲಿ ಎತ್ತಿದ ಕೈ. ಆಗಿನ ಕಾಲದಲ್ಲಿ ಇವರು ತಲೆಗೆ ರಾಜ ಪೇಟ ಕಟ್ಟಿ ರಾಜ ಕಚ್ಚೆ ಉಟ್ಟು ಬೆಳ್ಳಿ ಬಿಳಿ) ಕುದುರೆಯಲ್ಲಿ ರಾಜ ಠೀವಿಯಿಂದ ಹೋಗುತ್ತಿದ್ದರು. ಇವರ ನಂತರದ ದಾದು ಬೋಂಟ್ರರೂ ಕೂಡ ಕುದುರೆಯಲ್ಲೇ ಸಾಗುತ್ತಿದ್ದರು. ಇಲ್ಲಿ ಅನೇಕರಿಗೆ ಬೈದೇರುಗಳ, ಕೊಡಮಣಿತ್ತಾಯ ಮತ್ತು ಪಿಲಿಚಂಡಿ ದೈವದ ಮುಖಾಂತರ ಭಾಮದ ಪಟ್ಟವಾಗಿರುತ್ತದೆ. ಇವತ್ತಿಗೂ ಸುತ್ತಮುತ್ತಲಿನ ಆರು ಮಾಗಣೆಯಲ್ಲಿ ದೈವಗಳ ನೇಮದಲ್ಲಿ ಇವರ ಹೆಸರಿನ ಮರ್ಯಾದೆಯ ಕರೆ ಇದೆ.
ಅಗಾಧ ಸಾಹಸಿಯಾಗಿದ್ದ ಇವರು ಗರಡಿ ವಿಧ್ಯೆಯಲ್ಲು ಪರಿಣಿತರಾಗಿದ್ದರಂತೆ. ತಮ್ಮ ಸಾಹಸ ಮತ್ತು ನ್ಯಾಯಪರತೆಯಿಂದ ಹೆಸರುವಾಸಿಯಾಗಿದ್ದ ಇವರು ಇವತ್ತಿಗು ಜನಮಾನಸದಲ್ಲಿ ಮನೆಮಾತಾಗಿದ್ದಾರೆ. ಇವರ ಬಗ್ಗೆ ಮನೆಯವರು ಅತ್ಯಂತ ಉತ್ಸಾಹದಿಂದ ಗತಕಾಲದ ನೆನಪನ್ನು ಬಿಚ್ಚಿಡುತ್ತಾರೆ. ಕೈರೊಟ್ಟು ಮನೆತನದಲ್ಲಿ ಪ್ರಾಚೀನದಲ್ಲಿ ಬೈದೇರುಗಳ ಸಾನಿದ್ಯವಿರಲಿಲ್ಲ. ಇಲ್ಲಿನ ಸುತ್ತ ಮುತ್ತಲಿಗೆ ನಿಟ್ಟೆ ಗರಡಿಯೇ ಗ್ರಾಮ ಗರಡಿ ಆಗಿತ್ತು. ಸಂಪ್ರದಾಯ ಪ್ರಕಾರ ನಿಟ್ಟೆ ಗರಡಿಯಲ್ಲಿ ನೇಮಕ್ಕೆ ಎಣ್ಣೆ ಬೂಲ್ಯ ಕೊಡಬೇಕಾದರೆ ಕೈರೊಟ್ಟು ದೊಡ್ಡ ಮನೆಯ ಮತ್ತು ಪರಾಡಿ ಜೈನ ಮನೆತನದ ಯಜಮಾನರ ಉಪಸ್ಥಿತಿ ಇರಬೇಕು. ಒಮ್ಮೆ ಈ ಎರಡು ಮನೆತನದವರು ಗರಡಿ ನೇಮಕ್ಕೆ ಹೋಗುವುದು ಸ್ವಲ್ಪ ತಡವಾಯಿತು. ಆಗ ಅಲ್ಲಿನ ಮುಖ್ಯಸ್ಥರು ಇವರನ್ನು ಕಾಯದೆ ದೈವ ಕಟ್ಟುವವರಿಗೆ ಎಣ್ಣೆ ಬೂಲ್ಯ ಕೊಡಿಸಿದರು. ಆ ಸಮಯದಲ್ಲಿ ಇಲ್ಲಿಗೆ ಬಂದ ಪರಾಡಿ ಮತ್ತು ಕೈರೊಟ್ಟಿನ ಯಜಮಾನರು ಗರಡಿಯ ಅಂಗಣದಿಂದ ಇಬ್ಬರು ಒಂದು ಹಿಡಿ ಮಣ್ಣು ಹಿಡಿದುಕೊಂಡು ಪ್ರಾರ್ಥನೆಮಾಡಿ ದುಗ್ಗಣ್ಣ ಬಾಕ್ಯಾರು ಎಂಬಲ್ಲಿ ತಂದು ಹಾಕುತ್ತಾರೆ.
ಅವರ ಪ್ರಾರ್ಥನೆಯಂತೆ ಬೈದೇರುಗಳು ಮತ್ತು ಕುಕ್ಕಿನಂತಾಯ ಕೊಡಮಣಿತ್ತಾಯ ದೈವಗಳ ಅವರನ್ನು ಹಿಂಬಾಲಿಸಿ ದುಗ್ಗಣ್ಣ ಬಾಕ್ಯಾರಿಗೆ ಬರುತ್ತವೆ. ದೈವ ಕೊಡಮಣಿತ್ತಾಯನು" ನಾವು ಪರಾಡಿ ಜೈನ ಮನೆತನದಲ್ಲಿ ನೆಲೆಯೂರುತ್ತೇವೆ ನೀವು ನಮ್ಮೊಂದಿಗೆ ಬನ್ನಿ "ಎಂದು ಬೈದೇರುಗಳನ್ನು ಕರೆದಾಗ ಬೈದೇರುಗಳು ತಾವು ಕೈರೊಟ್ಟು ಬೋಂಟ್ರ ದೊಡ್ಡ ಮನೆಗೆ ಹೋಗಿ ನೆಲೆಯಾಗುತ್ತೇವೆ ಎಂದು ಹೇಳುತ್ತಾರೆ. ಅದರಂತೆ ಅವರ ಕೈರೊಟ್ಟು ಮನೆಗೆ ಹೋಗುವಾಗ ಮನೆಯ ಆನೆಬಾಗಿಲು ಮುಚ್ಚಿರುತ್ತದೆ. ಮನೆಯ ಎಡ ಭಾಗದ ಕಿರುಬಾಗಿಲಿನಿಂದ ಬೈದೇರುಗಳು ಒಳ ಪ್ರವೇಶಿಸಿ ನಂತರ ನೆಲೆಯೂರುತ್ತಾರೆ. ಅದ್ದರಿಂದ ಈಗಲೂ ಮನೆಯ ಹೆಬ್ಬಾಗಿಲನ್ನು ಮುಚ್ಚಲಾಗುವುದಿಲ್ಲ. ಈ ಮನೆತದಲ್ಲಿ ಸುಮಾರು 500 ಕ್ಕೂ ಹೆಚ್ಚು ಕುಟುಂಬಿಕರು ವಾರ್ಷಿಕ ಪರ್ವದಂದು ಬಂದು ಸೇರುತ್ತಾರೆ. ಈ ಮನೆಯಲ್ಲಿ ಪಿಲಿಚಾಮುಂಡಿ, ಬಂಟ, ಓಡಲ್ತಾಯ, ಮೂರು ಪಂಜುರ್ಲಿ ದೈವಗಳು ಮತ್ತು ವರ್ತೆ ದೈವವಿದೆ.
ಚಾವಡಿಯ ಹಿಂಬದಿಯ ಕೋಣೆಯಲ್ಲಿ ಬೈದೇರುಗಳ ಭಂಡಾರವಿದೆ. ಗರಡಿಯಲ್ಲಿ ಮತ್ತು ದೇವಸ್ಥಾನದಲ್ಲಿ ಈ ಮನೆತನಕ್ಕೆ ಗೌರವದ ಕರೆಯಿದ್ದು ಶಿವಪ್ಪ ಬೋಂಟ್ರರ ಹೆಸರನ್ನೇ ದೈವಗಳನ್ನು ಕರೆಯುತ್ತವೆ. ಈ ಗ್ರಾಮದಲ್ಲಿ ಶುಭ ಕಾರ್ಯಕ್ರಮಗಳು ಆಗುವುದಿದ್ದರೆ ಇಲ್ಲಿ ಬಂದು ಎಲೆ ಕಡಿಕೆ ಕೊಟ್ಟು ಕರೆಯುವ ಸಂಪ್ರದಾಯವಿದೆ. ಊರಿನಲ್ಲಿ ಯಾವುದೇ ಸಮುದಾಯದವರ ಮದುವೆ ಆದರೂ ಈ ಮನೆಗೆ ಗೌರವದ ಆಮಂತ್ರಣ ಇತ್ತು. ವಧು ವರರು ಇಲ್ಲಿ ಬಂದು ಹಾಲು ಕುಡಿದು ಆಶೀರ್ವಾದ ಪಡೆಯುವ ಸಂಪ್ರದಾಯ ವಿತ್ತು. ಊರಿನ ಅನೇಕ ನ್ಯಾಯ ತೀರ್ಮಾನಗಳು ಈ ಮನೆಯಲ್ಲಿ ನಡೆದಿದೆ. ಸುಮಾರು 4 ಎಕರೆ ಭೂಮಿ ಮನೆತನದ ದೈವಗಳಿಗೆ ಬಿಡಲಾಗಿದೆ. ಒಟ್ಟಾಗಿ ಕೈರೊಟ್ಟು ಮನೆತನವು ಪ್ರಾಚೀನ ಅರಸು ಮನೆತಗಳಂತೆ ಗತ್ತು ಗಾಂಭೀರ್ಯದಿಂದ ಮೆರೆದ ಮತ್ತು ಮೆರೆಯುತ್ತಿರುವ ಪ್ರಸಿದ್ಧ ಮನೆಯಾಗಿದೆ. ಬರಹ : ಸಂಕೇತ್ ಪೂಜಾರಿ
Nice article... Thanks for the information....
ReplyDelete