ಶ್ರೀ ರಾಮ ಸೇವಾ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಫೆ.18ರಂದು ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿಯ ಮೈದಾನದಲ್ಲಿ ನಡೆಯಲಿರುವ ಸೀತಾರಾಮ ಕಲ್ಯಾಣೋತ್ಸವ ಹಾಗೂ ಗುರುವಂದನ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು ಅಂತಿಮ ಹಂತದ ತಯಾರಿ ಭರದಿಂದ ಸಾಗುತ್ತಿದೆ.
ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕಾರ್ಯಕ್ರಮದ ದಿನ ಸಮೀಪಿಸುತ್ತಿದ್ದಂತೆಯೇ ಸ್ವಯಂ ಪ್ರೇರಿತರಾಗಿ ಭಕ್ತರು ಶ್ರೀರಾಮನ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಎಲ್ಲಾ ಕೆಲಸಗಳು ಚರುಕು ಪಡೆದುಕೊಂಡಿದೆ. ಗ್ರಾಮ ಸಮಿತಿಗಳ ಪ್ರಮುಖರು ಗ್ರಾಮದ ಪ್ರತಿ ಮನೆಗಳಿಗೂ ತೆರಳಿ ಆಮಂತ್ರಣ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಗುರುವಾರವೂ ತಾಲೂಕು ಸಮಿತಿಯಿಂದ ಹೆಚ್ಚುವರಿ ಆಮಂತ್ರಣಗಳನ್ನು ಪಡೆದು ಗ್ರಾಮೀಣ ಭಾಗಗಳಲ್ಲಿ ಮನೆ ಮನೆಗಳಿಗೆ ತಲುಪಿಸುವ ಕಾರ್ಯ ನಡೆಸಿದ್ದಾರೆ.
ತಾಲೂಕಿನ ಎಲ್ಲಾ ಗ್ರಾಮಗಳಿಂದಲೂ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಬೇಕೆನ್ನುವ ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಶಯ ಹಾಗೂ ಬಂಟ್ವಾಳ ಶ್ರೀ ರಾಮ ಸೇವಾ ಸಮಿತಿಯ ಸಂಕಲ್ಪದಂತೆ ಪ್ರತೀ ಗ್ರಾಮಗಳಿಂದಲೂ ಭಕ್ತರು ಆಗಮಿಸಲು ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ. 15 ಸಾವಿರಕ್ಕಿಂತಲೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಮೂಡಿದೆ.
ಸಭಾ ಕಾರ್ಯಕ್ರಮ ನಡೆಯುವ ಮೈದಾನದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣಗೊಳ್ಳುತ್ತಿದೆ. ಬಿ.ಸಿ.ರೋಡು ಸೇರಿದಂತೆ ತಾಲೂಕಿನ ಪ್ರತೀ ಜಂಕ್ಷನ್‌ಗಳಲ್ಲೂ ಸೀತಾರಾಮ ಕಲ್ಯಾಣೋತ್ಸವದ ಬ್ಯಾನರ್‌ಗಳು ರಾರಾಜಿಸುತ್ತಿದ್ದು ಭಕ್ತ ಜನರ ಗಮನ ಸೆಳೆಯುತ್ತಿದೆ. ಕೇಸರಿ ಭಾಗವಧ್ವಜದಡಿ ಹಿಂದೂ ಧರ್ಮದ ಎಲ್ಲಾ ಜಾತಿ, ಪಂಗಡಗಳ ಕೂಡುವಿಕೆಯೊಂದಿಗೆ ಸೀತಾರಾಮ ಕಲ್ಯಾಣೋತ್ಸವ ನೆರವೇರಲಿದೆ.
0 comments: