Saturday, January 26, 2019

ಯಕ್ಷಗಾನದ ನಾಟ್ಯ ಮಯೂರಿ ಹೇಮಲತಾ ಪೂಜಾರಿ ಬಿಲ್ಲವರ ಹೆಮ್ಮೆ

ಅಸಾಧಾರಣ ಪ್ರತಿಭೆಯಿಂದ ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ  ಗುರುತಿಸಿಕೊಂಡ ಯಕ್ಷಬಾಲೇ ಉಡುಪಿಯ ಕುಮಾರಿ_ಹೇಮಲತಾ_ಪೂಜಾರಿ

ಉಡುಪಿ ಜಿಲ್ಲೆಯ ಇಂದಿರಾ ನಗರವಾಸಿ ಶ್ರೀಯುತ  ಶ್ರೀ  ವಿಠ್ಠಲ ಪೂಜಾರಿ ಹಾಗೂ ಜಾನಕಿ ದಂಪತಿಗಳ  ಎರಡು ಮಕ್ಕಳಲ್ಲಿ  ಏಕೈಕ ಮುದ್ದಿನ  ಕುವರಿ ಹೇಮಲತಾ ಪೂಜಾರಿ

ಉಡುಪಿಯು ಸಾಂಸ್ಕೃತಿಕ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದು.   ಇಲ್ಲಿ  ಯಕ್ಷಗಾನ ಸಂಬಂಧಿ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ನಡೆಯುತ್ತಿರುತ್ತದೆ. 2007 ರಲ್ಲಿ ಅಂದಿನ ಉಡುಪಿಯ ಜನಪ್ರಿಯ  ಶಾಸಕರಾದ ಶ್ರೀಯುತ ರಘುಪತಿ ಭಟ್ ಇವರ ಆಶಯದಂತೆ ಅವರ ನೇತೃತ್ವದಲ್ಲಿ ಉಡುಪಿಯಲ್ಲಿ    ಯಕ್ಷ ಶಿಕ್ಷಣ ಟ್ರಸ್ಟ್  ಮಕ್ಕಳಿಗೆ ಯಕ್ಷಗಾನ ಕಲಿಕೆಗೆ ಅನುಕೂಲ ವ್ಯವಸ್ಥೆಯಾಗಿ ರೂಪುಗೊಂಡಾಗ .  ಉಡುಪಿಯ ಇಂದಿರಾನಗರ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷ  ಶಿಕ್ಷಕ ಕೇಶವರಾವ್ ಬಡಾ ನಿಡಿಯೂರ್ ಇವರ ಗುರು ನಿರ್ದೇಶನದಲ್ಲಿ  ಆರಂಭಗೊಂಡಿತು .  

ಆಗ ಶಾಲೆಯಲ್ಲಿ ಕಲಿಯುತ್ತಿರುವ   ಹೇಮಲತಾಳು  12 ವರ್ಷ ಪ್ರಾಯದ ಬಾಲಕಿ  ಕಲೆ ಯಾರ ಸೊತ್ತೂ ಅಲ್ಲ ಅದು ಪ್ರತಿಯೊಬ್ಬರಲ್ಲೂ  ಅಂತರ್ಗತವಾಗಿ ಇರುವ ಪ್ರಕೃತಿ ಸಹಜ ಗುಣ.ಅದಕ್ಕೆ  ಸಕಾಲದಲ್ಲಿ ಉತ್ತೇಜನ ಹಾಗೂ ಮಾರ್ಗದರ್ಶನ ದೊರಕಿದಲ್ಲಿ ಅದು ಖಂಡಿತ ಕರಗತ ವಾಗುವುದರಲ್ಲಿ ಸಂಶಯ ಇಲ್ಲ. ಹೇಮಲತರಿಗೂ ಅದೇ ಆಯ್ತು. ಮನೆಯಲ್ಲಿ ಮುಂಚೆ ಯಾರಲ್ಲೂ ಇರದ ಕಲೆ ಅವರಲ್ಲಿ ಅಂತರ್ಗತವಾಗಿತ್ತೇನೋ . ಸಕಾಲದಲ್ಲಿ ದೊರೆತ ಕಲಿಕಾ ಅವಕಾಶವನ್ನು.  ಬಳಸಿಕೊಂಡದ್ದು ಅವರು ಯಕ್ಷಗಾನ ಕಲಾವಿದೆಯಾಗಿ ರೂಪುಗೊಳ್ಳಲು ನಾಂದಿಯಾಯ್ತು.

ಯಕ್ಷಗಾನದ  ಪ್ರಾಥಮಿಕ ಶಿಕ್ಷಣವನ್ನು  ತಾನು   7 ನೇ  ತರಗತಿಯಲ್ಲಿ ಕಲಿಯುವಾಗಲೇ ಆರಂಭಿಸಿದ ಹೇಮಲತಾ  ಮುಂದಿನ ದಿನಗಳಲ್ಲಿ. ಪ್ರೌಢ ಶಾಲೆಯಲ್ಲಿ ಶ್ರೀಯುತರಾದ   ಸುರೇಶ್ ಕುಂಡೆಲ್ ,ಪ್ರಸಾದ ಕುಮಾರ್ ಮೊಗೆಬೆಟ್ಟು ,ಮಂಜುನಾಥ ಕುಲಾಲ್ ಐರೋಡಿ , ಕೃಷ್ಣ ಮೂರ್ತಿ ಭಟ್ ರಲ್ಲಿ ಕಲಿತು ಪಕ್ವಗೊಂಡ ಇವರು  ಮುಂದೆ  ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರಲ್ಲಿ  ಅಭ್ಯಾಸ ಮಾಡಿ   ಕಲೆಯಲ್ಲಿ  ಸ್ಪುಟಗೊಂಡರು

ಯಕ್ಷಗಾನ ರಂಗದಲ್ಲಿ ಮಿಂಚಿದ  ಹಾಗೆ  ಸಾಂಪ್ರದಾಯಿಕ ಶಿಕ್ಷಣ.ಕಲಿಕೆಯಲ್ಲೂ ನಿರಂತರ  ಉನ್ನತ ಶ್ರೇಣಿಯನ್ನು ಕಾಪಾಡಿಕೊಂಡ  ಇವರು  ಉಡುಪಿಯ   ಡಾ| ಜಿ ಶಂಕರ್ ಸರಕಾರಿ  ಮಹಿಳಾ.ಪ್ರಥಮ ದರ್ಜೆ  ಕಾಲೇಜು ,ಹಾಗೂ  ಸ್ನಾತಕೋತ್ತರ ಕೇಂದ್ರ ಅಜ್ಜರಕಾಡು,ಉಡುಪಿ. ಇದರ ವಿಧ್ಯಾರ್ಥಿಯಾಗಿ ಕಾಮರ್ಸ್ ನಲ್ಲಿ  .ಸ್ನಾತಕೋತ್ತರ ಪದವೀಧರೆ. ಆ ಸಮಯದಲ್ಲಿ ಯಕ್ಷ ಗುರು ಐರೋಡಿ ಮಂಜುನಾಥ ಕುಲಾಲ್ ಇವರ ಸಮರ್ಥ ನಿರ್ದೇಶನದಲ್ಲಿ ಹಲವಾರು. ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ  ವೈಯಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡದ್ದು ಇವರ ಹಿರಿಮೆ .

ನರ್ತನ, ವಾಚಿಕ, ಅಭಿನಯದಲ್ಲಿ   ಇವರು  ಹಂತ ಹಂತವಾಗಿ ಬೆಳೆದು  ಗಟ್ಟಿಗೊಳ್ಳುತ್ತ ರಂಗದಲ್ಲಿ  ತನ್ನ ಚುರುಕು ನರ್ತನ  ಉತ್ತಮ ಅಭಿನಯ ಹಾಗೂ  ಅಂಗ ಸೌಷ್ಟವದಿಂದ  ಗುರುತಿಸಿಕೊಂಡ ಇವರು   ಪುಂಡು ವೇಷಕ್ಕೆ ಹೇಳಿ ಮಾಡಿಸಿದ ಕಲಾವಿದೆ .

ಇವರ ಅಭಿನಯದಲ್ಲಿ   ಸೀತಾ ವಿಯೋಗದ ರಾಮ  ಅರ್ಜುನ ,ಬಬ್ರುವಾಹನ  ಭ್ರಮರಕುಂತಳೆ , ಕಮಲಗಂಧಿ , ಕಮಲಧ್ವಜ , ಶುಭಾಂಗ, ರುಕ್ಮಾ0ಗ ,  ಸುದರ್ಶನ , ಕಂಸ ,ಮಾಗಧ., ಪಾಪಣ್ಣ ವಿಜಯದ ಚಂದ್ರಸೇನ  ದ್ರುವ ಚರಿತ್ರೆಯ ಉತ್ತಮ ಸುರುಚಿ, ಮುಂತಾದ ವಿಭಿನ್ನ ರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಜನಮಾನಸದಲ್ಲಿ ಮೆಚ್ಚುಗೆ ಗಳಿಸಿದ   ಇವರಿಗೆ  ಪುರುಷ ವೇಷ ಹಾಗೂ ಸ್ತ್ರೀ ವೇಷಗಳ ಜೊತೆಗೆ ಕಸೆ ಸ್ತ್ರೀ ವೇಷಗಳನ್ನು.ಅದರ ಪಾತ್ರ ಗೌರವವನ್ನು ಅರಿತು.   ಅಚ್ಚುಕಟ್ಟಾಗಿ ನಿರ್ವಹಿಸಿ  ಪಾತ್ರಕ್ಕೆ ನ್ಯಾಯ ದೊರಕಿಸಿಕೊಡಬಲ್ಲ ಛಾತಿ ಕರಗತವಾಗಿದ್ದು ಇವರು    ಹೆಚ್ಚಾಗಿ ಇಷ್ಟ ಪಡುವುದು ವೇಷ ಕೇದಗೆ ಮುಂದಲೇ ವೇಷಗಳನ್ನು  .

ಉಡುಪಿ ಪರಿಸರದ  ಯಕ್ಷಗಾನ ಸಂಘಗಳಲ್ಲಿ ಕಲಾವಿದೆಯಾಗಿ ಗುರುತಿಸಿಕೊಂಡ ಇವರು   ಕಲಾಸಂಗಮ ಮಕ್ಕಳ ಯಕ್ಷಗಾನ ಮೇಳ ಕುಕ್ಕಿಕಟ್ಟೆ, ಮಹಾಲಿಂಗೇಶ್ವರ ಮಹಿಳಾ ಯಕ್ಷಗಾನ ಮೇಳ  ಪೆರ್ಣ0ಕಿಲ, ಗಜಮುಖ ಹರಿಹರ ಯಕ್ಷಗಾನ ಕಲಾವೇದಿಕೆ ಯಡ್ತಾಡಿ , ಮುಂತಾದ   ಸಂಘಗಳಲ್ಲಿ  ನೆಚ್ಚಿನ ಕಲಾವಿದೆ.

ಇವರ ಈ ಯೋಗ್ಯತೆಯಿಂದ ಕುಂದಾಪುರದಲ್ಲಿ ಜರಗಿದ ಯಕ್ಷರೋಹಣ 2018 ಯಕ್ಷಗಾನ ಸ್ಪರ್ಧೆಯಲ್ಲಿ ಪುರುಷ ಕಲಾವಿದರ ತೀವ್ರತಮ ಪೈಪೋಟಿಯ ನಡುವೆಯೂ ಪುಂಡು ವೇಷದಲ್ಲಿ ಪ್ರಥಮ ಸ್ಥಾನದ ಪ್ರಶಸ್ತಿಯನ್ನು  ತನ್ನದಾಗಿಸಿ ಕೊಂಡದ್ದು ಇವರ ಸಾಧನೆಗೆ ಸಂದ ಗೌರವ ಇನ್ನು ಮುಂದೆಯೂ ಹೆಚ್ಚಿನ ಪ್ರಶಸ್ತಿ ಗಳಿಸಿ ಕೀರ್ತಿಗಳಿಸುವಂತೆ ಯಕ್ಷ ಮಾತೆಯ ಅನುಗ್ರಹವಾಗಲಿ ಜೊತೆಗೆ ನಮ್ಮ ನಿಮ್ಮೆಲ್ಲರ ಆಶೀರ್ವಾದ ಇರಲಿ.
©ಬಿಲ್ಲವಾಸ್ ಪೂಜಾರಿ
#Hemalatha Poojary
0 comments: