Saturday, January 20, 2018

ಬಿಲ್ಲವರ ಗುತ್ತು ಮನೆತನಗಳು ಅಲೆಬೊಟ್ಟಿ ಬರ್ಕೆ - ಮಾಯಿಲೋಡಿ ( ಕುಕ್ಕಿನಂದಾಯ ದೈವದ ಮೂಲ ಸ್ಥಳ)

ಬೆದ್ರದ(ಮೂಡು ಬಿದಿರೆ) ಪಡುಕೊಣಾಜೆ ಗ್ರಾಮದ ಮಾಯಿಲೋಡಿ ಅಲೆಬೊಟ್ಟಿ ಬರ್ಕೆಯು ಕೋಟ್ಯಾನ್ ಬಳಿಗೆ ಸೇರಿದ ಪ್ರಸಿದ್ದವಾದ ಮನೆತನವಾಗಿದೆ. ಹಿಂದೆ ಸುಮಾರು ೬೦-೭೦ ಎಕ್ರೆ ಭೂಮಿಯನ್ನು ಹೊಂದಿದ್ದ ಈ ಬರ್ಕೆಗೆ ೭ ಒಕ್ಕಲು ಮನೆಗಳಿದ್ದವು. ಅಲೆಬೊಟ್ಟಿ ಬರ್ಕೆಯು ಸುತ್ತು ಪೌಳಿಯ ಸುಂದರವಾದ ಪ್ರಾಚೀನವಾದ ಮನೆ. ಸುತ್ತಲೂ ಗುಡ್ಡ ಬೆಟ್ಟಗಳಿಂದ ಕೂಡಿದ ಬಯಲಿನಲ್ಲಿ ಈ ಉಪ್ಪರಿಗೆಯ ಬರ್ಕೆ ಮನೆ ತಲೆ ಎತ್ತಿ ನಿಂತಿದೆ. ಇದು ಹಳೆಯ ಕಾಲದ ನಾಲ್ಕು ಸುತ್ತಿನ ಮನೆಯಾಗಿದ್ದು ಒಳಾಂಗಣಕ್ಕೆ ಈಗಲೂ ಸೆಗಣಿ ಸಾರಿಸುತ್ತಾರೆ. ನಾವು ಸಂದರ್ಶನಕ್ಕೆ ಹೋದ ಸಂದರ್ಭದಲ್ಲಿ ಮನೆಯ ಮಗಳಿಗೆ ನಿಶ್ಚಿತಾರ್ಥದ ಸಿದ್ಧತೆ ನಡೆಯುತ್ತಿತ್ತು‌. ಒಳ ಸುತ್ತಿನ ವಿಶಾಲವಾದ ಅಂಗಳಕ್ಕೆ ಮಡಲಿನ ಚಪ್ಪರವನ್ನು ಹಾಕಿದ್ದರು. ಈ ಸಿದ್ಧತೆಗಳು ನಮ್ಮ ಮಕ್ಕಳಾಟಿಕೆಯ ಕಾಲದ ನಿಶ್ಚಿತಾರ್ಥದ ಸಂಭ್ರಮವನ್ನು ಮರುಕಳಿಸಿದಂತಿತ್ತು.

ಬರ್ಕೆಯ ಈಗಿನ ಯಜಮಾನರು ಅಣ್ಣಿ ಪೂಜಾರಿಯವರು. ಭೂಮಸುದೆಯ ಕಾಯ್ದೆಯ ಅನುಸಾರ ಒಕ್ಕಲುಗಳಲ್ಲಿ ಗೇಣಿಗೆ ಇದ್ದ ಮನೆತನದ ಅರ್ಧಾಂಶ ಭೂಮಿ ಒಕ್ಕಲುಗಳ ಪಾಲಾಯಿತು. ಈಗ ಸುಮಾರು ೩೭ ಎಕ್ರೆ ಭೂಮಿ ಈ ಮನೆತನದ ಒಡೆತನದಲ್ಲಿ ಇದೆ. ಕೃಷಿಯನ್ನೇ ಅವಲಂಭಿಸಿರುವ ಈ ಬರ್ಕೆಯವರು ಇದರಲ್ಲೇ ಸಫಲರಾಗಿದ್ದಾರೆ. ಈ ಭೂಮಿ ಅಣ್ಣಿ ಪೂಜಾರಿಯವರ ತಾಯಿ ಈರಮ್ಮನವರಿಗೆ ಸೇರಿದ ಆಸ್ತಿಯಾಗಿದೆ‌.

ಅಲೆಬೊಟ್ಟಿ ‌ಬರ್ಕೆಯು ಕುಕ್ಕಿನಂದಾಯ ದೈವದ ಮೂಲ ಸ್ಥಾನವಾಗಿದೆ. ಇದರಿಂದಲೇ ಈ ಮನೆತನ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ‌. ತುಳುನಾಡಿನ ಅನೇಕ ರಾಜನ್ ದೈವಗಳಲ್ಲಿ ಕುಕ್ಕಿನಂದಾಯ ದೈವ ಕೂಡ ಒಂದು. ಇದು ಮೂಲತಃ ಕುಂಬ್ಳೆ ಚಾವಡಿಯಲ್ಲಿ ಅರಾಧನೆ ಪಡೆಯುವ ಜುಮಾದಿ ದೈವವಾಗಿದ್ದು ಅಲ್ಲಿಂದ ಬಿರ್ಮಣ ಬೈದ್ಯರ ಮೂಲಕ ಕರ್ಮಲೆ ಚಾವಡಿಯಲ್ಲಿ ಬಂದು ಅಲ್ಲಿ ಜೂಮ್ರಜುಮಾದಿ ಎಂಬ ಹೆಸರಿನಿಂದ ಕರೆಸಿಕೊಂಡು ಅಲ್ಲಿ ಆರಾಧನೆ ಪಡೆಯುತ್ತದೆ.

ಪಾಡ್ದನದ ಪ್ರಕಾರ ಒಮ್ಮೆ ಅಲೆಬೊಟ್ಟಿ ಬರ್ಕೆಯಲ್ಲಿ ದೇರೆ ಬೈದ್ಯರು ಇದ್ದಂತಹ ಕಾಲದಲ್ಲಿ ಅವರಿಗೆ ಬೇಕಾದಷ್ಟು ಗದ್ದೆ, ಬಿತ್ತಲು ಬೇಕಾದಷ್ಟು ಬೀಜ ಸಮಸ್ತವೂ ಇದ್ದವು. ಆದರೆ ಉಳಲು ಕೋಣಗಳು ಇರಲಿಲ್ಲ. ಕೋಣಗಳನ್ನು ಖರೀದಿಸಲು ಬೇಕಾದಷ್ಟು ವರಹಗಳನ್ನು ಕಟ್ಟಿಕೊಂಡು ಅಲೆಬೊಟ್ಬಿ ಬರ್ಕೆಯಿಂದ ಹೊರಟು ನಾನೇಕ ಸಾಯನ ಬೈದ್ಯರಲ್ಲಿಗೆ ಹೋಗುತ್ತಾರೆ. ಅಲ್ಲಿ ಹೋಗಿ ನಿಮ್ಮ ಗುತ್ತಿನಲ್ಲಿ ಕೋಣಗಳಿವೆ? ಎಂದು ಕೇಳುತ್ತಾರೆ. ಆದರೆ ಅವರ ಗುತ್ತಿನಲ್ಲಿ ಕೋಣಗಳು ಇರುವುದಿಲ್ಲ. ನಂತರ ಉಲದೊಟ್ಟಿ ನರಸಿಂಗ ಕೊಟ್ಟಾರಿಯ ಬಳಿ ಕೋಣಗಳನ್ನು ಖರೀದಿಸಿ ಅದನ್ನು ಸಾಯನ ಬೈದ್ಯರ ಗುತ್ತಿಗೆ ತಂದು ಹಟ್ಟಿಯಲ್ಲಿ ಕಟ್ಟುತ್ತಾರೆ. ಆ ಸಮಯದಲ್ಲಿ ಕರ್ಮಲೆ ಚಾವಡಿಯಲ್ಲಿ ಜೂಮ್ರ ಜುಮಾದಿ ದೈವದ ನೇಮೋತ್ಸವ ನಡೆಯುತ್ತಿರುತ್ತದೆ.

ಅಲ್ಲಿಗೆ ದೇರೆ ಬೈದ್ಯರು ಹೋದಾಗ ದೈವ ಇವರನ್ನು ಕಂಡು ನಿಮ್ಮೊಂದಿಗೆ ನಾನು ಬರುತ್ತೇನೆ ಎಂದು ಹೇಳುತ್ತದೆ‌. ಆಗ ದೇರೆ ಬೈದ್ಯರು ಬರುವ ದೈವ ವನ್ನು ಬರಬೇಡ ಎನ್ನಲಾರೆ ಬಾರದ ದೈವವನ್ನು ಬಾ ಎಂದು ಕರೆಯಲಾರೆ ಹಾಗೂ ಬರುವುದಾದರೆ ನನ್ನ ಬರ್ಕೆಯಲ್ಲಿ ಭಕ್ತಿಯಿಂದ ಆರಾಧಸುತ್ತೇನೆ ಎಂದು ಹೇಳುತ್ತಾರೆ. ದೈವವು ಅವರಿಗೆ ಬೂಳ್ಯವನ್ನು ಕೊಟ್ಟು ನಂತರ ಅವರನ್ನು ಹಿಂಬಾಲಿಸುತ್ತದೆ. ನಂತರ ಅಲೆಬೊಟ್ಟಿ ಬರ್ಕೆಗೆ ದೈವ ಬಂದಿರುವ ಸೂಚನೆಯನ್ನು ದೈವ ದೇರೆಯವರಿಗೆ ಕೊಡುತ್ತದೆ. ನಂತರ ದೇರೆಯವರು ಪಕ್ಕದಲ್ಲೇ ಇದ್ದ ಮಡಿವಾಳರನ್ನು ಕೂಡಿಕೊಂಡು ಬರ್ಕೆಯ ಮನೆಯ ಹಿಂದೆ ಇರುವಂತಹ ಅತೀ ಎತ್ತರದ ಪರಪಾದೆಯಲ್ಲಿ ದೈವವನ್ನು ಕಲ್ಲು ಹಾಕಿ ನಂಬುತ್ತಾರೆ. ನಂತರ ಅಕ್ಕಿಯಿಂದ ಮಾಡಿದ ಕಡುಬು(ಪುಂಡಿ)ಯ ಜೊತೆ ಕೋಳಿ ಸಾರು ಮಾಡಿ ಪರ್ವ ಬಡಿಸುತ್ತಾರೆ.

ಕಾಲಾಂತರದಲ್ಲಿ ದೈವವು ದೊಂಪದ ಬಲಿ ನೇಮವನ್ನು ಕೇಳುತ್ತದೆ. ಆ ಪ್ರಾಕಾರ ಕೆಲವೊಂದು ಘಟನೆಯ ಮೂಲಕ ಮನೆಯ ಮುಂದಿನ ಹತ್ತಿಕ್ಕಿನೆಡೆ ಎಂಬಲ್ಲಿನ ಮಾವಿನ ಮರದ ಬುಡದಲ್ಲಿ ದೈವವು ಪ್ರಕಟಗೊಳ್ಳುತ್ತದೆ. ಆದ್ದರಿಂದ ಕುಕ್ಕಿನಂದಾಯ ಎಂಬ ಹೆಸರು ದೈವ ಪಡೆದು ಪ್ರಸಿದ್ದವಾಗುತ್ತದೆ‌. ನಂತರ ಮೇಕಾರು, ವಾಲ್ಪಾಡಿ ಮುಂತಾದವುಗಳಲ್ಲಿ ದೈವಸ್ಥಾನಗಳು ನಿರ್ಮಾಣಗೊಳ್ಳುತ್ತವೆ. ಅಲೆಬೊಟ್ಟಿ ಬರ್ಕೆಯ ಹಾಗು ದೇರೆ ಬೈದ್ಯರ ಉಲ್ಲೇಖ ಪಾಡ್ದನದುದ್ದಕ್ಕೂ ಇದ್ದೂ ಈ ದೈವದ ಆರಾಧನ ಪರಿಧಿಯಲ್ಲಿ ಈ ಬರ್ಕೆ ಬಹಳ ಮುಖ್ಯ ಮನೆತನವಾಗಿದೆ. ದೈವದ ಎಲ್ಲಾ ಕಾರ್ಯಕ್ರಮಗಳಲ್ಲಿ ಈ ಮನೆತನದ ಉಪಸ್ಥಿತಿ ಕಡ್ಡಾಯವಾಗಿ ಇರಬೇಕು. ಅಲೆಬೊಟ್ಟಿ ಬರ್ಕೆಯಲ್ಲಿ ಗಡಿ ಪಟ್ಟವಾದವರನ್ನು ದೇರೆ ಎಂದು ಕರೆಯುತ್ತಾರೆ. ಈಗ ಅಣ್ಣಿ ಪೂಜಾರಿಯವರಿಗೆ ಗಡಿ ಪಟ್ಟವಾಗಿದೆ‌.

ಅಲೆಬೊಟ್ಟಿ ಬರ್ಕೆಯನ್ನು ಈಗ ಮಾಯಿಲೋಡಿ ಎಂದು ಕೂಡ ಕರೆಯುತ್ತಾರೆ. ಈ ಬರ್ಕೆಯ ಹಿಂದೆ ಇರುವ ಪರಪಾದೆಯಲ್ಲಿ ಈಗಲೂ ಪೂರ್ವ ಕ್ರಮದಂತೆ ಪರ್ವ ನಡೆಯುತ್ತಿದ್ದು ಇದು ಬಹಳ ಕಟ್ಟು ನಿಟ್ಟಿನಿಂದ ಕೂಡಿದೆ. ಈ ಪರಪಾದೆಯಲ್ಲಿ ಇರುವ ದೈವದ ಕಲ್ಲಿನ ಪ್ರದೇಶಕ್ಕೆ ದೇರೆಯವರಿಗೆ, ಕಲ್ಲೊಟ್ಟು ಬರ್ಕೆಯವರಿಗೆ ಮತ್ತು ಆ ಮಡಿವಾಳ ಮನೆತನದವರಿಗೆ ಮಾತ್ರ ಪ್ರವೇಶ. ಉಳಿದ ಎಲ್ಲಾ ಗುತ್ತು ಬರ್ಕೆಯವರು ಕೆಳಗಿನ ಅಂತರದಲ್ಲಿ ನಿಲ್ಲಬೇಕು. ಈ ಪರಪಾದೆ ಬೆಟ್ಟಕ್ಕೆ ನಿಗದಿತ ಮನೆತನದವರಿಗೆ ಮತ್ತು ವ್ಯಕ್ತಿಗಳಿಗೆ ಮಾತ್ರ ಪ್ರವೇಶ. ಈ ಪರಪಾದೆ ಒಂದು ರಹಸ್ಯ ತಾಣದಂತೆ ಗೋಚರಿಸುತ್ತದೆ. ಇಲ್ಲಿಗೆ ವಾರ್ಷಿಕವಾಗಿ ಪರ್ವದಂದು ಬಹಳ ವರ್ಷಗಳ ಅಂತರದಲ್ಲಿ ಇಲ್ಲಿ ನೇಮವೂ ನಡೆಯುತ್ತದೆ. ಅದರ‌ ಕ್ರಮನಿಯಮಗಳು ಬಹಳ ವಿಶೇಷ. ಕುಕ್ಕಿನಂತಾಯ ದೈವದ ಪ್ರಧಾನ ದೈವಸ್ಥಾನ ಮೇಕಾರಿನಲ್ಲಿದೆ. ಇದು ಬಹುಶಃ ಅಲೆಬೊಟ್ಟಿ ಬರ್ಕೆಯವರ ವಶದಲ್ಲಿಯೇ ಇದೆ.

ಇಲ್ಲಿನ ಇನ್ನೊಂದು ವಿಶೇಷವೆಂದರೆ ಅಲೆಬೊಟ್ಟಿ ಬರ್ಕೆಯವರಿಗೆ ಕುಕ್ಕಿನಂದಾಯನೇ ಕುಟುಂಬ ‌ದೈವ. ಈ ಮನೆಯಲ್ಲಿ ಈ ದೈವಕ್ಕೆ ಪರ್ವ ನಡೆಯುವ ಸಂದರ್ಭದಲ್ಲಿ ಹಿರಿಯರಿಗೆ ೧೬ ಎಲೆಯ ಅಗೇಲನ್ನು ಹಾಕುವ ಪದ್ಧತಿ ಇದೆ.

ಕುಕ್ಕಿನಂದಾಯ ದೈವದ ಭಂಡಾರ ಹಿಂದೆ ಈ ಮನೆಯಲ್ಲೇ ಇತ್ತು. ಇದಕ್ಕೆ ಸಾಕ್ಷಿಯಾಗಿ ದೈವದ ಭಂಡಾರ ಇಡುತ್ತಿದ್ದ ಕಲೆಂಬಿ ಇನ್ನೂ ಈ ಮನೆಯಲ್ಲಿ ಇದ್ದು ತನ್ನ ದುರಂತ ಇತಿಹಾಸವನ್ನು ತನ್ನೊಳಗೆ ಇಟ್ಟುಕೊಂಡು ಅನಾಥವಾಗಿ ಬಿದ್ದಿದೆ. ಕಾರಣಾಂತಗಳಿಂದ ಕುಕ್ಕಿನಂದಾಯ ದೈವದ ಭಂಡಾರ ಬಹಳ ವರ್ಷಗಳ ಹಿಂದೇಯೇ ಬೇರೆ ಕಡೆ ವರ್ಗಾವಣೆಯಾಗಿದೆ‌. ಇದಕ್ಕೊಸ್ಕರವಾಗಿ ಈ ಬರ್ಕೆಯ ಮುಟ್ಟಿಕಲ್ಲು ಮೇಕಾರು ದೈವಸ್ಥಾನದಲ್ಲಿದೆ ಎಂದು ಮನೆಯವರು ಮಾಹಿತಿ ನೀಡಿದರು. ಭಂಡಾರ ವರ್ಗಾವಣೆಯಾದಂತಹ ಸಂದರ್ಭದಲ್ಲಿ ಇಲ್ಲಿ ಒಂದು ಚವಲ ಮಾತ್ರ ಉಳಿದಿತಂತೆ. ಆ ಚವಲವನ್ನು ಈಗಲೂ ನೇಮವಾಗುವಾಗ ಅಲೆಬೊಟ್ಟಿ ಬರ್ಕೆಯಿಂದ ದೈವಸ್ಥಾನಕ್ಕೆ ಕೊಂಡೊಯ್ಯಬೇಕೆಂಬ ನಿಯಮ ಇದೆ‌. ಹಾಗೆ ಒಂದು ವೇಳೆ ಕೊಂಡೊಯ್ಯದಿದ್ದರೆ ದೈವ ಆವೇಶವಾಗುವುದಿಲ್ಲ ಎಂಬ ಬಲವಾದ ನಂಬಿಕೆ ಇದೆ. ನೇಮವಾಗುವ ಸಂದರ್ಭದಲ್ಲಿ ಈಗಿನ ದೇರೆಯವರು ಬರ್ಕೆಯಿಂದ ಚವಲವನ್ನು ಕೊಂಡೊಯ್ಯುತ್ತಾರೆ ಹಾಗೇ ನೇಮ ಮುಗಿದ ಮೇಲೆ ಅದನ್ನು ಮತ್ತೆ‌ ಬರ್ಕೆಗೆ ಒಯ್ಯುತ್ತಾರೆ.

ಕುಕ್ಕಿನಂದಾಯ ದೈವದ ಕಟ್ಟು ಕಟ್ಟಲೆಗಳೂ ಅಪಾರವಾಗಿದ್ದು ಬಹಳ ಅಪರೂಪವೆಂಬತೆ ಇವೆ. ಇಲ್ಲಿ ಬಹಳ ಕ್ರಮ ನಿಯಮಗಳು ಈಗಲೂ ನಡೆಯುತ್ತವೆ. ದೇರೆಯವರ ಅನುಪಸ್ಥಿತಿಯಲ್ಲಿ ಇಲ್ಲಿ ಯಾವುದೇ ಕಾರ್ಯಗಳು ನಡೆಯುವುದಿಲ್ಲ. ಅಸ್ರಣ್ಣರು ದೈವಕ್ಕೆ ಕಲಶ ಹಾಕುವ ಕ್ರಮದಿಂದ ಹಿಡಿದು ಇನ್ನಿತರರು ಮಾಡುವ ದೈವದ ಎಲ್ಲಾ ಕಾರ್ಯಕ್ಕೆ ದೇರೆಯವರ ಅನುಮತಿ ಪಡೆಯಬೇಕು. ಇದಲ್ಲದೆ ಅನೇಕ ಅಧಿಕಾರ ಮತ್ತು ಗೌರವಗಳು ದೇರೆ ಬೈದ್ಯರಿಗೆ ಇಲ್ಲಿ ಇವೆ.ಮನೆತನಕ್ಕೆ ಹಾಗೂ ದೇರೆಯವರಿಗೆ ಸಂಭಂದಪಟ್ಟಂತೆ ಇಲ್ಲಿ ಅನೇಕ ಕ್ರಮ ನಿಯಮಗಳೂ ಇವೆ.

ಅಲೆಬೊಟ್ಡಿ ಬರ್ಕೆಯ ಒಳಗಡೆಯ ಚಾವಡಿಯಲ್ಲಿ ಕುಕ್ಕಿನಂದಾಯ ಅಂದರೆ ಜೂಮ್ರ ಜುಮಾದಿ ದೈವದ ಬೃಹತ್ ಗಾತ್ರದ ಮಣೆಮಂಚ ಇದೆ. ಇದರ ಗಾತ್ರವೇ ಒಂದು ರೀತಿಯ ಭಯ ಭಕ್ತಿಯನ್ನು ಉಂಟುಮಾಡುವಂತಿದೆ. ಮಣೆಮಂಚದ ಮೇಲೆ ಜೂಮ್ರಜುಮಾದಿಯು ಹುಲಿಯ ಮೇಲೆ ಕುಳಿತಿರುವಂತಹ ಪ್ರಾಚೀನ ಮೂರ್ತಿ ಇದೆ. ಇದರ ಕೈಯಲ್ಲಿ ಬಂಗಾರದ ಕಡ್ತಲೆ ಇದೆ. ಹಾಗೇ ಇದೇ ದೈವದ ಇನ್ನೂ ಕೆಲವು ಮೂರ್ತಿಗಳಿವೆ‌‌. ಇದಲ್ಲದೆ ಅಂದು ದೇರೆ ಬೈದ್ಯರು ಜೋಡಿ ಕೋಣಗಳನ್ನು ತರುವಾಗ ದೈವ ಬಂದಂತಹ ಸಂಕೇತವಾಗಿ ಎರಡು ಜೋಡಿ ಕೋಣಗಳ ಮೂರ್ತಿಯನ್ನು ಇರಿಸಿದ್ದಾರೆ. ಬರ್ಕೆಯ ಇನ್ನೊಂದು ಪ್ರಧಾನ ದೈವವಾದ ಪಟ್ಟದ ಪಂಜುರ್ಲಿ ಮಣೆಮಂಚ ಬಲಭಾಗದಲ್ಲಿ ಇದೆ. ಇದಲ್ಲದೆ ಹೊರಗಿನಿಂದ ರಾವು ಗುಳಿಗ, ಕಲ್ಲುರ್ಟಿ- ಪಂಜುರ್ಲಿ , ಮಂತ್ರಜಾವದೆ ದೈವಗಳಿವೆ.

ಈ ಗ್ರಾಮದಲ್ಲಿ ಕುಕ್ಕಿನಂದಾಯ ದೈವಕ್ಕೆ ಹಾಗೂ ಮೇಕಾರು ದೈವಸ್ಥಾನಕ್ಕೆ ಸಂಬಂಧಪಟ್ಟಂತೆ ಅಲೆಬೊಟ್ಟಿ ಬರ್ಕೆ ಸೇರಿ ಒಟ್ಟು ೮ ಬಿಲ್ಲವರ ಬರ್ಕೆ ಮನೆಗಳಿವೆ. ಅವುಗಳಲ್ಲಿ ಕ್ರಮವಾಗಿ ಪೋರೊಟ್ಟು ಬರ್ಕೆ, ಗುಂಡಾವು ಬರ್ಕೆ, ಅಲೆಬೊಟ್ಟಿ ಬರ್ಕೆ, ಹರ್ಲ್ಯ ಬರ್ಕೆ, ಬಂಟಾಲ್ ಬರ್ಕೆ, ತಿಬಿರಿ ಬರ್ಕೆ, ಕೋರಿಮಾರ್ ಬರ್ಕೆ, ಕಲ್ಲೊಟ್ಟು ಬರ್ಕೆ.

ಈ ಎಲ್ಲಾ ಬರ್ಕೆ ಮನೆಗಳಿಗೆ ದೈವಸ್ಥಾನದಲ್ಲಿ ವಿಶೇಷ ಸ್ಥಾನಮಾನಗಳಿವೆ. ಅಲೆಬೊಟ್ಟಿ ಬರ್ಕೆಯ ಸುತ್ತು ಪೌಳಿಗೆ ಹೊಂದಿಕೊಂಡು ಹೊರಗಿನಿಂದ ಬಹುದೊಡ್ಡದಾದ ಹಟ್ಟಿ ಇದೆ. ಸಾಲು ಸಾಲಾಗಿ ದನಕರುಗಳನ್ನು ಕಟ್ಟುವ ವ್ಯವಸ್ಥಿತ ವ್ಯವಸ್ಥೆಯಿಂದ ಬಹು ಶುಚಿತ್ವದಿಂದ ಕೂಡಿದೆ. ಇಂದೂ ಕೂಡ ಈ ಮನೆಯಲ್ಲಿ ಗೋಸಂಪತ್ತು ಶ್ರೀಮಂತವಾಗಿದೆ. ಹಟ್ಟಿಯ ಪಕ್ಕದಲ್ಲೇ ಕುಕ್ಕಿನಂದಾಯ ದೈವದ ಇನ್ನೊಂದು ದೈವಸ್ಥಾನವಿದ್ದು ಇದು ದೈವ ಮೊದಲು ಬಂದು ನೆಲೆವೂರಿದ ಸ್ಥಳವಾಗಿದೆ. ಈ ಬರ್ಕೆಯ ಕುಟುಂಬಕ್ಕೆ ಮೂಲ ಆಲಡೆ ಇಲ್ಲ. ಬದಲಾಗಿ ನಾಗಬನದಲ್ಲಿ ನಾಗಬೆಮ್ಮರ ಕಲ್ಲು ಇದ್ದು ಅದರಲ್ಲಿಯೇ ಆಲಡೆಯ ಅನುಸಂಧಾನ.ಪತ್ತ್ ಮಂದೆದ ಕೋಲ ಎಂಬ ಒಂದು ಕೋಲವಿದ್ದು ಅದು ಕೂಡ ದೇರೆ ಬೈದ್ಯರ ನೇತೃತ್ವದಲ್ಲಿಯೇ ನಡೆಯುತ್ತದೆ.

ಕುಕ್ಕಿನಂದಾಯ ದೈವದ ಪಾಡ್ದನದಲ್ಲಿ ದೇರೆಯವರನ್ನು "ಇಂಗ್ ಡ್ ದೇರೆ"ಎಂದು ವಿಶೇಷವಾಗಿ ಉಲ್ಲೇಖಿಸಲಾಗಿದೆ. ದೇರೆ ಬೈದ್ಯರು ಕುಕ್ಕಿನಂದಾಯ ದೈವದ ಹೊರತಾಗಿ ಇತರ ಯಾವುದೇ ದೈವಗಳ ಪರ್ವಗಳಲ್ಲಿ ಭಾಗಿಯಾಗುವುದಾಗಲಿ, ಪ್ರಸಾದ ಸ್ವೀಕರಿಸುವುದಾಗಲಿ ಮಾಡುವಂತಿಲ್ಲ.

ಈ ಮನೆಯಲ್ಲಿ ಈಗಲೂ ಕುಕ್ಕಿನಂದಾಯ ದೈವಕ್ಕೆ ಎಮ್ಮೆ ಹಾಲನ್ನೇ ಇಡಲಾಗುತ್ತಿದೆ. ಹೀಗೆ ಅಲೆಬೊಟ್ಟಿ ಬರ್ಕೆ ಮನೆಯು ಹಲವು ವಿಶೇಷತೆ ಮತ್ತು ಗೌರವಗಳನ್ನು ಪಡೆದುಕೊಂಡ ಪ್ರಸಿದ್ದ ಮನೆತನವಾಗಿ ಸುತ್ತ ಮುತ್ತಲಿನಲ್ಲಿ ಹೆಸರುವಾಸಿಯಾಗಿದೆ‌.

ಮಾಹಿತಿ - ಮಹೇಂದ್ರ ಮಾಯಿಲೋಡಿ - ಅಲೆಬೊಟ್ಟಿ ಬರ್ಕೆ ಸಹಕಾರ- Prashanth Salian Manjila Guttu (ಆಕರ- ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು  ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) ಸಂಕೇತ್ ಪೂಜಾರಿ.

0 comments: