Saturday, February 17, 2018

ಬಿಲ್ಲವರ ಗುತ್ತು ಮನೆತನಗಳು (ನಾಯಿಲ ಗುತ್ತು)

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪರಿಸರದಲ್ಲಿ ಬಿಲ್ಲವರ ಹಲವಾರು ಪುರಾತನ ಮನೆಗಳಿವೆ. ಸುಸ್ಥಿತಿಯಲ್ಲಿರುವ ಮನೆಗಳಲ್ಲಿ ನಾಯಿಲ ಗುತ್ತು ಒಂದು. ಪೂರ್ವದಲ್ಲಿ ಸುಂದರ ಪರ್ವತಗಳ ಸಾಲುಗಳು ಅದರ ತಪ್ಪಲಿನಲ್ಲಿ ಸುತ್ತಮುತ್ತ ವನಸಿರಿಯಿಂದ ಕಂಗೊಳಿಸುವ ಈ ಪ್ರದೇಶವನ್ನು ಮನೆಗಾಗಿ ಆರಿಸಿಕೊಂಡ ಪೂರ್ವಜರ ಪ್ರಕೃತಿ ಸೌಂದರ್ಯದ ಆರಾಧನೆಯ ಬಗ್ಗೆ ಗೌರವ ಭಾವ ಯಾರಿಗಾದರೂ ತಟ್ಟನೆ ಆಗುತ್ತದೆ. ನಮ್ಮ ಸಂದರ್ಶನದಲ್ಲಿ ವೇಳೆಯಲ್ಲಿ ಕೆಲವು ಕಡೆಗಳಲ್ಲಿ ಮಾಹಿತಿದಾರರು ಹೇಳುವ ಮಾತುಗಳು ಕುತೂಹಲದಾಯಕವಾಗಿತ್ತು. ಅವರು ಹೇಳುವ ಘಟನೆಗಳು ಬಿಲ್ಲವರ ಸಮುದಾಯಗಳು ಅವಲೋಕನ ಮಾಡಿಕೊಳುವಂತಿವೆ. "ಹಿಂದೆ ನಮ್ಮ ಹಿರಿಯರು ಗುತ್ತು ಬರ್ಕೆ ಎಂದು ಹೇಳುತ್ತಿದ್ದರು. ಈಗ ನಾವ್ಯಾರು ನಮ್ಮ ಗುತ್ತು ಬರ್ಕೆ ಮನೆಗಳನ್ನು ಆ ಹೆಸರಿನಿಂದ ಕರೆದುಕೊಳ್ಳುವುದಿಲ್ಲ" ಎನ್ನುತ್ತಾರೆ. ಯಾಕೆ ಎಂದು ಪ್ರಶ್ನಿಸಿದರೆ ಹಾಗೆ ಕರೆದುಕೊಳ್ಳಲು ಕೆಲವೊಂದು ಸಂದರ್ಭದಲ್ಲಿ ಪ್ರತಿಬಂಧಗಳು ಬಂದ ಬಗೆಗೆ ಹೇಳುತ್ತಾರೆ.

ಅನೇಕರು ಹೆಮ್ಮೆಯಿಂದ ತಮ್ಮ ಮನೆಯ ಇತಿಹಾಸವನ್ನು ಬಿಡಿಸಿಡುತ್ತಾರೆ. ಅಂತಹ ಮನೆಗಳಲ್ಲಿ ಉಬಾರಿನ(ಉಪ್ಪಿನಂಗಡಿ) ಕಾಂಚನ ರಸ್ತೆಯಲ್ಲಿ ಮುಂದೆ ಸಾಗಿದಾಗ ಬಜತ್ತೂರು ಗ್ರಾಮದಲ್ಲಿರುವ ನಾಯಿಲ ಗುತ್ತು ಒಂದು. ಪ್ರಾಚೀನ ಗುತ್ತಿನ ಮನೆಯ ಕೆಲವೊಂದು ಲಕ್ಷಣಗಳನ್ನು ಹಾಗೆಯೇ ಉಳಿಸಿಕೊಂಡಿರುವ ದೊಡ್ಡ ಮನೆ ಇದು. ಮನೆಯ ಪೂರ್ವದಲ್ಲಿ ಪರ್ವತಗಳ ಸಾಲು. ಉತ್ತರದಲ್ಲಿ ಸುಮಾರು ಇಪ್ಪತ್ತೈದು ಅಡಿಗಳ ತಗ್ಗಿನಲ್ಲಿ ಅಡಿಕೆ ತೋಟ. ಪೂರ್ವದಿಂದ ಸಮತಟ್ಟಾಗಿ ಬಂದ ಭೂಮಿಯ ಸುಂದರ ತಾಣದಲ್ಲಿ ಭವ್ಯವಾದ ಈ ಗುತ್ತು ಪ್ರಕೃತಿ ಸೌಂದರ್ಯದಿಂದ ಕೂಡಿ ಮೋಹಕವಾಗಿದೆ.

ಉತ್ತರಾಭಿಮುಖವಾಗಿ ಇರುವ ಗುತ್ತಿನ ಚಾವಡಿಗಳನ್ನು ಕೂಡ ಉತ್ತರಕ್ಕೆ ಅಭಿಮುಖವಾಗಿದೆ. ವಿಶಾಲ ಕಂಬಗಳು ಸೂಕ್ಷ್ಮ ಕುಸುರಿ ಕೆತ್ತನೆಗಳಿಂದ ಸಿಂಗಾರಗೊಂಡಿದೆ. ವಿಶಾಲವಾದ ಏಳೆಂಟು ಕೋಣೆಗಳನ್ನು ಹೊಂದಿದ ಉಪ್ಪರಿಗೆಯ ದೊಡ್ಡ ಮನೆ ಇದಾಗಿದೆ. ಅಕ್ಕಿ ಮುಡಿಯನ್ನು ಇಡುವ ಉಗ್ರಾಣದಲ್ಲಿ ಕೋಣೆ ಪಕ್ಕನೆ ತಿಳಿಯದಂತಿದೆ. ಉಪ್ಪರಿಗೆಯಲ್ಲಿ ಸುಂದರವಾದ ಉಯ್ಯಾಲೆಯ ಇದೆ. ಈ ಮನೆಯವರು ಮುಂಡೇರಣ್ಣ ಬಳಿಯವರು. ಮನೆಯ ಹಿರಿಯ ಮಹಿಳೆ ಹರಿಣಾಕ್ಷಿಯವರು ನೀಡಿದ ಮಾಹಿತಿಯಂತೆ ಈ ಮನೆತನದ ಭೂಮಿ ಸುಮಾರು ಇನ್ನೂರು ವರ್ಷಗಳ ಹಿಂದೆ ಬಂಗಾಡಿಯ ಜೈನ ರಾಜರಿಂದ ಬಂದಂತಹ ಭೂಮಿ. ಈ ಮನೆತನದ ಹಿರಿಯರು ಬಂಗಾಡಿಯ ಅರಸರ ಕಾಯಿಲೆಯನ್ನು ಗುಣಪಡಿಸಿ ರಾಜರ ಪ್ರಾಣ ಉಳಿಸಿದರಂತೆ ಅದಕ್ಕಾಗಿ ಈ ಭೂಮಿಯನ್ನು ಉಡುಗೊರೆಯಾಗಿ ಕೊಟ್ಟರು ಎಂಬುದು ಇತಿಹಾಸ. ಅದರಲ್ಲಿ ಈಗ ಉಳಿದಿರುವ ೧೦೦ ಎಕ್ರೆ ಜಮೀನು ೧೭ ಕವಲಿಗೆ ಹಂಚಲ್ಪಟ್ಟಿದೆ. ಸಾಂತ್ಯ ಗುತ್ತು, ಒಂರ್ಬೊಡಿ ಗುತ್ತು, ನಾಯಿಲ ಗುತ್ತುಗಳಿಗೆ ಕೌಟುಂಬಿಕ ಸಂಬಂಧವಿದೆ. ಕೈಪಂಗಳದ ದೋಳದ ಗುತ್ತು ಮನೆತನಕ್ಕೂ ನಾಯಿಲ ಗುತ್ತಿಗೂ ಸಂಬಂಧ ಇದೆ ಎನ್ನುತ್ತಾರೆ. ಹೀಗೆ ಅನೇಕ ಗುತ್ತುಗಳೊಂದಿಗೆ ಕೌಟುಂಬಿಕ ಸಂಬಂಧ ಹೊಂದಿದೆ. ಕುಂಞ ಹೆಂಗಸು ಮಾತೃ ಮೂಲದಲ್ಲಿ ಈ ಮನೆತನದ ಮುಖ್ಯಸ್ಥರು.

ಮಕ್ಕಳಾಗದ ಹೆಂಗಸರು ಈ ಮನೆಯ ಉಪ್ಪರಿಗೆಯಲ್ಲಿರುವ ಉಯ್ಯಾಲೆಯಲ್ಲಿ ಪೂಜಾವಿಧಿ ಸಹಿತ ಸಂಕಲ್ಪತರಾಗಿ ಕುಳಿತು ಔಷದೋಪಚಾರ ಮಾಡಿದರೆ ಸಂತಾನ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆ ಇದೆ. ಹೀಗೆ ಸಂಕಲ್ಪಿತರಲ್ಲದೆ ಬೇರೆ ಯಾರು ಆ ಉಯ್ಯಾಲೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಉಪ್ಪರಿಗೆಯ ವಿಶಾಲ ಕಿಟಕಿಯನ್ನು ತೆರೆದರೆ ಮಲಗುವ ಮಂಚವಾಗಿ ಪರಿವರ್ತನೆ ಆಗುವ ತಂತ್ರ ಗಮನಾರ್ಹವಾಗಿದೆ. ಮನೆಯ ಪಶ್ಚಿಮ ಭಾಗದಲ್ಲಿ ಅಂಗಳಕ್ಕೆ ತಾಗಿಕೊಂಡು ದೈವದ ಮನೆ ಇದೆ. ಈ ಮನೆಯ ಇಟ್ಟಿಗೆಗಾರೆಯಿಂದ ಮಾಡಿದ ಕಂಬಗಳ ವಿನ್ಯಾಸಗಳು ವಿಜಯ ನಗರದ ಕಮಲ ಮಹಲಿನ ಕಂಬಗಳ ವಿನ್ಯಾಸವನ್ನು ಹೋಲುತ್ತದೆ. ಈ ಮನೆಯೊಳಗೆ ಕಲ್ಲುರ್ಟಿ, ಸತ್ಯದೇವತೆಗಳಿವೆ. ಮನೆಯ ಹೊರಗೆ ರೌದ್ರ ಉದ್ರಾಂಡಿ, ರಾವು, ಕಲ್ಲುರ್ಟಿ, ಕುದುರೆಯ ಮೇಲೆ ಕುಳಿತ ಕಾಲಾದ್ರಿ ಅಲ್ಲದೆ ಇನ್ನೊಂದು ಗುಡಿಯಲ್ಲಿ ಪಂಜುರ್ಲಿ, ಕೊರಗಜ್ಜ, ಸೊರಕೆ ಕಲ್ಲುರ್ಟಿ ದೈವಗಳಿವೆ. ಮತ್ತೊಂದು ಗುಡಿಯಲ್ಲಿ ಶಿರಾಡಿ ದೈವ, ರಾವು ಗುಳಿಗ, ಮಂತ್ರ ಗುಳಿಗ, ಚಾಮುಂಡಿ ಗುಳಿಗ ದೈವಗಳಿವೆ. ಹಾಗೇ ಕುಜುಂಬ ಬೈದ್ಯನೆಂಬ ಹಿರಿಯಾಯರ ಆರಾಧನೆ ಇದೆ. ಈ ಹಿರಿಯನೇ ಬಂಗಾಡಿ ಅರಸನ ರೋಗ ಗುಣಪಡಿಸಿದ ಪ್ರಖ್ಯಾತ ವೈದ್ಯರಾಗಿರಬೇಕು. ಕುಟುಂಬದ ಅಭಿವೃದ್ಧಿ ಗಾಗಿ ಸಮಿತಿಯೊಂದನ್ನು ರಚಿಸಿದ್ದು ಸಮಿತಿಯವರು ನಾಯಿಲ ಗುತ್ತು ಮನೆಯ ಅಭಿವೃದ್ಧಿ ಮತ್ತು ದೈವ ದೇವರುಗಳ ಪೂಜಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ.) ಸಂಕೇತ್ ಪೂಜಾರಿ

1 comment:

  1. ಸಣ್ಣವರಿದ್ದಾಗ ಈ ಮನೆಯೊಳಗೆ ಓಡಾಡಿದ ಅನುಭವವಿದೆ,

    ReplyDelete