ಮಹಿಮೆ, ಕಾರಣಿಕ, ಪವಾಡಗಳೊಂದಿಗೆ ತುಳುನಾಡಿನ ದೈವಾರಾಧನೆ ಸಂಪನ್ನಗೊಂಡಿದೆ. ಎಷ್ಟೊ ಸಲ ನಮ್ಮ ಜೀವನದಲ್ಲಿ ಕೆಲವೊಂದು ವಿಶಿಷ್ಟ ಘಟನೆಗಳು ನಡೆಯುದನ್ನು ನಾವು ಕಾಣುತ್ತೇವೆ. ಅದು ನಮ್ಮ ಅಲೋಚನೆಗಳಿಗೆ ಮೀರಿದ್ದಾಗಿರುತ್ತದೆ. ಇದನ್ನು ನಮ್ಮ ಯಾವ ತರ್ಕದಿಂದ ವಿಶ್ಲೇಷಿಸಲು ಬರುವುದಿಲ್ಲ. ಬಹುಶಃ ಇದೇ ಕಾರಣಿಕ, ಪವಾಡ ಎನಿಸಿರಬೇಕು. ಈಗಿನ ಮುಂದುವರಿದ ವೈಜ್ಞಾನಿಕ ಆವಿಷ್ಕಾರಗಳ ಭೌತಿಕ ಪ್ರಪಂಚವು ಇಂತಹ ಕಾರಣಿಕ, ಪವಾಡಗಳನ್ನು ಪೂರ್ಣವಾಗಿ ನಂಬುವುದಿಲ್ಲ. ಆದರೆ ಇಂತಹ ಕಾರಣಿಕ ಪವಾಡಗಳು ನಮ್ಮ ಸುತ್ತಮುತ್ತ ಪ್ರತಿಸಲವೂ ನಡೆದಾಗ ದೈವ ದೇವರುಗಳ ಮೇಲಿನ ಜನರ ನಂಬಿಕೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಈ ಹಿಂದೆ ಬೋಳೂರು ಗರೋಡಿಯ ಪರಿಸರದಲ್ಲಿ ನಡೆದಿರಬಹುದಾದ ಕಾರಣಿಕ, ಪವಾಡಗಳ ಕುತೂಹಲ ಉಂಟಾಗಿ ಬಗ್ಗೆ ನಮ್ಮ ಹಿರಿಯರ ಬಳಿ ವಿಚಾರಿಸಿದ್ದಾಗ ಇಲ್ಲಿನ ಕಾರಣಿಕವನ್ನು ಸಾರುವ ಹಲವಾರು ಘಟನೆಗಳನ್ನು ಇಲ್ಲಿ ದಾಖಲಿಸಿದ್ದೇವೆ.
ಅಹಂಗೆ ಮದ್ದನ್ನು ಅರೆದ ಬೈದೇರುಗಳು: ಒಮ್ಮೆ ಈ ಹಿಂದೆ ಊರಿನಲ್ಲಿ ಪ್ರಮುಖ ಸ್ಥಾನಮಾನದಲ್ಲಿದವರು ಯಾವುದೋ ಭಿನ್ನಾಭಿಪ್ರಾಯದಿಂದ ತಾನು ಅಹಂ ಗೆ ಕಟ್ಟುಬಿದ್ದು ಗರೋಡಿಯಲ್ಲಿ ನಡೆಯುತ್ತಿದ್ದ ಬೈದೇರುಗಳ ಅಗೆಲು ಅನ್ನ ನೈವೇದ್ಯ ಸೇವೆಯನ್ನು ತಡೆಯಲು ಜನ ಕಳುಹಿಸಿದ್ದರು. ಆದರೆ ಅವರು ಬರುವ ಹೊತ್ತು ಸೇವೆಯು ಮುಗಿಯುವ ಹಂತಕ್ಕೆ ಬಂದಿದ್ದು, ಮರುದಿವಸದ ಬೈದೇರುಗಳ ನೇಮೋತ್ಸವನ್ನು ನಡೆಸದಂತೆ ತಾಕೀತು ಮಾಡಿದ್ದರು. ಮರುದಿನ ಗರೋಡಿಯ ಮುಖ್ಯಸ್ಥರಿಂದ ಸಮಸ್ಯೆ ಬಗೆದರಿದು ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ಆ ವ್ಯಕ್ತಿ ಮರುವರುಷದ ಗರೋಡಿಯ ನೇಮೋತ್ಸವಕ್ಕೆ ದಿನ ಇಡುವ ಮುನ್ನವೆ ಇಹಲೋಕ ತ್ಯಜಿಸುವಂತಾಯಿತು
ವೃತ ನಿಷ್ಟೆಗೆ ಭಂಗ ಬಂದಾಗ: ಮತ್ತೊಮ್ಮೆ, ಗರೋಡಿಯ ಜೀರ್ಣೋದ್ಧಾರ ನಡೆಯುವ ಸಂದರ್ಭದಲ್ಲಿ ಊರವರೆಲ್ಲರೂ ಸಸ್ಯ ಆಹಾರದ ವ್ರತದಲ್ಲಿ ನಿಷ್ಠೆಯಿಂದಿರುವಾಗ ಗರೋಡಿಗೆ ಸಮೀಪದ ಒಂದು ಮನೆಯವರು ಮಾತ್ರ ಮಾಂಸಹಾರದಲ್ಲಿ ತೊಡಗಿದ್ದರು. ಅಚ್ಚರಿಯೆಂಬಂತೆ ಅವರ ಮನೆಯ ಒಲೆಯ ಕುಂಡದಲ್ಲಿ ನಾಗರಹಾವು ಹಲವು ದಿನ ಠಿಕಾಣಿ ಹೂಡಿತ್ತು ! ನಂತರ ಗರೋಡಿಯಲ್ಲಿ ಪ್ರಾರ್ಥಿಸಿ ತೀರ್ಥ ಸಿಂಪಡಿಸಿದಾಗ ಹಾವು ಮನೆ ಬಿಟ್ಟು ಹೋಯಿತು.
ಪರಿಶುದ್ಧತೆಯನ್ನು ಕಾಪಾಡುವಲ್ಲಿ: ಗರೋಡಿಯಲ್ಲಿ ನಡೆಯುವ ಅಗೆಲು ಅನ್ನನೈವೇದ್ಯ ಸೇವೆಯು ಯಾವಾಗಲು ಪರಿಶುದ್ಧತೆಯಿಂದ ಕೂಡಿದ್ದಾಗಿರುತ್ತದೆ. ಬಹಳ ಹಿಂದೆ ಬೋಳೂರಿನ ಗುತ್ತಿನ ಮನೆಯಲ್ಲಿ ವಾಸವಾಗಿದ್ದ ಕೊಂಕಣಿ ಕುಟುಂಬಸ್ಥರು ಗರೋಡಿಯಲ್ಲಿ ಹರಕೆಯ ಅಗೆಲು ಅನ್ನನೈವೇದ್ಯ ಸೇವೆಯನ್ನು ಕೊಡಿಸಿದ್ದರು. ಅವರು ಮನೆಯಲ್ಲಿ ಶುದ್ಧತೆಯನ್ನು ಕಾಪಾಡುವಲ್ಲಿ ಎಡವಿದನ್ನು ಬೈದೇರುಗಳು ತಮ್ಮ ದರ್ಶನದ ನಡೆಯಲ್ಲಿ, ಗುತ್ತಿನ ಮನೆಯ ಒಲೆಕುಂಡ ಮೇಲೆ ಒಣಮೀನಿನ ಕಟ್ಟನ್ನು ಹಾಗೆಯೇ ಇರಿಸಿದನ್ನು ನೆನಪಿಸಿದ್ದರು.
ಮಣ್ಣಿನ ಮಹತ್ವವನ್ನು ತಿಳಿಸಿದರು: ಹಾಗೆ ಮಗದೊಮ್ಮೆ, ಬೋಳೂರಿಗೆ ಸಂಬಂಧಪಟ್ಟ ಕಾಡಿನ ಮರಗಳನ್ನು ಮುಸ್ಲಿಂ ವ್ಯಕ್ತಿಗೆ ಮಾರಾಟ ಮಾಡಿದ್ದರು. ಅವರು ಕಡಿದ ಕಟ್ಟಿಗೆಯನ್ನು ಕೆಲವು ಸಮಯ ವಿಲೇವಾರಿ ಮಾಡದೆ, ಹಾಗೆಯೇ ಬಿಟ್ಟಿದ್ದರು. ಒಂದು ದಿನ ಏಕಾಏಕಿಯಾಗಿ ನುಗ್ಗಿ ಗರೋಡಿ ಮನೆಯವರಿಗೆ ತಿಳಿಸದೆ ಲಾರಿಗೆ ತುಂಬಿಸಿ ಹೊರಡಲು ಅನುವಾದಾಗ ಲಾರಿ ಕದಲದೆ ಇದ್ದದು, ತದನಂತರ ಗರೋಡಿ ಮನೆಯವರು ಆ ಪ್ರಯುಕ್ತ ಬ್ರಹ್ಮ ಬೈದೇರುಗಳಿಗೆ ಹಣ್ಣುಕಾಯಿ ಹಾಗೂ ತಪ್ಪು ಕಾಣಿಕೆಯನ್ನು ಭಂಡಾರಕ್ಕೆ ಒಪ್ಪಿಸುವಂತೆ ಅವರಲ್ಲಿ ತಿಳಿಸಿ, ದೇವರಲ್ಲಿ ಪ್ರಾರ್ಥಿಸಿದಾಗ ಲಾರಿ ಸರಾಗವಾಗಿ ಮುಂದೆ ಚಲಿಸುವಂತಾಯಿತು. ಮುಂದೆಯೂ ಆ ಮುಸ್ಲಿಂ ವ್ಯಕ್ತಿ ಗರೋಡಿಗೆ ನಿಯಮಿತವಾಗಿ ಕಾಣಿಕೆಯನ್ನು ಸಲ್ಲಿಸುತ್ತಾ ದೇವರ ಮೇಲಿನ ತಮ್ಮ ನಿಷ್ಠೆಯನ್ನು ಪ್ರದರ್ಶಿಸುತ್ತಿದ್ದರು.
ನೆನೆದವರ ಮನೆಯಲ್ಲಿ: ಗರೋಡಿಯ ಗ್ರಾಮದ ಒಂದು ಭಕ್ತ ಕುಟುಂಬಸ್ಥರು ದಿನಾಂಕ 12 ಎಪ್ರಿಲ್ 2014 ರಂದು ಗರೋಡಿಯಲ್ಲಿ ಹರಕೆಯ ಅಗೆಲು ಅನ್ನನೈವೇದ್ಯ ಸೇವೆಯನ್ನು ಕೊಟ್ಟಿದ್ದರು. ಆ ಸಂದರ್ಭ ಗರೋಡಿಯಲ್ಲಿ ಅಗೆಲು ಸೇವೆಯ ಕ್ರಮಗಳೆಲ್ಲ ನಡೆದ ಮೇಲೆ ಮರ್ಣೆಯ ಅವರ ಮನೆಯಲ್ಲಿ ಅಗೆಲು ಪೂಜಾ ಕ್ರಮ ನಡೆಯಿತು. ತದನಂತರ ಗರೋಡಿಯಲ್ಲಿ ಪ್ರಸಾದ ಸ್ವೀಕರಿಸಲು ವಾಪಾಸು ಬರುವಾಗ ಮನೆಯಲ್ಲಿ ಉಳಿದಿದ್ದ ಮನೆ ಒಡತಿಯರಿಗೆ, ಬೈದ್ಯೇರುಗಳು ಚಲ್ಲಣ ಗೆಜ್ಜೆಯ ಸದ್ದಿನೊಂದಿಗೆ ಅಂಗಳದಿಂದ ಪೂಜೆ ನಡೆದ ಮನೆಯ ಪಡಸಾಲೆಗೆ ಪ್ರವೇಶಿಸಿದಂತೆ ಭಾಸವಾಯಿತು. ಏನೆಂದು ತಿಳಿಯಲು ಅಂಗಳಕ್ಕೆ ಬಂದು ಒಳಗೆ ಹೋದಾಗ, ಅಡುಗೆ ಕೋಣೆಯಲ್ಲಿ ಒಲೆ ಮೇಲೆ ಇಟ್ಟಿದ್ದ ಹಾಲು ಉಕ್ಕಿ ಅಲ್ಲೆಲ್ಲಾ ಪಸರಿಸಿ ಪಡಸಾಲೆಯ ಪೂಜಾ ಜಾಗಕ್ಕೆ ಹಾಲು ಹರಿಯುವ ಮೂಲಕ ಬೈದೇರುಗಳು ತಮ್ಮ ಇರವನ್ನು ತೋರ್ಪಡಿಸಿದ್ದರು.
ಕಣ್ಣಿಗೆ ಬರುವುದನ್ನು ಕಣ್ಣು ರೆಪ್ಪೆಯಲ್ಲಿ ಹಾರಿಸಿದರು: ಹಿಂದೆ, ಬೋಳೂರು ಗರೋಡಿಯ ಪೂಜಾ ಕಾರ್ಯಕ್ರಮದ ಸಂದರ್ಭ, ಬೈದ್ಯೇರುಗಳ ದರ್ಶನದ ಸಮಯದಲ್ಲಿ, ಮುಂಬಯಿಂದ ಬಂದ ಊರಿನ ಪ್ರತಿಷ್ಠಿತ ವ್ಯಕ್ತಿಗೆ ಗಂಧ ಪ್ರಸಾದ ಕೊಡುವಾಗ..... “ಒಂಜಿ ತಿಂಗೊಲ್ದುಲಾಯಿ ಈರ್ನ ತರೆಕ್ಕ್ ಬರ್ಪಿನೆನ್ ತರೆಕುಜಲುಡ್ ಪಾರ್ಪಾವ” ಎಂದು ಅಭಯದ ನುಡಿ ಕೊಟ್ಟಿದ್ದರಂತೆ. ಹೇಳಿದ ಮಾತನ್ನು ಉಳಿಸಿಕೊಳ್ಳುತ್ತಾರೆ ಇನೆಉಲ್ಲ ಬೈದ್ಯೆರುಗಳು ! ಹೇಳಿದ ಒಂದು ತಿಂಗಳ ಒಳಗೆ, ಅವರನ್ನು ಕಣ್ಣಿಗೆ ಬರುವುದನ್ನು ಕಣ್ಣು ರೆಪ್ಪೆಯಲ್ಲಿ ಹಾರಿಸಿದರು ಎಂದು ಹೇಳುವ ಹಾಗೆ, ಬಂದ ಆಪತನ್ನು ತಲೆಯಿಂದ ಬೆರಳಿನ ಕೊಡಿಗೆ ನಿಲ್ಲಿಸಿ, ಅವರನ್ನು ಬಹು ದೊಡ್ದ ದುರಂತದಿಂದ ಕಾಪಾಡುತ್ತಾರೆ. ಮುಂದೆ ಅವರ ಸಂಸಾರ ಒಟ್ಟು ಸೇರಿ ದಿನಾಂಕ 21 ಅಗಸ್ಟ್, 2015 ರಂದು ಗರೋಡಿಯಲ್ಲಿ ಹೂವಿನ ಪೂಜೆ ಕೊಡುವುದರೊಂದಿಗೆ, ಬೈದ್ಯೇರುಗಳಿಗೆ ಬೆಳ್ಳಿಯ ಚಲ್ಲಣ, ಗೆಜ್ಜೆಯ ವಸ್ತ್ರಾಭರಣವನ್ನು ಅರ್ಪಣೆ ಮಾಡಿದರು.
ಅವಳಿ ಮಕ್ಕಳಿಗೆ ಮಾತು ಬರಿಸಿದರು: ಬಹಳ ಹಿಂದೆ ಬೋಳೂರು ಗರೋಡಿಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಕುಟುಂಬದ ಸದಸ್ಯ್ರೊಬ್ಬರು ದೂರೊದ ಮುಂಬಯಿಯಲ್ಲಿ ನೆಲೆ ನಿಂತಿದ್ದರು. ಮುಂದಿನ ದಿನಗಳಲ್ಲಿ ಕಾರಣಾಂತರದಿಂದ ಊರಿನ ಸಂಪರ್ಕದಿಂದ ದೂರ ಇದ್ದರು. ಸಂಸಾರ ಬೆಳೆದಂತೆ ಕುಟುಂಬದಲ್ಲಿ ಅವಳಿ ಗಂಡು ಮಕ್ಕಳ ಜನನ ಆಗುತ್ತದೆ. ಆ ಮಕ್ಕಳಿಗೆ ವರ್ಷ ಮೂರು ತುಂಬಿದರೂ ಮಾತು ಬರುತ್ತಿರಲಿಲ್ಲ. ಹಲವಾರು ವೈದ್ಯರನ್ನು ಸಂಪರ್ಕಿಸಿದರೂ ಮಕ್ಕಳಲ್ಲಿನ ಈ ದೋಷಕ್ಕೆ ಪರಿಹಾರ ಕಾಣಲಿಲ್ಲ. ಕಂಗಲಾದ ದಂಪತಿಗಳಿಗೆ ಕುಟುಂಬದ ಹಿರಿಯರು ತಮ್ಮ ಮೂಲ ಬೋಳೂರು ಗರಡಿ ಭೇಟಿ ಕೊಟ್ಟು ಪ್ರಾರ್ಥನೆಯನ್ನು ಸಲ್ಲಿಸುವ ಸಲಹೆಯನ್ನು ಕೊಡುತ್ತಾರೆ. ಅವರ ಮಾತಿನಂತೆ 2015 ರಂದು ಅವಳಿ ಮಕ್ಕಳೊಂದಿಗೆ ಗರೋಡಿಗೆ ಬಂದು ಮಕ್ಕಳಿಗೆ ಮಾತು ಬರಿಸುವಂತೆ ಬೆರ್ಮೆರ್ ಬೈದೇರುಗಳಲ್ಲಿ ದೈನ್ಯದಿಂದ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ವರ್ಷದ ಒಳಗೆ ಅವರ ಅವಳಿ ಮಕ್ಕಳು ಮಾತು ಕಲಿಯುತ್ತಾರೆ. ಇದು ಬೆರ್ಮೆರ್ ಮತ್ತು ಕೋಟಿ ಚೆನ್ನಯರ ದಯೆ ಎಂದು ತಿಳಿದು ಅವರು ದಿನಾಂಕ 27-03-2016 ರಂದು ನಡೆದ ಬೆರ್ಮೆರ್ ಬೈದೇರುಗಳ ನೇಮೊತ್ಸವದಂದು ತಮ್ಮ ಸತ್ಯಾನುಸಾರ ಸೇವೆಯನ್ನು ಸಲ್ಲಿಸುತ್ತಾರೆ.ಚಿತ್ರ ಮತ್ತು ಬರಹ: ಮಹೇಶ್ ಬೋಳೂರು.
0 comments: