ಬಂಟ್ವಾಳ ತಾಲೂಕಿನ ಬಿ.ಸಿ ರೋಡು ಬೈಪಾಸು ರಸ್ತೆಯ ನಾರಾಯಣ ಗುರು ಮಂದಿರದ ಎದುರುಗಡೆ ಇರುವ ಗಾಣದಪಡ್ಪು ಗುರಿಕಾರ ಮನೆಯು ಸುಮಾರು ೬೦೦ ವರ್ಷಗಳ ಹಿಂದೆ ಬಹಳ ಪ್ರಸಿದ್ಧವಾದ ಬಿಲ್ಲವರ ಕುಟುಂಬವಾಗಿದೆ. ಹಿಂದೆ ಇದ್ದ ಮನೆಯ ಸ್ವರೂಪದಲ್ಲಿಯೇ ಬಹಳ ದೊಡ್ಡದಾದ ಎರಡು ಅಂತಸ್ತಿನ ಸುಂದರವಾದ ಗುತ್ತಿನ ಮನೆಯ ಶೈಲಿಯಂತೆ ಹೊಸ ಮನೆಯನ್ನು ನಿರ್ಮಿಸಿದ್ದಾರೆ. ಮನೆಯ ಒಳಗೆ ಬೃಹತ್ ಗಾತ್ರದ ಬೋಧಿಗೆ ಕಂಬಗಳಿದ್ದು ಇದರ ಕೆತ್ತನೆ ಬಹಳ ಸುಂದರವಾಗಿದೆ. ಇದು ಪುರಾತನ ಕಂಬವಾಗಿದ್ದು ನವೀಕರಣ ಸಂದರ್ಭದಲ್ಲಿ ಇದೇ ಕಂಬವನ್ನು ಚಾವಡಿಯಲ್ಲಿ ಇಡಬೇಕೆಂದು ಪ್ರಶ್ನೆಯಲ್ಲಿ ತೋರಿ ಬಂದ ಕಾರಣ ಈ ಕಂಬಗಳು ಉಳಿದುಕೊಂಡಿದುದಲ್ಲದೆ ಚಾವಡಿಗೆ ರಾಜ ಗಾಂಭೀರ್ಯವನ್ನು ತಂದು ಕೊಟ್ಟಿದೆ.
ಇದುಬಂಗೇರ ಬಳಿಯವರ ಮೂಲಸ್ಥಾನವಾಗಿದ್ದು ಈ ಮನೆತನದವರು ಬಹಳ ವರ್ಷಗಳ ಹಿಂದೆಯೇ ವರ್ಗ ಜಮೀನ್ದಾರರಾಗಿದ್ದರು. ಇವರು ಕೃಷಿಕರು, ದೈವ ಭಕ್ತರೂ ಆಗಿದ್ದರು. ಹಿಂದೆ ಬಿಲ್ಲವ ಹೆಂಗಸರು ರವಿಕೆ ಹಾಕಬಾರದೆಂಬ ನಿಯಮವನ್ನು ಮೇಲ್ವರ್ಗದವರೆನಿಸಿಕೊಂಡವರು ಆಚರಣೆಗೆ ತಂದಿದ್ದರು. ಈ ಕೆಟ್ಟ ಸಂಪ್ರದಾಯವನ್ನು ಈ ಭಾಗದಲ್ಲಿ ಮುರಿದ ಇಬ್ಬರು ಶೂರರು ಈ ಕುಟುಂಬದವರು. ತಮ್ಮ ಮನೆಯ ಹೆಂಗಸರಿಗೆ ರವಿಕೆ ತೊಡಿಸಿದ್ದಲ್ಲದೆ ಇತರ ಸಮಾಜದ ಹೆಂಗಸರಿಗೆ ರವಿಕೆಯನ್ನು ತೊಡುವರೆ ರಕ್ಷಣೆ ನೀಡಿದ ಕುಟುಂಬ ಇದಾಗಿದೆ. ಈ ಕುಟುಂಬದ ಹಿರಿಯಳಾದ ತಿರುಮಲೆ ಎಂಬ ಮಹಿಳೆ ಕುಟುಂಬದ ಯಜಮಾನಿಯಾಗಿದ್ದಾಗ ತಿರುಪತಿಗೆ ಹಂದಿನೆಂಟು ಬಾರಿ ಕಾಲ್ನಡಿಗೆಯಲ್ಲಿ ಹೋಗಿ ಮುಡಿಪು ಒಪ್ಪಿಸಿದ್ದಾರಂತೆ.
ವಾಹನ ಸೌಕರ್ಯವಿಲ್ಲದ ಆ ಕಾಲದಲ್ಲಿ ಹದಿನೆಂಟು ಬಾರಿ ಕಾಲ್ನಡಿಗೆಯಲ್ಲಿ ಹೋದರೆಂದರೆ ಅವರ ಭಕ್ತಿಯನ್ನು ಗುರುತಿಸಬಹುದು. ತಿರುಪತಿಯಲ್ಲಿ ಪ್ರತೀ ವರ್ಷ ಈ ಕುಟುಂಬದ ಹೆಸರಿನಲ್ಲಿ ಪೂಜೆ ನಡೆಯುವರೆ ಆ ಕಾಲದಲ್ಲಿ ಹಣ ಕಟ್ಟಿದ್ದಾರೆಂದು ಹಿರಿಯರು ಹೇಳುತ್ತಾರೆ. ಹದಿನೆಂಟನೇ ಬಾರಿ ತಿರುಮಲೆಯವರು ತಿರುಪತಿಗೆ ಹೋದಾಗ ತಿರುಪತಿ ದೇವಸ್ಥಾನದವರು ನೀವು ಇನ್ನು ಇಲ್ಲಿಗೆ ಬರಬೇಕಾಗಿಲ್ಲ ನೀವು ನಿಮ್ಮ ಮನೆಯಲ್ಲೇ ವೆಂಕಟರಮಣ ದೇವರನ್ನು ಆರಾಧಿಸಿ ಎಂದು ಹೇಳಿ ವೆಂಕಟರಮಣ ದೇವರ ಮೂರ್ತಿ ಮತ್ತು ಬೆತ್ತವನ್ನು ಕೊಟ್ಟರಂತೆ. ಅದರಂತೆ ದೇವರ ಮೂರ್ತಿಯನ್ನು ಬೆತ್ತವನ್ನು ತಂದು ಮನೆಯಲ್ಲಿ ಆರಾಧಿಸಲು ತೊಡಗಿದರು. ಈ ವಿಷಯ ತಿಳಿದ ಗೌಡ ಸಾರಸ್ವತ ಬ್ರಾಹ್ಮಣರು ಈ ಮನೆಗೆ ಬಂದು ಆ ಮೂರ್ತಿಯನ್ನು ನಮಗೆ ಕೊಡಿ ಬೆತ್ತವನ್ನು ನೀವು ಆರಾಧಿಸಿ ಎಂದು ಕೇಳಿದರಂತೆ. ಅದಕ್ಕೆ ತಿರುಮಲೆಯು ನನ್ನ ಹೆಸರು ಕೊನೆಯ ಕಾಲದವರೆಗೂ ಉಳಿಯುವಂತೆ ಮಾಡಬೇಕು ನಾನು ಮೂರ್ತಿಯನ್ನು ಕೊಡುತ್ತೇನೆ ಎಂದರಂತೆ.
ಅದರಂತೆ ಅವರು ಸರಿ ನಾವು ತಿರುಮಲೆ ವೆಂಕಟರಮಣ ದೇವರನ್ನು ಆರಾಧಸಿತ್ತೇವೆ ಎಂದರಂತೆ. ದೇವರ ಪ್ರೇರಣೆಯಿಂದ ಎಂಬಂತೆ ಮೂಲ ಮೂರ್ತಿ ಗೌಡ ಸಾರಸ್ವತರ ಪಾಲಾಯಿತು. ಮುಂದೆ ಅವರು ತಿರುಮಲೆ ವೆಂಕಟರಮಣ ದೇವಸ್ಥಾನ ಕಟ್ಟಿ ಆರಾಸಧಿಸಿದರೆಂದು ಹಿರಿಯರ ಅಂಬೋಣ. ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯ ಇದೆ. ತದನಂತರ ತಿರುಮಲೆ ಮನೆಯ ಮುಂದುಗಡೆ ಪ್ರತ್ಯೇಕವಾಗಿ ದೇವಸ್ಥಾನವನ್ನು ಕಟ್ಟಿ ಬೆತ್ತವನ್ನು ಇಟ್ಟು ಆರಾಧಿಸಿದರು.
ಕಾಲಾಂತರದಲ್ಲಿ ತೋರಿಬಂದಂತೆ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬೆತ್ತದೊಂದಿಗೆ ಆರಾಧಿಸಲಾಗುತ್ತಿದೆ. ಪ್ರಾರಂಭದಲ್ಲಿ ದಾಸಯ್ಯ ಎಂಬ ಜಾತಿಯವರು ಬಂದು ಅರ್ಸಾಯ( ಹರ್ಷಾಯ) ಮತ್ತು ಪೂಜೆ ಮಾಡುತ್ತಿದ್ದರು. ನಂತರ ಕುಟುಂಬದ ಹಿರಿಯರೇ ಮಾಡತೊಡಗಿದರು. ಹಿಂದಿನ ಕಾಲದಲ್ಲಿ ಬಹಳ ದೊಡ್ಡ ಮನೆಯನ್ನು ಈ ಕುಟುಂಬ ಹೊಂದಿತ್ತು. ಬೈಪಾಸು ರಸ್ತೆಯಲ್ಲಿ ಇದರ ಒಂದು ಭಾಗ ಹರಡಿಕೊಂಡಿತ್ತು. ರಸ್ತೆಯಾಗುವ ಸಂದರ್ಭದಲ್ಲಿ ಮನೆ ನಾಶವಾಯಿತು. ಆಪಾರ ಆಸ್ತಿಯನ್ನು ಹೊಂದಿದ್ದ ಈ ಮನೆತನ ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ೧೦ ಸೆಂಟ್ಸ್ ಸ್ಥಳವನ್ನು ದಾನ ಮಾಡಿದೆ. ಈ ಕುಟುಂಬದ ನರ್ಸಪ್ಪ ಬಂಗೇರರ ಕಾಲದಲ್ಲಿ ಈ ಕ್ಷೇತ್ರ ಜೀರ್ಣೋದ್ಧಾರಗೊಂಡು, ಗೋಪುರ ನಿರ್ಮಾಣವಾಗಿದೆ. ಇಂದು ಕೂಡ ಬಿಲ್ಲವರ ಹೆಮ್ಮೆಯ ಕ್ರ್ಷೇತ್ರ ಇದಾಗಿದೆ.
ಈ ಮನೆಯು ಮೂಡ ಗ್ರಾಮದ ಬಿಲ್ಲವರ ಜಾತಿಯಲ್ಲಿ ಮೂರನೇ ಗುರಿಕಾರ ಮನೆಯಾಗಿದೆ. ಗ್ರಾಮದ ಶುಭ ಕಾರ್ಯಕ್ರಮಗಳಿಗೆ ಇಲ್ಲಿ ವಿಶೇಷ ಹೇಳಿಕೆ ಇದೆ. ಮನೆಯ ಚಾವಡಿಯಲ್ಲಿ ಜುಮಾದಿ ಬಂಟ ದೈವಗಳ ಮೊಗ ಮೂರ್ತಿ ಇದೆ. ಬಲ ಭಾಗದಲ್ಲಿ ಸತ್ಯಜಾವದೆ, ಒಳಗಡೆ ಕೋಣೆಯಲ್ಲಿ ಕಲ್ಲುರ್ಟಿ ಪಂಜುರ್ಲಿ ಮತ್ತು ಹೊರಗಡೆ ರಾವು- ಗುಳಿಗ, ಮಂತ್ರಜಾವದೆ ಮತ್ತು ಮುಂಡೆ ಬ್ರಾಂದಿ ಎಂಬ ದೈವಗಳಿವೆ.
ಮೂಡ ಗ್ರಾಮದ ಪಂಜುರ್ಲಿ ದೈವಸ್ಥಾನದಲ್ಲಿ ಮತ್ತು ಬಂಟ್ವಾಳ ನಂದನ ಬಿತ್ತಿಲಿನ ವೈದ್ಯನಾಥ ಜುಮಾದಿ ಬಂಟ ದೈವಸ್ಥಾನದಲ್ಲಿ ಈ ಮನೆತನಕ್ಕೆ ಗೌರವದ ಕರೆ ಇದ್ದು ದೈವವು ಈ ಮನೆತನದವರನ್ನು ತ್ಯಾಂಪ ಸಂಸಾರವೆಂದು ಕರೆಯುತ್ತದೆ. ಇವರಿಗೆ ಈ ದೈವಗಳ ನೇಮದಂದು ದೈವದ ಒಲಸರಿಗೆ ದರಿ ಹಾಕುವ ಗೌರವವಿದೆ ಹಾಗು ಪಂಜುರ್ಲಿ ದೈವದ ಒಂದು ದಿನದ ನೇಮಕ್ಕೆ ಈ ಮನೆತನದಿಂದ ತೆಂಗಿನ ತಿರಿ ಕೊಡುವ ಸಂಪ್ರದಾಯ ಹಿಂದಿನಿಂದಲೂ ಬಂದುದಾಗಿದೆ. ಗಾಣದ ಪಡ್ಪು ಮನೆಯು ಹಿಂದೆ ಗುತ್ತಿನ ಮನೆಯ ವೈಭವದಲ್ಲಿ ಮೆರೆದ ಬಗ್ಗೆ ಸಂಶಯುಂಟಾಗುತ್ತದೆ. ಯಾಕೆಂದರೆ ಈ ಮಾಗಣೆಯಲ್ಲಿ ೧೬ ಗುತ್ತುಗಳಿದ್ದು ಕನಪಾಡಿತ್ತಾಯ ದೈವಕ್ಕೆ ಸಂಬಂಧಿಸಿದ್ದಾಗಿದೆ. ಆದರೆ ೧೯೩೬ ರಲ್ಲಿ ಗಣಪತಿರಾವ್ ಐಗಳ್ ರ "ದಕ್ಷಿಣ ಕನ್ನಡ ಪ್ರಾಚೀನ ಇತಿಹಾಸ" ಎಂಬ ಸಂಶೋಧನ ಗ್ರಂಥದಲ್ಲಿ ಪುಟ ೨೫೭ರಲ್ಲಿ ಪೆರೊಡಿ ಬಲ್ಲಾಳರ ಆಳ್ವಿಕೆಯ ಈ ಮಾಗಣೆಯ ಗುತ್ತುಗಳಲ್ಲಿ ೧೬ ಗುತ್ತುಗಳ ಎಲ್ಲಾ ಹೆಸರನ್ನು ಸೇರಿಸದೆ ಕೆಲವು ಗುತ್ತುಗಳನ್ನು ಮಾತ್ರ ಸೇರಿಸಲಾಗಿದ್ದು ಅದರಲ್ಲಿ ಗಾಣದ ಪಡ್ಪು ಹೆಸರು ಉಲ್ಲೇಖವಾಗಿದೆ. ಇದು ಒಂದು ಕಾರಣವಾದರೆ ಎರಡನೆಯದು ಈ ಮನೆಯ ಅಷ್ಠಮಂಗಳ ಪ್ರಶ್ನೆಯಲ್ಲಿ ಜುಮಾದಿಯು ಗಾಣದ ಪಡ್ಪು ಗುತ್ತಿನ ಪ್ರಧಾನ ದೈವವಾಗಿದೆ ಎಂದು ತೋರಿ ಬಂದಿದೆ.
ಹಾಗೆ ಇಲ್ಲಿನ ಬೃಹತ್ ಗಾತ್ರದ ಬೋಧಿಗೆ ಕಂಬಗಳು ಇದು ಗುತ್ತಿನ ಮನೆಯಾಗಿರಬಹುದು ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಯಾವುದೊ ಕಾಲದಲ್ಲಿ ಗುತ್ತಿನ ಮನೆಯಾಗಿರಬಹುದಾಗಿದ್ದ ಈ ಮನೆತನ ಕೆಲವು ಕಾರಣಗಳಿಂದ ಗುರಿಕಾರ ಮನೆಯಾಗಿ ಪರಿವರ್ತನೆ ಯಾಗಿರುವ ಸಾಧ್ಯತೆ ಇರಬಹುದು.ಇದರ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಎಷ್ಟೊ ಬಿಲ್ಲವರ ಗುತ್ತುಮನೆತನಗಳು ಅಭಿಮಾನದ ಕೊರತೆ ಮತ್ತು ಮೇಲ್ವರ್ಗದವರೆಂದೆನಿಸಿ ಕೊಂಡವರ ಪ್ರಭಾವದಿಂದ ಗುತ್ತಿನ ಅಂತಸ್ತನ್ನು ಕಳೆದುಕೊಂಡು ಕೇವಲ ಗುರಿಕಾರ ಮನೆ ಅಥವ ಬರ್ಕೆ ಮನೆತನಗಳಾಗಿ ಪರಿವರ್ತನೆಗೊಂಡಿದ್ದು ನಮ್ಮ ಅಧ್ಯಯನದ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ. ಗಾಣದಪಡ್ಪು ಸದ್ಯ ಗುರಿಕಾರ ಮನೆಯೆಂದೇ ಪ್ರಸಿದ್ಧವಾಗಿದೆ. (ಮಾಹಿತಿ : ಪೆಲತ್ತಿಮಾರು ಸಂಜೀವ ಪೂಜಾರಿ) (ಆಕರ- ಬಂಟ್ವಾಳದಲ್ಲಿ ಬಿಲ್ಲವರ ಧಾರ್ಮಿಕ ಕ್ಷೇತ್ರಗಳು. -ಬಿ. ತಮ್ಮಯ್ಯ ( ಬಿರ್ವೆರೆ ತುಡರ್- ಸ್ಮರಣ ಸಂಚಿಕೆ). ಸಂಕೇತ್ ಪೂಜಾರಿ.
0 comments: