ರಂಗ ಕನಸಿನ ಸರದಾರ #ಲಕ್ಷ್ಮಣ_ಪೂಜಾರಿ
ನಾಟಕದ ಗೀಳು ಹಚ್ಚಿಕೊಂಡವರು ಕಲಾ ಸಾಗರ ತಂಡದ "ಅರ್ಥವಿಲ್ಲದ ಬದುಕು' ನಾಟಕವನ್ನು ನೋಡಿರಬಹುದು. ನಾಟಕ ನೋಡಿದವರು ಅದರಲ್ಲಿನ ಟಿ.ಸಿ. ಜಗಲೂರು ಪಾತ್ರ ವಹಿಸಿದ ಲಕ್ಷ್ಮಣ ಪೂಜಾರಿಯನ್ನು ಮರೆಯಲು ಸಾಧ್ಯವೇ? ಕಂಚಿನ ಕಂಠದ, ಗಂಭೀರ ಮುಖದ, ಕಣ್ಣುಗಳಲ್ಲೇ ನೋವನ್ನೂ ನಗುವನ್ನೂ ಸೂಸುವ ಲಕ್ಷ್ಮಣ ನಾಟಕ ನೋಡಿದವರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. "ಅಭಿನವ ಚಾಪ್ಲಿನ್' ನಾಟಕದ ಚಾಪ್ಲಿನ್ ಪಾತ್ರದಲ್ಲಾಗಲಿ, "ಅರಳಿದ ಗಝಲುಗಳು' ನಾಟಕದ ಕಲ್ಲು ಮಿಯಾ ಪಾತ್ರದಗಲಿ, ನಾಟಕದ ಪಾತ್ರಕ್ಕೆ ಜೀವ ತುಂಬುತ್ತಾರೆ ಲಕ್ಷ್ಮಣ ಪೂಜಾರಿ.
ಕುಂದಾಪುರ, ಶೀರೂರು ಗ್ರಾಮದ ಉದೂರು ಎಂಬ ಚಿಕ್ಕ ಊರು ಲಕ್ಷ್ಮಣರದ್ದು. ಪ್ರಸ್ತುತ ಹೊಟೇಲಿನಲ್ಲಿ ಸಪ್ಲಾಯರ್ ಕೆಲಸ ಮಾಡುತ್ತಿದ್ದು, ನಾಟಕದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಲಕ್ಷ್ಮಣ ಪೂಜಾರಿಯವರದ್ದು ಹುಟ್ಟು ಪ್ರತಿಭೆ. ಚಿಕ್ಕವನಿರುವಾಗಲೇ ಬಯಲಾಟ ನೋಡುತ್ತ ಕನಸಿನ ಲೋಕಕ್ಕೆ ತೆರಳುತ್ತಿದ್ದರು. ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿ ಹೊಟೇಲ್ ಕೆಲಸಕ್ಕೆ ಸೇರಿದರು. ಹಲವು ಊರುಗಳಲ್ಲಿ, ಹಲವು ಹೊಟೇಲುಗಳಲ್ಲಿ ಕೆಲಸ. ಬೆಂಗಳೂರಿನ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದರೂ ಬಣ್ಣ ಹಚ್ಚುವ ಕನಸನ್ನು ಕಾಣತೊಡಗಿದರು. ಕನ್ನಡದ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು ಲಕ್ಷ್ಮಣ ಕೆಲಸ ಮಾಡುತ್ತಿದ್ದ ಹೊಟೇಲಿಗೆ ಬಂದಾಗ ಬಣ್ಣ ಹಚ್ಚುವ ಕನಸು ಮತ್ತೆ ಚಿಗುರೊಡೆಯಿತು. ಗಿರೀಶ ಕಾಸರವಳ್ಳಿಯವರ ಸಲಹೆಯಂತೆ ನಟನೆಯಲ್ಲಿ ತರಬೇತಿ ಪಡೆಯಲು ನಿರ್ಧರಿಸಿದರು. ಕಷ್ಟಪಟ್ಟು ಹಣ ಸಂಪಾದಿಸಿ ಖ್ಯಾತ ತರಬೇತಿ ಕೇಂದ್ರವೊಂದರಲ್ಲಿ ನಟನೆಯ ತರಬೇತಿ ಪಡೆದರು. ಸ್ನೇಹಿತನೊಬ್ಬ ಹೆಸರಾಂತ ನಾಟಕ ತಂಡ "ಕಲಾ ಸಾಗರ'ಕ್ಕೆ ಪರಿಚಯಿಸಿದಾಗ ಲಕ್ಷ್ಮಣರ ರಂಗ ಪ್ರಯಾಣ ಶುರುವಾಯಿತು.
ಲಕ್ಷ್ಮಣರ ಮೊದಲ ನಾಟಕ ಕಲಾ ಸಾಗರ ತಂಡದೊಡನೆ, ನಾಟಕ -"ವಲಸೆ ಹಕ್ಕಿ ಹಾಡು'. ಇದೇ ನಾಟಕ ತಂಡದೊಡನೆ "ಅರ್ಥವಿಲ್ಲದ ಬದುಕು', "ಕೊಳಗ' ಮುಂದಿನ ನಾಟಕಗಳಾಗಿದ್ದವು. ಅಲ್ಲದೆ ಡ್ರಾಮಾಟ್ರಿಕ್ಸ್ ತಂಡದೊಡನೆ "ರಾಮ ಫಮ್ ತೆನಾಲಿ, "ಅರಳಿದ ಗಜಲುಗಳು', "ಅಭಿನವ ಚಾಪ್ಲಿನ್' ಹೀಗೆ ಹಲವಾರು ನಾಟಗಳಲ್ಲಿ ಅಭಿನಯಿಸಿದ್ದಾರೆ. ನಾಟಕವಲ್ಲದೆ ಕೆಲವು ಕನ್ನಡ ಟಿವಿ ಸಿರಿಯಲ್ ಮತ್ತು "ಕಾಮನ ಬಿಲ್ಲು', 'ಕೌತುಕ' ಹಲವು ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಲಕ್ಷ್ಮಣ ಈಗ ಬೆಂಗಳೂರಿನ ಬಿಟಿಎಂ ಲೇಔಟ್‌ನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸಹ ಕೆಲಸಗಾರರ ಮತ್ತು ಹೊಟೇಲ್ ಮಾಲಕರ ಸಹಕಾರದಿಂದ ಉದ್ಯೋಗ ಮತ್ತು ಅಭಿನಯವೆಂಬ ಅವಳಿ ದೋಣಿಗಳಲ್ಲಿ ಸಾಗಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಲಕ್ಷ್ಮಣ.
0 comments: