ಏದೊಟ್ಟು ಬರ್ಕೆ ಮನೆಯು ಬಿಲ್ಲವರ ಪ್ರಸಿದ್ಧ ಮನೆತನಗಳಲ್ಲಿ ಒಂದಾಗಿದ್ದು ತನ್ನದೇ ಆದ ವಿಶೇಷತೆಗಳನ್ನು ಒಳಗೊಂಡಿದೆ. ಹಿಂದೆ ಸುತ್ತು ಪೌಳಿಯ ಬೃಹತ್ ಗಾತ್ರದ ಮನೆಯಾಗಿತ್ತು. ಈಗ ಉಪ್ಪರಿಗೆಯ ಚಾವಡಿ ಮತ್ತು ಚಾವಡಿಯ ಬಲಭಾಗ ಮಾತ್ರ ಉಳಿದಿದೆ. ಎಲ್ ಆಕಾರದಲ್ಲಿರುವ ಈ ಮನೆಯೂ ತನ್ನ ಗಾಂಬೀರ್ಯವನ್ನು ಉಳಿಸಿಕೊಂಡಿದೆ. ಮನೆಯ ಮುಂದೆ ವಿಶಾಲವಾದ ಹಚ್ಚ ಹಸಿರಿನಿಂದ ಕೂಡಿದ ಬಾಕಿಮಾರು ಗದ್ದೆಯಿದ್ದು ಮೆಟ್ಟಿಲುಗಳನ್ನು ಇಳಿದು ಹೊಗಬೇಕು. ಗದ್ದೆಯಿಂದ ನೋಡುವಾಗ ಈ ಮನೆಯು ತುಳುನಾಡಿನ ಪ್ರಾಚೀನ ಅರಮನೆಯಂತೆ ಗೋಚರಿಸುತ್ತದೆ. ಮನೆಯ ಚಾವಡಿಯೊಳಗೆ ಬೃಹತ್ ಗಾತ್ರದ ಬೋದಿಗೆ ಕಂಬಗಳಿವೆ. ಉಪ್ಪರಿಗೆಯಲ್ಲಿರುವ ಕಾಪುದ ಕಂಡಿಯು ಚಿತ್ತಾಕರ್ಷಕವಾಗಿದೆ. ಉಪ್ಪರಿಗೆ ಕೋಣೆಯು ಬಹುವಿಶಾಲವಾಗಿದೆ. ಇದು ಸುವರ್ಣ ಬಳಿಯವರಿಗೆ ಸೇರಿದ ಮೂಲಸ್ಥಾನ.
ಸುಮಾರು 100 ಎಕ್ರೆಯಷ್ಟು ಆಸ್ತಿಯನ್ನು ಈ ಮನೆತನ ಹೊಂದಿತ್ತು. ಪ್ರಸ್ತುತ 32 ಎಕ್ರೆ ಭೂಮಿ ಮನೆತನದ ಕೈವಶದಲ್ಲಿದೆ. ಇಲ್ಲಿ ಮೂರ್ತೆದಾರಿಕೆ ಮತ್ತು ಬೆಲ್ಲತಯಾರಿಕೆ ನಡೆಸುತ್ತಿದ್ದರು. ಒಕ್ಕಲು ಮನೆಗಳಿದ್ದವು. ಈ ಮನೆಯಲ್ಲಿ ಗಂಗಣ ಪೂಜಾರಿ, ಚಿಕ್ಕಯ ಪೂಜಾರಿ, ಮಂಜಪ್ಪ ಪೂಜಾರಿ, ಮೆನ್ಪ ಪೂಜಾರಿ, ಚಂದಯ ಪೂಜಾರಿ, ಬಾಬು ಪೂಜಾರಿ ರಾಮಪ್ಪ ಪೂಜಾರಿ ಮುಂತಾದವರು ಪ್ರಸಿದ್ದರಾಗಿ ಬಾಳಿದವರು. ಇವರಲ್ಲಿ ಕೆಲವರಿಗೆ ಗಡಿ ಪಟ್ಟವಾಗಿತ್ತು. ಗ್ರಾಮದ ಗರಡಿಯಲ್ಲಿ ಕೋಟಿ ಬೈದ್ಯರಿಗೆ ಪಾತ್ರಿಯಾಗಿ ಈ ಮನೆಯವರು ನಿಲ್ಲುತ್ತಾರೆ. ಹಿಂದೆ ಶೇಖರ ಪೂಜಾರಿಯವರು ಪಾತ್ರಿಯಾಗಿದ್ದರು. ಈಗ ಸುನೀಲ್ ಎಂಬುವರು ಪಾತ್ರಿಯಾಗಿದ್ದಾರೆ. ಏದೊಟ್ಟು ಬರ್ಕೆಯ ಚಾವಡಿಯಲ್ಲಿ ಊರಿನ ನ್ಯಾಯ ತೀರ್ಮಾನಗಳು ನಡೆಯುತ್ತಿದ್ದವು. ಇದು ಊರಿನ ಗ್ರಾಮ ಚಾವಡಿ ಎಂದು ಕರೆಸಿಕೊಂಡಿತ್ತು. ಚಿಕ್ಕಯ್ಯ ಪೂಜಾರಿಯವರ ಕಾಲದಲ್ಲಿ ಅನೇಕ ನ್ಯಾಯ ತೀರ್ಮಾನಗಳು ಈ ಮನೆಯಲ್ಲಿ ನಡೆದಿವೆ.
ಈ ಮನೆಯ ಎದುರುಗಡೆ ಇರುವ ಗದ್ದೆಯನ್ನು ಬೈದೆರ್ಲೆ ಬಾಕ್ಯಾರ್ ಎಂದೂ ಕರೆಯುತ್ತಾರೆ. ಇದರ ಆಚೆಗಿನ ಭೂಮಿಯನ್ನು ಇಲ್ಲಿನ ಜೈನರಸು ಅವರ ಕಾಯಿಲೆಯನ್ನು ಏದೊಟ್ಟು ಮನೆಯವರು ಗುಣ ಪಡಿಸಿದ್ದಕ್ಕಾಗಿ ಬಹುಮಾನವಾಗಿ ನೀಡಿದರಂತೆ. ಗ್ರಾಮದ ವಿಠಲ ಸೋಮನಾಥೇಶ್ವರ ಮತ್ತು ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ ಈ ಮನೆತನಕ್ಕೆ ವಿಶೇಷ ಗೌರವಗಳಿವೆ. ಇದು ಕೊನ್ನಾರ ಮಾಗಣೆಗೆ ಸೇರಿದ ಎರಡನೇ ಗುರಿಕಾರ ಮನೆ. ಈ ಮನೆಯ ಕುಟುಂಬದಲ್ಲಿ ಒಟ್ಟು 300 ಜನ ಸದಸ್ಯರಿದ್ದಾರೆ. ಹಿಂದೆ ಕೂಡು ಕುಟುಂಬವಿದ್ದಾಗ 40 ಕ್ಕೂ ಹೆಚ್ಚು ಜನ ವಾಸವಿದ್ದರು. ಸುಮಾರು 350 ವರ್ಷಗಳ ಇತಿಹಾಸ ಈ ಮನೆತನಕ್ಕೆ ಇದೆ. ಈ ಮನೆತನಕ್ಕೆ ಸಂಬಂಧಿಸಿದ ಮಮ್ಮಾಯಿ ಗುಡಿಯು ಮನೆಗೆ ಹೋಗುವ ಪ್ರಮುಖ ದಾರಿಯ ಪಕ್ಕದಲ್ಲಿ ಇದೆ.
ಇದನ್ನು ಏದೊಟ್ಟು ಗೊಂದೋಳು ಕಟ್ಟೆ ಎಂದು ಕರೆಯುತ್ತಾರೆ. ಇದಕ್ಕೆ ಕಮಿಟಿ ರಚನೆಯಾಗಿದ್ದು ಮೂಲ ಮರ್ಯಾದೆ ಏದೊಟ್ಟು ಮನೆಗೆ ಸಲ್ಲುತ್ತದೆ. ಏದೊಟ್ಟು ಬರ್ಕೆ ಮನೆ ಮತ್ತು ಹೆಟ್ಲೊಟ್ಟು ಬರ್ಕೆ ಮನೆಗಳು ವೈದ್ಯ ವೃತ್ತಿಯಲ್ಲಿ ಪರಿಣಿತರಾದ ಬೈದ್ಯರ ಮೂಲ ಮನೆಗಳೆಂದು ಕೆಲ್ಲಪುತ್ತಿಗೆ ವರ್ಧಮಾನ ಜೈನ್ ಅವರು ಸಂಪಾದಿಸಿರುವ "ಕೆಲ್ಲಪುತ್ತಿಗೆ ಮಾರ್ನಾಡು" ಎಂಬ ಕೃತಿಯಲ್ಲಿ ಉಲ್ಲೇಖವಿದೆ. ಈ ಕೃತಿಯಲ್ಲಿ ಈ ಮನೆತನದ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಗ್ರಾಮ ಚಾವಡಿಯಾಗಿದ್ದ ಈ ಮನೆಗೆ ಜನರು ಬರುತ್ತಿದ್ದ ವೇಳೆಗೆ ಅವರಿಗೆ ಕೈಕಾಲು ತೊಳೆಯಲು ನಿರ್ಮಿಸಿದ ಕಲ್ಲಿನ ಬೃಹತ್ ಪಾತ್ರೆ ಈಗಲೂ ಇಲ್ಲಿ ನೋಡಬಹುದು. ಇಲ್ಲಿ ರೆಂಜಾಳ ಮಲೆ ಕೆಲ್ಲಪುತ್ತಿಗೆ ಮಲೆಗಳು ಹಿಂದೆ ಗೋಮಾಳಗಳಾಗಿದ್ದ ಸಂದರ್ಭದಲ್ಲಿ ಇಲ್ಲಿಗೆ ವ್ಯಾಪಾರ ನಿಮಿತ್ತ ಮತ್ತು ಮಂಗಳೂರು ಕಡೆಗೆ ಸಾಗುತ್ತಿದ್ದ ಸುಮಾರು 60 ಜತೆ ಗಾಡಿ ಎತ್ತುಗಳನ್ನು ಹಿಂದೆ ಹುಲ್ಲುಗಾವಲಾಗಿದ್ದ ಮಲೆಗಳಲ್ಲಿ ಮೇಯಲು ಬಿಡುತ್ತಿದ್ದರು. ಮೇಯಲು ಬಿಟ್ಟು ಏದೊಟ್ಟು ಬರ್ಕೆ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರಂತೆ.
ನಂತರ ಮರುದಿನ ಬೆಳಗ್ಗೆ ಪ್ರಯಾಣ ಬೆಳೆಸುತ್ತಿದ್ದರಂತೆ. ಏದೊಟ್ಟಿನಲ್ಲಿ ಗಾಡಿ ಕೊಟ್ಯವಿತ್ತು. ಇದು ಸಂಜೆಯ ವಿಶ್ರಾಂತಿಗೆ ಮಾಡಿದ ಕೊಟ್ಯವಾಗಿತ್ತು. ಏದೊಟ್ಟು ಮನೆತನಕ್ಕೆ ಸಂಬಂಧಿಸಿದ ಗೊಂದೋಳು ಕಟ್ಟೆಯ ಜವಾಬ್ಧಾರಿಯನ್ನು ಹಿಂದೆ ಏದೊಟ್ಟು ಮನೆಯ ಶ್ರೀಯುತ ದಿ| ರಾಮಪ್ಪ ಪೂಜಾರಿಯವರು ವಹಿಸಿಕೊಂಡಿದ್ದರು ಮತ್ತು ಊರಿನವರ ಸಹಕಾರದಿಂದ ಇಲ್ಲಿ ಉತ್ಸವ ನಡೆಸುತ್ತಿದ್ದರು. ಏದೊಟ್ಟು ಬರ್ಕೆಯಲ್ಲಿ ಬಾಮದ ಮಂಚವಿದೆ. ಇದರಲ್ಲಿ ಕೋಟಿ ಬೈದ್ಯರ ಮೂರ್ತಿಯನ್ನು ಇಟ್ಟು ಸಂಕ್ರಮಣ ಪೂಜೆ ಮಾಡಲಾಗುತ್ತದೆ. ಇಲ್ಲಿ ಹಿಂದೆ ಧರ್ಮನೇಮ ಸಂದಾಯವಾಗಿತ್ತು. ಈ ಬರ್ಕೆಯಲ್ಲಿ ಮೈಸಂದಾಯ, ಲೆಕ್ಕೇಸಿರಿ, ಪಂಜುರ್ಲಿ, ಕೋಟಿ ಬೈದ್ಯರು, ಕಲ್ಲುರ್ಟಿ ಕಲ್ಕುಡ, ವರ್ತೆ ಪಂಜುರ್ಲಿ, ಪಿಲಿಚಾಮುಂಡಿ, ವರ್ತೆ ಪಂಜುರ್ಲಿ, ಮಹಮ್ಮಾಯಿ, ಗುಳಿಗ, ಚಾಮುಂಡಿ ಗುಳಿಗ, ಜಟ್ಟಿಂಗ ಮತ್ತು ಮನೆತನದ ಹಿಂದಿನ ದರ್ಶನ ಪಾತ್ರಿ ಅಂದರೆ ಮುಕ್ಕಾಲ್ದಿಯ ಮೂರ್ತಿ ಇದೆ.
(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) ಸಹಕಾರ- Prashanth Salian Shailu Birwa Agathady Barke
0 comments: