Wednesday, January 9, 2019

ತುಳುನಾಡಿನ ಬ್ರಹ್ಮ ಬೈದರ್ಕಳ ಸನ್ನಿಧಿಯಲ್ಲಿ ವಿಶಿಷ್ಟ ಕಂಚಿಲ್ ಸೇವೆ

ಹರಕೆ ಹೊತ್ತ ಮಕ್ಕಳಿಗೆ 7 ರಿಂದ 12 ವರ್ಷ ತುಂಬುವುದರೊಳಗೆ ಪೂರೈಸುವ ವಿಶೇಷ ಸೇವೆ ತುಳುನಾಡಿನ ಬ್ರಹ್ಮ ಬೈದರ್ಕಳರ ಸನ್ನಿಧಿಯಲ್ಲಿ ವಿಶಿಷ್ಟ ಕಂಚಿಲ್ ಸೇವೆ
- ರಾಕೇಶ್ ಕುಂಜೂರು

ತುಳುನಾಡು ವಿವಿಧ ರೀತಿಯ ಧಾರ್ಮಿಕ ಮತ್ತು ಜನಪದ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ತುಳುವರು ನಂಬಿ, ಆರಾಧಿಸಿಕೊಂಡು ಬರುತ್ತಿರುವ ಸತ್ಯಗಳಲ್ಲಿ ಶ್ರೀ ಬ್ರಹ್ಮ ಬೈದರ್ಕಳರ ಆರಾಧನೆಯೂ ಕೂಡಾ ಒಂದಾಗಿದೆ. ತುಳುನಾಡಿನ ಸತ್ಯಗಳ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ನೇಮದ ಸಂದರ್ಭ ನಡೆಸಿಕೊಂಡು ಬರುವ ವಿಶೇಷ ಹರಕೆಯೇ ಕಂಚಿಲ್ ಸೇವೆ.

ಕಂಚಿಲ್ ಹರಕೆ ಎನ್ನುವುದು ತುಳುನಾಡಿನ ಬೆರ್ಮೆರ್ ಮತ್ತು ನಾಗಬ್ರಹ್ಮರ ಆರಾಧನೆ ನಡೆಯುವ ಗರಡಿ, ದೇವಸ್ಥಾನ, ಆಲಡೆ ಮತ್ತು ದೈವಸ್ಥಾನಗಳಲ್ಲಿ ನಡೆಯುವ ವಿಶೇಷ ಹರಕೆಯಾಗಿದೆ. ಹಿಂದಿನ ಕಷ್ಟದ ಕಾಲದಲ್ಲಿ ಆಸ್ಪತ್ರೆಗಳು ಅಥವಾ ಸಮರ್ಪಕವಾದ ವ್ಯವಸ್ಥೆಗಳು ಇಲ್ಲದ ಸಂದರ್ಭದಲ್ಲಿ ತಾವು ನಂಬಿದ ಸತ್ಯಗಳು ಅಥವಾ ದೇವರ ಮೇಲೆ ಭಾರ ಹಾಕಿ ಹೇಳುವ ಹರಕೆಯೇ ಕಂಚಿಲು ಸೇವೆ.

ಕಂಚಿಲ್ ಸೇವೆ ತುಳುವರು ಭಕ್ತಿಯಿಂದ ಹೇಳಿಕೊಳ್ಳುವ ಹರಕೆಗಳಲ್ಲಿ ಒಂದಾಗಿದೆ. ಮದುವೆಯಾದ ದಂಪತಿಗಳಿಗೆ ಸರಿಯಾದ ಸಮಯದಲ್ಲಿ ಮಕ್ಕಳಾಗದೇ ಇದ್ದಲ್ಲಿ, ಹುಟ್ಟಿದ ಮಕ್ಕಳಿಗೆ ಯಾವುದಾದರೂ ರೋಗ - ರುಜಿನಗಳು ಕಾಣಿಸಿಕೊಂಡರೆ ನಾಗಬೆರ್ಮೆರ್ ಮತ್ತು ಬ್ರಹ್ಮ ಬೈದರ್ಕಳರನ್ನು ನೆನೆಸಿಕೊಂಡು ಈ ಹರಕೆಯನ್ನು ಹೇಳಿಕೊಳ್ಳಲಾಗುತ್ತದೆ. ತಮ್ಮ ಇಷ್ಟಾರ್ಥ ಪೂರೈಸಿದ ಬಳಿಕ ಹರಕೆ ಹೊತ್ತುಕೊಂಡ ಸತ್ಯಗಳ ಸನ್ನಿಧಾನಕ್ಕೆ ತೆರಳಿ ಹರಕೆಯನ್ನು ಸಲ್ಲಿಸುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ.

ಕೇವಲ ಬ್ರಹ್ಮ ಬೈದರ್ಕಳ ಗರಡಿಗಳು ಮಾತ್ರವಲ್ಲದೇ ತುಳುವರ ಮೂಲಸ್ಥಾನ ಆದಿ ಆಲಡೆಗಳಲ್ಲಿ, ರಾಜನ್ ದೈವಗಳ ಸಾನ್ನಿಧ್ಯದಲ್ಲಿ, ಪರಂಪರಾಗತವಾಗಿ ಆರಾಧಿಸಿಕೊಂಡು ಬಂದಿರುವ ದೇವಸ್ಥಾನಗಳಲ್ಲಿಯೂ ಸಂಪ್ರದಾಯಬದ್ಧವಾಗಿ ನಡೆಯುತ್ತಾ ಬರುತ್ತಿದೆ. ಆದರೆ ಹೆಚ್ಚಾಗಿ ಈ ಸೇವೆಯು ತುಳುನಾಡಿನಾದ್ಯಂತ ಇರುವ ಬ್ರಹ್ಮ ಬೈದರ್ಕಳ - ಕೋಟಿ ಚೆನ್ನಯ್ಯರ ಗರಡಿಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.

ದೇಯಿ ಬೈದ್ಯೆತಿ ಕಾಲದಿಂದ ಪ್ರಸಿದ್ಧಿ.

ತುಳುನಾಡಿನಲ್ಲಿ ಸಾಮಾನ್ಯವಾಗಿ ಗರ್ಭಿಣಿಯರು ನಾಗಬೆರ್ಮರಲ್ಲಿ ತಮ್ಮ ಸುಖ ಪ್ರಸವಕ್ಕಾಗಿ ಮತ್ತು ಮಗುವಿನ ಆಯುರ್ಭಾಗ್ಯಕ್ಕಾಗಿ ಹೊತ್ತುಕೊಳ್ಳುವ ಹರಕೆಯೇ ಕಂಚಿಲ್ ಹರಕೆ. ಕೋಟಿ ಚೆನ್ನಯರ ತಾಯಿ ದೇಯಿ ಬೆ„ದೆತಿಯು ತನ್ನ ಕುಲದೇವರಾದ ಕೆಮ್ಮಲಜೆಯ ನಾಗಬೆರ್ಮರನ್ನು ನೆನೆದು ತನ್ನ ಗರ್ಭ ಕಳೆದು, ಸುಖಪ್ರಸವವಾದರೆ ಹೆತ್ತ ಮಗುವಿನಿಂದ ನಿಮ್ಮ ಭಂಡಾರಕ್ಕೆ 'ಪುಂಡಿ ಪಣವು' ಹಾಕಿಸುತ್ತೇನೆ ಎಂಬ ಹರಕೆ ಹೊತ್ತಳು. ಅದೇ ರೀತಿಯ ಸೇವೆಯು ಇಂದು ಕಂಚಿಲ್ ಹರಕೆಯಾಗಿ ತುಳುನಾಡಿನಾದ್ಯಂತ ಪ್ರಚಲಿತದಲ್ಲಿದೆ.

ನಿರಂತರ ನಿಯಮಾಚರಣೆ ಪಾಲನೆ

ಬೆ„ದೇರು(ಕೋಟಿ-ಚೆನ್ನಯ)ಗಳ ಗರಡಿಯ ನೇಮದ ಹಿಂದಿನ ದಿನ ನಡೆಯುವ 'ಅಗೆಲು' ಸೇವೆಯಂದು ಕಂಚಿಲು ಹರಕೆ ಹೊತ್ತ ಕುಟುಂಬದ ಎಲ್ಲರೂ ಸೇರಿ, ಗರಡಿಗೆ ಬಂದು ಕೈ ಕಾಲು ತೊಳೆಸಿ ಗರಡಿಗೆ ಪ್ರದಕ್ಷಿಣೆ ಬಂದು ಒಳ ಪ್ರವೇಶ ಮಾಡಿ ದೇವರ ದರ್ಶನ ಪಡೆಯುತ್ತಾರೆ. ಬೆ„ದೇರುಗಳ ಅಗೆಲು ಸೇವೆಯು ನಡೆದು ಭಂಡಾರ ಇಳಿದ ಅನಂತರ (ಭಂಡಾರ ಇಳಿಯುವ ಕ್ರಮ ಕೆಲವು ಗರೋಡಿಗಳಲ್ಲಿ ಮಾತ್ರ) ಗರಡಿಯ ಜಗಲಿಯಲ್ಲಿ ಚಾಪೆಯನ್ನು ಹಾಸಿ ಮಕ್ಕಳನ್ನು ಕುಳ್ಳಿರಿಸುತ್ತಾರೆ. ನಂತರ ಗರೋಡಿಯ ಅರ್ಚಕರು ಕಲಶ ಸ್ಥಾಪನೆ ಮಾಡುತ್ತಾರೆ. ಅಗೆಲು ಸೇವೆಯಂದು ಗರಡಿ ಪ್ರವೇಶಿಸಿದ ಮಕ್ಕಳು ಮತ್ತೆ ಮನೆ ಸೇರುವುದು ಮರುದಿನ ಬೆ„ದೇರುಗಳ ನೇಮ ಮುಗಿದ ನಂತರವೇ. ನೇಮದ ದಿನ ಮಧ್ಯಾಹ್ನ ಗರಡಿ ಮನೆಯಲ್ಲಿ ಮಕ್ಕಳಿಗೆ ಫಲಾಹಾರ ಮಾಡಿಸಿ, ಸ್ನಾನ ಮಾಡಿಸಿ ಮದುಮಗ ಅಥವಾ ಮದುಮಗಳಂತೆ ಅಲಂಕಾರ ಮಾಡುತ್ತಾರೆ.

ಹರಕೆ ಹೊತ್ತವರಿಗೆ ವಿಶೇಷ ಅಲಂಕಾರ

ಕಂಚಿಲು ಹರಕೆಯ ಗಂಡು ಮಕ್ಕಳಿಗಾದರೆ ಪೈಜಾಮ, ಕಾಲಿಗೆ ಬೆಳ್ಳಿಯ ಒಡ್ಡಿ ಉಂಗುರ, ಕುತ್ತಿಗೆಗೆ ಚಿನ್ನದ ಚೆ„ನು (ಎರಡು ಕೈ ಮತ್ತೆ ಕಾಲುಗಳಿಗೆ ಮೊದಲೇ ಮದಿರಂಗಿ ಇಟ್ಟಿರುತ್ತಾರೆ ) ಹಣೆಗೆ ಶ್ರೀಗಂಧದ ನಾಮ, ಕೈಯಲ್ಲಿ ವೀಳ್ಯದೆಲೆ ಮತ್ತೆ ಅಡಿಕೆ ಕೊಡುತ್ತಾರೆ. ಹೆಣ್ಣು ಮಕ್ಕಳಿಗಾದರೆ ಉದ್ದದ ಲಂಗ ತೊಡಿಸಿ, ಮಲ್ಲಿಗೆ ಹೂವಿನ ಜಲ್ಲಿ ಹಾಕಿ, ಕೈಯಲ್ಲಿ ವೀಳ್ಯದೆಲೆ, ಅಡಿಕೆ ಕೊಡುತ್ತಾರೆ. (ಹಿಂದಿನ ಕಾಲದಲ್ಲಿ ಸೀರೆ ಉಡಿಸುತ್ತಿದ್ದರು). ಇತ್ತೀಚಿನ ದಿನಗಳಲ್ಲಂತೂ ನೇಮದ ದಿನದಂದು ಗರೋಡಿಯ ಹೊರಭಾಗದಲ್ಲಿ ಮದುಮಗ, ಮದುಮಗಳ ಹಾಗೆ ಅಲಂಕಾರವಾಗಿ ಕುಳಿತಿರುವ ಮಕ್ಕಳನ್ನು ನೋಡುವುದೇ ಒಂದು ವೈಭವ.

ಹರಕೆ ಸಲ್ಲಿಸಲು ವರ್ಷದ ಮಿತಿ
ಕಂಚಿಲ್ ಹರಕೆ ಹೇಳಿದ ಮಕ್ಕಳಿಗೆ 7 ವರ್ಷದಿಂದ 12 ವರ್ಷ ಪ್ರಾಯ ತುಂಬುವುದರೊಳಗೆ ಹರಕೆ ಸಂದಾಯ ಮಾಡುವ ಕ್ರಮವಿದೆ.
ಇತ್ತೀಚಿನ ವರ್ಷಗಳಲ್ಲಿ 25 ವರ್ಷದವರೆಗೂ ಕಂಚಿಲು ಹರಕೆ ಸಲ್ಲಿಸುವ ಸಂಪ್ರದಾಯವನ್ನು ನಾವು ಕಾಣುತ್ತಿದ್ದೇವೆ.

ಮುಂದಿನ ಜನಾಂಗಕ್ಕೂ ಉಳಿಸುವುದು ನಮ್ಮ ಜವಾಬ್ದಾರಿ

ಉಡುಪಿ ಜಿಲ್ಲೆಯ ಹೆಚ್ಚಿನ ಗರಡಿಗಳಲ್ಲಿ ಹಿಂದಿನ ಕ್ರಮಗಳನ್ನೇ ಅನುಸರಿಸಿಕೊಂಡು ಬರಲಾಗುತ್ತಿದೆ. ತುಳುನಾಡಿನ ಜನರ ಆಡಂಬರದ ಸೇವೆಗಳ ನಡುವೆಯೂ ಕಂಚಿಲು ಹರಕೆ ಮಾತ್ರ ಇಂದಿಗೂ ಕೂಡಾ ಮೂಲ ಆಚರಣೆಯಾಗಿಯೇ ಉಳಿದಿರುವುದು, ಮತ್ತು ಹರಕೆಯನ್ನು ಸಲ್ಲಿಸುವಲ್ಲಿ ಮೂಲತೆಯನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಇದನ್ನು ಮುಂದಿನ ಜನಾಂಗದವರೆಗೂ ಉಳಿಸಿಕೊಂಡು ಬರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಕೃಪೆ: ಉದಯವಾಣಿ,  ದಿನಾಂಕ 09 ಜನವರಿ, 2019

0 comments: