Sunday, January 20, 2019

ಬಿಲ್ಲವ ಯುವ ಪ್ರತಿಭೆ "ಅಮರ್ ಪ್ರಸಾದ್" ಮುಖ್ಯ ನಿರೂಪಕರು (ಟಿವಿ9 ಚಾನೆಲ್)



"ಅಮರ್ ಪ್ರಸಾದ್"
ಮುಖ್ಯ ನಿರೂಪಕರು
(ಟಿವಿ9 ಚಾನೆಲ್)

ಕನ್ನಡ ಮಾಧ್ಯಮ ಲೋಕ ಬೆಳೆಯುತ್ತಿದೆ. ಇಲ್ಲಿ ಅನೇಕ ಹೊಸಬರು ತಮ್ಮದೇಯಾದ ಛಾಪು ಮೂಡಿಸುತ್ತಿದ್ದಾರೆ. ‘ಅಮರ’ ನೆನಪುಗಳ ಬುತ್ತಿಯನ್ನು ಕಟ್ಟಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನುಗುತ್ತಿದ್ದಾರೆ. ಯುವ ನಿರೂಪಕರು ಸ್ಟಾರ್‍ಪಟ್ಟವನ್ನು ಅಲಂಕರಿಸ್ತಿದ್ದಾರೆ. ಇಂತಹ ಯುವ ಸ್ಟಾರ್ ನಿರೂಪಕರಲ್ಲಿ ಒಬ್ಬರು ಟಿವಿ9ನ ಅಮರ್ ಪ್ರಸಾದ್.

ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನವರಾದ ಅಮರ್ ಇವತ್ತು ಕನ್ನಡಿಗರ ಮನೆಮಗ. ಇವರ ತಂದೆ ವಾಸುದೇವ್, ತಾಯಿ ಶಶಿಕಲಾ. ರೈತಕುಟುಂಬದಲ್ಲಿ ಹುಟ್ಟಿದ ಅಮರ್ ಕನಸು ಮನಸ್ಸಿನಲ್ಲೂ ನಾನೊಬ್ಬ ನಿರೂಪಕನಾಗುತ್ತೇನೆ ಎಂದು ಎಣಿಸಿರಲಿಲ್ಲ.

ಕೊಪ್ಪದ ಸೆಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಕೊಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸುವ ‘ಸುವರ್ಣಾ’ವಕಾಶ ¯ಭಿಸಿತು. ಅಂದು ಸುವರ್ಣ ನ್ಯೂಸ್‍ನ ಮುಖ್ಯಸ್ಥರಾಗಿದ್ದ ಎಚ್.ಆರ್ ರಂಗನಾಥ್ ಅವರು ಹೊಸಬರನ್ನು ತಮ್ಮ ಬಳಗಕ್ಕೆ ಸೇರಿಸಿಕೊಳ್ಳಲು ಪ್ರತಿ ಜಿಲ್ಲೆಯಲ್ಲೂ ಪ್ರವೇಶ ಪರೀಕ್ಷೆ ನಡೆಸಿದ್ದರು.
ರಾಜ್ಯದಾದ್ಯಂತ ಸುಮಾರು 3000 ಮಂದಿ ಪರೀಕ್ಷೆ ಬರೆದಿದ್ದರು. ಬಿಎ ಪದವಿ ಶಿಕ್ಷಣ ಪಡೆಯುತ್ತಿದ್ದ ಅಮರ್ ಪ್ರಸಾದ್ ಚಿಕ್ಕಮಗಳೂರಲ್ಲಿ ಪರೀಕ್ಷೆ ತೆಗೆದುಕೊಂಡಿದ್ದರು. ಒಂದು ಎಕ್ಸ್ ಪಿರಿಯನ್ಸ್ ಇರಲಿ ಎಂದು  ಪರೀಕ್ಷೆ ಬರೆದಿದ್ದ ಇವರಿಗೆ ನಾನು ಆಯ್ಕೆ ಆಗುತ್ತೇನೆ ಎಂಬ ನಂಬಿಕೆ ಇರಲಿಲ್ಲ.

ಕೆಲವು ದಿನಗಳ ನಂತರ ಸಂದರ್ಶನಕ್ಕೆ ಆಹ್ವಾನ ಬಂತು. ಸುಮಾರು 60 ಮಂದಿ ಸಂದರ್ಶನಕ್ಕೆ ಹಾಜರಿದ್ದರು. ರಂಗನಾಥ್, ಜೋಗಿ, ಹಮೀದ್ ಪಾಳ್ಯ ಮೊದಲಾದ ದಿಗ್ಗಜರು ನಡೆಸಿದ ಆ ಸಂದರ್ಶನದಲ್ಲಿ ಆಯ್ಕೆಯಾಗಿದ್ದು ಕೇವಲ 6 ಮಂದಿ…! ಅದರಲ್ಲಿ ಮಲೆನಾಡಿನ ಅಮರ್ ಪ್ರಸಾದ್ ಕೂಡ ಒಬ್ಬರಾಗಿದ್ದರು.

ಹೀಗೆ ಟ್ರೈನಿಯಾಗಿ ಅಮರ್ ಸುವರ್ಣ ಬಳಗ ಸೇರಿದ್ದು 2011ರಲ್ಲಿ. ಸುವರ್ಣ ವಾಹಿನಿ ಸೇರಿ 7 ತಿಂಗಳಾಗಿತ್ತಷ್ಟೇ ಎಚ್.ಆರ್ ರಂಗನಾಥ್ ಅವರು ಸುವರ್ಣ ಬಿಟ್ಟು ಹೊರಬಂದು ‘ಪಬ್ಲಿಕ್ ಟಿವಿ’ಯನ್ನು ಆರಂಭಿಸಿದ್ರು. ಸುವರ್ಣ ಬಿಟ್ಟು ಬಂದ ರಂಗನಾಥ್ ಅವರು, ಅಮರ್ ಪ್ರಸಾದ್, ಅಕ್ಷಯ್, ಶಿವಕುಮಾರ್ ಅವರನ್ನು ತಮ್ಮ ಆರ್ ಟಿ ನಗರದ ಮನೆಗೆ ಕರೆಸಿಕೊಂಡು ನನ್ನ ಜೊತೆ ಬರ್ತೀರಾ ಅಂತ ಕೇಳಿದಾಗ ಹಿಂದೆ-ಮುಂದೆ ನೋಡದೆ ಅವರೊಂದಿಗೆ ಹೆಜ್ಜೆ ಹಾಕಿದ್ರು. ಹೀಗೆ ಸುವರ್ಣದ ಕೆಲವು ಗೆಳೆಯರೊಂದಿಗೆ 2012ರಲ್ಲಿ ಅಮರ್ ಪ್ರಸಾದ್ ರಂಗನಾಥ್ ಅವರ ಕನಸಿನ ಪಬ್ಲಿಕ್ ಟಿವಿಗೆ ಸೇರಿದ್ರು.

ಟ್ರೈನಿಯಾಗಿ ಮಾಧ್ಯಮ ರಂಗಕ್ಕೆ ಅಮರ್ ಅವರನ್ನು ಕರೆತಂದಿದ್ದ ರಂಗನಾಥ್ ಅವರು ಪಬ್ಲಿಕ್ ಟಿವಿಯಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಅಲ್ಲಿ ಬುಲೆಟಿನ್ ಪ್ರೊಡ್ಯುಸರ್ ಆಗಿ, ಪ್ರೋಗ್ರಾಂ ಪ್ರಡ್ಯೂಸರ್ ಆಗಿ ಕೆಲಸ ಮಾಡುವ ಚಾನ್ಸ್ ಸಿಗ್ತು. ಕೊನೆಗೆ ಆ್ಯಂಕರ್ ಕೂಡ ಆದರು…!
ಪಬ್ಲಿಕ್ ಟಿವಿಯಲ್ಲಿ ಅಮರ್ ಪ್ರಸಾದ್ ಅವರಿಗೆ ಹೆಚ್ಚು ಪ್ರೋತ್ಸಾಹ ನೀಡಿ ಅವರನ್ನು ಮುಂಚೂಣಿಗೆ ತಂದಿದ್ದು ಕೀರ್ತಿ ಶಂಕರಘಟ್ಟ (ಕಿರಿಕ್ ಕೀರ್ತಿ) ಹಾಗೂ ಶಿವಸ್ವಾಮಿಯವರು.  ಕನ್ನಡ ಬಿಗ್‍ಬಾಸ್ ಸೀಸನ್ 4ರ ರನ್ನರ್ ಅಪ್ ಕೀರ್ತಿ ಶಂಕರಘಟ್ಟ ಅಂದು ಪಬ್ಲಿಕ್ ಟಿವಿಯಲ್ಲಿ ಸ್ಪೆಷಲ್ ಪ್ರೋಗ್ರಾಂ ಹೆಡ್ ಆಗಿದ್ದರು. ಅಮರ್ ಪ್ರಸಾದ್ ಮತ್ತು ಅವರ ಗೆಳೆಯರಾದ ಅಕ್ಷಯ್, ಶಿವಕುಮಾರ್ ಅವರಿಗೆ ಕಲಿಯುವ ಹಂಬಲ. ಎಷ್ಟೋ ರಾತ್ರಿ ಕಚೇರಿಯಲ್ಲೇ ಉಳಿದುಕೊಳ್ಳುತ್ತಿದ್ದರು. ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದ ಇವರೊಡನೆ ಕೀರ್ತಿ ಅವರೂ ಕೂಡ ಸದಾ ಜೊತೆಗಿರುತ್ತಿದ್ದರಂತೆ.

ಹೀಗಿರುವಾಗ ಒಮ್ಮೆ ಡೆಸ್ಕ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಮರ್ ಪ್ರಸಾದ್ ಅವರ ಬಳಿಗೆ ಬಂದ ಎಚ್.ಆರ್ ರಂಗನಾಥ್, ಶಿವಸ್ವಾಮಿ ಹಾಗೂ ಕೀರ್ತಿ ‘ನೀನು ನಾಳೆಯಿಂದ ನಿರೂಪಣೆ ಮಾಡಬೇಕು’ ಎಂದಾಗ ಅಮರ್ ಪ್ರಸಾದ್ ಅವರಿಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ…! ಪ್ರೋಗ್ರಾಂ ಪ್ರಡ್ಯೂಸರ್ ಆಗಿಯೇ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ ಅಮರ್ ಪ್ರೀತಿಯಿಂದಲೇ ನಿರೂಪಕನಾಗುವ ಅವಕಾಶವನ್ನು ತಳ್ಳಿಹಾಕಿದ್ದರಂತೆ…! ಆಗ ಕೀರ್ತಿ, ಶಿವಸ್ವಾಮಿಯರು ಪ್ರೋತ್ಸಾಹ ನೀಡಿ, ನಿನ್ನಂದ ಸಾಧ್ಯ ಎಂದು ಹುರಿದುಂಬಿಸಿ, ಮಾರ್ಗದರ್ಶನ ನೀಡಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದ ಅಮರ್ ಅವರನ್ನು ತೆರೆಯ ಮುಂದೆ ತಂದರು…! ಅಲ್ಲಿಂದ ಅಮರ್ ಪ್ರಸಾದ್ ನಿರೂಪಕನಾಗಿ ಮಿಂಚಲಾರಂಭಿಸಿದರು. ಎಚ್.ಆರ್ ರಂಗನಾಥ್ ಅವರ ಜೊತೆ ‘ನ್ಯೂಸ್ ಕೆಫೆ’ಯಲ್ಲಿಯೂ ಕುಳಿತರು. ಇದು ಅವರೆಂದೂ ಮರೆಯಲಾಗದ ಕ್ಷಣ.

2.5 ವರ್ಷಗಳ ಕಾಲ ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡಿದ್ದ ಅಮರ್ ಅವರಿಗೆ ಕನ್ನಡದ ನಂಬರ್ 1 ಸುದ್ದಿವಾಹಿನಿ ಟಿವಿ9ನಿಂದ ಆಫರ್ ಬಂತು. ಹೊಸ ಸವಾಲನ್ನು ಸ್ವೀಕರಿಸಿ 2014ರಲ್ಲಿ ಟಿವಿ9 ಪ್ರವೇಶಿಸಿದ್ರು. ಅಂದು ಇಲ್ಲಿದ್ದ ರವಿಕುಮಾರ್, ಮಾರುತಿ ಅವರ ಮಾರ್ಗದರ್ಶನದಿಂದ ಅಮರ್ ಮತ್ತಷ್ಟು ಪರಿಪಕ್ವರಾಗಿ ಬೆಳೆದರು. ಟಿವಿ9ನಲ್ಲಿ ಆಗಾಗ ರಿಪೋರ್ಟರ್ ಆಗಿಯೂ ಫೀಲ್ಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2016ರಲ್ಲಿ ಮೈಸೂರಿನಿಂದ ದಸರಾ ಕವರೇಜ್ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.

‘ನನ್ನ ಪಾಲಿಗೆ ಪಬ್ಲಿಕ್ ಟಿವಿ ಮೀಡಿಯಾ ಯೂನಿವರ್ಸಿಟಿ. ರಂಗನಾಥ್ ಅವರು ಕುಲಪತಿಗಳು. ಕೀರ್ತಿ ಶಂಕರಘಟ್ಟ ಹಾಗೂ ಶಿವಸ್ವಾಮಿ ಪ್ರೊಫೆಸರ್‍ಗಳು. ಮಹೇಂದ್ರ ಮಿಶ್ರಾ ಅವರ ಸಾರಥ್ಯದಲ್ಲಿ ಕಳೆದ 10 ವರ್ಷಗಳಿಂದ ನಂಬರ್ 1 ಚಾನಲ್ ಆಗಿ ಮುನ್ನುಗ್ಗುತ್ತಿರುವ ಟಿವಿ9 ಪಕ್ಕಾ ಪ್ರೊಫೆಶನಲ್ ನ್ಯೂಸ್ ಚಾನಲ್. ಇಲ್ಲಿ ಸುದ್ದಿ ಮತ್ತು ಕೆಲಸ ಎರಡೇ ಮುಖ್ಯ. ಪಬ್ಲಿಕ್ ಟಿವಿ ರಂಗನಾಥ್ ಸರ್ ನನಗೆ ಅವಕಾಶ ಕಲ್ಪಿಸಿಕೊಟ್ಟರು, ರವಿಕುಮಾರ್ ಸರ್, ಮಾರುತಿಸರ್ ಆಕಾರ ಕೊಟ್ಟರು’ ಎಂದು ಹೇಳುತ್ತಾರೆ ಅಮರ್ ಪ್ರಸಾದ್.

ಇವರನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಲು ಮುಂದೆಬಂದಿವೆ. ಆದರೆ, ಎಲ್ಲವನ್ನೂ ನಯವಾಗಿ ತಿರಸ್ಕರಿಸಿದ್ದಾರೆ. ನಾನಿನ್ನೂ ಏನೂ ಮಾಡಿಲ್ಲ, ಮಾಡಲು ಸಾಕಷ್ಟಿದೆ. ಮಾಧ್ಯಮದಲ್ಲಿ ನಾನಿನ್ನೂ ಚಿಕ್ಕವನು. ಕೇವಲ 7 ವರ್ಷದ ಅನುಭವಷ್ಟೇ. ಇದು ಯಾವ ಲೆಕ್ಕಕ್ಕೂ ಇಲ್ಲ…! ಕಲಿಯುದು ಬೆಟ್ಟದಷ್ಟಿದೆ. ಅನೇಕ ಹಿರಿಯರು ಇರುವಾಗ ನಾನು ಪ್ರಶಸ್ತಿ ಪಡೆಯುವುದು ಸರಿಯಲ್ಲ ಎನ್ನೋದು ಸಹೃದಯಿ ಅಮರ್ ಅವರ ನಿಲುವು.

‘ಮಾಧ್ಯಮ ಲೋಕಕ್ಕೆ ಬರುವ ಹೊಸಬರು ಇದು ಗ್ಲಾಮರಸ್ ವಲ್ರ್ಡ್ ಅಂತ ಅಂದುಕೊಂಡು ಬರಬಾರದು. ಟಿವಿ ಚಾನಲ್ ಅಂದೊಡನೆ ನಿರೂಪಕ/ಕಿಯೇ ಆಗಬೇಕೆಂದೇನಿಲ್ಲ. ಕಾಪಿ ಎಡಿಟರ್ ಯಿಂದ ಹಿಡಿದು ರಿಪೋರ್ಟರ್, ಬುಲೆಟಿನ್ ಪ್ರಡ್ಯೂಸರ್, ಪ್ರೋಗ್ರಾಂ ಪ್ರೊಡ್ಯುಸರ್, ಆ್ಯಂಕರ್ ಎಲ್ಲರೂ ಜರ್ನಲಿಸ್ಟ್ ಗಳೇ. ಯಾರ್ ಸ್ಟಾರ್‍ಗಳಲ್ಲ. ಯಾವ ಕೆಲಸವೂ ಮೇಲಲ್ಲ, ಕೆಳಗಲ್ಲ. ಇಡೀ ಟೀಂ ಇಲ್ದೆ ಬರೀ ಆ್ಯಂಕರ್ ಏನೂ ಮಾಡಲು ಸಾಧ್ಯವಿಲ್ಲ. ಒಂದು ನ್ಯೂಸ್ ಚಾನಲ್‍ನಲ್ಲಿ ಇರೋ ಸುಮಾರು 500 ಜರ್ನಲಿಸ್ಟ್ ಗಳಲ್ಲಿ ಆ್ಯಂಕರ್ ಕೂಡ ತಂಡದ ಒಂದು ಭಾಗವಷ್ಟೇ. ನಾನೂ ನನ್ನನ್ನು ಯಾವತ್ತೂ ಆ್ಯಂಕರ್ ಅಂತ ಅಂದುಕೊಂಡಿಲ್ಲ. ನಾನೂ ಕೂಡ ಒಬ್ಬ ಜರ್ನಲಿಸ್ಟ್ . ಮಾಧ್ಯಮಕ್ಕೆ ಎಲ್ಲಾ ಕೆಲಸಕ್ಕೂ ಸಿದ್ಧರಿರುವ  ಜರ್ನಲಿಸ್ಟ್ ಗಳಾಗಿ ಬರಬೇಕು’ ಎನ್ನುತ್ತಾರೆ ಅಮರ್.

ಸುವರ್ಣ ನ್ಯೂಸ್‍ನಲ್ಲಿ ಟ್ರೈನಿಯಾಗಿ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಅಮರ್ ಪ್ರಸಾದ್ ಇವತ್ತು ನಂಬರ್ 1 ಸುದ್ದಿವಾಹಿನಿ ಟಿವಿ9ನ ಪ್ರಮುಖ ನಿರೂಪಕರಲ್ಲಿ ಒಬ್ಬರು. ಕನ್ನಡ ಮಾಧ್ಯಮ ಜಗತ್ತಿನ ಸ್ಟಾರ್ ನಿರೂಪಕರಲ್ಲಿ ಪ್ರಥಮ ಸಾಲಿನಲ್ಲಿ ನಿಲ್ಲುತ್ತಾರೆ. ಹೆಮ್ಮರವಾಗಿ ಬೆಳೆಯುತ್ತಿರುವ ಆ್ಯಂಕರ್ ಅಮರ್ ಅವರಿಗೆ ಶುಭವಾಗಲಿ. ಇನ್ನೂ ಹೆಚ್ಚಿನ ಯಶಸ್ಸು ಅವರದ್ದಾಗಲಿ.
©Billavas Poojarys.




0 comments: