Tuesday, January 29, 2019

ಅಪ್ರತಿಮ ಯಕ್ಷಗಾನ ಕಲಾವಿದ ಬಿಲ್ಲವರ ಹೆಮ್ಮೆ ಅಕ್ಷಯ್ ಕುಮಾರ್ ಮಾರ್ನಾಡ್

"ಅಕ್ಷಯ್ ಕುಮಾರ್ ಮಾರ್ನಾಡ್"
ಮೊಗೆದಷ್ಟೂ ಮುಗಿಯದ ಚೆಲುವಿನ
#ಅಕ್ಷಯ_ಸುಂದರಿ

ಕಟೀಲು ಆರೂ ಮೇಳಗಳಲ್ಲಿ ದೇವಿಮಹಾತ್ಮೆಯಂತ ಪ್ರಸಂಗಗಳನ್ನು ಆಡಿಸುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ, ಅದರಲ್ಲೂ ಕಟೀಲು ಐದನೇ.ಮೇಳದಲ್ಲಿ ಬಳ್ಳಮಂಜರು `` ಜನನಿ ಆಜ್ಙೆಯಲಿ ಮಾಲಿನಿಯೂ ವರ ತನುಜಾಪೇಕ್ಷೆಯಲಿ ಕಾಮಿನಿಯೂ`` ಅನ್ನತ್ತಿದ್ದ ಹಾಗೆಯೇ ಪ್ರೇಕ್ಷಕರ ದೃಷ್ಟಿಯೆಲ್ಲ ರಂಗದತ್ತ ಒಮ್ಮೆಲೇ ಏನೋ ಹುಡುಕುವರಂತೆ ನೆಡುವುದು ಸಾಮಾನ್ಯವಾಗಿ ಹೋಗಿದೆ. ಅನಂತರ ಮಹಿಷನ ಆಗಮನದ ವರೆಗೂ ಚಿತ್ತಕದಡದೆ ತದೇಕಚಿತ್ತರಾಗಿ ನೋಡುವ ಪರಿ ಎಂತವರಿಗೂ ಆಶ್ಚರ್ಯವಾಗದೇ ಇರಲಾರದು ಅಷ್ಡರ ಮಟ್ಟಿಗೆ ದೇವಿಮಹಾತ್ಮ್ಯೆಯ ಮಾಲಿನಿ ಹೆಸರುಗಳಿಸಿದ್ದಾಳೆ..!. ಹಾಂ, ನಾವೀಗ ಹೇಳ ಹೊರಟಿರುವುದು ಪ್ರಸ್ತುತ ಕಟೀಲು 5 ನೇ ಮೇಳದಲ್ಲಿರುವ "ಅಕ್ಷಯ" ಎಂಬ 'ಅಕ್ಷಯಪಾತ್ರೆ' ಯ ಬಗ್ಗೆ.

ಬಾಲ್ಯ, ಶಿಕ್ಷಣ ಮತ್ತು ಪಾದಾರ್ಪಣೆ ಕಾರ್ಕಳ ತಾಲ್ಲೂಕಿನ ಮೂಡಬಿದ್ರೆ ಸಮೀಪದ ಮಾರ್ನಾಡಿನಲ್ಲಿ "ಅಕ್ಷಯ" ನಿಲಯದ ಕೃಷ್ಣ ಮತ್ತು ಯಶೋಧ ದಂಪತಿಗಳ ಐದು ಜನ ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದ ಅಕ್ಷಯ್ ಇಬ್ಬರು ಅಕ್ಕ ಮತ್ತು ಇಬ್ಬರು ಅಣ್ಣಂದಿರ ಮುದ್ದಿನ ತಮ್ಮನಾಗಿದ್ದಾರೆ. ಎಳೆವೆಯಲ್ಲಿರುವಾಗ ಇವರ ಅಜ್ಜಿ ಇವರನ್ನ ಜಾತ್ರೆ, ಕೋಲ,ಯಕ್ಷಗಾನಗಳಿಗೆಲ್ಲ ಕರೆದುಕೊಂಡು ಹೋದದ್ದರಿಂದಲೋ ಏನೋ ಅಲ್ಲಿಂದಲೇ ಯಕ್ಷಗಾನದೆಡೆಗೆ ಆಸಕ್ತಿಯನ್ನು ಬೆಳೆಸಿಕೊಂಡ ಅಕ್ಷಯ್ ತದನಂತರ ಸಮೀಪದಲ್ಲಿ ನಡೆಯುವ ಯಕ್ಷಗಾನಗಳಿಗೆ ಹಠಹಿಡಿದು ಹೋಗಿ ಬರುವಂತಾದರು. ಹಾಗೇ ಹೋಗುತ್ತಿದ್ದಾಗಲೇ ಪ್ರಥಮ ಬಾರಿಗೆ ಯಕ್ಷಗಾನ ನೋಡಿದ್ದು ಎರಡನೇ ತರಗತಿಯಲ್ಲಿರುವಾಗ. ಕಟೀಲು ಮೇಳದ ದೇವಿಮಹಾತ್ಮ್ಯೆಯನ್ನು. ಹೈಸ್ಕೂಲು ವಿದ್ಯಾಭ್ಯಾಸಕ್ಕಾಗಿ ಎಸ್.ಎನ್.ವಿ. ಸ್ಕೂಲ್ ಆನೆಕೆರೆಗೆ ಸೇರಿದ ಅಕ್ಷಯ್ ಎಂಟನೇ ತರಗತಿಯಲ್ಲಿರುವಾಗ ಮಂಗಳಾದೇವಿ ಡೇರೆ ಮೇಳದ ಆಟ ನೋಡಲು ಹೋಗುವಾಗ ಟಿಕೆಟ್ ಗೆಂದು ಅಮ್ಮನಲ್ಲಿ ಹಣ ಕೇಳಿ ಅವರು ಕೊಡದೇ ಇದ್ದಲ್ಲಿ ಗೇರುಬೀಜ ಮಾರಿ ಅದರಿಂದ ಬಂದ ದುಡ್ಡಲ್ಲಿ ಟಿಕೆಟ್ ಕೊಂಡು "ಗರುಡರೇಖೆ" ಎಂಬ ತುಳು ಪ್ರಸಂಗನೋಡಿದ ಇವರ ಯಕ್ಷಗಾನದ ಆಸಕ್ತಿ ಮೆಚ್ಚಬೇಕಾದ್ದೇ ಸರಿ....

ಹೈಸ್ಕೂಲು ವಿದ್ಯಾಭ್ಯಾಸ ಮುಗಿದ ನಂತರ ಪದವಿಪೂರ್ವ ಶಿಕ್ಷಣಕ್ಕಾಗಿ ಕಾರ್ಕಳದ ಭುವನೇಂದ್ರ ಕಾಲೇಜಿಗೆ ಸೇರಿದ ಅಕ್ಷಯ್ ರಿಗೆ ಈ ಶಿಕ್ಷಣ ಸಂಸ್ಥೆಯೇ ಒಂದರ್ಥದಲ್ಲಿ ಅಡಿಪಾಯವಾಯಿತೆಂದರೆ ತಪ್ಪಾಗಲಾರದೇನೋ... ಅದಕ್ಕೆ ಕಾರಣವೂ ಇಲ್ಲದಿಲ್ಲ ಮೊದಲೇ ಯಕ್ಷಗಾನ ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದ ಅಕ್ಷಯ್ ರಿಗೆ ಕಾಲೇಜಿನಲ್ಲಿ ಕಲಿಸುತ್ತಿದ್ದ ಯಕ್ಷಗಾನ ನಾಟ್ಯವೆಂಬುದು ಹಸಿದವನಿಗೆ ಪರಮಾನ್ನ ಸಿಕ್ಕ ಪರಿಯಂತಾಗಿತ್ತು. ಹೀಗೆ ಮೊದಲಬಾರಿಗೆ ಯಕ್ಷಗಾನ ಕಲಿಯಲು ಭುವನೇಂದ್ರ ಕಾಲೇಜು ಒಂದು ವೇದಿಕೆಯಾಗಿತ್ತಲ್ಲದೇ ಶ್ರೀ ಮಹಾವೀರ ಪಾಂಡಿಯಂತ ಗುರುಗಳನ್ನೂ ಒದಗಿಸಿತ್ತು, ಆಗ ಇವರ ಕಲಿಕೆಗೆ ಸ್ನೇಹಿತರು ಹುರಿದುಂಬಿಸುತ್ತಿದ್ದರಾದರೂ ಮನೆಯವರ ಸಹಕಾರವೆಂಬುದು ಇರಲಿಲ್ಲ.. ಆದರೇನಂತೆ ಸಿಕ್ಕ ಬೋಜನದಲ್ಲೇ ಸಂತೃಪ್ತಿ ಹೊಂದಿದ' ಇವರು ಅಲ್ಲಿಂದಲೇ ವೇಷಗಳನ್ನು ಮಾಡಲು ಆರಂಬಿಸಿದ್ದು. ಕಾಲೇಜು' ದಿನಗಳಲ್ಲಿ ಪುರುಷ ವೇಷಗಳನ್ನು ಮಾಡಿ ಸೈ ಎನಿಸಿಕೊಳ್ಳುತ್ತಿದ್ದ ಅಕ್ಷಯ್ ರು ಸ್ತ್ರೀ ವೇಷದೆಡೆಗೆ ವಾಲಿದ್ದು ಒಂದು ಪವಾಡವೇ ಸರಿ. ಕಾಲೇಜಿನಲ್ಲಿ ಒಂದು ಬಾರಿ ಯಕ್ಷಗಾನ ನಡೆಯುವಾಗ ಸ್ತ್ರೀ ವೇಷ ಮಾಡುವರು ಗೈರಾಗಿದ್ದ ಕಾರಣ ಆ ವೇಷ ಮಾಡುವ ಜವಬ್ದಾರಿ ಇವರ ಹೆಗಲೇರಿ ಬಂತು, ಸಿಕ್ಕ ಸಣ್ಣ ವೇಷದಲ್ಲೇ ಜನಮೆಚ್ಚುಗೆ ಗಳಿಸಿದ ಅಕ್ಷಯ್ ಮತ್ತೆ ಪುರುಷ ವೇಷದೆಡೆಗೆ ಹಿಂತಿರುಗಿ ನೋಡಿದ್ದೇ ಕಡಿಮೆ. ಶ್ರೀ ದೀಪಕ್ ರಾವ್ ಪೇಜಾವರ ಅವರ ಸ್ತ್ರೀ ವೇಷದಿಂದ ಪ್ರೇರಣೆಹೊಂದಿದ ಇವರು ಇಂದಿಗೂ ಬಣ್ಣಗಾರಿಕೆ, ವೇಷ ಭೂಷಣದಲ್ಲಿ ದೀಪಕ್ ರನ್ನು ಸ್ವಲ್ಪ ಅನುಸರಿಸುವ ಇವರು ಸ್ವಂತಿಕೆಯನ್ನು ಮೈ ಗೂಡಿಸಿಕೊಳ್ಳುವತ್ತ ವಾಲುತ್ತಿರುವುದು ಯಕ್ಷಗಾನ ರಂಗದಲ್ಲಿ ಇವರ ಬೆಳವಣಿಗೆಗೆ ಮುನ್ನುಡಿಯಾಗಿದೆ.

ಕಲಾಸೇವೆ:
ಅಮಿತ ಪ್ರತಿಭೆಯ ಉದಯೋನ್ಮುಖ ಯುವ ಕಲಾವಿದ, ಪ್ರಸ್ತುತ ಕಟೀಲಿನ 5ನೇ ಮೇಳದಲ್ಲಿ ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿ ಕಲಾಸೇವೆ
ಆಕ್ಸಿಸ್ ಬ್ಯಾ೦ಕ್ ನಿ೦ದ ಕಟೀಲು ಮೇಳಕ್ಕೆ
ಯಕ್ಷಗಾನ ಆಸಕ್ತಿಯ ಜೊತೆ ಜೊತೆಗೆ ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಹಣಕಾಸು(Finance) ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಎಂ.ಬಿ.ಎ. ಮುಗಿಸಿದ ಅಕ್ಷಯ್ ಮೂಡಬಿದ್ರೆಯ ಆಕ್ಸಿಸ್ (Axis) ಬ್ಯಾಂಕಿಗೆ ಡೆಪ್ಯೂಟಿ ಮ್ಯಾನೇಜರ್ ಆಗಿ ಸೇರಿದಮೇಲೆ ಮನೆಯವರ ಸಂಪೂರ್ಣ ಸಹಕಾರ ಸಿಕ್ಕಿದರೂ ಇವರ ನಿತ್ಯಜೀವನದಲ್ಲಿ ಕೊಂಚ ಬದಲಾವಣೆ ಆದದ್ದು ಸುಳ್ಳಲ್ಲ.. ಕೆಲಸದ ಒತ್ತಡದ ಜೊತೆ ಜೊತೆಗೆ ಯಕ್ಷಗಾನ ವೆಂಬುದು ದಿನದಿಂದ ದಿನಕ್ಕೆ ಮರೀಚಿಕೆಯಾಗತೊಡಗಿದಾಗ ನೀವು ಮೇಳಕ್ಕೆ ಸೇರಿದ ಬಗೆ ಹೇಗೆ ಎಂದು ಕೇಳಿದಾಗ ಅಕ್ಷಯ್ ಹೇಳುವುದು ಹೀಗೆ...

ಒಂದು ದಿನ ಗಣೇಶ್ ಚಂದ್ರಮಂಡಲರವರು ಫೋನ್ ಮಾಡಿ ಕೇಳಿದ್ರು, ಆಗುತ್ತಾ ಮೇಳಕ್ಕೆ ಬರುತ್ತಿರಾ ಎಂದು. ಅದಕ್ಕೆ ನಾನು ಯಾವ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ . ತದನಂತರ ಮತ್ತೆ ಕಾಲ್ ಮಾಡಿದ್ರು . ಆವಾಗಲು ನಾನು ಏನನ್ನೂ ಹೇಳಿರಲಿಲ್ಲ. ಆಮೇಲೆ ಅವರು ನನ್ನ ನಂಬರನ್ನು ಮುಂಡಾಜೆಯವರಿಗೆ ಮೆಸೇಜ್ ಮಾಡಿದರು. ಅವರು ಕಾಲ್ ಮಾಡಿದ್ರು ತುಂಬಾ ಸಲ ಹೇಳಿದ್ರು . ನಂತರ ಒಂದು ದಿನ ಅಷ್ಟಮಿಯ ಯಕ್ಷಗಾನಕ್ಕೆ ಕರೆದರು. ಆದಿನ ಮೇಳಕ್ಕೆ ಯಾರೆಲ್ಲ ಕಲಾವಿದರೆಂದು ನಿಗದಿ ಮಾಡುತ್ತಾರೆ. ಆ ದಿನವೂ ನಾನು ಹೋಗಲಿಲ್ಲ. ಮತ್ತೆ ಕಾಲ್ ಮಾಡಿದರು. ನವರಾತ್ರಿಯ ಆಟಕ್ಕಾದರು ಬನ್ನಿ ಎಂದು. ಆಮೇಲೆ ನವರಾತ್ರಿಯಂದು ವೇಷ ಮಾಡೋಣವೆಂದು ನಾನು ಹೋದೆ. ಆ ದಿನ ಮುಂಡಾಜೆಯವರು ಧನಿಗಳನ್ನು ಕರೆದುಕೊಂಡು ಬಂದು ನನ್ನಲ್ಲಿ ಮಾತನಾಡಿಸಿದರು. ಆಮೇಲೆ ಯೋಚನೆ ಮಾಡಿ ಹೇಳುತ್ತೇನೆಂದು ಹೇಳಿದ್ದೆ ನಾನು .
ಆಮೇಲೆ ಸ್ವಲ್ಪ ಸಮಯ ಬಿಟ್ಟು ಅವರೇ ತೀರ್ಮಾನ ಮಾಡಿದರು ನಾನು ಬರಲೇ ಬೇಕೆಂಬುದಾಗಿ, ಆದರೂ ನನ್ನಲ್ಲಿ ಯಾಕೋ ಸಂಕೋಚ ರಾತ್ರಿಯೆಲ್ಲಾ ಯಕ್ಷಗಾನದಲ್ಲಿ ಭಾಗವಹಿಸಿ ಮತ್ತೆ ಮರುದಿನ ಬ್ಯಾಂಕ್ ಕೆಲಸಕ್ಕೆ ಹೇಗೆ ಹೋಗುವುದೆಂದು. ಆಮೇಲೆ ನಾನೇ ಮುಂಡಾಜೆಯವರಿಗೆ ಕಾಲ್ ಮಾಡಿ ಹೇಳಿದೆ ನನ್ನಿಂದ ಆಗದು ತುಂಬಾ ಕಷ್ಟ ಅನಿಸುತ್ತಿದೆ ಎಂದು. ಆಮೇಲೆ ಸತೀಶ್ ಪಟ್ಲರವರು ನನ್ನಲ್ಲಿ ಮಾತನಾಡಿದರು, ಇಲ್ಲ ನಾನಿರುವವರೆಗೆ ನಿನಗೆ ಯಾವ ತೊಂದರೆಯೂ ಆಗದು ಎಂದು.ನಂತರ ಪಟ್ಲರ ಮೇಲೆ ಭರವಸೆಯನ್ನು ಇಟ್ಟು ಬರುತ್ತೇನೆಂದು ಒಪ್ಪಿಕೊಂಡೆ, ಆದರೂ ಮೇಳಕ್ಕೆ ಸೇರಲೋ ಬೇಡವೋ ಎಂಬ ಅನುಮಾನದಲ್ಲಿ ನಾನಿದ್ದಾಗ ನನ್ನ ಆಪ್ತ ಸ್ನೇಹಿತರಾದ ಹರಿಪ್ರಸಾದ್ ಶೆಟ್ಟಿ ಕಿನ್ನಿಗೋಳಿ ಇವರು ನನ್ನಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಆ ಸಮಯದಲ್ಲಿ ನನಗೆ ಬೆನ್ನುಲುಬಾಗಿ ನಿಂತರು, ಹೀಗೆ ನಾನು ಗಟ್ಟಿ ಮನಸು ಮಾಡಿ ಮೇಳಕ್ಕೆ ಸೇರಿದೆ.. `` ಎನ್ನುವ ಇವರ ಮಾತನ್ನ ಕೇಳುತ್ತಿದ್ದರೆ ಕೆಲಸದಲ್ಲಿನ ನಿಷ್ಠೆ ಮತ್ತು ಯಕ್ಷಗಾನದ ಸೆಳೆತ ಎರಡನ್ನೂ ಕೂಡ ನಾವಿಲ್ಲಿ ಕಾಣಬಹುದಾಗಿದೆ.
ಕಟೀಲು ಮೇಳದ ಹಲವು ಹಿರಿಯರ ಮಾರ್ಗದರ್ಶನ
ಯುವಜನತೆಯ ಆಸಕ್ತಿಗೆ ಅನುಗುಣವಾಗಿ ಶ್ರೀ ದೀಪಕ್ ರಾವ್ ಪೇಜಾವರ, ಮತ್ತು ಶಶಿಕಾಂತ್ ಶೆಟ್ಟಿ ಕಾರ್ಕಳ ಇವರ ವೇಷವನ್ನು ಬಹುವಾಗಿ ಮೆಚ್ಚಿ ಅನುಕರಿಸುವ ಇವರಿಗೆ ಕೋಳ್ಯೂರು, ತೋಡಿಕಾನ, ಹಾಗೂ ಫುಂಡರೀಕಾಕ್ಷ ರ ವೇಷವೆಂದರೆ ಅಚ್ಚುಮೆಚ್ಚು, ಅದರಲ್ಲೂ ಉಪಾಧ್ಯಾಯರ ದೇವಿಯೆಂದರೇ ಮುಗಿಯಿತು ಬೇರೆ ಮಾತಿಲ್ಲ ಎನ್ನುವ ಹಾಗೇ. ಬ್ಯಾಂಕ್ ಉದ್ಯೋಗಿಯಾಗಿರುವ ನಿಮಗೆ ಪಾತ್ರ ನಿರ್ವಹಣೆ ಕಷ್ಟವಾಗುವುದಿಲ್ಲವೇ ಎಂದು ಕೇಳಿದ್ದಕ್ಕೆ ಅಕ್ಷಯ್ ಹೀಗೆನ್ನುತ್ತಾರೆ... `` ಸಹಕಾರ ಅಂದರೆ ..ಈ ಗರತಿ ಪಾತ್ರಗಳನ್ನೂ ಮಾಡುವುದು ತುಂಬಾ ಕಷ್ಟ. ಅದಕ್ಕೆ ಪೂರ್ವ ತಯಾರಿ ಎಂಬುದು ಅತೀ ಅಗತ್ಯ ಎಷ್ಟೋಸಲ ನನಗೆ ಗರತಿ ಪಾತ್ರ ಬರುವಾಗ ತುಂಬಾ ಭಯವಾಗುತ್ತಿತ್ತು, ಯಾಕೆಂದರೆ ಅದರ ಪೂರ್ವ ತಯಾರಿಗೆ ಸಮಯವೂ ಸಾಲುತ್ತಿರಲಿಲ್ಲ. ಬೆಳಗ್ಗೆ ಎದ್ದು ಬ್ಯಾಂಕ್ ಗೆ ಬಂದರೆ ಸಾಯಂಕಾಲ 7.30. ರವರೆಗೆ ಅಲ್ಲೇ ಇರುತ್ತೇನೆ. ಮತ್ತೆ ಮೇಳಕ್ಕೆ ಹೋಗುವುದು, ಮಲಗಲು ಸಮಯವಿಲ್ಲ, ಪೂರ್ವ ತಯಾರಿಗೂ ಸಮಯವಿಲ್ಲ. ಆ ಸಮಯದಲ್ಲಿ ನಾನು ಪುಸ್ತಕ ಓದಿಯೋ ಇಲ್ಲ ಯಾರಲ್ಲಿಯೋ ಕೇಳಿಯೋ ಹೋಗುತಿದ್ದೆ.

`` ಆಮೇಲೆ ಮೇಳದಲ್ಲಿ, ಅಂದರೆ ಅಮ್ಮುಂಜೆ ಮೋಹನಣ್ಣ , ಯಾವುದಾದರು ಹೊಸ ಪ್ರಸಂಗವಿದ್ದಲ್ಲಿ ಸೀದಾ ಅಮ್ಮುಂಜೆಯವರ ಬಳಿ ಹೋಗುತಿದ್ದೆ. ಅವರಿಗೆ ತುಂಬಾ ಪ್ರಸಂಗಗಳ ಹಿಡಿತವಿದೆ. ಅವರಿಗೆ ಗೊತ್ತಿರುವುದನ್ನು ಅವರು ನನಗೆ ಹೇಳಿ ಕೊಡುತಿದ್ದರು. ಮಾನಿಷಾದದ ಸೈರಿಣಿ ಪಾತ್ರದ ಬಗ್ಗೆ ಸಂಪೂರ್ಣವಾಗಿ ಅಮ್ಮುಂಜೆಯವರನ್ನು ಅನುಸರಿಸುತಿದ್ದೇನೆ. ಯಾಕೆಂದರೆ ಮೊದಲು ಆ ಪಾತ್ರವನ್ನು ಅವರೇ ಮಾಡುತಿದ್ದರು ಹಾಗಾಗಿ ಅದನ್ನೇ ಮುಂದುವರಿಸಿದೆ. ವೇಷ ಭೂಷಣಗಳು ನನ್ನವೇ ಆದರೂ ಅರ್ಥಗಾರಿಕೆ ಮತ್ತು ನಡೆ ಮಾತ್ರ ಅಮ್ಮುಂಜೆಯವರದು, ಆಮೇಲೆ ಅಮ್ಮುಂಜೆಯವರೊಂದಿಗೆ ಯಾವುದಾದರು ಪಾತ್ರ ಇದ್ದಲ್ಲಿ ಅವರಲ್ಲೇ ಕೇಳುತಿದ್ದೆ, ಅವರೇ ಹೇಳಿಕೊಡುತಿದ್ದರು. ಹೀಗೆ ಮಾಡು ಹಾಗೆ ಮಾಡು ಹೀಗೆ ಅವರೊಂದಿಗೆ ತುಂಬಾ ಪಾತ್ರಗಳ ಬಗ್ಗೆ ಚರ್ಚಿಸುತಿದ್ದೆ.

ಮತ್ತೆ ಉಜಿರೆ ನಾರಾಯಣ ಹಾಸ್ಯಗಾರರಿಗೂ ಕೆಲವಷ್ಟು ಪ್ರಸಂಗಗಳ ಹಿಡಿತವಿದೆ. ನಳದಮಯಂತಿಯಲ್ಲಿ ಅವರಿಗೆ ದಮಯಂತಿಯ ಪಾತ್ರದಲ್ಲಿ ಸಂಪೂರ್ಣ ಹಿಡಿತವಿದೆ ಹಾಗಾಗಿ ಅವರು ಹೇಳಿಕೊಡುತಿದ್ದರು. ಕಯಾದು ಪಾತ್ರದ ಬಗ್ಗೆ ಅವರಲ್ಲಿ ಕೇಳಿದ್ದಿದೆ. ದಮಯಂತಿಯ ಬಗ್ಗೆ ಕೇಳಿದ್ದಿದೆ. ಮತ್ತೆ ಮಾಧವ ಕೊಳತ್ತಮಜಲು ಇವರೊಂದಿಗೆ ಯಾವುದಾದರು ಪಾತ್ರವಿದ್ದರೆ ಅವರೊಂದಿಗೂ ಚರ್ಚಿಸುತ್ತಿದ್ದೆ. ನಂತರ ದಿವಾಣ ಶಿವಶಂಕರ್ ಭಟ್ ಇವರಲ್ಲಿ ಯಾವುದಾದರು ಪ್ರಸಂಗದ ಅರ್ಥ ಬೇಕಿದ್ದಲ್ಲಿ ಇವರಲ್ಲೂ ಕೇಳಿದ್ದಿದೆ, ಕೆಲಸದ ಒತ್ತಡದ ಮಧ್ಯೆ ಓದಲು ಸಮಯವಿರಲಿಲ್ಲ . ಹೀಗೆ ಕೇಳಿ ತಿಳಿದುಕೊಂಡೇ ರಂಗಕ್ಕೆ ಹೋಗುತಿದ್ದೆ . ಆದಿತ್ಯವಾರ ಓದೋಣವೆಂದರೆ ವಾರದ ನಿದ್ದೆಗೆಲ್ಲಾ ಸಿಕ್ಕಿದ್ದು ಒಂದೇ ದಿನ ಎನ್ನುವಂತೆ ಭಾಸವಾಗುತ್ತಿದ್ದುದರಿಂದಲೋ ಏನೋ ಜೋರು ನಿದ್ದೆ ಬರುತ್ತಿತ್ತು ಮಲಗುತಿದ್ದೆ. ಯಾರಲ್ಲಿ ಯಾವುದೇ ಅರ್ಥ ಕೇಳಿದರೂ ಕೊನೆಗೆ ಭೇಟಿ ಮಾಡುತ್ತಿದ್ದುದು ಸತೀಶ್ ಶೆಟ್ಟಿ ಪಟ್ಲರನ್ನು. ಯಾಕೆಂದರೆ ಕೊನೆಗೆ ಅವರ ನಿರ್ದೇಶನದಂತೆ ರಂಗಕ್ಕೆ ಹೋಗುತಿದ್ದೆ. ನನ್ನ ಪ್ರವೇಶದ ಸಂದರ್ಭದಲ್ಲಿ ಅವರಿರುವುದಾದರೆ ಅವರಲ್ಲಿ ಕೇಳದೆ ಹೋಗುತ್ತಿರಲಿಲ್ಲ. ಅವರಲ್ಲಿ ಕೇಳಿಯೇ ಹೋಗುತ್ತಿದ್ದೆ. ಎನ್ನುತ್ತಾರೆ.

ಸರ್ವ ಸ್ತ್ರೀ ಪಾತ್ರಗಳಿಗೂ ಸೈ
ದಕ್ಷಯಜ್ಙದ ದಾಕ್ಷಾಯಿಣಿ, ಅಂಬೆ, ವಸ್ತ್ರಾಪಹಾರದ ದ್ರೌಪದಿ, ಚಂದ್ರಮತಿ, ಮಾನಿಷಾದದ ಸೀತೆ ಇವರ ಕನಸಿನ ವೇಷಗಳಾಗಿದ್ದು ಇಷ್ಟರೊಳಗೆ ಮಾಡಿದ ಇವರದೇ ವೇಷಗಳಲ್ಲಿ ದೇವಿಮಹಾತ್ಮ್ಯೆಯ ದೇವಿ, ಮಾಯಾ ಶೂರ್ಪನಖಿ, ಮಾನಿಷಾದದ ಸೈರಿಣಿ, ಪುನಃ ಸ್ವಯಂವರದ ದಮಯಂತಿ ವೇಷಗಳು ಅಗ್ರಸ್ಥಾನದಲ್ಲಿ ನಿಂತು ಅಚ್ಚುಮೆಚ್ಚಿನ ವೇಷಗಳು ಎನಿಸಿಕೊಂಡಿವೆ. ಯಕ್ಷಗಾನ ರಂಗದಲ್ಲಿ ನಾನಿನ್ನೂ ತೆವಳುತ್ತಿರುವ ಹಸುಗೂಸು ಎನ್ನುವ ಅಕ್ಷಯ್ ಇದೇ ರಂಗದಲ್ಲಿ ಸಾಧನೆ ಮಾಡಿ, ಯಕ್ಷಗಾನಕ್ಕೆ ಏನಾದರೂ ಕೈಲಾದ ಮಟ್ಟಿಗೆ ಕೊಡುಗೆ ನೀಡಬೇಕೆಂಬ ಹಂಬಲ ಹೊಂದಿದ ಕನಸು ಕಂಗಳ ಹುಡುಗ.

ಹಲವಾರು ವೃತ್ತಿಪರ ಮೇಳಗಳಿದ್ದರೂ ಕಟೀಲು ಮೇಳಕ್ಕೆ ಸೇರಿದ್ದು ದೇವಿಯ ದಯೆ ಎನ್ನುವ ಅಕ್ಷಯ್ ನನ್ನ ತಿರುಗಾಟವೆಂತಿದ್ದರೆ ಅದು ಕಟೀಲು ಮೇಳದಲ್ಲಿ ಮಾತ್ರ ಎಂದು ದೈನ್ಯದಿಂದ ನುಡಿಯುವ ಇವರು ಅವಕಾಶ ಮತ್ತು ಸಮಯ ಕೂಡಿಬಂದರೆ ಬಡಗಲ್ಲೂ ವೇಷಮಾಡುವ ಇರಾದೆಯನ್ನ ಹೊಂದಿದ್ದಾರೆ. ಯಕ್ಷಗಾನವನ್ನು ಪ್ರೀತಿಸಿ ಎಂದು ಪ್ರೇಕ್ಷಕರಿಗೆ ಕರೆಕೊಡುವ ಇವರು ಕಟೀಲು ಮೇಳದಲ್ಲಿ ಆಗುವುದು ದೇವಿಮಹಾತ್ಮೆಪ್ರಸಂಗ ಮಾತ್ರವಲ್ಲ ಇನ್ನೂ ಹಲವಾರು ಪ್ರಸಂಗಗಳಿವೆ ಅವನ್ನೂ ಕೂಡ ಬಂದು ನೋಡಿ ಪ್ರೋತ್ಸಾಹಿಸಿ ಆಗ ಮಾತ್ರ ರಂಗದಲ್ಲಿ ಕಲಾವಿದ ಬೆಳೆಯಲು ಸಾಧ್ಯವಾಗುತ್ತದೆ ಎನ್ನುವ ಇವರ ಮಾತಿನಲ್ಲಿ ಸತ್ಯಾಂಶ ಅಡಗಿರುವುದು ನೂರರಷ್ಟು ನಿಜವೇ ಸರಿ..

ಸತೀಶ್ ಪಟ್ಲರ ಮೆಚ್ಚುಗೆ
ಈ ಹುಡುಗನ ಬಗ್ಗೆ ಮೇಳದವರ ಅಭಿಪ್ರಾಯ ಕೂಡ ಇದಕ್ಕಿಂತವೇನೂ ಭಿನ್ನವೇನಲ್ಲ ಮನೆಯ ಮಗನಂತೆ ಆದರಿಸುವ ಕಲಾವಿದರು, ಎಲ್ಲರೂ ಹೇಳುವ ಹಾಗೆ ಅಕ್ಷಯ್ ಗೆ ಓದಲು ಸಮವಿಲ್ಲದಿರೇನಂತೆ ಕೇಳುವ ಮನಸ್ಥಿತಿಯನ್ನು ಮೈಗೂಡಿಕೊಂಡವನಿದ್ದಾನೆ ಅದು ಬೆಳೆಯುವವರ ಲಕ್ಷಣ ಎನ್ನುತ್ತಾರೆ, ಪಟ್ಲರು ಹೇಳುವ ಹಾಗೆ ಅಕ್ಷಯ್ ನ ವೇಷವನ್ನ ಮೊದಲ ಬಾರಿಗೆ ಬಾಂಬೆಯಲ್ಲಿ ನೋಡಿ ಮೆಚ್ಚಿ ಇವನು ನಮ್ಮ ಮೇಳಕ್ಕಾದೀತು ಎಂಬ ಆಲೋಚನೆ ಮೊದಲ ಬಾರಿಗೇ ಬಂದಿತ್ತು ಮತ್ತೆ ಅದು ನಿಜವೂ ಆಯಿತು ತನ್ನ ಕೆಲಸದ ಒತ್ತಡದ ಮಧ್ಯೆಯೂ ಅವನಿಗೆ ಕೊಟ್ಟ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸುವ ರೀತಿ ಮೆಚ್ಚುವಂತಾದ್ದು. ದೇವಿಪಾತ್ರ ಮಾಡುವಾಗ ಅನುಭವಿಸಿ ಮಾಡುವ ರಿತಿ ಅದ್ಭುತ ಅರ್ಥಗಾರಿಕೆಯಲ್ಲೂ ಎತ್ತರಕ್ಕೆ ಬೆಳಿದಿದ್ದಾನೆ ಆದರೆ ಕೊಂಚ ಫಕ್ವತೆ ಎನ್ನುವುದು ಬೇಕಷ್ಟೆ, ಕಲಿಯುವ ಹುಡುಗ ಇನ್ನೂ ಸಮಯವಿದೆ ಕಲಿಯುತ್ತಾನೆ ಬಿಡಿ.. ದೇವಿಪಾತ್ರ ಮಾಡುವಾಗ ಅನುಭವಿಸಿ ಮಾಡುವ ರಿತಿ ಅದ್ಭುತ ಅರ್ಥಗಾರಿಕೆಯಲ್ಲೂ ಎತ್ತರಕ್ಕೆ ಬೆಳಿದಿದ್ದಾನೆ ಆದರೆ ಕೊಂಚ ಫಕ್ವತೆ ಎನ್ನುವುದು ಬೇಕಷ್ಟೆ, ಕಲಿಯುವ ಹುಡುಗ ಇನ್ನೂ ಸಮಯವಿದೆ ಕಲಿಯುತ್ತಾನೆ ಬಿಡಿ.. ಒತ್ತಡ ಸಲ್ಲ ಎಂದು ನಗುತ್ತಾ ನುಡಿಯುತ್ತಾರೆ.
ಲೇಖಕರು : ಶ್ರುತಿ ತುಂಬ್ರಿ

0 comments: