Tuesday, January 22, 2019

ಬೈದೇರುಗಳ ಕಥಾನಕದ ಅಮ್ಮಣ ಬನ್ನಾಯ ಬಿರ್ಮಣ ಬೈದ್ಯನ ಪಾತ್ರ ಮತ್ತು ಗುಡ್ಡೆ ಗರಡಿ ಅಮ್ಮಣ ಬನ್ನಾಯ ಬಿರ್ಮಣ ಬೈದ್ಯ ಪಾತ್ರ

ಬೈದೇರುಗಳ ಕಥಾನಕದ ಅಮ್ಮಣ ಬನ್ನಾಯ ಬಿರ್ಮಣ ಬೈದ್ಯನ ಪಾತ್ರ ಮತ್ತು ಗುಡ್ಡೆ ಗರಡಿ  ಅಮ್ಮಣ ಬನ್ನಾಯ ಬಿರ್ಮಣ ಬೈದ್ಯ ಪಾತ್ರಬೈದೇರುಗಳ ಕಥಾನಕ ಒಂದು ವಿಸ್ತಾರವಾದ ಕಾವ್ಯ ಅಗೆದಷ್ಟು ಮೊಗೆದಷ್ಟು ಸಿಗುವುದು ಸಿಹಿ ಮತ್ತು ಕಹಿ ಮಿಶ್ರಿತ ಉತ್ಪನ್ನ. ಕೆಲವು ಪಾತ್ರಗಳು ಉತ್ತರಾರ್ಧದಲ್ಲಿ ಮರೆಯಾಗಿ ಹೋದರು ಕೂಡ ಅಲ್ಲಲ್ಲಿ ಸಂಶಯಗಳನ್ನು ಹುಟ್ಟು ಹಾಕಿ ಹೋಗಿದುದರಲ್ಲಿ ಸಂಶಯವಿಲ್ಲ. ಅದೇ ರೀತಿ ಒಟ್ಟಾರೆ ನೋಡುವುದಾದರೆ ಇಲ್ಲಿ ಬೈದೇರುಗಳ ಇಡೀ ಕಥೆಯೆ ಒಂದು ರೀತಿಯಲ್ಲಿ ಗೋಜಲು‌ ಗೋಜಲು. ದೇಯಿ ಬೈದೆತಿಯ ಹುಟ್ಟು, ಕುಜುಂಬ ಮುದ್ಯನ ಸಂಬಂಧಗಳು, ಸಾಯನ ಬೈದ್ಯನ ಪ್ರವೇಶ, ಕೋಟಿ ಚೆನ್ನಯರ ಅಂತ್ಯ, ಅಂತ್ಯದ ನಂತರ ಆದ ಬದಲಾವಣೆಗಳು ಇವೆಲ್ಲವುದಕ್ಕೆ ಒಂದು ರೀತಿಯ ತಾರ್ಕಿಕ‌ ಅಂತ್ಯ ನೀಡಲು ಯಾವ ಲೇಖಕನಿಂದಲೂ ಸಾಧ್ಯವಾಗಿಲ್ಲ. ಇಲ್ಲಿ ಬರುವ ಎಷ್ಟೋ ಪಾತ್ರಗಳು ತನ್ನದೇ ಆದ ಹೊಳಪನ್ನು ನೀಡಿ ಮರೆಯಾದಂತೆ, ಇನ್ನೊಂದು ಪಾತ್ರವು ಕೂಡ ಕೆಲವು ಸಂಶಯಗಳನ್ನು ಉಳಿಸಿ ಮರೆಯಾಗಿದೆ, ಅದೇ ಪಾತ್ರ ಅಮ್ಮಣ ಬನ್ನಾಯ ಬಿರ್ಮಣ ಬೈದ್ಯ. ಪೆರ್ಮಲೆ (ಪೆಡುಮಲೆ) ಬಲ್ಲಾಳ ಕುಜುಂಬ ಮುದ್ಯನ ಬೀಡಿನಲ್ಲಿ ಪ್ರಮುಖ ವೈದ್ಯನಾಗಿ ಇದ್ದವರು.  ಪಡುಮಲೆ ಬಲ್ಲಾಳನ ಕಾಲಿಗೆ ಮುಳ್ಳು ಚುಚ್ಚಿ ಕೆಂಪು ಬದಂಗಲೆ ಎನ್ನುವ ನೋವು ಬಾಧಿಸಿದಾಗ ತನ್ನಿಂದಾದ ವೈದ್ಯಕೀಯ ಚಿಕಿತ್ಸೆಯನ್ನು ಮಾಡುತ್ತಾನೆ.

ಆದರೆ ನೋವು ಹೆಚ್ಚಾದಾಗ ಇದು ತನ್ನಿಂದ ನಿವಾರಿಸುವ ನೋವು ಅಲ್ಲ ಎಂದು ಹೇಳಿ ಏರಾಜೆ ಬರ್ಕೆಯ ದೇಯಿ ಬೈದೆತಿಯ ಬಗ್ಗೆ ಹೇಳಿ ತನ್ನ ವೃತ್ತಿ ಧರ್ಮವನ್ನು ಎತ್ತಿ ಹಿಡಿಯುತ್ತಾನೆ. ಅದೇ ರೀತಿ ದೇಯಿ ಬೈದೆತಿಯ ಕೈ ಗುಣವನ್ನು ಗುಣಗಾನ ಮಾಡುತ್ತಾನೆ. ಆಮಂದ ಅದೆ ವಾಮಂದ ಸಾಲೆ ಸಂಕಮಲೆ ರಾವು ಬೀದಿಪಡೆ ಕೋಟೆ ಏರಾಜೆ ಬರ್ಕೆದ ಸಾಯನ ಬೈದ್ಯನ ಮರ್ಮಲ್, ಕರ್ಗಲ್ಲ ತೋಟ ಕಾಂತಣ ಬೈದ್ಯನ ಬುಡೆದಿ ದೇಯಿ ಬೈದೆತಿ ಉಲ್ಲಲಿಯೆ, ಆಲ್ ಪನ್ಪಿನ ಮಂತ್ರ ಎಡ್ಡೆಯೆ, ಆಲ್ ಕೊರ್ಪಿನ ಮರ್ದ್ ಎಡ್ಡೆಯೆ, ಅರೆ ಘಳಿಗೆಡ್ ಕಣ್ಣು ಮುಚ್ಚಿನಕ್ಲೆನ್ ಲಕ್ಕವಲಿಯೆ ಎಂದು. ಯಾವ ವೈದ್ಯನು ಕೂಡ ಮತ್ತೊಂದು ವೈದ್ಯನ ಬಗ್ಗೆ ಹಾಡಿ ಹೊಗಳುವುದು ಕಮ್ಮಿನೆ. ಆದರೆ ಇಲ್ಲಿ ಮಾತ್ರ ಬಿರ್ಮಣ ಬೈದ್ಯನು ವೃತ್ತಿ ಮಾತ್ಸರ್ಯ ತೋರದೆ ನಿಜವಾದ ವಿಷಯವನ್ನು ಬಲ್ಲಾಳನಿಗೆ ಅರುಹುತ್ತಾನೆ. ನಾನು ಹೇಳ ಹೊರಟಿರುವುದು ಇದೇ ಅಮ್ಮಣ ಬನ್ನಾಯ ಬಿರ್ಮಣ ಬೈದ್ಯ ಎನ್ನುವ ವ್ಯಕ್ತಿಯ ಬಗ್ಗೆ. ಪಾಂಗಾಳ ಗುಡ್ಡೆ ಗರಡಿಯಲ್ಲಿ ಅಮೀನ್ ಬಳಿಯವನಾಗಿ,

ಗರಡಿ ಆರಾಧನೆಯನ್ನು ಪ್ರಾರಂಭಿಸಿದ ವ್ಯಕ್ತಿಯಾಗಿ ಅಮ್ಮಣ ಬನ್ನಾಯ ಬಿರ್ಮಣ ಬೈದ್ಯ ಎಂದು ಕರೆಸುಕೊಳ್ಳುವ ವ್ಯಕ್ತಿ  ತನ್ನ ಕುಟುಂಬದವರ ಮೂಲಕ ಬೈದೇರುಗಳ ರೀತಿಯಲ್ಲೇ ಸಾತ್ವಿಕ ಆರಾಧನೆಯನ್ನು ಪಡೆಯುತ್ತಿದ್ದಾರೆ. ಅಲ್ಲಿ  ಬಿರ್ಮಣ ಬೈದ್ಯನ  ಮರದ ಉರುವನ್ನು ( ಮೂರ್ತಿಯನ್ನು) ಗರಡಿಯ ಬಲಭಾಗದ ಸ್ಥಾನದಲ್ಲಿ ಕಾಣಬಹುದು. ಇವರ ಕಾಲಾವಧಿ ಸುಮಾರು 8 ತಲೆಮಾರು ಎನ್ನುವುದು ಗರಡಿ ಮನೆಯವರ ಅಭಿಪ್ರಾಯ.   ಪಡುಮಲೆಯ ವೈದ್ಯ ಬಿರ್ಮಣ್ಣ ಬೈದ್ಯ ಮತ್ತು ಗುಡ್ಡೆ ಗರಡಿ ಸ್ಥಾಪಕ ಬಿರ್ಮಣ್ಣ ಬೈದ್ಯ ಒಂದೇ ಕುಟುಂಬಿಕರು  ಆಗಿರಬಹುದೆ ಎನ್ನುವುದು ಇಲ್ಲಿ ನಮಲ್ಲಿ ಮೂಡಿದ ಪ್ರಶ್ನೆಗಳು. ಅದಕ್ಕೆ ಪೂರಕವಾಗಿ ಕೆಲವೊಂದು ಆಧಾರಗಳು ಇಲ್ಲಿ ನಮಗೆ ಆಶಾ ಕಿರಣವಾಗಿ ಬೆಳಕು ಚೆಲ್ಲುತ್ತವೆ. ದೇಯಿ ಬೈದೆತಿಯ ಹೆರಿಗೆಯ ನೋವಿನ ಸಮಯದಲ್ಲಿ ಆಕೆ ಬಲ್ಲಾಳನಲ್ಲಿ ಕೇಳುತ್ತಾಳೆ. ಬಲ್ಲಾಳರೆ ನಾನು ನನ್ನ ಮಕ್ಕಳನ್ನು ಎಲ್ಲಿ ಹೆರುವುದು ಎಂದಾಗ ಬಲ್ಲಾಳರು ಹೇಳುತ್ತಾರೆ ಸಣ್ಣ ಒಕ್ಕೆಲ್ ಅಮ್ಮಣ ಬನ್ನಾಯ ಬಿರ್ಮಣ ಬೈದ್ಯನ ಮನೆ ಇದೆ ಅಲ್ಲಿ ನಿನ್ನ ಹೆರಿಗೆಯಾಗಲಿ ಎಂದು. ಇಲ್ಲಿ ಬಿರ್ಮಣ ಬೈದ್ಯ ಪಡುಮಲೆಯವನ್ನಲ್ಲ ಅತ ಒಕ್ಕೆಲ್ ಬಂದವ ಅಂದರೆ ಬೇರೆ ಕಡೆಯಿಂದ ವೈದ್ಯ ವೃತ್ತಿಗಾಗಿ ಕರೆಸಿಕೊಂಡಿರಬಹುದು

ಎನ್ನುವ ಸಣ್ಣ ಮಟ್ಟಿನ ಪುರಾವೆ ಸಿಗುತ್ತದೆ. ಇನ್ನೂ ಮುಂದಕ್ಕೆ ಹೋಗಿ ಕೋಟಿ ಚೆನ್ನಯರಿಗೆ ಗರಡಿ ವಿದ್ಯೆ ಕಲಿಸಲು ಎಲ್ಲಿ ಗರಡಿ ಇದೆ ಎಂದು ಬೂಡು ಬೊಮ್ಮಯ್ಯನಲ್ಲಿ ಕೇಳಲು ಮೂಡಾಯಿ ಊರಿನಲ್ಲಿ ಒಂದು ಗರಡಿ ಇದೆ, ಪಾಂಗಾಳದಲ್ಲಿ ಒಂದು ಗರಡಿ ಇದೆ ಎಂದು ಹೇಳುತ್ತಾರೆ. ಆದರೆ ಅವರು ಪಡುಮಲೆ ಪಕ್ಕದ ಮೂಡಾಯೂರಿಗೆ ಹೋಗದೆ ಪಾಂಗಾಳ ಬಲಿಪ ನಾನಾಯರು ಮತ್ತು ಪಿಲಿಪ ನಾನಾಯರಲ್ಲಿ ವಿದ್ಯೆ ಕಲಿಯುತ್ತಾರೆ. ಅಲ್ಲೇ ಕೆಲವೇ ಗಾವುದ ದೂರದಲ್ಲಿ  ಅಮ್ಮಣ ಬನ್ನಾಯ ಬಿರ್ಮಣ ಬೈದ್ಯರಿಂದ ಸ್ಥಾಪಿತವಾದ ಗರಡಿ ಇದೆ. ಅಂದರೆ ಪಡುಮಲೆಯಲ್ಲಿ ಇದ್ದ ಬಿರ್ಮಣ ಬೈದ್ಯರೆ ಅವರ ಪರಿಚಯದಿಂದ ಇಲ್ಲಿ ಕೋಟಿ ಚೆನ್ನಯರನ್ನು ವಿದ್ಯೆ ಕಲಿಸಲು ಕರೆದುಕೊಂಡು ಬಂದಿರಬಹುದು ಮತ್ತು ಅವರ ನಂತರ ಬಿರ್ಮಣ ಬೈದ್ಯರ ಕುಟುಂಬಸ್ಥರು ಅಂದರೆ ಆ ನಂತರದ ತಲೆಮಾರು ಕೋಟಿ ಚೆನ್ನಯರಿಗೆ ಗರಡಿ ಕಟ್ಟಿದ್ದಾರೆ. ಯಾಕೆಂದರೆ ಆ ಕುಟುಂಬದಲ್ಲಿ ಯಾರೆ ಬೈದೇರುಗಳಿಗೆ ಅರ್ಚಕರಾದರು ಕೂಡ ಅವರನ್ನು ಅಮ್ಮಣ ಬನ್ನಾಯ ಬಿರ್ಮಣ ಬೈದ್ಯ ಎಂದು ಕರೆಯುತ್ತಿದ್ದರು

( ಈವಾಗ ಹೆಸರಿನಲ್ಲಿ ಬದಲಾವಣೆಯಾಗಿದೆ). ಈ ಗರಡಿಯ ಇತಿಹಾಸವು ಈ ರೀತಿ ಇದೆ ಪಾಂಗಾಳ ಬೀಡು  ಜೈನರು ಮತ್ತು ಗುಡ್ಡೆ ಗರಡಿ ಮನೆತನದ ಬಿರ್ಮಣ ಬೈದ್ಯ ಎನ್ನುವ ವ್ಯಕ್ತಿ ಕಲ್ಲುಗುಡ್ಡೆ ಗರಡಿ ನೇಮಕ್ಕೆ ಹೋದ ಸಮಯದಲ್ಲಿ ಅಲ್ಲಿ ಅವೇಶ ಬರಲು ನಾವು ನಿನ್ನ ಗುಡ್ಡೆ ಗರಡಿಯಲ್ಲಿ ನೆಲೆಯಾಗಲು ಬಂದಿದ್ದೇವೆ ನೀನು ಎರಡು ತಂಬಿಗೆ ನೀರು ಮತ್ತು ಎರಡು ತಂಬಿಗೆ ಹಾಲಿಟ್ಟು ಕಾಯುತ್ತಿರು ಬರುತ್ತೇವೆ ಎಂದರಂತೆ, ಆದರೆ ಮನೆಗೆ ಬಂದ ಬಿರ್ಮಣ್ಣ ಬೈದ್ಯ ಮರೆತು ತಾಳೆ ಮರದ ಸೇಂದಿ ತೆಗೆಯುತ್ತಿದ್ದ ಸಮಯದಲ್ಲಿ ಎಲ್ಲೂ ಮಳೆಯಾಗದೆ ಕೇವಲ ಈತ ಸೇಂದಿ ತೆಗೆಯುತ್ತಿದ್ದ ಮರದ ಹತ್ತಿರ ಗಾಳಿ ಮಳೆ ಬರಲು ಕಡೆಗೆ ಬೈದೇರುಗಳ ಮಾತು ಅರಿವಾಗಿ ಅವರ ಮಾತಿನಂತೆ ನಡೆದುಕೊಂಡು ಗರಡಿ ಕಟ್ಟುತ್ತಾರೆ. ಅದೇ ರೀತಿ ಪಾಂಗಾಳ ಬೀಡಿನ ಜೈನರು ಇವರಿಗೆ 30 ಮುಡಿ ಅಕ್ಕಿಯ ಗದ್ದೆಯನ್ನು ಉತ್ತರ ಉಂಬಳಿಯಾಗಿ ಗರಡಿ ನಡೆಸಲು ನೀಡುತ್ತಾರೆ.

ಇಲ್ಲಿ ಈ ಹಿಂದೆ ಬೈದೇರುಗಳ ಪಾದ ಮತ್ತು ಕೈ ಊರಿದ ಗುರುತು ಕಲ್ಲಿನ ಪಾದೆಗಳ ಮೇಲಿದ್ದು ಗರಡಿ ಕಟ್ಟುವ ಸಮಯದಲ್ಲಿ ಅದು ಅಳಿದು ಹೋಗಿದೆಯಂತೆ. ಅದೇ ರೀತಿ ಬೈದೇರುಗಳು ಪಾಂಗಾಳ ಗರಡಿಯಲ್ಲಿ ಗರಡಿ ವಿಧ್ಯೆ ಕಲಿಯುವ ಸಂದರ್ಭದಲ್ಲಿ ಇದೆ ಗರಡಿಯ ಜಾಗದ ಮುಖಾಂತರ ಸಮುದ್ರ ಸ್ಥಾನಕ್ಕೆ ಹೋಗುತ್ತಿದ್ದರಂತೆ. ಒಟ್ಟಾರೆ ನೋಡುವುದಾದರೆ ಇದು ಅಮ್ಮಣ ಬನ್ನಾಯ ಬಿರ್ಮಣ ಬೈದ್ಯನಿಗೆ ಸಂಬಂಧ ಪಟ್ಟ ಮನೆ ಮತ್ತು ಅವರ ನಂತರದ ಅವರ ಹೆಸರಿನ ವ್ಯಕ್ತಿಗೆ ಆವೇಶ ಬಂದು ಅವರ ಮುಖಾಂತರ ಗರಡಿ ಆಗಿ ಆ ವ್ಯಕ್ತಿ ದೈವತ್ವಕ್ಕೆ ಏರಿರಬಹುದು ಎನ್ನುವುದು ಅವರ ಕುಟುಂಬಿಕರ ಅಭಿಪ್ರಾಯ.  ಉಡುಪಿಯ ಬಹುತೇಕ ಗರಡಿಗಳು ಗ್ರಾಮಸ್ಥರ ಮತ್ತು ಜಾತಿ ಸಂಘಟನೆಗಳ ಅಧಿಕಾರದಲ್ಲಿ ಇದ್ದರು ಕೂಡ ಗುಡ್ಡೆ ಗರಡಿ ಮಾತ್ರ ಇವತ್ತಿಗೂ ಬಿರ್ಮಣ ಬೈದ್ಯನ ಕುಟುಂಬಿಕರ ಅಧಿಕಾರದಲ್ಲಿ‌ ಇದೆ ಮತ್ತು ಸುಮಾರು 50 ವರ್ಷಗಳ ಹಿಂದೆ ಜೀಣೋದ್ದಾರ ಆಗಿ ಇವತ್ತಿಗೂ ಸುಸ್ಥಿತಿಯಲ್ಲಿ ಇದೆ. ಪರಕೆಡ್ ಗುಡ್ಡೆ ಗರಡಿ ಎನ್ನುವ ಮಾತು ಇವತ್ತಿಗೂ ಚಾಲ್ತಿಯಲ್ಲಿದೆ. ಅಂದರೆ ಅಲ್ಲಿ ಸೇರುವಷ್ಟು ಬೆಳ್ಳಿ ಬಂಗಾರದ ಹರಕೆ ಈ ಹಿಂದೆ ಇನ್ನೆಲ್ಲಿಯೂ ಸೇರ್ತಾ ಇರಲಿಲ್ಲವಂತೆ. ಇದೆಲ್ಲ ಬೈದೇರುಗಳ ಕಾರಣೀಕವಲ್ಲದೆ ಬೇರೇನೂ ಅಲ್ಲ. ಅಮ್ಮಣ ಬನ್ನಾಯ ಎಂದರೆ ಅದು ಆ ಕಾಲದಲ್ಲಿ ಅಮೀನ್ ಬರಿಯನ್ನು ಕರೆಯುವ ಸಂಪ್ರದಾಯ, ಬಿರ್ಮಣ ಬೈದ್ಯ ಆ ವ್ಯಕ್ತಿಯ ಹೆಸರು. ಒಟ್ಟಾರೆ ಇನ್ನಷ್ಟು ಸಂಶೋಧನೆಗಳು ಈ ನಿಟ್ಟಿನಲ್ಲಿ ನಡೆದರೆ ಕೆಲವು ವಿಷಯಗಳು ಸಿಗಬಹುದು ಎನ್ನುವುದು ನನ್ನ ಅಭಿಮತ. ಮಾಹಿತಿ:- ಸುಧಾಕರ ಡಿ ಅಮೀನ್ ಗುಡ್ಡೆ ಗರಡಿ ಪಾಂಗಾಳ ಚಿತ್ರ ಕೃಪೆ,:- ಯಶ್ ಗುಡ್ಡೆ ಗರಡಿ ಬರಹ:ಶೈಲು ಬಿರ್ವ ಅಗತ್ತಾಡಿ ದೋಲ ಬರ್ಕೆ

0 comments: