Thursday, January 24, 2019

ಫ್ಯಾಷನ್ ಕೊರಿಯೋಗ್ರಾಫರ್ ತುಳುನಾಡಿನ ದೈವಪಾತ್ರಿ ಆದ ಕಥೆ


ಆತ ದೂರದ ಮುಂಬೈನಲ್ಲಿದ್ದರೆ ಫ್ಯಾಷನ್ ಲೋಕದ ತಾರೆ. ಅದೇ ತನ್ನ ಮೂಲ ನೆಲೆಗೆ ಬಂದರೆ ಪಕ್ಕಾ ದೈವದ ಪಾತ್ರಿ ಅರೆ, ಇದೇನಿದು ಮುಂಬೈನ ಫ್ಯಾಷನ್ ಲೋಕಕ್ಕೂ, ತುಳುನಾಡಿನ ದೈವಗಳಿಗೂ ಅದೇನು ಸಂಬಂಧ ಅಂತ ಅಚ್ಚರಿಯಾಗಬೇಡಿ.ವಾಣಿಜ್ಯ ನಗರಿಯ ಹುಡುಗ ಕರಾವಳಿಯಲ್ಲಿ ದೈವಪಾತ್ರಿಯಾಗಿರುವುದೇ ಇಂಟ್ರೆಸ್ಟಿಂಗ್ ಕಥೆ. ದೈವ, ದೈವರಾಧನೆ ಅಂದ್ರೆ ಏನು ಅಂತಾನೇ ಗೊತ್ತಿರದ ಆ ಹುಡುಗನನ್ನು ಅದ್ಯಾರು ದೈವದ ಚಾಕರಿಗೆ ನೇಮಿಸಿದ್ದು ಗೊತ್ತಾ? 
ಕುಟುಂಬದ ದೈವದ ಆವೇಶ
ಇಲ್ಲಿ ಆವೇಶಭರಿತವಾಗಿ ಮೈಮರೆತಿರೋ ಈ ದೈವಪಾತ್ರಿ ಫ್ಯಾಷನ್ ಕೊರಿಯೋಗ್ರಾಫರ್. ಈ ಹುಡುಗನ ಹೆಸರು ಸನಿಧ್ ಪೂಜಾರಿ. ಮೂಲತಃ ಉಡುಪಿಯ ಕಟಪಾಡಿಯ ಮಟ್ಟು ನಿವಾಸಿಯಾದ್ರೂ, ಹುಟ್ಟಿ, ಓದಿ ಬೆಳೆದಿದ್ದು ಎಲ್ಲವೂ ದೂರದ ಮುಂಬೈಯಲ್ಲಿ.ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಸನಿಧ್, ತಾಯಿ ಲಲಿತಾ ಪೂಜಾರಿ ಪೋಷಣೆಯಲ್ಲೇ ಬೆಳೆದ ಹುಡುಗ. ಹೈಸ್ಕೂಲ್ ಶಿಕ್ಷಣ ಪೂರೈಸುವ ಮುನ್ನವೇ ಮೈಮೇಲೆ ಆವೇಶ ಬರೋದ್ರಿಂದ ಮೈಮರೆಯುತ್ತಿದ್ದ. ಆದ್ರೆ ಇದು ಊರಲ್ಲಿರೋ ತಮ್ಮ ಕುಟುಂಬದ ದೈವದ ಆವೇಶ ಎಂದು ತಿಳಿದ ಮೇಲೆ ಗೊಂದಲಕ್ಕೊಳಗಾಗಿದ್ದರು.

ಫ್ಯಾಷನ್ ಲೋಕದ ನಂಟು
ಮುಂಬೈನಲ್ಲಿಯೇ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಸನಿಧ್, ಅಲ್ಲೇ ಖಾಸಗಿ ಆಂಗ್ಲ ಪತ್ರಿಕೆಯಲ್ಲಿ ಕೆಲಸ ಗಿಟ್ಟಿಸಿಕೊಂಡರು. ಅದರ ನಡುವೆಯೇ ಫ್ಯಾಷನ್ ಕೊರಿಯೋಗ್ರಾಫರ್ ಆಗಿ ಫ್ಯಾಷನ್ ಲೋಕಕ್ಕೂ ಕಾಲಿಟ್ಟರು.
ಎಫ್.ಬಿಬಿ, ಪ್ಯಾಂಟಲೂನ್ಸ್ ನಂತಹ ಜಾಹೀರಾತುಗಳಲ್ಲಿ ನಟಿಸಿದರು. ಆದರೆ ಇದೀಗ ಅನಿವಾರ್ಯವಾಗಿ ದೈವದ ಆದೇಶದಂತೆ ದೈವಪಾತ್ರಿಯಾಗಿ ಊರಲ್ಲಿ ಬಂದು ದೈವದ ಚಾಕರಿ ನಡೆಸುತ್ತಿದ್ದಾರೆ.


ದೈವ ಪಾತ್ರಿಯಾಗಿ ದೈವದ ಸೇವೆ
ಅಂದಹಾಗೆ ಈ ಸನಿಧ್ ಗೆ ಕೇವಲ 23 ರ ಹರೆಯ. ಅದಾಗಲೇ ಫ್ಯಾಷನ್ ಕೊರಿಯೋಗ್ರಾಫರ್ ಆಗಿ ಮಿಂಚು ಹರಿಸತೊಡಗಿದ್ದಾರೆ. ಅಲ್ಲದೇ ದೈವಾನುಗ್ರಹದಿಂದ ರುದ್ರ ಎಂಟರ್ ಟೈನ್ಮೆಂಟ್ ಕಟ್ಟಿಕೊಂಡು ತಾನೇ ಇವೆಂಟ್ ನಡೆಸುತ್ತಿದ್ದಾರೆ.
ಆದರೆ ದೈವ ನೀಡಿದ ಆದೇಶ ಪ್ರಕಾರ ಕಳೆದ ಮೇ ತಿಂಗಳಲ್ಲಿ ತಮ್ಮ ಕುಟುಂಬದ ಚಾಮುಂಡಿ ದೈವದ ಚಾಕರಿಗೆ ಆಗಮಿಸಿ ಎಣ್ಣೆ ಶಾಸ್ತ್ರ ಮುಗಿಸಿದ್ದಾರೆ. ಸನಿಧ್ ಪೂರ್ವಜರು ನಡೆಸುತ್ತಿದ್ದ ದೈವದ ಚಾಕರಿ ಇತ್ತೀಚಿನ ವರುಷಗಳಲ್ಲಿ ನಿಂತು ಹೋಗಿತ್ತು.
ಇದೀಗ ಮನೆ ದೈವ ಚಾಮುಂಡಿ ತಾನಾಗಿಯೇ ಮುಂಬೈಯಲ್ಲಿದ್ದ ಯುವಕನನ್ನು ತನ್ನ ಸೇವೆಗಾಗಿ ನೇಮಿಸಿಕೊಂಡಿರುವುದು ಅಚ್ಚರಿ. ಅಲ್ಲದೇ ಫ್ಯಾಷನ್ ಲೋಕದ ಗೀಳು ಅಂಟಿಸಿಕೊಂಡಿದ್ದ ಸನಿಧ್ ಗೆ ದೈವ, ದೈವಾರಾಧನೆ ಎಲ್ಲವೂ ಹೊಸತು. ಆದರೂ ಸದ್ಯ ಹಿರಿಯರ ಮಾರ್ಗದರ್ಶನ ಪಡೆದು 20 ಕ್ಕೂ ಹೆಚ್ಚು ದರ್ಶನದಲ್ಲಿ ದೈವ ಪಾತ್ರಿಯಾಗಿ ದೈವದ ಸೇವೆ ಮಾಡಿದ್ದಾರೆ.
ಮಾದರಿ ಯುವಕ :ಫ್ಯಾಷನ್ ಲೋಕದಲ್ಲಿ ತೇಲಾಡುತ್ತಿದ್ದ ಹದಿಹರೆಯದ ಯುವಕನೊಬ್ಬ ಉದ್ದನೆ ಕೂದಲು ಬಿಟ್ಟು, ಕೈಯಲ್ಲೊಂದು ಬಂಗಾರದ ಕೈಖಡ್ಗ, ಉಂಗುರ ಹಾಗೂ ಪಂಚೆ, ಮುಂಡಾಸು ಅಂತೆಲ್ಲಾ ಧರಿಸಿಕೊಂಡು ಪಕ್ಕಾ ದೈವದ ಪಾದ್ರಿಯಾಗಿ ಬದಲಾಗಿದ್ದಾನೆ.ತುಳುನಾಡಿನಲ್ಲಿ ಕಾರಣಿಕ ದೈವಗಳಿದ್ದರೂ, ಅದರಿಂದ ವಿಮುಖರಾಗುತ್ತಿರೋ ಯುವಸಮುದಾಯದ ನಡುವೆ ಈ ಯುವಕ ಮಾದರಿಯಾದ್ದಾನೆ. ಇನ್ನೊಂದೆಡೆ ಕುಟುಂಬದ ದೈವ ತನ್ನ ಚಾಕರಿಗೆ ಖುದ್ದು ತಾನೇ ಹುಡುನೊಬ್ಬನನ್ನು ಆಯ್ಕೆ ಮಾಡಿಕೊಂಡು ಚಾಕರಿ ಮಾಡಿಸುತ್ತಿರುವುದು ಅಚ್ಚರಿಯ ಸಂಗತಿಯೇ ಸರಿ.


0 comments: