Saturday, February 10, 2018

ಬಿಲ್ಲವರ ಗುತ್ತು ಮತ್ತು ಐತಿಹಾಸಿಕ ಮನೆತನಗಳು ( ಕಿಲ್ಲೂರು ಮೇಗಿನ ಮನೆ)

ತುಳುನಾಡಿನಲ್ಲಿ ಅರಮನೆ, ಬೀಡು, ಗುತ್ತು, ಬರ್ಕೆ, ಬಾವ, ಮಾಗಂದಡಿ, ಪರಾರಿ, ಮಿತ್ತ ಇಲ್ಲ್, ತಿರ್ತ ಇಲ್ಲ್, ಚಾವಡಿ ಮನೆ, ದೊಡ್ಡ ಮನೆ/ ನೇಲ್ಯ, ನಟ್ಟಿಲ್ಲು, ಭಂಡಾರ ಮನೆ ಇವೆಲ್ಲಾ ಗ್ರಾಮದ ಪ್ರತಿಷ್ಠಿತ ಮನೆತನಗಳ ವಿವಿಧ ಪ್ರಕಾರಗಳು. ಮೇಗಿನ ಮನೆ ಎಂದರೆ ಮೇಲಿನ ಮನೆ. ಪ್ರಾದೇಶಿಕ ನೆಲೆಗಟ್ಟಿನಲ್ಲಿ ಈ ಹೆಸರು ಬಂದಿದ್ದರೂ ಕೂಡ ಇದು ಅಯಾ ಮನೆತನದ ಗೌರವದ ಸಂಕೇತವೆಂದರೂ ತಪ್ಪಾಗಲಾರದು.

ಮಂಗಳೂರು ತಾಲೂಕಿನ ಪಾವೂರು ಗ್ರಾಮದ ಕಿಲ್ಲೂರು ಲಕ್ಕೆದ ಕೋಡಿ ಪ್ರದೇಶದಲ್ಲಿ ಹಚ್ಚ ಹಸುರಾಗಿ ಬೆಳೆದು ನಿಂತಿ ಗುಡ್ಡ ಕಾಡು, ತೆಂಗು ಕಂಗುಗಳ ಸೊಬಗಿನ ಮಧ್ಯೆ ಕಂಗೊಳಿಸುತ್ತಿರುವ ಕಿಲ್ಲೂರು ಮೇಗಿನ ಮನೆ ಗ್ರಾಮದ ಬಿಲ್ಲವರ ಜಾತಿಯಲ್ಲಿ ಒಂದನೇ ಗುರಿಕಾರ ಮನೆಯಾಗಿದ್ದು ಸುಮಾರು 5೦೦ ವರ್ಷಗಳ ಇತಿಹಾಸವುಳ್ಳ ಪ್ರತಿಷ್ಠಿತ ಮನೆತನ. ಅಂಚನ್ ಬಳಿಗೆ ಸೇರಿದ ಈ ಮನೆತನವು ಬಹಳ ವರ್ಷಗಳಿಂದ ಅಜೀರ್ಣಾವಸ್ಥೆಯಲ್ಲಿತ್ತು.

ಈಗ ಮನೆಯು ಕುಟುಂಬಿಕರ ಸಹಕಾರದಿಂದ ಸುಮಾರು 60 ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ನವೀಕರಣಗೊಂಡು ಗೃಹ‌ಪ್ರವೇಶೋತ್ಸವದ ಸಂಭ್ರಮದಲ್ಲಿದೆ. ಈ ಮನೆತನವು‌ ಕಿಲ್ಲೂರು ಗ್ರಾಮದ ಜುಮಾದಿ ದೈವದ ದರ್ಶನ ಪಾತ್ರಿಗಳ ಮನೆಯಾಗಿದ್ದು ಕೊನೆಯದಾಗಿ ಈ ಮನೆತನದ ದಿ|| ತಿಮ್ಮ ಯಾನೆ ಮುದರ ಪೂಜಾರಿಯವರು ಹಲವು ವರ್ಷಗಳ ಕಾಲ ಜುಮಾದಿ ದೈವದ ಮುಕ್ಕಾಲ್ದಿಯಾಗಿ ಸೇವೆ ಗೈದಿದ್ದರು. ಬಹಳ ಸುಂದರವಾಗಿ ನಿರ್ಮಾಣಗೊಂಡ ಕಿಲ್ಲೂರು ಮೇಗಿನ ಮನೆಯಲ್ಲಿ ಪ್ರಧಾನವಾಗಿ ಧರ್ಮ ದೈವ ಅಣ್ಣಪ್ಪ‌ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ, ‌ಕುಪ್ಪೆಟ್ಟು‌ ದೈವಗಳು, ಮಂತ್ರಜಾವದೆ, ಸತ್ಯಜಾವದೆ,‌ ಕೊರತಿ, ರಾಹುಗುಳಿಗ ದೈವಗಳಿವೆ.

ಅಣ್ಣಪ್ಪ ಪಂಜುರ್ಲಿ ದೈವದ ಗುಡಿಯು ಕೆಂಪುಕಲ್ಲಿನಿಂದ ಮಾಡಿದ್ದು ಬಹಳ ಸುಂದರವಾಗಿದೆ. ಇದು ತರವಾಡು ಮನೆಯ ಕೆಳಗಿನ ಭಾಗದಲ್ಲಿದ್ದು ಪಕ್ಕದಲ್ಲೇ ಜುಮಾದಿ ಬಂಟ ದೈವಗಳ ಗುಡಿ ಇದೆ. ಬಂಟ್ವಾಳ ತಾಲೂಕಿನಿನ ಕಳ್ಳಿಗೆ ಕನಪಾಡಿತ್ತಾಯ ಉತ್ಸವ ನೋಡಲು ಹೋದ ಕಿಲ್ಲೂರು ಗುತ್ತಿನವರನ್ನು ಹಿಂಬಾಲಿಸಿ ಬಂದ ಅಲ್ಲಿನ ಈ ಜುಮಾದಿ ಬಂಟ ದೈವಗಳು ನಂತರ‌ ಈ ಕಿಲ್ಲೂರು ಮೇಗಿನ ಮನೆಗೆ ಬಂದು ಅಲ್ಲಿಯೂ ಸ್ಥಾನ ಕಟ್ಟಿಸಿಕೊಂಡು ಆರಾಧನೆ ಪಡೆಯುತ್ತಿದೆ. -ಸಂಕೇತ್ ಪೂಜಾರಿ.

0 comments: