Friday, February 16, 2018

ದೇಶದೆಲ್ಲೆಡೆ ಎಲ್ಲರ ಕಣ್ಮನ ಸೆಳೆದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಬಗ್ಗೆ ನಿಮಗೆಷ್ಟು ತಿಳಿದಿದೆ

ದೇಶದೆಲ್ಲೆಡೆ ಎಲ್ಲರ ಕಣ್ಮನ ಸೆಳೆದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಬಗ್ಗೆ ನಿಮಗೆಷ್ಟು ತಿಳಿದಿದೆ

ದಕ್ಷಿಣದ ಅಯೋಧ್ಯೆ ಎಂಬ ಖ್ಯಾತಿಯನ್ನು ಹೊಂದಿದ ಶ್ರೀ ರಾಮ ಕ್ಷೇತ್ರ ನಿತ್ಯಾನಂದನಗರ ಧರ್ಮಸ್ಥಳ. ಶ್ರೀ ಕ್ಷೇತ್ರವು ಶ್ರೀ ರಾಮ ದೇವರ ಪಾದಸ್ಪರ್ಶದಿಂದ ವಿಶ್ವಮಾನ್ಯತೆಯನ್ನು ಹೊಂದಿದ ಕೋಟ್ಯಾಂತರ ಭಕ್ತರ ಶ್ರಧ್ಧಾಕೇಂದ್ರವಾಗಿದೆ. 1927 ರಲ್ಲಿ ಮುಂಬೈಯ ವಜ್ರೇಶ್ವರಿಯ ಭಗವಾನ್ ನಿತ್ಯಾನಂದರು ಈ ಪ್ರದೇಶಕ್ಕೆ ಆಗಮಿಸಿ ಇಲ್ಲಿ ಒಂದು ದಿವಸ ತಂಗಿದ್ದು, ಈ ಭೂಮಿಯನ್ನು ಪಾವನಗೊಳಿಸಿದರು. ಇಡೀ ದೇಶದಲ್ಲೇ ಕಣ್ಮನ ಸೆಳೆಯುವ ಅಪ್ರತಿಮ ಗಾಂಭೀರ್ಯದಿಂದ ಕೂಡಿದ ಶ್ರೀ ಕ್ಷೇತ್ರದ ಹಿಂದಿನ ನಿರ್ಮಾತೃ ಶಕ್ತಿ ಜಗದ್ಗುರು ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು. ಇವರೊಬ್ಬ ಮಹಾನ್ ಕರ್ಮಯೋಗಿ ಹಾಗೂ ದಾರ್ಶನಿಕರಾಗಿರುತ್ತಾರೆ.

ಗುರುಗಳ ಸಾಧನೆಯಿಂದ ಆಕರ್ಷಿತರಾದ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರು, ಬೆಂಗಳೂರು ಉತ್ತರ ಕನ್ನಡ ಭಾಗದ ಈಡಿಗರು, ನಾಮಧಾರಿ ಜನಾಂಗದವರು, ಇನ್ನಿತರ ಎಲ್ಲಾ ಜಾತಿ ಜನಾಂಗದ ನಾಯಕರು, ಬುದ್ಧಿಜೀವಿಗಳು, ಸಾಧು ಸಂತರು ಒಟ್ಟು ಸೇರಿ ಗುರುಗಳನ್ನು ತಮ್ಮ ಕುಲಗುರುಗಳಾಗಿ ಸ್ವೀಕರಿಸಿದರು. ಕೇರಳದ ಶಿವಗಿರಿಯ ಶ್ರೀ ನಾರಾಯಣ ಗುರಿ ಪೀಠದ ಗುರುಗಳಾದ ಪ್ರಕಾಶನಂದ ಸ್ವಾಮೀಜಿಯವರು ನೇತೃತ್ವದಲ್ಲಿ ಸುಮಾರು 30 ಸಂತರು ಅವರೊಂದಿಗೆ ಶ್ರೀ ರಾಮ ಕ್ಷೇತ್ರಕ್ಕೆ ಆಗಮಿಸಿದ್ದರು. ಹಾಗೇನೆ ಉತ್ತರ ಭಾರತದಿಂದಲೂ ಆನೇಕ ಸಾದು ಸಂತರು ಆಗಮಿಸಿ ಶ್ರೀ ರಾಮ ಕ್ಷೇತ್ರದಲ್ಲಿ ಶಾಸ್ತ್ರೋಕ್ತವಾಗಿ ಗುರುಪೀಠವನ್ನು ನಿರ್ಮಾಣ ಮಾಡಿ ಜನವರಿ 22 ನೇ ತಾರೀಖು 2008 ಕ್ಕೆ ಶ್ರೀಗಳವರನ್ನು ಜಗದ್ಗುರುಗಳಾಗಿ ‌ಸ್ವೀಕರಿಸಿ ತಮ್ಮ ಶ್ರಧ್ಧಾಭಕ್ತಿಯ ಗುರುವಂದನೆಯನ್ನು ಗುರುಗಳ‌ ಚರಣಕಮಲದಲ್ಲಿ ಅರ್ಪಿಸಿದರು.

ಪೂಜ್ಯ ಜಗದ್ಗುರು ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಸಮಾಧಿಯ ನಂತರ ಈ ಪವಿತ್ರವಾದ ಶ್ರೀ ರಾಮಕ್ಷೇತ್ರದ ಗುರುಪೀಠದ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಿದವರು ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು. ಶ್ರೀಗಳವರು ತಮ್ಮ 13 ನೇ ವಯಸ್ಸಿನಲ್ಲಿ ತನ್ನ ತಂದೆಯವರಿಂದಲೇ ಓಂಕಾರ ದೀಕ್ಷೆ, ಯೋಗ ದೀಕ್ಷೆಯನ್ನು ಪಡೆದವರಾಗಿರುತ್ತಾರೆ‌. ಕಾಲಕ್ರಮೇಣ ಸುಮಾರು 25 ವರ್ಷಗಳಿಂದ ನಿರಂತರ ಹಿಮಾಲಯ ಯಾತ್ರೆಯನ್ನು ಮಾಡಿ ಅಲ್ಲಿನ ಗಿರಿಶಿಖರಗಳು, ಸಾಧು ಸಂತರ ತಪಸ್ವಿಗಳ ಆಶೀರ್ವಾದ ಪಡೆದು ನಿರಂತರ ತನ್ನ ಅನುಷ್ಠಾನ ಸಾಧನೆಗಳಿಂದ ಇವತ್ತು ಇವರೊಬ್ಬ ಶ್ರೇಷ್ಠ ಜ್ಜಾನಯೋಗಿ, ಮಹಾನ್ ತಪಸ್ವಿಗಳಾಗಿ ನಮ್ಮ ಜಗದ್ಗುರು ಪೀಠದಲ್ಲಿ ವಿರಾಜಮಾನರಾಗಿ ಲೋಕ ಕಲ್ಯಾಣಾರ್ಥಕವಾಗಿ ಕರ್ಮಯೋಗವನ್ನು ನಡೆಸಿಕೊಂಡು ಬರುತ್ತಿದ್ದಾರೆ‌.

ಈ ಗುರು ಪೀಠ "ವಸುದೈವ ಕುಟುಂಬಕಂ" ಎಂಬ ತತ್ವದಡಿ ಎಲ್ಲಾ ಜಾತಿಜನಾಂಗಗಳಲ್ಲಿ ಸಂಸ್ಕಾರಯುಕ್ತ ಪ್ರಜೆಗಳಪ್ರಜೆಗಳನ್ನು ನಿರ್ಮಿಸುವಲ್ಲಿ ಅಹೋರಾತ್ರಿ ಕೆಲಸ ನಿರ್ವಹಿಸುತ್ತಿದೆ. ಯಾವುದೇ ಜಾತಿ ಮತ ಪಂಥದ ತಾರತಮ್ಯವಿಲ್ಲದೆ ಶ್ರೀಗಳವರು ತಮ್ಮ ಗುರುಕುಲ ಮಾದರಿಯ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ 425 ಮಕ್ಕಳಿಗೆ ಎಲ್. ಕೆ. ಜಿ. ಯಿಂದ ಎಸ್. ಎಸ್. ಎಲ್. ಸಿ. ಯವರೆಗೆ ಆಂಗ್ಲ ಮಾದ್ಯಮದ ಶಿಕ್ಷಣದೊಂದಿಗೆ ಯೋಗ ಧ್ಯಾನ, ಭಜನೆ, ಸತ್ಸಂಗ, ಭಗವದ್ಗೀತಾ, ವಾಸ್ತು ಜೋತಿಷ್ಯ ಎಲ್ಲವನ್ನೂ ಉಚಿತವಾಗಿ ವಸತಿ ಸೌಲಭ್ಯದೊಂದಿಗೆ ಭೋದಿಸುತ್ತಿದ್ದಾರೆ. ಸಮಾಜದ ಎಲ್ಲಾ ಜಾತಿಯ ಬಡ ಮಕ್ಕಳಿಗೆ ಇದು ಆಸರೆಯಾಗಿದ್ದು, ಇದರ ಖರ್ಚು ವೆಚ್ಚಗಳು ಅಪಾರ. ಈ ವ್ಯವಸ್ಥೆ ಗಾಗಿ ಗುರುಗಳು ಅಹೋರಾತ್ರಿ ಭಗೀರಥ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಶ್ರೀ ರಾಮ ಕ್ಷೇತ್ರದಲ್ಲಿ ಸಾವಿರಾರು ಜನರಿಗೆ ನಿರಂತರ ಅನ್ನ ದಾಸೋಹ ನಡೆಯುತ್ತಿದ್ದು, ಗೋ ಸಂರಕ್ಷಣೆಗಾಗಿ ಗೋ ಶಾಲೆಯನ್ನು ಕೂಡ ನಡೆಸುತ್ತಿದ್ದಾರೆ. ಪ್ರತೀ ವರ್ಷ ಕ್ಷೇತ್ರದಲ್ಲಿ ರಾಮ ನವಮಿಯ ಸಂದರ್ಭ ಏಳು ದಿವಸಗಳ ಜಾತ್ರೋತ್ಸವ ನಡೆಯುತ್ತಿದ್ದು 5 ದಿನ ರಥೋತ್ಸವ ನಡೆಯುತ್ತದೆ. ಕೊನೆಯ ದಿನ ಮಹಾ ಬ್ರಹ್ಮ ರಥೋತ್ಸವ ನಡೆಯುತ್ತದೆ.

ಈ ಗುರುಪೀಠದ ವತಿಯಿಂದ ಭಾರತದಾದ್ಯಂತ 9 ಕಡೆ ಶಾಖಾ ಮಠಗಳನ್ನು ನಾಡಬೇಕೆಂಬ ಸಂಕಲ್ಪವನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಉಡುಪಿ ಬಾರ್ಕೂರಿನಲ್ಲಿ ಬಿಲ್ಲಾಡಿಯಲ್ಲಿ 15 ಎಕರೆ ಸ್ಥಳ ಖರೀದಿಯಾಗಿ ಒಂದು ಸುಸಜ್ಜಿತವಾದ ಐ ಟಿ ಐ ನಿರ್ಮಾಣ ವಾಗಿರುತ್ತದೆ. ಇಲ್ಲಿ ವಸತಿ ಸೌಲಭ್ಯದೊಂದಿಗೆ ಸುಮಾರು 100 ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. 2 ನೇಯದಾಗಿ ಭಟ್ಕಳದಲ್ಲಿ 800 ವರ್ಷದ ಹಿಂದೆ ರಾಮನುಜಾಚಾರ್ಯರಿಂದ ಸ್ಥಾಪನೆಯಾದ ಗುರುಮಠ ಇಂದು ನಮ್ಮ ಪೀಠದ ವತಿಯಿಂದ ಕೆಲಸ ನಿರ್ವಹಿಸುತ್ತಿದೆ.

3 ನೇಯದಾಗಿ ಈಗಾಗಲೇ ಸ್ವಾಮೀಜಿಯವರು ಗುರುಪರಂಪರೆಯನ್ನು ದಕ್ಷಿಣದಿಂದ ಉತ್ತರಕ್ಕೆ ವಿಸ್ತರಿಸಿ ಹಿಮಾಲಯದ ದೇವಭೂಮಿ ಹರಿದ್ವಾರದಲ್ಲಿ ‌ಕೂಡ ಮಠ ನಿರ್ಮಾಣ ಮಾಡಿ ಲೋಕಾರ್ಪಣೆಗೊಳಿಸಿ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಮುದ್ರಿಸಲ್ಪಟ್ಟಿದೆ. 4 ನೇಯದಾಗಿ ಉತ್ತರ ಕನ್ನಡ ಜಿಲ್ಲೆಯ ಕರಿಕ್ಕಲ್ ಸಮುದ್ರ ತಟದಲ್ಲಿ ಒಂದು ಧ್ಯಾನಮಂದಿರ ನಿರ್ಮಾಣವಾಗುತ್ತಿದ್ದು‌ ಮಾರ್ಚ್ 4 ಕ್ಕೆ ಲೋಕಾರ್ಪಣೆಗೊಳ್ಳಲಿದೆ. 5 ನೇಯದಾಗಿ ಹೊನ್ನಾವರ, ಕುಮಟಾದಲ್ಲಿ ಶಾಖಾ ಮಠ ನಿರ್ಮಾಣದ ಕೆಲಸಗಳು ಪ್ರಾರಂಭವಾಗಿದೆ. 6 ನೇಯ ಕಾರ್ಯವನ್ನು ಗುರುಗಳ ಪೂರ್ವಾಶ್ರಮದ ತಾಲೂಕಾದ ಬಂಟ್ವಾಳದಲ್ಲಿ ಕೂಡಾ ಒಂದು ಮಠ ಮತ್ತು ವಿದ್ಯಾಲಯವನ್ನು ನಿರ್ಮಾಣ ಮಾಡಲು ಭಕ್ತರ ಬೇಡಿಕೆಗೆ ಆಶೀರ್ವಾದಿಸಿದ್ದಾರೆ.

ಆದ್ದರಿಂದ ಇಂತಹ ಮಹಾನ್ ಸಾಧಕ ಸನ್ಯಾಸಿ ತಮ್ಮ ತಾಲೂಕಿನವರೆಂಬ ಹೆಮ್ಮೆಯಿಂದ ಇವರ ಎಲ್ಲಾ ಕೆಲಸ ಕಾರ್ಯಗಳನ್ನು ಮನಗಂಡ ಬಂಟ್ವಾಳ ತಾಲೂಕಿನ ಭಕ್ತಾದಿಗಳು ಸೇರಿಕೊಂಡು ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯನ್ನು ರಚಿಸಿಕೊಂಡು ತಾಲೂಕಿನ ಸಮಸ್ತ ಜನತೆಯ ಪರವಾಗಿ ಪೂಜ್ಯ ಗುರುಗಳಿಗೆ ಗುರುವಂದನೆ ಮತ್ತು ಲೋಕಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವವನ್ನು ನಡೆಸುವುದಾಗಿ ತೀರ್ಮಾನಿಸಲಾಗಿದೆ.

ಇದೇ ದಿನಾಂಕ 18-02-2018 ರವಿವಾರ ಬೆಳ್ಳಿಗ್ಗೆ ಗಂಟೆ 9 - 00 ಕ್ಕೆ ಸರಿಯಾಗಿ ಗಾಣದಪಡ್ಪು ನಾರಾಯಣ ಗುರು ಮಂದಿರದ ಬಳಿ ಮೈದಾನದ ಆತ್ಮಾನಂದ ಸರಸ್ವತಿ ವೇದಿಕೆಯಲ್ಲಿ ಗುರುಗಳ ಉಪಸ್ಥಿತಿಯಲ್ಲಿ ಸೀತಾರಾಮ ಕಲ್ಯಾಣೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮ ಹಾಗೂ ಶ್ರೀಗಳಿಂದ ಆಶೀರ್ವಚನ ನಡೆಯಲಿದ್ದು ಎಲ್ಲಾ ಸದ್ಬಕ್ತರು ಹಾಜರಿದ್ದು ಭಗವಂತನ ಕೃಪೆಗೆ ಭಾಜನರಾಗಬೇಕು.

0 comments: