ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ದ.ಕ.ಜಿಲ್ಲೆಯ ಪ್ರಪ್ರಥಮ ಮಹಿಳೆ ಹಾಗೂ ಬಸವ ರತ್ನ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಗೊಂಡ ಪ್ರಮೀಳಾ ಮೂಲತಃ ಬಂಟ್ವಾಳ ತಾಲೂಕು, ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲ್ ಕಾಪಿಕಾಡ್ ಕೃಷ್ಣಪ್ಪ ಪೂಜಾರಿ ಹಾಗೂ ದೇವಕಿ ಕೃಷ್ಣಪ್ಪ ಪೂಜಾರಿಯವರ ಸುಪುತ್ರಿ .ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆಗೆ ಒಪ್ಪುವ ವ್ಯಕ್ತಿತ್ವದ ಅಗಾಧ ಸಾಹಿತ್ಯ ಪ್ರತಿಭೆಯ ಪ್ರಮೀಳಾ ಎಳವೆಯಲ್ಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿದವರು. ಯುವ ಸಾಹಿತಿಯಾಗಿ ಬಿಡುಗಡೆಗೊಂಡ ಇವರ ಚೊಚ್ಚಲ ಕೃತಿ ’ಸುಪ್ತ’ ಇವರ ಸಾಹಿತ್ಯ ಪರಿಪೂರ್ಣತೆಗೆ ಹಿಡಿದ ಕೈಗನ್ನಡಿ. ಕಲ್ಪನೆಗಳನ್ನು ಅರೆದು ತೆಗೆದು ಬರೆಯುವ ನೂರಾರು ಸಾಹಿತಿಗಳ ನಡುವೆ ಪ್ರಮೀಳಾ ವಿಶೇಷವಾಗಿ ಕಂಡು ಬರುತ್ತಾರೆ. ಏಕೆಂದರೆ ಅವರು ವಾಸ್ತವತೆಗೆ ಹತ್ತಿರವಾಗಿ ತನ್ನ ಸಾಹಿತ್ಯವನ್ನು ಹರಿಯ ಬಿಡುತ್ತಾರೆ ಮತ್ತು ಒಂದು ಸಾಮಾಜಿಕ ಅರಿವನ್ನು ತನ್ನ ಬರಹದಲ್ಲಿ ತೆರೆದಿಡುವ ಪ್ರಯತ್ನವನ್ನು ನಡೆಸುತ್ತಾರೆ. ತನ್ನ ಹುಡುಗಾಟದ ದಿನದಲ್ಲೂ ಇವರ ನಡುವಿನ ಸಾಹಿತ್ಯ ಕೃಷಿಯನ್ನು ಗುರುತಿಸಿಕೊಂಡ ಇವರ ಹೆತ್ತವರು ಮತ್ತು ಒಡ ಹುಟ್ಟಿದವರು ಇವರನ್ನು ಪ್ರೋತ್ಸಾಹಿಸಿದರೆ ವಿವಾಹದ ಬಳಿಕ ಇವರ ಪತಿ, ಸಾಮಾಜಿಕ ಧುರೀಣ, ಸಂಘಟಕ ದೀಪಕ್ ಪೆರ್ಮುದೆಯವರು ಇವರ ಸಾಹಿತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾ ಬಂದರು.
ತನ್ನ ಪ್ರಾಥಮಿಕ ಶಿಕ್ಷಣವನ್ನು ದ.ಕ.ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ, ನಂದಾವರ, ಪ್ರ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಜೀಪಮೂಡ, ಹಾಗೂ ಮಂಗಳೂರು ವಿಶ್ವ ವಿದ್ಯಾನಿಲಯ ಇಲ್ಲಿ ಪದವಿ ಪಡೆದು, ಅನಿಲ್ ಕಂಪ್ಯೂಟರ್ಸ್ ಎಜುಕೇಶನ್ ಸೆಂಟರ್, ಬಿ.ಸಿ.ರೋಡ್ ಇಲ್ಲಿ ಕಂಪ್ಯೂಟರ್ ಪಿಜಿ ಶಿಕ್ಷಣ ಪಡೆದಿರುತ್ತಾರೆ. ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿಸಿ, ತಮ್ಮದೇ ಸ್ವ ಸಂಸ್ಥೆ ಪೆರ್ಮುದೆ ಶ್ರೀ ಶಾರದಾ ಕಲಾ ಪ್ರಕಾಶನ(ರಿ) ಮೂಲಕ ಸ್ಥಳೀಯ ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದಾರೆ.
ಪ್ರಮೀಳಾ ದೀಪಕ್ ಪೆರ್ಮುದೆ ಇವರು ಕಾವ್ಯ, ಕತೆ, ಲೇಖನ, ನಟನೆ, ಯಕ್ಷಗಾನ, ಸಂಗೀತ, ಗಾಯನ, ಧ್ವನಿ ಸುರುಳಿ, ನೃತ್ಯ ಎಲ್ಲದರಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ವೃತ್ತಿ ಜೀವನಕ್ಕೆ ಎಲ್ಲೂ ಚ್ಯುತಿ ಬರದಂತೆ ಸಾಮಾಜಿಕವಾಗಿ ಕಾರ್ಯನಿರ್ವ ಹಿಸುತ್ತಿರುವ ಇವರ ಸುಪ್ತ ,ಮೌನದೊಳಗಿನ ಮಾತು, ಮತ್ತು ಮಾತು ಮೌನಗಳ ಸಂಬಂಧ ಕವನ ಸಂಕಲನಗಳು ಬಿಡುಗಡೆಯಾಗಿರುತ್ತದೆ. ಮಾತು ಮೌನಗಳ ಸಂಬಂಧ ಕವನ ಸಂಕಲನ ಇವರ ಮದುವೆಯ ಸಂದರ್ಭದಲ್ಲಿ ಬಿಡುಗಡೆ ಗೊಂಡಿರುವುದು ವಿಶೇಷ.
ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ’ಮುಸ್ಸಂಜೆಯ ಮಾತು’, ’ಇದ್ಯಾಕ್ರೀ ಹಿಂಗೇ?’, ’ದೀಪಾವಳಿ’, ’ಬಡವನ ಓಟ’ ಕವನಗಳು ಪ್ರಥಮ ಬಹುಮಾನವನು ಪಡೆದಿರುತ್ತದೆ. ಇವರ ಸಂಪಾದಕತ್ವದಲ್ಲಿ ಬಲೆಕಿಮರ ಪುಸ್ತಕ ಬಿಡುಗಡೆಗೊಂಡಿದೆ ಹಾಗೂ ಶ್ರೀ ಶಾರದಾ ಯಕ್ಷಗಾನ ಮಂಡಳಿ(ರಿ) ಪೆರ್ಮುದೆ ಇದರ ಸ್ಮರಣ ಸಂಚಿಕೆ ಯಕ್ಷಶಾರದಾ, ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ, ಮುಂತಾದ ಬೇರೆ ಬೇರೆ ಸಂಸ್ಥೆಗಳ ಸ್ಮರಣ ಸಂಚಿಕೆಗಳ ಸಂಪಾದಕಿಯಾಗಿ ಕಾರ್ಯನಿರ್ವ ಹಿಸಿರುತ್ತಾರೆ.
2012 ರಂದು ಚೇಳ್ಯಾರು, ಸೂರಿಂಜೆ, ಪೆರ್ಮುದೆ, ಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೋ ತ್ಸವದ ಅಧ್ಯಕ್ಷತೆ ವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗ್ರಾಮಗಳ ವಿಶಿಷ್ಟತೆಯ ವೀಕ್ಷಣೆಗೆ ತಯಾರಿಸಿದ ದೃಶ್ಯ-ಶ್ರಾವ್ಯ ವಿಸಿಡಿಯ ಶೀರ್ಷಿಕೆ ಗೀತೆಗೆ ಸಾಹಿತ್ಯ ರಚಿಸಿ ಪೂಜ್ಯರಿಂದ ಪ್ರಶಂಸೆಯನ್ನು ಪಡೆದಿರುತ್ತಾರೆ. ಚಂದನ ದೂರದರ್ಶನ ವಾಹಿನಿಯಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಪ್ರಮೀಳಾರವರದ್ದು. ಸ್ಥಳೀಯ ವಿ-4 ಚಾನೆಲ್ನಲ್ಲಿ ಕಾರ್ಯಕ್ರಮ ನಿರೂಪಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಶ್ರೀ ಸಾರಂತಾಯ ಗರೋಡಿ ಸಸಿಹಿತ್ಲು ಅರ್ಪಿಸಿದ ಬೀರದ ಡೆನ್ನಾನ ತುಳು ಜಾನಪದ ಶೈಲಿಯ ಹಾಡುಗಳ ಸಿ.ಡಿ.ಗೆ ಗೀತೆ ರಚನೆ ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಹಲವಾರು ಕಾರ್ಯಕ್ರಮಗಳ ಸಂಯೋಜನೆ ಹಾಗೂ ನಿರೂಪಕಿಯಾಗಿ, ತರಬೇತುದಾರರಾಗಿ ಕಾರ್ಯನಿರ್ವಹಿಸಿರುವ ಇವರು ದ.ಕ. ಜಿಲ್ಲೆಯ ಹಲವಾರು ಶಿಕ್ಷಣ ಸಂಸ್ಥೆಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಾಂಸ್ಕೃತಿಕ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ, ಪೆರ್ಮುದೆ ಶ್ರೀ ಶಾರದಾ ಕಲಾ ಪ್ರಕಾಶನ(ರಿ) ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಕ್ತಿಗಾನ ಧ್ವನಿ ಸುರುಳಿ ಜ್ಯೋತಿರ್ನಾದ ಸಿ.ಡಿ.ಗೆ ಸಾಹಿತ್ಯ ನೀಡಿ ಅದರ ನಿರ್ವಹಣೆಯನ್ನು ಮಾಡಿದ್ದಾರೆ. ಇವರ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ, ಇವರಿಗೆ ಕರ್ನಾಟಕ ಸರಕಾರವು 2012 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅಂದಿನ ಮಾನ್ಯ ಮುಖ್ಯ ಮಂತ್ರಿ ಡಿ.ವಿ ಸದಾನಂದ ಗೌಡ ಇವರು 2010-11ನೇ ಸಾಲಿನ ’ಕಿತ್ತೂರು ರಾಣಿ ಚೆನ್ನಮ್ಮ’ ಯುವ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಇದು ದಕ್ಷಿಣ ಕನ್ನಡ ಜಿಲ್ಲೆಗೆ ಸಂದ ಪ್ರಪ್ರಥಮ ಮಹಿಳಾ ಯುವ ಸಾಹಿತ್ಯ ಪ್ರಶಸ್ತಿಯಾಗಿರುತ್ತದೆ. ಅಂತೆಯೇ ಶ್ರೀ ಬಸವೇಶ್ವರ ಕರ್ಮವೀರ ಸಾಹಿತ್ಯ ಸಂಸ್ಕೃತಿ ವೇದಿಕೆ(ರಿ) ಬಿಜಾಪುರ ಇವರು ಸಾಹಿತ್ಯ ಕ್ಷೇತ್ರಕ್ಕೆ ನೀಡಲ್ಪಡುವ 2012-13ರ ಬಸವ ರತ್ನ ರಾಷ್ಟ್ರ ಪ್ರಶಸ್ತಿಗೂ ಆಯ್ಕೆಯಾಗಿರುತ್ತಾರೆ. ಇವರ ಸಾಹಿತ್ಯ ಬದುಕು ಉಜ್ವಲವಾಗಲಿ ಎಂದು ನಮ್ಮೆಲರ ಶುಭ ಹಾರೈಕೆಗಳು.
0 comments: