Friday, January 11, 2019

ಶ್ರೀಲಂಕಾ,ಸಿಂಗಾಪುರದಲ್ಲಿ ಕಟಪಾಡಿ ಕಟ್ಟಪ್ಪ

ಶ್ರೀಲಂಕಾ, ಸಿಂಗಾಪುರದಲ್ಲಿ #ಕಟಪಾಡಿ_ಕಟ್ಟಪ್ಪ

ಯಶ್‌ ಅಭಿನಯದ ಕೆಜಿಎಫ್‌ ಸಿನೆಮಾ ಇತ್ತೀಚೆಗೆ ದೇಶ- ವಿದೇಶದಲ್ಲಿ ರಿಲೀಸ್‌ ಆಗುವ ಮೂಲಕ ಸ್ಯಾಂಡಲ್‌ವುಡ್‌ ಸಿನೆಮಾ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಸಿನೆಮಾ ಹವಾ ಅಂದರೆ ಹೀಗಿರಬೇಕು ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ನೋಡುವಂತೆ ಮಾಡಿತ್ತು. ನಿಜಕ್ಕೂ ಕನ್ನಡ ಸಿನೆಮಾ ಇಂಡಸ್ಟ್ರಿಗೆ ಇದೊಂದು ದೊಡ್ಡ ಕೊಡುಗೆ ಎಂದೇ ಭಾವಿಸಲಾಗಿದೆ. ಇಂತಹ ಪ್ರಯತ್ನ ಸ್ಯಾಂಡಲ್‌ವುಡ್‌ನ‌ಲ್ಲಿ ನಡೆದಾಗ ನಮ್ಮಲ್ಲಿಯೂ ಹೀಗೊಂದು ಪ್ರಯತ್ನ ನಡೆಯಲಿ ಎಂದು ಕೋಸ್ಟಲ್‌ವುಡ್‌ನ‌ಲ್ಲಿಯೂ ನಿರೀಕ್ಷೆ ಹುಟ್ಟಿತ್ತು. ಇದೇ ಪ್ರಯತ್ನಕ್ಕೆ ಈಗ ಜೀವ ದೊರಕುತ್ತಿದೆ.

ಕೋಸ್ಟಲ್‌ವುಡ್‌ ಸಿನೆಮಾದಲ್ಲಿ ಸಾಕಷ್ಟು ಸದ್ದು ಮಾಡಿರುವ 'ಕಟಪಾಡಿ ಕಟ್ಟಪ್ಪೆ' ಸಿನೆಮಾ ಇದೇ ರೀತಿ ಹವಾ ಸೃಷ್ಟಿಸುವ ತವಕದಲ್ಲಿದೆ. ಹೇಗೆಂದರೆ ಈ ಸಿನೆಮಾ ದೇಶ- ವಿದೇಶದ 200ಕ್ಕೂ ಅಧಿಕ ಸೆಂಟರ್‌ನಲ್ಲಿ ರಿಲೀಸ್‌ ಆಗುವ ಹುಮ್ಮಸ್ಸಿನಲ್ಲಿದೆ. ಮಾರ್ಚ್‌ನಲ್ಲಿ ಇದು 200ಕ್ಕೂ ಅಧಿಕ ಸೆಂಟರ್‌ನಲ್ಲಿ ರಿಲೀಸ್‌ ಆಗಲು ಸಿದ್ಧತೆ ನಡೆಯುತ್ತಿದೆ. ಇದು ಕೋಸ್ಟಲ್‌ವುಡ್‌ನ‌ಲ್ಲಿ ಅಚ್ಚರಿ ಹಾಗೂ ಕುತೂಹಲದ ಸಂಗತಿ.

ವಿಶೇಷವೆಂದರೆ ಈ ಸಿನೆಮಾ ಶ್ರೀಲಂಕಾದಲ್ಲಿಯೂ ಬಿಡುಗಡೆಯಾಗಲಿದೆ. 2013ರಲ್ಲಿ ಶ್ರೀಲಂಕಾದಲ್ಲಿ ರಾಜೇಶ್‌ ಬ್ರಹ್ಮಾವರ ಸಹಿತ ಇತರರು 'ರಾಜ್‌ ಕಪ್‌' ಕ್ರಿಕೆಟ್ ಪಂದ್ಯಾಟ ಸಂಘಟಿಸಿದ್ದರು. ಹೀಗಾಗಿ ಶ್ರೀಲಂಕಾ ವ್ಯಾಪ್ತಿಯಲ್ಲಿನ ಕನ್ನಡಿಗರ ಜತೆಗೆ ಒಡನಾಟ ಬೆಳೆಸಿಕೊಂಡ ರಾಜೇಶ್‌ ಈಗ ತಮ್ಮದೇ ನಿರ್ಮಾಣದ ಸಿನೆಮಾವನ್ನು ಅಲ್ಲಿನ ಕನ್ನಡಿಗರಿಗೆ ತೋರಿಸಲು ಉತ್ಸುಕರಾಗಿದ್ದಾರೆ. ಸಾವಿರಾರು ಜನರು ಕನ್ನಡಿಗರು ನೆಲೆಸಿರುವ ಶ್ರೀಲಂಕಾದ ಜಾಫಾದಲ್ಲಿ ಸಿನೆಮಾ ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ. ಅಲ್ಲಿನ ಆಸಕ್ತರು ಕೂಡ ಸಿನೆಮಾ ನೋಡಲು ಅನುವಾಗುವಂತೆ ಇಂಗ್ಲಿಷ್‌ ಸಬ್‌ಟೈಟಲ್‌ ಕೂಡ ಮಾಡಲಾಗಿದೆ.

ಜತೆಗೆ ಸಿಂಗಾಪುರ, ಮಲೇಶಿಯಾ, ದುಬೈ, ಅಬುದಾಬಿ, ಶಾರ್ಜಾ, ಬಹರೈನ್‌ನಲ್ಲಿಯೂ ಕಟಪಾಡಿ ಕಟ್ಟಪ್ಪ ಸಿನೆಮಾ ರಿಲೀಸ್‌ ಆಗಲಿದೆ ಹಾಗೂ ಹೊಸದಿಲ್ಲಿ, ಸೂರತ್‌, ಗುಜರಾತ್‌, ಉತ್ತರಪ್ರದೇಶ, ಮಧ್ಯಪ್ರದೇಶ, ಹೈದರಾಬಾದ್‌, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ ಸಹಿತ ಹೊರರಾಜ್ಯ ದಲ್ಲಿಯೂ ಸಿನೆಮಾ ರಿಲೀಸ್‌ ಆಗಲಿದೆ. ಕರ್ನಾಟಕದ ಮೂವತ್ತೂ ಜಿಲ್ಲೆಗಳಲ್ಲಿ ಬಿಡುಗಡೆ ಕಾಣುವ ಈ ಸಿನೆಮಾ ಬೆಂಗಳೂರಿನ 24 ಸೆಂಟರ್‌ನಲ್ಲಿ ರಿಲೀಸ್‌ ಮಾಡಲು ಸಿನೆಮಾ ತಂಡ ನಿರ್ಧರಿಸಿದೆ. ಇದೆಲ್ಲವೂ ಕೋಸ್ಟಲ್‌ವುಡ್‌ ಪಾಲಿಗೆ ಮೊದಲ ಅನುಭವ.

ಒಂದು ಪ್ರಾದೇಶಿಕ ಚಿತ್ರ ಪ್ರಥಮ ಬಾರಿಗೆ ಇಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುವ ಹೆಗ್ಗಳಿಕೆಯನ್ನು 'ಕಟಪಾಡಿ ಕಟ್ಟಪ್ಪ' ಚಿತ್ರ ಮುಡಿಗೇರಿಸಿ ಕೊಳ್ಳಲಿದೆ. ದೇಶ- ವಿದೇಶದಲ್ಲಿ ರಿಲೀಸ್‌ ಆಗುವ ಜತೆಗೆ ಕರಾವಳಿ ಯ ಎಲ್ಲ ಥಿಯೇಟರ್‌ನಲ್ಲಿಯೂ ಸಿನೆಮಾ ರಿಲೀಸ್‌ ಮಾಡುವುದು ಸಿನೆಮಾ ತಂಡದ ಯೋಚನೆ.
ಬ್ರಹ್ಮಾ ವರ್‌ ಮೂವೀಸ್‌ ಲಾಂಛ ನದಲ್ಲಿ ಮೂಡಿಬಂದಿರುವ 'ಕಟಪಾಡಿ ಕಟ್ಟಪ್ಪ' ಚಿತ್ರಕ್ಕೆ ರಾಜೇಶ್‌ ಬ್ರಹ್ಮಾವರ್‌ ನಿರ್ಮಾಪಕರು. ಯುವ ನಿರ್ದೇಶಕ ಜೆ.ಪಿ. ತೂಮಿನಾಡ್‌ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದ್ದು, ಛಾಯಾಗ್ರಾಹಕರಾಗಿ ರುದ್ರಮುನಿ ಅವರು ಕೈಚಳಕ ತೋರಿಸಿದ್ದಾರೆ.

ಸಂಕಲನದಲ್ಲಿ ಗಣೇಶ್‌ ನೀರ್ಚಾಲ್‌, ಸಂಗೀತ ಪ್ರಕಾಶ್‌ ನೀಡಿದ್ದಾರೆ. ಜತೆಗೆ ತುಳುರಂಗ ಭೂಮಿಯ ದಿಗ್ಗಜರ ದಂಡು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಥಮ ಬಾರಿಗೆ ಉದಯ ಪೂಜಾರಿ ಬಳ್ಳಾಲ್‌ಬಾಗ್‌ ನಾಯಕ ನಟರಾಗಿ, ಚರೀಶ್ಮಾ ಆಮೀನ್‌ ಪರಂಗಿಪೇಟೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಯಜ್ಞೇಶ್ವರ್‌ ಬರ್ಕೆ, ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲ್‌, ಪಮ್ಮಿ ಕೊಡಿಯಾಲ್‌ಬೈಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌ ವಾಮಂಜೂರ್‌, ದೀಪಕ್‌ ರೈ ಪಾಣಾಜೆ, 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಸೂರಜ್‌ ಪಾಂಡೇಶ್ವರ, ಧೀರಜ್‌ ನೀರುಮಾರ್ಗ, ಪ್ರಶಾಂತ್‌ ಅಂಚನ್‌ ಸಹಿತ ಇನ್ನು ಹಲವು ಕಲಾವಿದರು ಸಿನೆಮಾದಲ್ಲಿ ಅಭಿನಯಿಸಿದ್ದಾರೆ.

ಇದೇ ಸಿನೆಮಾದ ಟೀಸರ್‌ ಇತ್ತೀಚೆಗೆ ಮಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್‌ ಆಗಿತ್ತು. ಆಡಿಯೋ ರಿಲೀಸ್‌ ಅನ್ನು ಚಿತ್ರನಟ ಸುದೀಪ್‌ ಅವರು ಮಂಗಳೂರಿನ ಪುರಭವನದಲ್ಲಿ ನಡೆಸಿದ್ದರು. ಈ ಮೂಲಕವೇ ಕಟಪಾಡಿ ಕಟ್ಟಪ್ಪ ಸಿನೆಮಾ ಕರಾವಳಿಯಲ್ಲಿ ಹವಾ ಸೃಷ್ಟಿಸಿತ್ತು. ಈಗ ದೇಶ- ವಿದೇಶದ 200 ಸೆಂಟರ್‌ನಲ್ಲಿ ರಿಲೀಸ್‌ ಎಂಬ ಸುದ್ದಿಯ ಮೂಲಕ ಕೋಸ್ಟಲ್‌ವುಡ್‌ ಸಿನೆಮಾ ಜಗದಗಲ ವಿಸ್ತರಿಸಲು ರೆಡಿಯಾಗಿರುವುದು ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ

✍ದಿನೇಶ್‌ ಇರಾ
#Billavas_Poojarysಶ್ರೀಲಂಕಾ ಸಿಂಗಾಪುರ

0 comments: