ಬಿಲ್ಲವರ ಅನೇಕ ಗುತ್ತು ಬರ್ಕೆಮನೆಗಳು ನಾನಾ ಕಾರಣಗಳಿಂದ ಅನ್ಯ ಜಾತಿಯವರ ಪಾಲಾಗಿದ್ದು ನಮ್ಮ ಸಂದರ್ಶನದ ಸಂದರ್ಭದಲ್ಲಿ ತಿಳಿದು ಬಂದಿದೆ. ಅಂತಹುದರಲ್ಲಿ ಐಕಳ ಮೂರು ಕಾವೇರಿ ಯಲ್ಲಿ ಇರುವ ಈ ಸೊರಕಲ ಗುತ್ತು ಕೂಡ ಒಂದು. ಬಿಲ್ಲವರ ವಶದಲ್ಲಿದ್ದ ಈ ಗುತ್ತು ಮನೆಯನ್ನು ಸ್ವಾತಂತ್ರ್ಯದ ಪೂರ್ವದಲ್ಲಿಯೇ ಬಂಟ ಸಮುದಾಯದವರಿಗೆ ಮಾರಾಟವಾಗಿದೆ.
೧೯೪೮ ರಲ್ಲಿ ಕೋಟಿ ಶೆಟ್ಟಿಯವರು ಇದನ್ನು ಖರೀದಿಸಿದರು. ಈಗ ಇದು ಶಂಕರ ಶೆಟ್ಟಿಯವರ ಸ್ವಾಧೀನ ಇದೆ. ಈ ಗುತ್ತಿನ ಮನೆಯ ಬಿಲ್ಲವರ ಕುಟುಂಬ ಇದನ್ನು ಮಾರಾಟ ಮಾಡಿ ಕಿನ್ನಿಗೋಳಿಯ ಬಳಿಯಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ನೆಲೆ ನಿಂತಿದ್ದಾರೆಂದು ಶಿವರಾಮ ಪೂಜಾರಿ ಎನ್ನುವರು ಕೆಲವು ಮಾಹಿತಿಗಳನ್ನು ಕೊಟ್ಟರು. ಒಂದು ಕಾಲದಲ್ಲಿ ಅಮೀನ್ ಬಳಿಯವರಿಗೆ ಸೇರಿದ್ದ ಈ ಗುತ್ತು ಮನೆಯನ್ನು ಸಂದರ್ಶಿಸಲು ಹೋದಾಗ ಅಲ್ಲೊಂದು ಹೊಸ ಆಧುನಿಕ ಮಾದರಿಯ ದೊಡ್ಡ ಮನೆ ಇದ್ದುದು ದೂರದಿಂದಲೇ ಎದ್ದು ಕಾಣುತ್ತಿತ್ತು. ಆ ಮನೆಗೆ ಸಮೀಪವಿದ್ದ ಸೊರಕಲ ಗುತ್ತು ಪ್ರಾಚೀನ ಮನೆಯನ್ನು ಸಂದರ್ಶಿಸಿದೆವು.
ಮನೆಯಲ್ಲಿ ವಯೋವೃದ್ದರಾಗಿದ್ದ ಶಂಕರ ಶೆಟ್ಟಿ ಯವರು ಇದ್ದರು. ಅವರು ಈ ಗುತ್ತಿನ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದರು. ಪೂರ್ವಕ್ಕೆ ಮುಖ ಮಾಡಿರುವ ಈ ಗುತ್ತು ಮನೆಯು ಬಹಳ ಹಳೆಯ ಮನೆಯಾಗಿದೆ. ಚಾವಡಿಯಲ್ಲಿ ಯಜಮಾನರು ಕುಳಿತುಕೊಳ್ಳುವ ಹಳೆಯಕಾಲದ ಮಂಚ ಇದೆ. ಚಾವಡಿಯ ಪಶ್ಚಿಮದಲ್ಲಿ ದೈವಗಳ ಕೊಠಡಿ ಇದೆ. ಸಾರಾಳ ಜುಮಾದಿ, ಮೂಲ ಮೈಸಂದಾಯ, ಪಂಜುರ್ಲಿ ಮತ್ತು ಮಾಯಂದಾಳ್ ಇಲ್ಲಿ ಆರಾಧನೆಗೊಳ್ಳುವ ಪ್ರಧಾನ ದೈವಗಳಾಗಿವೆ.
ಈ ಗುತ್ತು ಮನೆಯ ಉತ್ತರ ದಿಕ್ಕಿನಲ್ಲಿ ಜಾರಂದಾಯ ದೈವದ ಗುಡಿ ಇದೆ. ನಾಗ ಬೆಮ್ಮರ ಸ್ಥಾನ ಪೂರ್ವ ಉತ್ತರ ಭಾಗದಲ್ಲಿದೆ. ಈಗ ಗುತ್ತಿಗೆ ಸುಮಾರು ೧೦ ಎಕರೆಗಳಷ್ಟು ಕೃಷಿ ಭೂಮಿ ಇದೆ. ಶಂಕರ ಶೆಟ್ಟಿಯವರ ಸೋದರಿ ಶ್ರೀಮತಿ ರತ್ನಮ್ಮ ಶೆಟ್ಟಿಯವರು ಮನೆಯಲ್ಲಿದ್ದರು. ಗುತ್ತಿನ ದೈವಗಳಿಗೆ ಬ್ರಾಹ್ಮಣ ಪುರೋಹಿತರು ಬಂದು ಪೂಜೆ ಮಾಡುತ್ತಾರೆ . ಮಾಯಂದಾಳ್ ಗೆ ಅಗೇಲು ಇಡುವ ಕ್ರಮವನ್ನು ಶ್ರೀಮತಿ ರತ್ನಮ್ಮ ಶೆಟ್ಟಿಯವರೇ ಮಾಡುತ್ತಾರೆ.
ಈ ಗುತ್ತಿನ ಹಿಂದಿನ ಯಜಮಾನರಾಗಿದ್ದ ಬಿಲ್ಲವ ಕುಟುಂಬದವರು ನಾಗನ ಮೂಲಸ್ಥಾನಕ್ಕೆ ಇಲ್ಲಿಗೇ ಬರುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಈ ಸ್ಥಳಕ್ಕೆ ಬಂದು ಪೂಜೆಯನ್ನು ಅರ್ಪಿಸುತ್ತಾರೆ. ಈ ಗುತ್ತು ಮನೆ ಐಕಳದಲ್ಲಿ ಬಿಲ್ಲವರ ಒಂದನೇ ಗೌರವದ ಮನೆಯಾಗಿತ್ರು. ಈ ಮನೆತನದ ಶಿವರಾಮ್ ಅವರು ದತ್ತಾ ಕಾರ್ಪೊರೇಶನ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಮೊದಲು ಪ್ರಜಾವಾಣಿ ಪತ್ರಿಕೆಯ ಚೀಫ್ ಬ್ಯುರೋ ಆಗಿದ್ದ ದಿನೇಶ್ ಅಮೀನ್ ಮಟ್ಟು ಅವರು ಈ ಮನೆತನದವರಾಗಿದ್ದರು.
ದೇವರಾಜ್ ಅರಸ್ ಪ್ರತಿಷ್ಠಾನದ ಪ್ರಶಸ್ತಿಗೆ ಪಾತ್ರರಾಗಿದ್ದ ಇವರು ಪ್ರಸ್ತುತ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಮಾಧ್ಯಮ ಪ್ರತಿನಿಧಿಗಳಾಗಿದ್ದಾರೆ. ಬಿಲ್ಲವರು ಈ ಗುತ್ತನ್ನು ಕಳೆದುಕೊಂಡರೂ ತಮ್ಮ ಮೂಲದ ಮನೆ ಇದೆಂದೂ ಈಗಲೂ ಗೌರವದಿಂದ ನಡೆದುಕೊಳ್ಳುತ್ತಾರೆ.
ಹಾಗೆಯೇ ಈ ಗುತ್ತಿನ ಯಜಮಾನರಾಗಿರುವ ಬಂಟರು ಬಿಲ್ಲವರ ಈ ಅಭಿಮಾನಕ್ಕೆ ಧಕ್ಕೆ ಬರದ ರೀತಿಯಲ್ಲಿ ಆ ಕುಟುಂಬವನ್ನು ಗೌರವಿಸಿ ಸ್ವಾಗತಿಸಿ ಬರಮಾಡುಕೊಳ್ಳುತ್ತಿದ್ದಾರೆ. ಇದು ಎರಡು ಜನಾಂಗಗಳ ಅನ್ಯೋನ್ಯತೆಗೆ ಸಾಕ್ಷಿಯಾಗಿದೆ.
(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ)
0 comments: