Saturday, January 26, 2019

ಅಮರ್ ಬೊಳ್ಳಿಲು ಕೋಟಿ ಚೆನ್ನಯೆರ್ನ ಕಥೆ


ಕರಾವಳಿಯು ಅತ್ಯಮೂಲ್ಯ ಸ್ಮಾರಕಗಳ ತಾಣ ಇಲ್ಲಿ ಹಲವಾರು ಐತಿಹ್ಯಗಳಿವೆ. ಇವುಗಳಲ್ಲಿ ಕೆಲವು ಇನ್ನೂ ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡಿವೆ. ಇಂತಹುದೇ ಒಂದು ತಾಣ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ 25 ಕಿ.ಮೀ. ದೂರದಲ್ಲಿರುವ ಈಶ್ವರಮಂಗಲದ ಸಮೀಪದ ಬಡಗನ್ನೂರು ಗ್ರಾಮದಲ್ಲಿರುವ ಪಡುಮಲೆ. ಪಡುಮಲೆ ಹಿಂದೆ ಪರ್ಮಲೆ ಎಂದೇ ಖ್ಯಾತವಾಗಿತ್ತು. ಇಲ್ಲಿನ ಬಳ್ಳಾಲರು ’ತಿರುಮಲ ಬಳ್ಳಾಲರು’ ಎಂದೇ ಖ್ಯಾತರು. ನಂಬಿಕೆಯೊಂದರಂತೆ ಪೆರುಮಲೆ ಬಳ್ಳಾಲನ ಕಾಲಿಗೆ ಬೇಟೆಯ ವೇಳೆ ಕಾಸರಕ್ಕನ ಮರದ ಮುಳ್ಳು ನಾಟಿತು. ಎಂಥಾ ವೈಧ್ಯರಿಂದಲೂ ಇದನ್ನು ಗುಣಪಡಿಸಲಾಗಲಿಲ್ಲ. ಈ ವೇಳೆ ತುಂಬು ಗರ್ಭಿಣಿಯಾಗಿದ್ದ ದೇವಿ ಬೈದೆದಿ ಎಂಬ ನಾಟಿವೈದ್ಯೆಯನ್ನು ರಾಜನ ನೋವು ನಿವಾರಿಸಲು ಕರೆತರಲಾಯಿತು. ಆಕೆ ನೀಡಿದ ಮದ್ದು ರಾಜನ ಗಾಯವನ್ನು ಗುಣಪಡಿಸಿತು. ಆದರೆ ಕಾರಣಾಂತರದಿಂದ ಅಲ್ಲೇ ಉಳಿದ ದೇವಿಬೈದೆದಿ ಇಬ್ಬರು ಅವಳಿ-ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿ ಅಸು ನೀಗಿದಳು. ಮುಂದೆ ಅನಾಥ ಮಕ್ಕಳನ್ನು ಬಳ್ಳಾಲನೇ ಸಾಕಿದನು. ಕೊಟ್ಟ ಮಾತಿಗೆ ತಪ್ಪಿದನು ಎಂದು ಅನಾಥ ಮಕ್ಕಳಾದ ಕೋಟಿ-ಚೆನ್ನಯರು ಬಳ್ಳಾಲನನ್ನು ಧಿಕ್ಕರಿಸಿ ನಡೆದರು ಎಂದು ಜನ ಹೇಳುವುದುಂಟು.
ಈ ಕಥೆಯಲ್ಲಿ ಹೇಳಲಾದ ಬೂಡಿನಲ್ಲಿ ಬೆಳೆದ ಅನಾಥ ಮಕ್ಕಳಾದ ಕೋಟಿ-ಚೆನ್ನಯರೇ ಸಾಂಸ್ಕ್ರತಿಕ ವೀರರು. ಹಾಗೂ ಪ್ರಸ್ತುತ ತುಳುನಾಡಿನ ದೈವಗಳ ಸಾಲಿನಲ್ಲಿ ಹೆಸರು ಪಡೆದಿರುವವರು. ಈ ಎಲ್ಲಾ ಕಥೆಗಳಿಗೆ ಸಾಕ್ಷಿ ಎಂಬಂತೆ ಇಂದಿಗೂ ಪಡುಮಲೆಯಲ್ಲಿ ಕೋಟಿ-ಚೆನ್ನಯರು ಆಡುತ್ತಿದ್ದರು ಎನ್ನಲಾಗುತ್ತಿದ್ದ ಭಾರೀಗಾತ್ರದ ಗುಂಡುಕಲ್ಲು, ಆಡುತ್ತಿದ್ದ ಕಂಬಳಗದ್ದೆ, ಬುದ್ದಿವಂತನ ಚಾವಡಿ, ದೇಯಿಬೈದಿದಿ ಮನೆ, ಬುದ್ದಿವಂತನನ್ನು ಕೊಂದ ಸ್ಥಳ ಪತ್ತೆಯಾಗಿದೆ.
ಕೋಟಿ-ಚೆನ್ನಯರಿಗೆ ’ಕಿನ್ನಿದಾರು’ ಎಂಬ ಹೆಸರಿನ ಅಕ್ಕ ಇದ್ದು ಆಕೆಯನ್ನು ಪೈಯನ ಬೈದ ಎಂಬಾತನಿಗೆ ಮದುವೆ ಮಾಡಿಕೊಟ್ಟಿತ್ತು. ತಾವು ಕುಪಿತರಾಗಿ ಬಳ್ಳಾನ ಮನೆಯಿಂದ ಹೊರಟಾಗ ಕೋಟಿ-ಚೆನ್ನಯ್ಯರು ಮೊದಲು ಬೇಟಿ ನೀಡಿದ್ದು. ತಮ್ಮ ಅಕ್ಕನ ಮನೆಗೆ. ಆದರೆ ಕೊನೆಯ ದಿನಗಳನ್ನು ಎಣ್ಮೂರಿನಲ್ಲಿ ಕಳೆದರು. ಎಣ್ಮೂರಿನಲ್ಲಿ ಮಡಿದ ವೀರರಾದ ಕೋಟಿ-ಚೆನ್ನಯ್ಯರನ್ನು ಅಲ್ಲೇ ಸಮಾಧಿ ಮಾಡಲಾಗಿದ್ದು ಈಗಲೂ ಕೋಟಿ-ಚೆನ್ನಯ್ಯರ ಗರಡಿ ಎಂದು ಕರೆಸಿಕೊಳ್ಳುತ್ತಿದೆ. ಕೋಡಿ-ಚೆನ್ನಯ್ಯರ ಸಾಹಸ, ಧೀಮಂತಿಕೆಯಲ್ಲಿ ತುಳುನಾಡ ಜನರಿಗೆ ಅಪಾರನಂಬಿಕೆಯಿದೆ. ಇದರಿಂದಾಗಿಯೇ ಅವರು ಬುದ್ದಿವಂತನನು ಕೊಂದು ಮುಚ್ಚಿದ ಗದ್ದೆಯ ಬದುವನ್ನು ಯಾರೊಬ್ಬರು ಇದುವರೆಗೂ ತೆರೆಯಲು ಪ್ರಯತ್ನಿಸಿಲ್ಲ. ಹಾಗೊಂದು ವೇಳೆ ತೆರೆದಲ್ಲಿ ರಕ್ತ ಗೋಚರಿಸುತ್ತದೆ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.
ಆದರೆ ಇಂದು ಈ ಎಲ್ಲಾ ಭೂಮಿ ಹರಿದು ಹಂಚಿ ಹೋಗಿದ್ದು ಪ್ರತಿಯೊಂದು ಸ್ಥಳ ಒಬ್ಬೊಬ್ಬ ನಾಗರಿಕನ ಕೈ ಕೆಳಗಿದೆ ಎಂಬಾಂತಾಗಿದೆ. ಕೋಟಿ-ಚೆನ್ನಯ್ಯರ ಕಾರಣಿಕದ ನೆನಪಿಗಾಗಿ ಎಣ್ಮೂರಿನಲ್ಲಿ ಇಂದಿಗೂ ವರ್ಷಂಪ್ರತಿ ಬೈದರ ನೇಮವನ್ನು ನಡೆಸಲಾಗುತ್ತದೆ. ಈ ವೇಳೆ ಕೋಟಿ-ಚೆನ್ನಯ್ಯ ವೇಷವನ್ನು ಪರವ ಜನಾಂಗದ ಜನಧಾರಣೆ ಮಾಡುತ್ತಾರೆ. ಕೋಟಿ-ಚೆನ್ನಯ್ಯ ಹಾಗೂ ಅಕ್ಕ ಕಿನ್ನಿದಾರುವಿನ ಪಾತ್ರದಾರಿಗಳು ನರ್ತಿಸುತ್ತಾರೆ ಈ ವೇಳೆ ಕೃಷಿಯ ಲಾಭಕ್ಕೆ ಸಹಸ್ರಾರು ಜನ ಹರಕೆ ಸಲ್ಲಿಸುತ್ತಾರೆ. ಹೂವಿನ ಹರಕೆ ಇಲ್ಲಿನ ಇನ್ನೊಂದು ವಿಶೇಷ. ಎಣ್ಮೂರಿನಲ್ಲಿ ನೇಮ ನಡೆಯುವ ವೇಳೆ ದೈವದ ಪಾತ್ರದಾರಿಗಳು ಹಾಲು ಕುಡಿಯುವ ಸಲುವಾಗಿ ವೇಷ ದಾರಿಗಳಾಗಿ ಕಟ್ಟ ಎಂಬಲ್ಲಿನ ತರವಾಡು ಮನೆಗೆ ಬರುತ್ತಾರೆ. ಈ ವೇಳೆ ನಂಬಿಕೆಯೊಂದರ ಅಡಿಯಲ್ಲಿ ಜನ ದಾರಿಯಲ್ಲಿರುವ ಕೆರೆಯೊಂದನ್ನು ಹಲಗೆಗಳ ಸಹಾಯದಿಂದ ಆ ದಿನದ ಮಟ್ಟಿಗೆ ಮುಚ್ಚುತ್ತಾರೆ. ತುಳುನಾಡಿನಲ್ಲಿ ಕೋಟಿ-ಚೆನ್ನಯ್ಯರುಗಳ ಕುರಿತು ತಿಳಿವಿಲ್ಲದ ಜನರಿಲ್ಲ.
ಅವರ ಸಾಹಸ ಕಥೆಗಳು ಇಂದಿಗೂ ಜನರ ಮನೆಮಾತಾಗಿದೆ. ಹಿಂದೆ ಕೋಟಿ-ಚೆನ್ನಯ್ಯರು ಪಡುಮಲೆ ತೊರೆಯುವ ವೇಳೆ ನಾವಿಲ್ಲಿಂದ ಹೋಗುತ್ತಿದ್ದೇವೆ ಮುಂದೆ ಇಲ್ಲಿ ಬೆಕ್ಕಿಗೆ ಕೊಂಬು ಬಂದಾಗ ಬೇಯಿಸಿದ ಭತ್ತ ಮೊಳಕೆಯೊಡೆದಾಗ , ತುಂಬೆಯ ಗಿಡಕ್ಕೆ ಇಲ್ಲಿನ ಜನ ಏಣಿಯ ಮುಖಾಂತರ ಹತ್ತಿದಾಗ ಬಳ್ಳಮಲೆ, ಸುಳ್ಳಮಲೆ ಎಂಬ ಹೆಸರಿನ ಎರಡು ಕಾಡುಗಳು ಒಂದಾದಾಗ ಮತ್ತೆ ಹಿಂದಿರುಗುವೆ ಎಂಬುದಾಗಿ ಹೇಳಿ ನಡೆದಿದ್ದರು ಎಂದು ಜನರು ಹೇಳುತ್ತಾರೆ. ಕೋಟಿ-ಚೆನ್ನಯ್ಯರ ಹಾಗೂ ಪಡುಮಲೆಯ ಕುರಿತು ಅವಲೊಕಿಸಿದಾಗ ಇಂತಾ ಹಲವಾರು ಕಥೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಪಟುಮಲೆಯ ಈ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆದಿಲ್ಲ. ಈ ಕಾರ್ಯಕ್ಕೆ ಚಾಲನೆ ನೀಡದ ಹೊರತು ಈ ಪರಂಪರೆಯುಳ್ಳ ಸ್ಥಳವನ್ನು ಭವಿಷ್ಯದ ಜನಾಂಗಕ್ಕೆ ಪರಿಚಯಿಸುವುದು ಅಸಾಧ್ಯ.
ಅವತಾರ, ಕಾರಣಿಕ ಮಹಾಪುರುಷರಾದ ಕೋಟಿ ಚೆನ್ನಯರ ಮೂಲಸ್ಥಾನ ಗೆಜ್ಜೆ ಗಿರಿ ನಂದನ ಬಿತ್ತಿಲ್ ಆಗಿದ್ದು ಈ ವರ್ಷ ಆದರ ಅಷ್ಠಬಂಧ ಬ್ರಹ್ಮ ಕಲಶೋತ್ಸವ ನಡೆಯಲಿದೆ.
 

0 comments: