Wednesday, February 7, 2018

ಜನಾರ್ದನ ಪೂಜಾರಿಯವರ ಆತ್ಮಕತೆ ಬಿಡುಗಡೆ ಬಳಿಕ ಕಾಣೆಯಾದವರ ಬಗ್ಗೆ ನಿಮಗೆ ತಿಳಿದಿದೆಯೇ

ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಅವರ ಆತ್ಮಕತೆ ಸಾಲಮೇಳದ ಸಂಗ್ರಾಮ ಇತ್ತೀಚೆಗೆ ಮಂಗಳೂರಿನಲ್ಲಿ ಬಿಡುಗಡೆಯಾದ ಅನಂತರ ಸೋಶಿಯಲ್ ಮಿಡಿಯಾದಲ್ಲಿ ಪೂಜಾರಿ ಪರವಾಗಿ ನಡೆಸುತ್ತಿದ್ದ ಬ್ಯಾಟಿಂಗ್ ನಿಂತಿದೆ.

ಪೂಜಾರಿ ಅವರು ಕಾಂಗ್ರೆಸ್ ಮುಖಂಡರನ್ನು ಟೀಕಿಸಿದಾಗೆಲ್ಲ, ಉತ್ತಮ, ಪ್ರಾಮಾಣಿಕ ನಾಯಕ. ಅವರತಂಹ ಮುಖಂಡ ಮತ್ತೊಬ್ಬನಿಲ್ಲ ಎಂದೆಲ್ಲ ಸಮಯ ಸಿಕ್ಕಾಗೆಲ್ಲ ಹೊಗಳುತ್ತಿದ್ದ ಕೆಲ ಬಿಜೆಪಿಗರು ಈಗ ಶಸ್ತ್ರ ಸನ್ಯಾಸ ಮಾಡಿದ್ದಾರೆ.

ಕರಾವಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ವಿರೋಧ ಪಕ್ಷವಾಗಿ ಕೆಲಸ ಮಾಡುವುದಕ್ಕೆ ಪೂಜಾರಿ ಅವರಿಗ ಗುತ್ತಿಗೆ ನೀಡಿದ್ದ ಬಿಜೆಪಿ ಮಂದಿ, ಪೂಜಾರಿ ಅವರಿಗೆ ಕಾಂಗ್ರೆಸ್ಸಿನಿಂದ ಅನ್ಯಾಯವಾಗಿದೆ. ಆ ಮೂಲಕ, ಸಮಸ್ತ ಬಿಲ್ಲವ ಸಮುದಾಯಕ್ಕೆ ಅನ್ಯಾಯವಾಗಿದೆ ಎನ್ನುವ ಧಾಟಿಯಲ್ಲಿ ಫೇಸ್ಬುಕ್ ಮತ್ತು ವಾಟ್ಸಪ್ಪುಗಳಲ್ಲಿ ಹರಿಯಬಿಡಲಾಗುತ್ತಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಸಂಬಂಧಿಸಿದ ವಿವಾದಗಳೇ ಆಗಿರಲಿ, ಇನ್ಯಾವುದೇ ವಿಚಾರ ಬಂದಾಗ ಜನಾರ್ದನ ಪೂಜಾರಿ ಮಹಾನ್ ಪ್ರಾಮಾಣಿಕ ನಾಯಕನಾಗಿದ್ದರೂ ಅವರಿಗೆ ಅನ್ಯಾಯವಾಗಿದೆ ಎಂಬ ರೀತಿಯಲ್ಲಿ ಅವರ ಪರವಾಗಿ ಮೊಸಳೆ ಕಣ್ಣೀರು ಸುರಿಸಲಾಗುತಿತ್ತು.

ವಿಪರ್ಯಾಸವೆಂದರೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ ಬಿಜೆಪಿ ಪಡೆಯ ಜನರೇ ಸೋಶಿಯಲ್ ಮಿಡಿಯಾಗಳಲ್ಲಿ ಪೂಜಾರಿ ಅವರಿಗೆ ಅನ್ಯಾಯವಾಗಿ ಚುನಾವಣೆಯಲ್ಲಿ ಸೋಲಾಯಿತು ಎಂದು ಬರೆದುಕೊಂಡಿದ್ದರು. ಯಾವಾಗ ಜನಾರ್ದನ ಪೂಜಾರಿ ಅವರ ಆತ್ಮಕತೆ ಪುಸ್ತಕದ ಅಂಶಗಳು ಬಯಲಿಗೆ ಬಂದವೊ ಆಗ ದಿಢೀರನೇ ಪೂಜಾರಿ ಪರವಾಗಿ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಜೆಪಿ ಪಡೆ ನಿಲ್ಲಿಸಿದೆ.ಅಷ್ಟಕ್ಕೂ ಪೂಜಾರಿ ಅವರು ಹೊರತಂದಿರುವ ಆತ್ಮಕತೆಯಲ್ಲಿ ಅಂತಹುದೇನಿದೆ.

ಇತ್ತೀಚೆಗೆ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡುವಾಗ ಸಂಘ ಪರಿವಾರಕ್ಕೆ ಹತ್ತಿರವಾಗಿದ್ದ ಪೂಜಾರಿ ಅವರು ತಮ್ಮ ಆತ್ಮಕತೆಯಲ್ಲಿ ಸಂಘ ಪರಿವಾರದ ಚುನಾವಣಾ ರಾಜಕೀಯವನ್ನು ತೆರೆದಿಟ್ಟಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರ ಶ್ರೀರಾಮ ಹೆಸರಿನಲ್ಲಿ ನಡೆಸಿದ ಅಪಪ್ರಚಾರದಿಂದಾಗಿ ತಾನು ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಜನಾರ್ದನ ಪೂಜಾರಿ ತನ್ನ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ.

ಬಿಜೆಪಿ ಮೋಸ, ಕುತಂತ್ರ ಮಾಡುವ ಮೂಲಕ ಸೋಲಿಸಿದರು. ಬೇಕಾಬಿಟ್ಟಿ ಹಣ ಚೆಲ್ಲಿದರು. ಅಪಪ್ರಚಾರ ನಡೆಸಿದರು. ಎಲ್ಲವೂ ನಡೆಯಿತು. ಇದರಿಂದಾಗಿ ತಾನು ಮೊದಲ ಚುನಾವಣೆ ಸೋತೆ ಎಂದು ಪೂಜಾರಿ ಅವರು ನೇರವಾಗಿ ಸಂಘಪರಿವಾರದ ವಿರುದ್ಧ ತೀವ್ರವಾದ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸಾವಿನ ಅನಂತರ 1991ರ ಜೂನ್ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಎಲ್ಲೆಡೆ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಾರ್ದನ ಪೂಜಾರಿ ಸೋಲು ಅನುಭವಿಸಿದ್ದರು. ಅದಕ್ಕೆ ಕಾರಣ ಸಂಘ ಪರಿವಾರ ಮತ್ತು ಬಿಜೆಪಿ ಚುನಾವಣಾ ಸಂದರ್ಭದಲ್ಲಿ ಧರ್ಮದ ಹೆಸರಿನಲ್ಲಿ ನಡೆಸಿದ ಅಪಪ್ರಚಾರ ಎಂದಿದ್ದಾರೆ.

ಕರಾವಳಿಯಲ್ಲಿ ಮನೆ ಮನೆಗೆ ಇಟ್ಟಿಗೆಯೊಂದಿಗೆ ತೆರಳಿದ ಬಿಜೆಪಿ ಮತ್ತು ಸಂಘ ಪರಿವಾರದವರು ಶ್ರೀರಾಮನ ಹೆಸರಿನಲ್ಲಿ ಪ್ರತಿಯೊಬ್ಬರಿಂದ ಒಂದು ರೂಪಾಯಿ ಇಪ್ಪತ್ತೈದು ಪೈಸೆ ಸಂಗ್ರಹಿಸಿದ್ದರು. ರಾಮ ರಾಮ ಎಂದು ಬೊಬ್ಬೆ ಹೊಡೆದುಕೊಂಡು ಹೋಗುತ್ತಿದ್ದರು. ಇದರಿಂದಾಗಿ ತಾನು ಸೋತುಹೋದೆ ಎಂದು ಪೂಜಾರಿ ತಮ್ಮ ಆತ್ಮಕತೆಯಲ್ಲಿ ಬರೆದಿದ್ದಾರೆ.ಈ ಅಂಶಗಳು ಹೊರಗೆ ಬಂದ ಅನಂತರ ಬಿಜೆಪಿ ಮಂದಿ ಪೂಜಾರಿ ಪರವಾಗಿ ಬ್ಯಾಟಿಂಗ್ ಮಾಡುವುದನ್ನು ನಿಲ್ಲಿಸಿದ್ದಾರೆ.

0 comments: