Thursday, January 18, 2018

ಕೋಟಿ ಚೆನ್ನಯರ ಮತ್ತು ಬಾರೆಯರ ಸ್ವಂತಿಕೆ ಮತ್ತು ಸ್ವಾಭಿಮಾನ ನಮ್ಮ ರಕ್ತದಲ್ಲೂ ಮೈಗೂಡಿಸಿಕೊಳ್ಳೋಣ

ಬಿಲ್ಲವರಿಗೆ ಅದೊಂದು ಕಾಲವಿತ್ತು ಭವ್ಯವಾಗಿ ಶ್ರೀಮಂತಿಕೆಯಿಂದ ಬಾಳಿ ದೈವಗಳೆ ಬದುಕಿನ ಜೀವಾಳವೆಂದು ನಂಬಿ ತನು ಮನಗಳನ್ನು ಸತ್ಯದೊಂದಿಗೆ ಹಂಚಿಕೊಂಡು ಬದುಕಿನ ಚಿತ್ತಾರವನ್ನು ಮೂಡಿಸುತ್ತಿದ್ದ ಕಾಲ. ಆ ಕಾಲಘಟ್ಟದ ಆಸುಪಾಸಿನಲ್ಲಿ ಹುಟ್ಟಿದವರೆ ವೀರ ಪುರುಷರಾದ ಕೋಟಿ ಚೆನ್ನಯರು ಮತ್ತು ಕಲಿಯುಗ ಪುರುಷರಾದ ಕಾಂತಬಾರೆ ಮತ್ತು ಬುದಾಬಾರೆಯರು. ಯುವಕರ ಮನಸ್ಸಲ್ಲಿ ಶಕ್ತಿ ಸಂಚಯ ಮಾಡಿ ಅಗೋಚರವಾದ ಪುರುಷ ಶಕ್ತಿಗಳನ್ನು ಗೋಚರಿಸುವಂತೆ ಮಾಡಿ ಪುರುಷ ಸಿಂಹಗಳಾಗಿ ಬಾಳಿ ಇಷ್ಟೇ ಬದುಕಲ್ಲ ಈ ಬದುಕಿನಿಂದಾಚೆ ಸಾಧಿಸುವುದು ಬೇರೆ ಇದೆ ಎಂದು ತೋರಿಸಿಕೊಟ್ಟವರು.

ಕೋಟಿ ಚೆನ್ನಯರ ಬದುಕು ಒಂದು ರೀತಿ ತೆರೆದಿಟ್ಟ ಪುಸ್ತಕದಂತೆ ಅವರು ಬದುಕಿದ್ದಷ್ಟು ದಿವಸ ಸ್ವಾಭಿಮಾನಿಗಳಾಗಿ ಬದುಕಿದವರು. ಅವರ ಸ್ವಾಭಿಮಾನ ಮತ್ತು ಬೇರೆಯವರಿಗೆ ಅವರು ಕಲಿಸಿದ ಸ್ವಾಭಿಮಾನದ ಬೋಧನೆ ಅವರ ಕತೆಯಲ್ಲಿ ಕಾಣ ಬರುತ್ತದೆ. ಅವರು ಪಡುಮಲೆ ಕುಜುಂಬ ಮುದ್ಯರ ಬೀಡಿನಲ್ಲಿ ಬಲ್ಲಾರರೊಂದಿಗೆ ಮುನಿಸಿಕೊಂಡು ಗಡು ಇಟ್ಟು ಇಳಿದಾಗ ಅಲ್ಲೇ ತೆಂಗಿನಕಾಯಿ ವ್ಯಾಪಾರಿ ಇವರನ್ನು ನೋಡಿ ಕಿಸಕ್ಕನೆ ನೀಡಿ ನಗುತ್ತಾನೆ. ಆವಾಗ ಕೋಟಿಚೆನ್ನಯರು ಹೇಳುತ್ತಾರೆ ನೀನೇನು ನಮ್ಮ ದಿಕ್ಕು ತಪ್ಪಿತು ಅದೃಷ್ಟ ಮುಕ್ಕಾಯಿತು ( ದಿಕ್ಕ್ ಅಳಿಂಡ್ ದೆಸೆ ಮುಕ್ಕುಂಡು) ಎಂದು ನಗುತ್ತಿದ್ದೀಯ ಅಥವ ಬಲ್ಲಾಳನ ಅಥಃ ಪತನ ಎಂದು ನಗುತ್ತಿದ್ದೀಯ ಅಂತ ಕೇಳಿ ಕೊನೆಗೆ ಅವನಿಗೆ ಸ್ವ ಉದ್ಯೋಗದ ಬಗ್ಗೆ ತಿಳಿಸುತ್ತಾರೆ.

ನೀನು ಹೈನುಗಾರಿಕೆ ಉದ್ಯಮವನ್ನು ಪ್ರಾರಂಭಿಸು ಈ ರೀತಿ ತೆಂಗಿನಕಾಯಿಯನ್ನು ಯಾರಿಂದಲೋ ತಂದು ಮಾರುವ ವ್ಯಾಪಾರ ಬೇಡ ಎಂದು ಹೇಳುತ್ತಾರೆ. ಅಲ್ಲಿಂದ ಅವರು ಪಂಜ ಸೀಮೆಯ ಗಡಿಯ ಹತ್ತಿರ ನೆಲ್ಲಿದ ಕಾಡಿಗೆ ಬಂದಾಗ ಎಣ್ಣಿ ಮಾರುವ ಹೆಂಗಸರು ಇವರಿಗೆ ಪಂಜದ ಸೈನಿಕರ ಬಗ್ಗೆ ತಿಳಿಹೇಳಿ ಉಪಕಾರ ಮಾಡಿದುದರ ಪ್ರತಿಫಲವಾಗಿ ಅಲ್ಲೂ ಅವರಿಗೆ ಹೈನುಗಾರಿಕೆ ಸ್ವ ಉದ್ಯೋಗದ ಬಗ್ಗೆ ತಿಳಿಹೇಳಿ ಮುಂದುವರೆಯುತ್ತಾರೆ. ಅಲ್ಲಿಂದ ಮುಂದುವರಿದ ಅವರು ಬಾಯಾರಿಕೆ ನೀಗಿಸಲು ಮೇಲ್ವರ್ಗ ಅನಿಸಿಕೊಂಡವರು ನಡೆಸುತ್ತಿದ್ದ ಅರವಟ್ಟಿಗೆ ಹೋಗಿ ನೀರು ಕೇಳುತ್ತಾರೆ. ಅಲ್ಲಿ ಇವರಿಗೆ ನೀರು ಕುಡಿಯುವ ದೊಂಬೆಗೆ ಬಾಯಿ ಇಡಲು ಹೇಳುತ್ತಾರೆ ಆದರೆ ಇವರು ಅಲ್ಲಿ ತಮ್ಮ ಸ್ವಾಭಿಮಾನವನ್ನು ತೋರಿಸಿ ಸುರಿಯದ ತುದಿಯಲ್ಲಿ ನೀರನ್ನು ಕುಡಿಯುತ್ತಾರೆ.

ಇಲ್ಲಿ ಇವರು ದಾಸ್ಯದ ಸಂಕೇತಕ್ಕೆ ಮರ್ಮಘಾತ ನೀಡುತ್ತಾರೆ. ಮೇಲು ಕೀಲು ಭಾವಿಸುವವರಿಗೆ ತಿಲಾಂಜಲಿ ನೀಡುವ ಪ್ರಯತ್ನ ಮಾಡಿದ್ದಾರೆ. ಅಲ್ಲಿಂದ ಮುಂದುವರೆದು ಅವರು ಎಣ್ಮೂರ ದೇವಣ್ಣ ಬಲ್ಲಾಲನ ಬೀಡಿಗೆ ಬಂದು ಅವರಿಗೆ ಸಮಾಧಾನ ಪಡಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯದ ಮಾತು ನೀಡಿ ದುಡಿದು ಉಣ್ಣಲು ಗದ್ದೆ ಬೇಕೆಂದು ಕೇಳಿ ಪಡೆದವರು ಇಲ್ಲಿ ಅವರು ಪರಿಶ್ರಮದ ಬಗ್ಗೆ ಅದೇ ರೀತಿ ಸ್ವಾಭಿಮಾನದ ಪಾಠವನ್ನು ತಿಳಿ ಹೇಳುತ್ತಾರೆ. ಕೆಲವರು ಹೇಳುವುದುಂಟು ಎಣ್ಮೂರು ಬಲ್ಲಾಲರು ಇವರಿಗೆ ಆಶ್ರಯ ನೀಡಿದರು ಎಂದು ಆದರೆ ಇವರ ಪರಾಕ್ರಮವನ್ನು ನೋಡಿ ಬಲ್ಲಾಲರು ಉಳಿಸಿಕೊಂಡಿರೋದು.

ಆಶ್ರಯ ಎನ್ನುವುದು ಬೇಡಿ ಬಂದವರಿಗೆ ಮಾತ್ರ ಇವರು ಯಾರ ಮುಂದೆಯು ಕೈ ಚಾಚಿದವರು ಅಲ್ಲ. ಕೋಟಿ ಬೈದ್ಯರು ತಮ್ಮ ಅವನತಿಯ ಸಮಯದಲ್ಲಿ ಮೂರು ಬಲ್ಲಾಲರನ್ನು( ದೇವಣ್ಣ, ಕೇಮರ ಮತ್ತು ಕುಜುಂಬ ಮುದ್ಯ ) ಹತ್ತಿರ ಕರೆದು ವೈರತ್ವ ಬಿಡಿ ಗರಡಿ ನಿರ್ಮಿಸಿ ಯುವಕರಿಗೆ ಗರಡಿ ವಿಧ್ಯೆ ಕಲಿಸಿ ಊರು ಕಾಯುವ ಯೋಧರನ್ನಾಗಿ ಮಾಡಿ ಎಂದು: ಕೊನೆಯ ಕ್ಷಣದಲ್ಲೂ ಅವರ ಮನದ ತುಡಿತ ಮೆಚ್ಚುವಂತಹುದು. ಆದರೆ ಇಂದು ಅವರ ಮೂಲ ಆಶಯ ಮರೆಯಾಗಿದೆ ನಮ್ಮಲ್ಲಿ ಭಕ್ತಿ ಮತ್ತು ಆಡಂಬರ ಪ್ರಾಧಾನ್ಯತೆ ಪಡೆದುಕೊಂಡು ಒಂದೇ ಒಂದು ಗರಡಿ ವಿದ್ಯೆಯ ಗರಡಿಗಳು ಹುಟ್ಟಿಕೊಳ್ಳದ್ದು ನಮ್ಮ ದೌರ್ಭಾಗ್ಯ. ಇನ್ನು ಕಾಂತಬಾರೆ ಬೂದಬಾರೆಯವರು ಬದುಕಿನುದ್ದಕ್ಕೂ ಅಧಿಕಾರ ಮತ್ತು ಅಂತಸ್ತಿಗಾಗಿ ಆಸೆ ಪಟ್ಟವರು ಅಲ್ಲ ಇಲ್ಲೂ ಅವರು ನೀರಿನ ಸಮಸ್ಯೆಗಾಗಿ ಕಾಲುವೆ ತೋಡುತ್ತಾರೆ ಅದೇ ರೀತಿಯಲ್ಲಿ ಬೇಸಾಯಕ್ಕಾಗಿ ಗುಡ್ಡ ಕಡಿದು ಗದ್ದೆ ಮಾಡುತ್ತಾರೆ. ಊರ ಗಡಿಗಳನ್ನು ಕಾಯಲು ಯುವಕರಿಗೆ ಗರಡಿ ವಿದ್ಯೆಗಳನ್ನು ಕಲಿಸುತ್ತಾರೆ.

ಅದೇ ರೀತಿಯಾಗಿ ತಮಗೆ ಗಡಿ ಪಟ್ಟ ಒಳಿದು ಬಂದರು ಅದನ್ನು ನಯವಾಗಿ ತಿರಸ್ಕರಿಸಿ ಗುಡ್ಡೆಸಾನದ ನಾಯಗರಿಗೆ ಗಡಿಪಟ್ಟ ಮಾಡಿಸಿದವರು ಇದನ್ನು ನೋಡುವಾಗ ಈಗಿನ ಕಾಲಘಟ್ಟದಲ್ಲಿ ಅಧಿಕಾರ ಸಿಗಲಿಲ್ಲವೆಂದು ಒಂದು ದೈವಸ್ಥಾನವನ್ನು ಎರಡು ಮಾಡುವುದು ನೋಡುವಾಗ ಇವರ ಮುಂದೆ ಬಾರೆಯರ ಆದರ್ಶ ಇನ್ನೂ ಎತ್ತರಕ್ಕೆ ಬೆಳೆಯುತ್ತಲೇ ಹೋಗುತ್ತದೆ. ಬಿಲ್ಲವ ಸ್ನೇಹಿತರೆ ನಾನು ಏನು ಹೇಳ ಹೊರಟಿದ್ದೇನೆಂದರೆ ನಮ್ಮಲ್ಲಿ ಏನಿದೆ ಎಂದು ಕೇಳುವವರಿಗೆ ನಮಗೆ ಈ ಮೇಲಿನ ಪುರುಷರ ಆದರ್ಶಗಳಿವೆ ಅವರು ಹಾಕಿಕೊಟ್ಟ ಸ್ವಾಭಿಮಾನದ ದಾರಿಯಿದೆ ಎಂದು ಈ ರೀತಿಯಾಗಿ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ನಮ್ಮ ಮುಂದಿನ ಪೀಳಿಗೆಗೆ ಮತ್ತು ನಮ್ಮೊಂದಿಗೆ ಇರುವ ನಮ್ಮವರಿಗಾಗಿ ನಾವು ಈ ಮೇಲಿನ ಪುರುಷರ ಆದರ್ಶವನ್ನು ಮನದಟ್ಟಾಗುವ ರೀತಿಯಲ್ಲಿ ಹೇಳುವ ಪ್ರಯತ್ನ ನಾವು ಮಾಡಬೇಕು.

ಅವರ ದಾರಿಯಲ್ಲಿ ನಡೆಯುವ ಯೋಚನೆಯು ನಮ್ಮದಾಗಬೇಕು. ಕೋಟಿ ಚೆನ್ನಯರ ಮತ್ತು ಬಾರೆಯರ ಸ್ವಂತಿಕೆ ಮತ್ತು ಸ್ವಾಭಿಮಾನ ನಮ್ಮ ರಕ್ತದಲ್ಲೂ ಮೈಗೂಡಿಸಿಕೊಳ್ಳಬೇಕು. ಅದೇ ರೀತಿ ಕೋಟಿ ಚೆನ್ನಯರ ಮತ್ತು ಬಾರೆಯರ ಜೀವನ ಕಥೆ ಪ್ರತಿ ಬಿಲ್ಲವರಿಗೆ ತಿಳಿಯದೆ ಹೋದರೆ ಅದರಷ್ಟು ದೊಡ್ಡ ಸೋಲು ಬೇರಾವುದು ಇಲ್ಲ. ಬದುಕು ನಿಂತ ನೀರಲ್ಲ ಹರಿಯುತ್ತಿರುವ ನೀರು, ನಿಂತು ರಾಡಿ ಕೊಚ್ಚೆಯಾಗುವುದಕ್ಕಿಂದ ಆದ್ರಾ ಮಳೆಯೊಂದಿಗೆ ಹುಚ್ಚು ಹುಚ್ಚಾಗಿ ಓಡುವುದೇ ಉತ್ತಮ. ಕೋಟಿ ಚೆನ್ನಯರ ಮತ್ತು ಬಾರೆ ಸಹೋದರರ ಕಡೆಯ ಆಸೆಯಂತೆ ಬಾಳುವ ಪ್ರಯತ್ನ ಮಾಡುವ ಆಶಯದೊಂದಿಗೆ ಭವಿಷ್ಯದತ್ತ ಮುಖ ಮಾಡಿ ಸಾಗೋಣ. ಬರಹ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

1 comment: