ಮೂಡು ಬಿದಿರೆಯ ಪ್ರಾಂತ್ಯ ಗ್ರಾಮದಲ್ಲಿ ಕೊಡಂಗಲ್ಲುಗೆ ಸಮೀಪದಲ್ಲಿ ಮಿತ್ತಲಾಡಿ ಬರ್ಕೆ ಇದೆ. ಇದು ಸುತ್ತು ಮುದಲಿನ ಮನೆಯಾಗಿದ್ದು ಒಂಭತ್ತು ಗ್ರಾಮಗಳ ಒಂದು ಮಾಗಣೆಗೆ ಒಂದನೇ ಮನೆಯಾಗಿದ್ದು ಮಾಗಣೆ ಬರ್ಕೆ ಯಾಗಿದೆ. ಆದ್ದರಿಂದ ಇದನ್ನು ಮಾಗಣೆ ಬರ್ಕೆ ಎಂದೂ ಕರೆಯತ್ತಾರೆ.
ಕೊಟ್ಯಾನ್ ಬಳಿಗೆ ಸೇರಿದ ಈ ಮನೆಯು ನಾಲ್ಕು ಸುತ್ತಿನ ಮನೆಯಾಗಿದ್ದು ಮಾಹಿತಿದಾರರು ನೀಡಿದ ವಿವರಣೆಯಂತೆ ಈ ಮನೆಗೆ ಸುಮಾರು ೪೦೦ ವರ್ಷಗಳ ಇತಿಹಾಸವಿದೆ. ಇಲ್ಲಿಯ ಜಮೀನಿನಲ್ಲಿ ೪೦೦ ವರ್ಷಗಳಿಂದಲೂ ನಾಗಾರಾಧನೆ ನಡೆಯುತ್ತಾ ಬಂದಿದೆ. ಅಂಗಜಾಲ ಬರಿಡ್ಕ, ಪೊನ್ನೆಚ್ಚಾರ್ವರೆಗೂ ವಿಸ್ತರಿಸಿದ ಭೂಮಿಯಾಗಿತ್ತು. 1800 ರಲ್ಲಿ ಮನೆತನದ ಆಸ್ತಿಪಾಸ್ತಿ ಭೂಮಿಯೆಲ್ಲಾ ಕುಟುಂಬದೊಳಗೆ ಪಾಲಾಯಿತು. ಮತ್ತೆ ಪುನಃ ಮೂರು ಹೆಣ್ಣು ಮಕ್ಕಳ ಹೆಸರಿನಲ್ಲಿ ಭೂಮಿ ಪಾಲಾಯಿತು. ಅನಂತರ ಬರ್ಕೆ ವಶದಲ್ಲಿ ೪೦ ಎಕ್ರೆ ಭೂಮಿ ಇತ್ತು. ಈಗ ೧೨ ಎಕ್ರೆ ಭೂಮಿ ಮಾತ್ರ ಮೂಲ ಬರ್ಕೆ ಮನೆಯ ವಶದಲ್ಲಿ ಇದೆ. ಕೃಷಿ ಸಂಪತ್ತು ಎಷ್ಟು ಸಂಪನ್ನವಾಗಿತ್ತು ಎಂಬುದು ಆಗ ಇದ್ದ ಎರೆಡೆರಡು ವಿಶಾಲವಾದ ಬಹುದೊಡ್ಡ ಗಟ್ಟಿಗಳನ್ನು ನೆನೆಪಿಸಿಕೊಂಡ ಈಶ್ವರ ಪೂಜಾರಿಯವರು ಮನೆಯ ಮಾಹಿತಿಯನ್ನು ನೀಡಿದರು.
ಇದೇ ಬರ್ಕೆ ಮನೆಯ ಇನ್ನೊಂದು ಕವಲು ಅನ್ನೆರೆ ಬೆಟ್ಟು ಎಂಬಲ್ಲಿದೆ. ಅಲ್ಲಿ ಬೈದೇರುಗಳ ಭಂಡಾರವಿದೆ. ಕೊಪ್ಪಳ ಬರ್ಕೆ ಎಂಬಲ್ಲಿಗೆ ಭಂಡಾರಕೊಂಡು ಹೋಗುವ ಹಕ್ಕು ಅವರದ್ದು. ಅದೇ ರೀತಿ ಲಾಡಿ, ಹಜಂಕಾಲ ಬೆಟ್ಟು ಗರಡಿಗಳಿಗೆ ಈ ಮನೆಯಿಂದ ಭಂಡಾರಹೊಗುತ್ತದೆ. ಅಲ್ಲಿ ಮೂರು ದಿನಗಳ ಜಾತ್ರೆ ನಡೆಯುತ್ತದೆ.
ಹಿರಿಯರಾದ ಬೋಗ್ರ ಪೂಜಾರಿಯವರು ಈ ಮನೆತನದ ಪ್ರಸಿದ್ಧ ವ್ಯಕ್ತಿ. ಇವರಿಗೂ ಮೋನಪ್ಪ ಪೂಜಾರಿಯವರಿಗೂ ಹಿಂದೆ ಗಡಿಪಟ್ಟವಾಗಿತ್ತು. ೧೯೭೭ ರಲ್ಲಿ ಬೋಗ್ರ ಪೂಜಾರಿಯವರು ತೀರಿಕೊಂಡರು. ಅವರ ಮೊಮ್ಮಗ ಶಿವ ಪ್ರಸಾದರು ೧೯೬೪ ರಲ್ಲಿ ಮುಂಬಯಿಲ್ಲಿ ಉದ್ಯೋಗ ನಿರತರಾಗಿದ್ದರು. ೧೯೮೮ ರಲ್ಲಿ ಇವರಿಗೆ ಊರಲ್ಲಿ ಬಂದು ನೆಲೆಸುವಂತೆ ಕನಸು ಬಿತ್ತು. ಅದೇ ಸಮಯದಲ್ಲಿ ಕುಟುಂಬದವರು ನೇಮಕ್ಕೆ.ಬರಬೇಕೆಂದು ಆಮಂತ್ರಿಸಿದರು. ಹಾಗೆ ಬಂದವರು ಇಲ್ಲೇ ನೆಲೆಸಿ ಈ.ಬರ್ಕೆ ಮನೆಯ ಜೀರ್ಣೋದ್ಧಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ದೈವಗಳ ಪೂಪೂಜನೆಯನ್ನು ಈಶ್ವರ ಪೂಜಾರಿಯವರು ನಿಷ್ಠೆಯಿಂದ ನೆರೆವೇರಿಸುತ್ತಿದ್ದಾರೆ.
ಮನೆಯ ಉತ್ತರ ಬದಿಯಲ್ಲಿ ಧರ್ಮರಸು ಕುಮಾರನ ಗುಡಿ ಇದೆ. ಅರಸು ದೈವ, ದೈವ ಕುಮಾರ, ಮೈಸಂದಾಯ, ಐವೆರ್ ಮಾಯೊಲು ಈ ಬರ್ಕೆ ಮನೆಯಲ್ಲಿ ಆರಾಧನೆಗೊಳ್ಳುತ್ತಿವೆ. ಇವು ಗ್ರಾಮದೈವಗಳಾಗಿದ್ದು ವಾರ್ಷಿಕವಾಗಿ ಭಂಡಾರ ಹೋಗಿ ನೇಮವಾಗುತ್ತದೆ. ಮಾಗಣೆಯ ಜೈನ ಮನೆತನದ ಲಾಡಿ ಗುತ್ತಿನಿಂದ ಕೊಡಮಂದಾಯ, ಅನ್ನೆರಬೆಟ್ಟು ಬರ್ಕೆಯಿಂದ ಬೈದೇರುಗಳ ಭಂಡಾರ ಮತ್ತು ಈ ಮಿತ್ತಲಾಡಿ ಬರ್ಕೆಯಿಂದ ಅರಸು, ಮೈಸಂದಾಯ ಮತ್ತು ದೈವಕುಮಾರ ಭಂಡಾರಹೊಗಿ ನೇಮ ನಡೆಯುತ್ತದೆ. ನಾವು ಭೇಟಿ ನೀಡಿದ್ದು ಸಂಕ್ರಮಣದ ದಿನವಾಗಿದ್ದರಿಂದ ಕುಟುಂಬದವರು, ಸಮೀಪದ ಊರ ಭಕ್ತರು ಪೂಜೆಯ ಕಾಲಕ್ಕೆ ಒಟ್ಟು ಸೇರಿದ್ದರು. ಬರ್ಕೆಯ ಚಾವಡಿಯಲ್ಲಿ ಕಾಲಾದ್ರಿ ದೈವದ ಕೋಣೆಇದೆ ಮತ್ತು ಸತ್ಯದೇವತೆಯ ಮಣೆಮಂಚ ಚಾವಡಿಯಲ್ಲೇ ಇದೆ. ಮನೆಯ ಆವರಣದ ಹೊರಗೆ ಪಂಜುರ್ಲಿ ದೈವದ ಗುಡಿ ಇದೆ. ಧರ್ಮರಸು ಕುಮಾರನಿಗೆ ಬೆಳ್ಳಿಯ ಬಿಲ್ಲು ಬಾಣ, ಕದಿರುಮುಡಿ ಮತ್ತು ಕೊಕ್ಕೆಚವಲ ಎಂಬ ವಿಶೇಷ ಅಭರಣಗಳಿವೆ.
ಹೊರಗಡೆ ಸಾರಲ ಜುಮಾದಿ, ಜುಮಾದಿ- ಬಂಟ, ಅಣ್ಣಪ್ಪ ಪಂಜುರ್ಲಿ, ಕುಟುಂಬದ ವರ್ತೆ ಪಂಜುರ್ಲಿ, ಪಶ್ಚಿಮದಲ್ಲಿ ಕುಪ್ಪೆಟ್ಟು ಪಂಜುರ್ಲಿ, ಹಿರಿಯಜ್ಜ, ಕುಪ್ಪೆಟ್ಟು ಕಲ್ಲುರ್ಟಿ ದೈವಗಳಿವೆ. ಮನೆಯ ಸಮೀಪದ ಕಟ್ಟೆಯಲ್ಲಿ ರಾವು ಗುಳಿಗ, ಪಿಲಿಚಾಮುಂಡಿ, ಗುಳಿಗ, ಜಟ್ಟಿಂಗ, ಮಯ್ಯಂತಿ, ಕೊರಗಜ್ಜ ಮತ್ತು ಜಾಗದ ಕಲ್ಲುರ್ಟಿ ದೈವಗಳಿವೆ. ಬಡಗಿ ದಿಕ್ಕಿನಲ್ಲಿ ಸ್ತೊಪದ ಕಲ್ಲುರ್ಟಿ ಇದೆ. ಹೀಗೆ ಮಿತ್ತಲಾಡಿ ಬರ್ಕೆಯು ಹಲವು ದೈವಗಳ ಸಮೂಹವೇ ಆಗಿದೆ. ಹಲಾಯಿಗುತ್ತಿನವರು ಈ ಬರ್ಕೆ ಮನೆಗೆ ಸಂಬಂಧ ಪಟ್ಟವರು.
ಅನೇಕ ಪ್ರಸಿದ್ಧ ನಾಟಿ ವೈದ್ಯರುಗಳು ಕುಟುಂಬದಲ್ಲಿ ಆಗಿ ಹೋಗಿದ್ದಾರೆ. ಈ ಮನೆಯ ಹಲವಾರು ಮಂದಿ ಶಿಕ್ಷಿತರಾಗಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಪ್ರೇಮಲತಾ ನರ್ಸಿಂಗ್ ಹೊಮ್ ನ ಪ್ರಾಂಶುಪಾಲರಾಗಿ ನಿವೃತ್ತರಾಗಿ ಈಗ ಮಕ್ಕಳೊಂದಿಗೆ ಇಂಗ್ಲೆಂಡಿನಲ್ಲಿದ್ದಾರೆ. ಲಲಿತ ಆರೋಗ್ಯ ಇಲಾಖೆಯಲ್ಲಿ ಕೆಲಸದಲ್ಲಿದ್ದು ಈಗ ನಿವೃತ್ತರಾಗಿದ್ದಾರೆ. ಶಾಂತ ಅವರು ಸ್ಟೇಟ್ ಬಾಂಕ್ ಉದ್ಯೋಗಿ. ಸೋಮವತಿ ಅವರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಅರುಣಾಚಲ.ನಕ್ರೆಯಲ್ಲಿ ಮೆಡಿಕಲ್ ಆಫಿಸರ್ ಆಗಿ ಕೆಲಸಮಾಡುತ್ತಿದ್ದಾರೆ. ಹೀಗೆ ಈ ಮನೆಯ ಸ್ತ್ರೀಯರು ಬಹಳ ಶಿಕ್ಷಿತರಾಗಿ ಉದ್ಯೊಗದಲ್ಲಿರುವುದು ಈ ಮನೆತನದ ಗೌರವವನ್ನು ಹೆಚ್ಚಿಸಿದೆ.
(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ.) -ಸಂಕೇತ್ ಪೂಜಾರಿ
0 comments: