Tuesday, January 9, 2018

ಬಿಲ್ಲವರ ಗುತ್ತು ಮತ್ತು ಐತಿಹಾಸಿಕ ಮನೆತನಗಳು (ತಿಂಗಳಾಡಿ ಗುತ್ತು)

ಬೆಳ್ತಂಗಡಿ - ಬಂಟ್ವಾಳ ರಸ್ತೆಯಲ್ಲಿ ಮಣಿ ಹಳ್ಳ ದಿಂದ ಎಡಕ್ಕೆ ತಿರುಗಿದರೆ ಅಜಿಲ ಮೊಗರು ರಸ್ತೆಯಲ್ಲಿ ಸುಮಾರು ೧೫ ಕಿ.ಮೀ ದೂರದ ಮಣಿನಾಲ್ಕೂರು ಗ್ರಾಮದಲ್ಲಿ ತಿಂಗಳಾಡಿ ಗುತ್ತು ಇದೆ‌. ಇದು ಕರ್ಕೇರ ಬಳಿಯವರಿಗೆ ಸೇರಿದ ಗುತ್ತು ಮನೆ ಯಾಗಿದ್ದು ಸೀತರಾಮ ಪೂಜಾರಿಯವರು ಈಗಿನ ಯಜಮಾನರಾಗಿದ್ದಾರೆ.

ಈ ಗುತ್ತಿಗೆ ಸುಮಾರು ೫೦೦ ವರ್ಷಗಳ ಇತಿಹಾಸ‌ವಿದೆ ಎಂದು ಹೇಳುತ್ತಾರೆ. ೩೨ ವರ್ಷಗಳ ಹಿಂದೆ ಈ ಮನೆ ೫೫ ಸದಸ್ಯರ ಕೂಡು ಕುಟುಂಬವಾಗಿತ್ತು. ೪೦೦ ಮುಡಿಗಿಂತಲೂ ಹೆಚ್ಚು ಕೃಷಿ ಭೂಮಿ ಮತ್ತು ಕುಮ್ಕಿ ಜಮೀನು ಹೊಂದುತ್ತ ಒಕ್ಕಲುಗಳನ್ನು ಈ ಗುತ್ತು ಕೂಡಿತ್ತು. ಈ ಮನೆಯ ಮೂಲ ಪುರುಷ ದೇರೆ ಬೈದ್ಯರು. ದೇರೆ ಬೈದ್ಯರು ತಮ್ಮ ಕುಂಞ ಎಂಬ ತನ್ನ ಸಹೋದರನ ಜೊತೆಯಲ್ಲಿ ಸುಳ್ಳ ಮಲೆಯಿಂದ ಹೊರಟು ನೆಲೆಗೆ ಜಾಗ ಹುಡುಕುತ್ತಾ ಕಡೆಶ್ವಾಲ್ಯವನ್ನು ಅರಸಿ ಬಂದರು. ಅವರಿಗೆ ಪಂಜುರ್ಲಿ ಮತ್ತು ಕೊಡಮಂದಾಯ ದೈವಗಳು ಒಲಿದವು‌. ಜಾಗದವರು ಬಲ್ಯಾಯನಲ್ಲಿ ಪ್ರಶ್ನೆಯಿಟ್ಟಾಗ ದೈವಗಳು ಬಂದುದು ತಿಳಿಯಿತು. ದೇರೆ ಅವರು ಎರುಮಾಣಿ ಕೇಳಿದ ಕೋಣ ಬರುವಾಗ ಹೊತ್ತಾದೀತು ಎಂದರು. ಆಗ ಕೋಣ‌ ಮಾಯವಾಯಿತು.

ಪಂಜುರ್ಲಿ ದೈವ ಒಲಿದು ಬಂದಿದೆ ಚಾವಡಿ ಕೊಡ‌ಬೇಕಾಗುತ್ತದೆ ಎಂದು ಪ್ರಶ್ನೆಯಲ್ಲಿ ಕಂಡು ಬಂತು. ಆದುದರಿಂದ ಉಬಾರ‌ ಹೊಳೆಯ ಪಾಪಿಟ್ಟು ಕಟ್ಟದ‌ ಬಳಿ ಬಲಿ ನೇಮ ಕೊಟ್ಟರು. ಪುನಃ ಆ ಜಾಗ ಆಗುವುದಿಲ್ಲ ವೆಂದು ದೈವ ಹೇಳಿತು. ನಂತರ ಕಡೇಶ್ವಾಲ್ಯ ನರಸಿಂಗ ದೇವರ ಕೂಟೇಲು ದಾಟಿ ನೆಲೆಯಾಗು ಎಂದು ದೇರೆ ಬೈದ್ಯರಿಗೆ ಅಪ್ಪಣೆಯಾಯಿತು. ಹಾಗೇ ‌ದೇರೆ‌ ಬೈದ್ಯರು‌ ಅಲ್ಲಿ ನೆಲೆನಿಂತರು. ತಿಂಗಳಾಡಿ ಗುತ್ತು ಹಿಂದೆ ವಿಶಾಲವಾದ ಸುತ್ತು ಮುದಲಿನ ಮನೆ ಇತ್ತು. ೧೯೨೩ರ ನೆರೆಯಲ್ಲಿ ಕುಸಿದ ಮನೆ ೧೯೭೪ ರ ನೆರೆಯಲ್ಲಿ ಪೂರ್ತಿ‌ ಕುಸಿಯಿತು.

ಪುರಾತನ ಮನೆಯ ಪಂಚಾಂಗದ ಅವಶೇಷಗಳು ೨-೩ ಎಕರೆಗಳಷ್ಟು ವಿಸ್ತಾರದಲ್ಲಿ ಹರಡಿತ್ತು ಎನ್ನುತ್ತಾರೆ. ಈ ತಿಂಗಳಾಡಿ ಗುತ್ತಿನ ಭೂಮಿ ಹಿಂದೆ ಗುಡ್ಡ ಪ್ರದೇಶದಿಂದ ಕೂಡಿದ್ದು ದೇರೆಯವರೇ ಸ್ವತಃ ಗುಡ್ಡವನ್ನು ಕಡಿದು ಮಾಡಿದ ಭೂಮಿಯೆಂದು ಹೇಳುತ್ತಾರೆ. ಈಗ ಅದೇ‌ ಸ್ಥಳದಲ್ಲಿ ನಾಲ್ಕು ಮನೆಗಳ ನಿರ್ಮಾಣವಾಗಿದೆ. ಮಧ್ಯ ಭಾಗದಲ್ಲಿ‌ ಉಪ್ಪರಿಗೆ ಗುತ್ತಿನ ಮನೆ ಇದ್ದು ಭೋಧಿಗೆ ಕಂಬಗಳ ವಿಶಾಲವಾದ‌ ಚಾವಡಿ ಸುಂದರವಾಗಿದೆ‌. ಕಲ್ಯಾಣಪ್ಪನ ಕಾಟುಕಾಯಿ ಕಾಲದಲ್ಲಿ ಈ ಗುತ್ತಿಗೆ ೧೬ ತೋಟಗಳಿದ್ದವು. ಗಂಡ ಸತ್ತ ವಿಧವೆಯರ ಆಭರಣಗಳು ಒಂದು ಪಾತ್ರೆಯ ತುಂಬಾ ಇತ್ತೆಂದೂ ಅದನ್ನು ಕಂಡ ಕಲ್ಯಾಣಪ್ಪನ ದಂಡು ಈ ಮನೆಗೇನೂ ತೊಂದರೆ ಮಾಡದೆ ಮರಳಿತೆಂದು ಹೇಳುತ್ತಾರೆ. ಇದಲ್ಲದೆ ಈ‌ ಮನೆಯಲ್ಲಿ ಒಂದು ಕಲಸೆಯ ಗಾತ್ರದ ಮಣ್ಣಿನ ಪಾತ್ರೆಯಲ್ಲಿ ಹಾಲು ಕಾಯಿಸುತ್ತಿದ್ದ ಕಾಲವಿತ್ತಂತೆ. ಅರ್ಧ ಮುಡಿ ಗದ್ದೆಯಲ್ಲಿ‌ ಪದ್ಪೆ ( ಹರಿವೆ ಸೊಪ್ಪು)ಬೆಳೆಯುತ್ತಿದ್ದರಂತೆ.

ಇದು‌ ಒಂದೊತ್ತಿನ ಊಟಕ್ಕೆ ಬೇಕಾಗುವಷ್ಟು ಇತ್ತೆಂದು ಇಲ್ಲಿ‌ನ ಹಿರಿಯರು ಹೇಳುತ್ತಿದ್ದರಂತೆ. ಈ ಮನೆಗೆ ಕಲ್ಯಾಣಪ್ಪನ ದಂಡು‌ ಬಂದಂತಹ ಸಮಯದಲ್ಲಿ‌ ಇಲ್ಲಿ‌ ಹದಿನಾರು‌ ತೊಟ್ಟಿಲು ಮತ್ತು ಮಕ್ಕಳು ಇದ್ದರಂತೆ. ಇದನ್ನೆಲ್ಲಾ‌ ನೋಡಿದಾಗ ತಿಂಗಳಾಡಿ ಗುತ್ತು ಎಷ್ಟು ಶ್ರೀಮಂತ ಮನೆತನವಾಗಿತ್ತು ಎಂದು‌ ತಿಳಿಯ ಬಹುದು. ಈ ಮನೆಯ ಗದ್ದೆಯಲ್ಲಿ ದೇರೆ‌ಬೈದ್ಯರ ಸಮಾಧಿಯೂ ಇದ್ದು ಅದು ಈಗ ಜೀರ್ಣ ಸ್ಥಿತಿಯಲ್ಲಿ ಇದೆ. ಮನೆಯ ಚಾವಡಿಯಲ್ಲಿ ದೇರೆ ಬೈದ್ಯರ ಮೂರ್ತಿಯೂ ಇದ್ದು ಇದಕ್ಕೆ ಆರಾಧನೆಗಳು ಸಲ್ಲುತ್ತಿವೆ.

ಗುತ್ತಿನ ಹಿರಿಯರೊಬ್ಬರು ಆಪತ್ಕಾಲದಲ್ಲಿ ಒಮ್ಮೆ ಗೌಡ ಸಾರಸ್ವತರಿಗೆ ಗುತ್ತಿನ ಭೂಮಿ ಅಡ ಇಟ್ಟರಂತೆ. ಸಾಲ ತೀರಿಸಲಾಗದೆ ಗೌಡ ಸಾರಸ್ವತರು ಈ ಗುತ್ತಿಗೆ ಧಣಿಗಳಾಗಿ ಇವರು ಒಕ್ಕಲುಗಳಾದರು‌‌. ೪೦೦ ಮುಡಿ ಗೇಣಿ ನಿಗದಿಯಾಯಿತು‌. ೮೦ ಸೆಂಟ್ಸ್‌ ಸ್ಥಳಕ್ಕೆ ೮ ಮುಡಿ ಗೇಣಿ ಕೊಡಬೇಕಾಗಿತ್ತು. ಮುಂದೆ‌ ಈ ಮನೆತನ ಹಿರಿಯರಾದ ಶಿವಪ್ಪ ಪೂಜಾರಿಯವರು ಧಣಿಯನ್ನು ಕೇಳದೆ ಮರ ಕಡಿದರೆಂಬ ನೆಪದಿಂದ ತಹಶೀಲ್ದಾರರಿಂದ ಆಜ್ಞೆ ಹೊರಡಿಸಿ ಒಕ್ಕಲೆಬ್ಬಿಸುವ ತಂತ್ರ ನಡೆಯಿತು. ೧೯೫೪-೫೫ ರಲ್ಲಿ ಧಣಿಗಳಾಗಿ ರಮಾನಾಥ ಶಣೈಯವರು ಒಂದು ದಿನ ಈ ಮನೆಗೆ ಬಂದು ಚಾವಡಿಯಲ್ಲಿ ಕುಳಿತರು .

ಅವರು ಕೋರ್ಟ್ ಜ್ಯೂರಿಗಳಲ್ಲಿ ಒಬ್ಬರಾಗಿದ್ದರು. ಶಣೈ ಅವರನ್ನು ಪರಿ ಪರಿಯಾಗಿ ವಿನಂತಿಸಿಕೊಂಡರು ಅವರು ಕೇಳಲಿಲ್ಲ. ಅವರಿಗೆ ಸೀಯಾಳ ನೀಡಿ ಸತ್ಕರಿಸಿದಾಗ ಕುಡಿಯಲು ಕೊಟ್ಟ ಸೀಯಾಳವನ್ನು ಕಾಲಿನಿಂದ ಒದ್ದು ಬಿಟ್ಟರು. ಇವರು ತನ್ನ ಬಿನ್ನಹವನ್ನು ಯಾವುದೇ ರೀತಿಯಿಂದಲೂ ಕೇಳುವವರಲ್ಲ ಎಂದು ಶಿವಪ್ಪ ಪೂಜಾರಿಯವರಿಗೆ ಖಾತರಿಯಾಯಿತು. ಒಕ್ಕಲೆಬ್ಬಿಸಿದರೆ ತನಗೆ ಮತ್ತು ತನ್ನ ಕುಟುಂಬಕ್ಕೆ ನೆಲೆ ಇಲ್ಲ ಎನ್ನುವ ದುಃಖ ಕಣ್ಣ ಮುಂದೆ ಘೋರ ಭವಿಷ್ಯವನ್ನು ತೋರಿತು.

ದುಃಖ ಕೋಪದಿಂದ ಕುದಿದ ಶಿವಪ್ಪನವರು ಚಾವಡುಯಲ್ಲಿ ದರ್ಪದಿಂದ ಕುಳಿತು ಮಾತನಾಡುತ್ತಿದ್ದ ರಮಾನಾಥರ ಮೂಗನ್ನು ಕೊಯ್ದು ಕಾಲನ್ನು ಅದೇ ಸೀಯಾಳವನ್ನು ಕೆತ್ತಿದ ಕತ್ತಿಯಿಂದ ಕಡಿದು ಬಿಟ್ಟರು.  ತನ್ನ ಭವಿಷ್ಯ ಕರಾಳವಾಗುತ್ತದೆ ಎಂಬ ಅರಿವಿದ್ದರೂ ಈ ಕೃತ್ಯವೆಸಗಿದರು. ಮುಂದೆ ಶಿವಪ್ಪ ಪೂಜಾರಿಯವರಿಗೆ ಜೈಲು ಶಿಕ್ಷೆಯಾಯಿತು. ಕಡಮಾಜೆ ಬರ್ಕೆ ಮನೆಯ ಭೂಮಿ ಕೂಡ ಇದೇ ಶಣೈಯವರ ಕೈಯಲ್ಲಿತ್ತು. ೩೪ ಮುಡಿ ಗೇಣಿಯಲ್ಲಿ ಒಂದು ಮುಡಿ ಕಡಿಮೆಯಾದುದಕ್ಕೆ ಒಕ್ಕಲೆಬ್ಬಿಸುವ ಸೋಡಾ ಚೀಟಿ ನೀಡಲು ಮುಂದಾಗಿದ್ದರು. ಆದರೆ ಶಿವಪ್ಪನವರ ಪ್ರಕರಣದಿಂದಾಗಿ ಜಾಗ ಬಿಡಿಸಿಕೊಳ್ಳುವ ಧೈರ್ಯ ಶಣೈ ಅವರಿಗೆ ಆಗಲಿಲ್ಲವಂತೆ. ಶಿವಪ್ಪ ಪೂಜಾರಿಯವರು ೫-೬ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡರು.

ಈ ಕೇಸಿನ ವಿರುದ್ದ ಹೈಕೋರ್ಟಿಗೂ ಆಪೀಲು ಮಾಡಿದ್ದರು. ಆ ಸಮಯದಲ್ಲಿ ಈ ಘಟನೇ ಸುತ್ತು ಮುತ್ತಿನ ಊರುಗಳಲ್ಲಿ ಮನೆ ಮಾತಾಗಿತ್ತು. ಬಿಲ್ಲವರ ಗುತ್ತು ಬರ್ಕೆಗಳು ಮತ್ತು ಅವರ ಭೂಮಿ ಮೋಸಗಾರರಿಂದ ಪರವಶವಾಗಿ ಹೋದ ನೂರಾರು ಘಟನೆಗಳಿಗೆ ಇದು ಸಾಕ್ಷಿಯಾಗಿ ನಿಂತಿದೆ.

ಅದಮ್ಮ ಗುತ್ತು ಹಾಗೂ ತಿಂಗಳಾಡಿ ಒಂದೇ ಕುಟುಂಬದ ಎರಡು ಕವಲುಗಳು. ತಿಂಗಳಾಡಿ ಗುತ್ತು ಮನೆಯಲ್ಲಿ ದೈಯ್ಯೊಂಕುಲು, ಮೈಸಂದಾಯ, ಕೊಡಮಣಿತ್ತಾಯ, ಪಂಜುರ್ಲಿ, ಹಿರಿಯಾಯ, ಕಲ್ಲುರ್ಟಿ, ಕಲ್ಕುಡ, ವರ್ಣಾರ ಪಂಜುರ್ಲಿ ಮುಂತಾದ ದೈವಗಳಿವೆ. ಕೂಟೆಲು ಎಂಬಲ್ಲಿನ ಈ ಮನೆತನದ ಹಾಗೂ ಗ್ರಾಮಕ್ಕೆ ಸಂಬಂಧಪಟ್ಟ ಪಂಜುರ್ಲಿಯ ಮತ್ತು ಕೊಡಮಂದಾಯ ದೈವದ ಮೂಲ ಕ್ಷೇತ್ರವು ೧೯೨೩ ರ ನೆರೆಯ ಅಬ್ಬರದಲ್ಲಿ ಬಿದ್ದು ಹೋದವು. ದೈವಸ್ಥಾನದ ಚಾವಡಿ ಮಧ್ಯಭಾಗದಲ್ಲಿ ಮರಗಳು ಬೆಳೆದಿವೆ. ಸುತ್ತಲೂ ಗೋಪುರದ ಕಲ್ಲಿನ ಅವಶೇಷಗಳಿವೆ.

ಇಲ್ಲಿ ಹಿಂದೆ ಧ್ವಜಾರೋಹಣವಾಗಿ ಮೂರು ದಿನದ ಚೆಂಡು ಹಾಗೂ ಎರಡು ದಿನದ ನೇಮ ನಡೆಯುತ್ತಿತ್ತು. ಧ್ವಜವೇರುವ ಕೊಡಿಮರದ ದಂಬೆ ಕಲ್ಲು ಈಗಲೂ ಇಲ್ಲಿ‌ ಇದ್ದು ಇತಿಹಾಸವನ್ನು ಮತ್ತೆ ನೆನೆಪಿಸುವಂತಿದೆ. ಕೃಷಿ ಪ್ರಧಾನ ಸಮಾಜದಲ್ಲಿ ಯವಕರ ಶಕ್ತಿ ಪ್ರದರ್ಶನಕ್ಕೆ ಅವಕಾಶವಿತ್ತು. ಈ ಮನೆಯ ಆವರಣದಲ್ಲಿ ಒಂದು ದೊಡ್ಡ ಕಲ್ಲಿದ್ದು ಇದನ್ನು ಶಕ್ತಿ ಕಲ್ಲೆಂದು ಕರೆಯುತ್ತಾರೆ.

ಈ ಮನೆತನದ ಹೆಣ್ಣನ್ನು ಮದುವೆ ಆಗುವ ಗಂಡು ಈ ಶಕ್ತಿ ಕಲ್ಲನ್ನು ಎತ್ತಿ ಹಿಡಿದುಕೊಂಡು ಮನೆಗೆ ಒಂದು ಸುತ್ತು ಬರಬೇಕೆಂಬ ಪದ್ಧತಿ ಇದ್ಧಿತು. ಈ ಮನೆಯಲ್ಲಿ ೧೫ ತಳಿಯ ಮಾವಿನ ಮರಗಳಿವೆ. ಬಚ್ಚಿರೆ ಕುಕ್ಕು, ಬೆಲ್ಲ ಕುಕ್ಕು, ಕೊರಸಂಡಿ ಕುಕ್ಕು, ಕುಡ್ಲ ಕುಕ್ಕು, ಉಳ ಕುಕ್ಕು, ಪುಡರಿ ಕುಕ್ಕು, ತರಡಿ ಕುಕ್ಕುಗಳೆಂಬ ಪ್ರಸಿದ್ದ ತಳಿಗಳಿವೆ.

ಹಿಂದೆ ಏಳು ಪಾಲು ಇದ್ದು ಈಗ ನಾಲ್ಕು ಪಾಲು ಇದೆ. ಎಲ್ಲಾ ಪಾಲಿನವರು ಹತ್ತಿರದಲ್ಲಿಯೇ ಇದ್ದು ಒಮ್ಮತದಿಂದ ಕೃಷಿ ವ್ಯವಹಾರ ನಡೆಸುತ್ತಾರೆ. ಮಾರ್ಚ್ ೧೯ ಕ್ಕೆ ವಾರ್ಷಿಕ ಅಗೇಲು ನಡೆಯುತ್ತದೆ. ಕುಟುಂಬದ ನಾರಣಪ್ಪ ಪೂಜಾರಿಯವರು ಅಬಕಾರಿ ಇಲಾಖೆಯಲ್ಲಿ , ಚಂದ್ರಿಕ ಅಂಚೆ ಕಛೇರಿಯಲ್ಲಿ ಕೆಲಸಕ್ಕಿದ್ದು, ಕಾಂಚಲಾಕ್ಷಿ ಸರಪಾಡಿ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) ಬರ‌ಹ- ಸಂಕೇತ್ ಪೂಜಾರಿ.

0 comments: