Monday, February 18, 2019

ಹಿಂದುತ್ವದ ಭದ್ರಕೋಟೆ ಕರಾವಳಿಗೆ ಬೇಕಿದೆ ಹಿಂದೂ ನಾಯಕ ಸತ್ಯಜಿತ್ ಸುರತ್ಕಲ್ ನಾಯಕತ್ವ

ಹಿಂದುತ್ವದ ಭದ್ರಕೋಟೆ ಕರಾವಳಿಗೆ ಬೇಕಾಗಿದೆ ಹಿಂದೂ ನಾಯಕನ ನಾಯಕತ್ವ! ಹುಟ್ಟು ಹೋರಾಟಗಾರ ಸತ್ಯಜಿತ್‌ ಸುರತ್ಕಲ್‌ಗೆ ಸಿಗುತ್ತಾ ಲೋಕಸಭಾ ಟಿಕೆಟ್? ಕಳೆದ ಕೆಲ ದಿನಗಳಿಂದ ಇಂತಹ ಮಾತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಲೋಕಸಭಾ ಚುನಾವಣೆಗೆ ಮಂಗಳೂರು ಕ್ಷೇತ್ರದಿಂದ ಕಟ್ಟರ್ ಹಿಂದೂ ಹೋರಾಟಗಾರ, ಸಂಘಟನೆಯೇ ಕುಟುಂಬ ಎಂದು ಸಂಘಟನೆಗಾಗಿ ಜೀವನವನ್ನೇ ಮೀಸಲಿಟ್ಟ ಸತ್ಯಜಿತ್‌ ಸುರತ್ಕಲ್ ಅವರಿಗೆ ಈ ಬಾರಿ ಭಾರತೀಯ ಜನತಾ ಪಕ್ಷದ ಕಡೆಯಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಬೇಕೆಂಬ ಕೂಗು ಭಾರೀ ಜೋರಾಗಿ ಕೇಳಿ ಬರುತ್ತಿದೆ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲೂ ಟಿಕೆಟ್ ಸಿಗುತ್ತದೆ ಎಂಬ ಮಾತು ಕೇಳಿ ಬಂದಿತ್ತು, ಆದರೆ ಕೊನೆ‌ ಗಳಿಗೆಯಲ್ಲಿ ಪಕ್ಷದ ತೀರ್ಮಾನ ಬೇರೆ ಆಗಿದ್ದರಿಂದ ಸತ್ಯಜಿತ್‌ ಅವರು ಟಿಕೆಟ್ ವಂಚಿತರಾಗಿದ್ದರು.‌ ಆದರೆ ಇದೀಗ ಸಾಮಾಜಿಕ ಜಾಲತಾಣ ಸೇರಿದಂತೆ ಹಿಂದೂ ಯುವಕರ ಬಾಯಲ್ಲಿ ಸತ್ಯಜಿತ್‌ ಅವರ ಹೆಸರೇ ಹೆಚ್ಚು ಕೇಳಿ ಬರುತ್ತಿದ್ದು, ಹಿಂದೂ ಸಂಘಟನೆಗಾಗಿ ಶ್ರಮಿಸಿದ ಸತ್ಯಜಿತ್‌ ಅವರಿಗೆ ಭಾರತೀಯ ಜನತಾ ಪಕ್ಷ ಈ ಬಾರಿ ಟಿಕೆಟ್ ನೀಡಬೇಕು ಎಂದು ಆಗ್ರಹ ಕೂಡ ಕೇಳಿ ಬಂದಿದೆ.

ಹಿಂದೂ ಧರ್ಮಕ್ಕಾಗಿ ಹೋರಾಟ ನಡೆಸುತ್ತಲೇ ತನ್ನನ್ನು ತಾನು ಗುರುತಿಸಿಕೊಂಡು ಬಂದಿರುವ ಸತ್ಯಜಿತ್‌ ಸುರತ್ಕಲ್, ಹುಟ್ಟು ಹೋರಾಟಗಾರ ಎಂದರೆ ತಪ್ಪಾಗದು. ಯಾಕೆಂದರೆ ಸತ್ಯಜಿತ್‌ ಅವರ ತಂದೆ ವಾಸುದೇವ ಅವರು ಕೂಡ ವಿಶ್ವ ಹಿಂದೂ ಪರಿಷತ್‌ನ‌ ಪ್ರಖಂಡ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ವ್ಯಕ್ತಿ, ತಾಯಿ ಭಾರತಿ ಅವರು ರಾಷ್ಟ್ರೀಯ ಸೇವಿಕಾ ಸಮಿತಿಯ ತಾಲೂಕು ಕಾರ್ಯವಾಹಿಕೆಯಾಗಿ ಸೇವೆ ಸಲ್ಲಿಸಿದವರು.‌ ಅಷ್ಟೇ ಅಲ್ಲದೆ ಸಹೋದರ ಸಂದೀಪ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ ವ್ಯಕ್ತಿ, ಇನ್ನು ಸಹೋದರಿ ಕೂಡ ಆರ್‌ಎಸ್‌ಎಸ್‌ನ ಎರಡನೇ ವರ್ಷದ ಓಟಿಸಿ ಮುಗಿಸಿದ್ದಾರೆ. ಒಂದರ್ಥದಲ್ಲಿ ಹೇಳುವುದಾದರೆ ಸತ್ಯಜಿತ್‌ ಅವರ ಕುಟುಂಬವೇ ಸಂಘದಲ್ಲಿ ಕಾಣಿಸಿಕೊಂಡವರು.

ತನ್ನ 15-16ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ತನ್ನ ಅಣ್ಣನ ಮೂಲಕ ಕಾಲಿಟ್ಟ ಸತ್ಯಜಿತ್‌ ಸುರತ್ಕಲ್, ನಿರಂತರವಾಗಿ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿದವರು. ತನ್ನ ಕಾಲೇಜು ಶಿಕ್ಷಣದ ಜೊತೆಗೆ ಸಂಘದ ಜವಾಬ್ದಾರಿ ವಹಿಸಿಕೊಂಡ ಇವರು ಸುರತ್ಕಲ್ ನಗರದ ಪ್ರವಾಸಿ ಕಾರ್ಯಕರ್ತನಾಗಿ ಆಯ್ಕೆ ಆದರು. ಅದೇ ರೀತಿ ಎಬಿವಿಪಿ ಸಂಘಟನೆಯಲ್ಲಿ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದ ಇವರು, ಅನೇಕ ವಿದ್ಯಾರ್ಥಿ ಪರ ಹೋರಾಟದಲ್ಲಿ ನಾಯಕತ್ವ ವಹಿಸಿಕೊಂಡವರು.ಸತ್ಯಜಿತ್‌ ಸುರತ್ಕಲ್ ಅವರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹೋರಾಟ ಎಂದಿಗೂ ಮರೆಯಲು ಸಾಧ್ಯವಿಲ್ಲ. 1993ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಸಂದರ್ಭದಲ್ಲಿ ಸತ್ಯಜಿತ್‌ ಸುರತ್ಕಲ್ ಅವರಿಗೆ ವಯಸ್ಸು ಕೇವಲ 24 ಮಾತ್ರ. ಗೆಳೆಯರ ಜೊತೆ ಸೇರಿ ಮೋಜು ಮಸ್ತಿ ಮಾಡುವ ವಯಸ್ಸಿನಲ್ಲಿ ಸತ್ಯಜಿತ್‌ ಸುರತ್ಕಲ್ ದೇಶಪ್ರೇಮವನ್ನು ಮೈಗೂಡಿಸಿಕೊಂಡು ರಾಷ್ಟ್ರ ನಾಯಕರ ಜೊತೆ ಗುರುತಿಸಿಕೊಂಡು ಪೊಲೀಸರ ಸರ್ಪಗಾವಲನ್ನೂ ದಾಟಿ ಎಲ್ಲಾ ವಿರೋಧವನ್ನು ಮೆಟ್ಟಿ ನಿಂತು ರಾಷ್ಟ್ರ ಧ್ವಜವನ್ನು ಹಾರಿಸಿಬಿಟ್ಟಿದ್ದರು. ಈದ್ಗಾ ಮೈದಾನಕ್ಕೆ ತೆರಳಿದ ಮಂಗಳೂರಿನ ತಂಡದಲ್ಲಿ ಸತ್ಯಜಿತ್‌ ಸುರತ್ಕಲ್ ಕೂಡ ಒಬ್ಬರು. ಈ‌ ಘಟನೆಗೂ ಮೊದಲು ಹುಬ್ಬಳ್ಳಿಗೆ ತೆರಳಿದ ಸ್ವಯಂ ಸೇವಕರಿಗೆ ಯಾವ ರೀತಿಯ ತರಬೇತಿ ನೀಡಲಾಗಿತ್ತು ಎಂದರೆ ಸಾಮಾನ್ಯವಾಗಿ ಊಹಿಸಲು ಸಾಧ್ಯವಿಲ್ಲ. ‌ಎರಡು ದಿನಗಳ ಕಾಲ ನಿಗೂಢ ಸ್ಥಳದಲ್ಲಿ ವಾಸ್ತವವಿದ್ದ ಸ್ವಯಂ ಸೇವಕರಿಗೆ ಬ್ರೆಡ್ ಮತ್ತು ಸಕ್ಕರೆಯೇ ಆಹಾರವಾಗಿತ್ತು. ಯಾಕೆಂದರೆ ತಾವಿದ್ದ ಸ್ಥಳದಿಂದ ಹೊರ ಹೋದರೆ ಪೊಲೀಸರ ಗುಂಡಿಗೆ ಬಲಿಯಾಗಬೇಕಿತ್ತು, ಮಲ-ಮೂತ್ರ ಮಾಡುವುದಕ್ಕೂ ಹೊರಗಡೆ ಹೋಗುವಂತಿಲ್ಲ, ಅದೇ ಕಾರಣಕ್ಕೆ ಬ್ರೆಡ್ ಮತ್ತು ಸಕ್ಕರೆ ಮಾತ್ರ ತಿನ್ನಲು ನೀಡುತ್ತಿದ್ದರು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಇವರು ಅಂಜಿದವರಲ್ಲ, ತಾವು ಬಂದ ಉದ್ದೇಶ ಈಡೇರುವವರೆಗೂ ಹಿಂದೆ ಹೆಜ್ಜೆ ಇಡುವ ಮಾತೇ ಇಲ್ಲ ಎಂದು ಪಣತೊಟ್ಟಿದ್ದ ಇವರು ಕೊನೆಗೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಒಂದು ಇತಿಹಾಸವನ್ನೇ ನಿರ್ಮಿಸಿದರು.‌ ಅನಂತ್ ಕುಮಾರ್ ಹೆಗ್ಡೆಯಂತಹ ಹಿಂದೂ ನಾಯಕರ ಜೊತೆ ಪೊಲೀಸರ ಎಲ್ಲಾ ಕೋಟೆಯನ್ನೂ ದಾಟಿ ಒಳನುಗ್ಗಿದ 4-5 ಜನ ಸ್ವಯಂ ಸೇವಕರಲ್ಲಿ ಸತ್ಯಜಿತ್‌ ಕೂಡ ಒಬ್ಬರು ಎಂಬುವುದು ಗಮನಿಸಬೇಕಾದ ಅಂಶ. ಹುಬ್ಬಳ್ಳಿಗೆ ತೆರಳಿದ ಕಾರ್ಯಕರ್ತರ ನೇತೃತ್ವ ವಹಿಸಿದವರು ಕಲ್ಲಡ್ಕ ಪ್ರಭಾಕರ್ ಭಟ್, ಇವರ ಮಾರ್ಗದರ್ಶನದಂತೆ ಸ್ವಯಂ ಸೇವಕರು ತಮ್ಮ ಕಾರ್ಯ ಯೋಜನೆ ಮಾಡಿಕೊಳ್ಳಬೇಕಾಗಿತ್ತು. ಇದಾದ ನಂತರ ಸತ್ಯಜಿತ್‌ ಸುರತ್ಕಲ್ ಎಂದರೆ ರಾಜ್ಯಾದ್ಯಂತ ಮನೆ – ಮನಗಳ ಮಾತಾಗಿ ಹೋದರು.

ಈ ಘಟನೆ ನಡೆದ ನಂತರ ಉಡುಪಿಯಲ್ಲಿ ಸತ್ಯಜಿತ್‌ ಸುರತ್ಕಲ್ ಅವರಿಗೆ ಒಂದು ಅದ್ಧೂರಿ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಕೂಡ ಭಾಗವಹಿಸಿದ್ದರು. ‌ಈದ್ಗಾ ಮೈದಾನದಲ್ಲಿ ನಡೆದ ಈ ಘಟನೆ ಕರ್ನಾಟಕದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಲು ಸಹಾಯಕವಾಯಿತು ಎಂದರೂ ತಪ್ಪಾಗದು. ‌ಯಾಕೆಂದರೆ ಇತ್ತೀಚೆಗೆ ಹುಬ್ಬಳ್ಳಿಗೆ ಬಂದ‌ ಪ್ರಧಾನಿ ನರೇಂದ್ರ ಮೋದಿಯವರು ಕೂಡ “ಇದು ತಿರಂಗ ಹಾರಿಸಿದ ನೆಲ” ಎಂದು ಒತ್ತಿ ಒತ್ತಿ ಹೇಳುದ್ದರು. ಇದಾದ ನಂತರ ಸತ್ಯಜಿತ್‌ ಸುರತ್ಕಲ್ ಅವರು ಹಿಂದೂ ಜಾಗರಣ ವೇದಿಕೆ ಎಂಬ ಸಂಘಟನೆ ಕಟ್ಟಿದರು, ಹಿಂದೂ ಧರ್ಮದ ಮೇಲಾಗುತ್ತಿದ್ದ ಶೋಷಣೆಯ ವಿರುದ್ಧ ಧ್ವನಿ ಎತ್ತಿದರು.‌ ಧರ್ಮ ರಕ್ಷಣೆಗೆ ಸಿದ್ಧರಿದ್ದ ಯುವಕರನ್ನು ಒಗ್ಗೂಡಿಸಿ, ಗೋಹತ್ಯೆ, ಲವ್ ಜಿಹಾದ್, ಮತಾಂತರದ ವಿರುದ್ಧ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರು ಮಾತ್ರವಲ್ಲದೆ ಈ ವಿಚಾರದಲ್ಲಿ ಅನೇಕ ಪೊಲೀಸ್ ಕೇಸ್‌ಗಳನ್ನು ತನ್ನ ಮೈಮೇಲೆ ಹಾಕಿಕೊಂಡರು.

1993ರಲ್ಲಿ ನಡೆದ ಒಂದು ಲವ್ ಜಿಹಾದ್ ಪ್ರಕರಣ ಇಡೀ ಕರಾವಳಿಯನ್ನೇ ತಲೆ ತಗ್ಗಿಸುವಂತೆ ಮಾಡಿತ್ತು. ಆದರೆ ಇದರ ವಿರುದ್ಧ ಹೋರಾಟ ನಡೆಸಿದ ನಾಯಕ ಎಂದರೆ ಅದು ಸತ್ಯಜಿತ್‌ ಸುರತ್ಕಲ್ ಮಾತ್ರ, ಕೇವಲ ಹೋರಾಟ ನಡೆಸಿದ್ದು ಮಾತ್ರವಲ್ಲದೆ ಯಶಸ್ಸು ಕೂಡ ಕಂಡರು. ಅನೇಕ ಬೆದರಿಕೆಗಳನ್ನು ಎದುರಿಸಿದರೂ ಯಾವುದನ್ನು ಕ್ಯಾರೇ ಅನ್ನದೆ ಧರ್ಮ ರಕ್ಷಣೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. 1995ರಲ್ಲಿ ಪ್ರವಾಸಿ ಕಾರ್ಯಕರ್ತನಾಗಿ ಬೆಂಗಳೂರು ನಗರದಲ್ಲಿ ಹಿಂದೂ ಜಾಗರಣ ವೇದಿಕೆಯನ್ನು ಸಂಘಟಿಸಿ ಸಂಘಟನೆಯನ್ನು ಬಲಪಡಿಸಿದರು. 1996ರಲ್ಲಿ ಭಟ್ಕಳ ಹೋರಾಟದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಯುವ ಶಕ್ತಿಯನ್ನು ಹಿಂದೂ ಯುವಕರನ್ನು ಧರ್ಮ ಜಾಗೃತಿಗಾಗಿ ಸಂಘಟಿಸಿದರು. ಮಂಗಳೂರು ಎಂಆರ್‌ಪಿಎಲ್ ಪೈಪ್ ಲೈನ್ ವಿರುದ್ಧದ ಹೋರಾಟದಲ್ಲೂ ಮೊಗವೀರ ಸಮುದಾಯದ ಜನರ ಜೊತೆ ಕೈಜೋಡಿಸಿದರು. ಕೊಡಗು, ಚಿಕ್ಕಮಗಳೂರು, ಶೃಂಗೇರಿ ಸೇರಿದಂತೆ ಮತಾಂತರದ ವಿರುದ್ಧ ನಡೆದ ಪ್ರತಿಭಟನೆಯ ನಾಯಕತ್ವ ವಹಿಸಿಕೊಂಡು ಸಂಘದ ಹಿರಿಯರು ವಹಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು.

ದಿನದ 24 ಗಂಟೆಯೂ ಸಂಘಟನೆಗಾಗಿ ಕಾರ್ಯಕರ್ತರಿಗಾಗಿ ಶ್ರಮಿಸುತ್ತಿದ್ದ ಸತ್ಯಜಿತ್‌ ಸುರತ್ಕಲ್ ಅವರಿಗೆ 1994ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನ ಕೂಡ ಬಂದಿತ್ತು. ಆದರೆ ರಾಜಕೀಯದಿಂದ ದೂರ ಉಳಿದ ಇವರು, ಸಂಘಟನೆಗಾಗಿಯೇ ಜೀವ ಮೀಸಲಿಟ್ಟಿದ್ದೇನೆ ಎನ್ನುತ್ತಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಬಿಟ್ಟರು. ಸಂಘಟನೆಯಲ್ಲಿ ಹೆಚ್ಚು ಗುರುತಿಸಿಕೊಂಡ ಕಾರಣ ವಿರೋಧಿಗಳು ಹೆಚ್ಚಾದರು, ಬೆದರಿಕೆ ಕರೆಗಳು ಬರತೊಡಗಿದವು. ಇದನ್ನು ಗಂಭೀರವಾಗಿ ಪರಿಗಣಿಸಿ ಸ್ವತಃ ಗುಪ್ತಚರ ಇಲಾಖೆಯ ಆದೇಶದಂತೆ ಸತ್ಯಜಿತ್‌ ಸುರತ್ಕಲ್ ಅವರಿಗೆ ಗನ್ ಮ್ಯಾನ್ ಕೂಡ ಒದಗಿಸಿದರು. ಇಂದೂ ಕೂಡ ಸತ್ಯಜಿತ್‌ ಅವರು ಯಾವ ಕಾರ್ಯಕ್ರಮಕ್ಕೆ ಹೋದರೂ ಇವರ ಜೊತೆಗೆ ಭದ್ರತಾ ಸಿಬ್ಬಂದಿ ಇರುತ್ತಾರೆ.

ಮದುವೆ ಆದ ಹೆಂಡತಿಗಿಂತ ನನಗೆ ನನ್ನ ಸಂಘಟನೆಯೇ ಮುಖ್ಯ ಎಂದು ಬಹಿರಂಗವಾಗಿ ಹೇಳಿಕೊಂಡ‌ ಸತ್ಯಜಿತ್‌ ಸುರತ್ಕಲ್, ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆಯಾದರೂ ಅವರ ಜೊತೆಗೆ ಕಾರ್ಯಕರ್ತನ ಕುಟುಂಬದ ಜೊತೆ ಬೆಂಗಾವಲಾಗಿ ನಿಲ್ಲುತ್ತಾರೆ. ಅದೆಷ್ಟೋ ಕಾರ್ಯಕರ್ತರು ಸಂಘಪರಿವಾರಗಳಲ್ಲಿ ತೊಡಗಿಸಿಕೊಂಡು ಕೇಸ್ ಹಾಕಿಸಿಕೊಂಡು ಜೈಲು ಸೇರಿದ ಸಂದರ್ಭದಲ್ಲೂ ಕಾರ್ಯಕರ್ತರ ಕುಟುಂಬದ ಮಗನಾಗಿ ಆರ್ಥಿಕ ಸಹಾಯ ಕೂಡ ಮಾಡಿದ ವ್ಯಕ್ತಿ ಸತ್ಯಜಿತ್‌ ಸುರತ್ಕಲ್.

ಅನ್ಯ ಧರ್ಮೀಯರಿಂದ‌ ನಿರಂತರ ಒಂದಲ್ಲ ಒಂದು ರೀತಿಯಲ್ಲಿ ದಾಳಿಗೊಳಗಾಗುತ್ತಿದ್ದ ಹಿಂದೂ ಸಮಾಜದ ಪರವಾಗಿ ರಾಜಕೀಯ ನಾಯಕರ ನೇತೃತ್ವದಲ್ಲಿ ಸತ್ಯಜಿತ್‌ ಸುರತ್ಕಲ್ ಅವರ ನಾಯಕತ್ವದಲ್ಲಿ ಸುರತ್ಕಲ್ ನಗರದಲ್ಲಿ ಬೃಹತ್ ಹೋರಾಟ ಒಂದು ನಡೆಯುತ್ತದೆ, ಈ ಹೋರಾಟದಲ್ಲಿ ನಾಯಕತ್ವ ವಹಿಸಿಕೊಂಡ‌ ಸತ್ಯಜಿತ್‌ ಹಿಂದೂ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡುತ್ತಾರೆ. ಯಾರೇ ಆಗಲಿ ಹಿಂದೂ ಹೆಣ್ಣು ಮಕ್ಕಳ ಅಥವಾ ಹಿಂದೂ ಕಾರ್ಯಕರ್ತರ ವಿಚಾರದಲ್ಲಿ ಉಪಟಳ ನೀಡಿದರೆ ಅಂತವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಮತ್ತು ಹಿಂದೂ ಸಮಾಜ ಎಲ್ಲಾ ಹೋರಾಟಕ್ಕೂ ಸಿದ್ಧವಾಗಿದೆ ಎಂಬ ಎಚ್ಚರಿಕೆಯನ್ನು ಕೂಡ ನೀಡುತ್ತಾರೆ.‌ ಈ ಹೋರಾಟದಲ್ಲಿ ಹಿಂದೂ ಕಾರ್ಯಕರ್ತರು ಬಂಧನಕ್ಕೊಳಗಾಗುತ್ತಾರೆ, ಆದರೆ ಕಾರ್ಯಕರ್ತರ ಸಹಾಯಕ್ಕೆ ನಿಂತ ಸತ್ಯಜಿತ್‌, ಪ್ರತಿಯೊಂದು ಹಂತದಲ್ಲೂ ಕಾರ್ಯಕರ್ತರ ಬೆಂಗಾವಲಾಗಿ ನಿಂತಿದ್ದರು.

ಹಿಂದೂ ಕಾರ್ಯಕರ್ತ ಪೊಳಲಿ ಅನಂತು ಅವರ ಹತ್ಯೆ ಇಡೀ ಕರಾವಳಿಯನ್ನು ಬೆಚ್ಚಿ ಬೀಳಿಸುವಂತಹ ಘಟನೆ, ಇಡೀ ಕರಾವಳಿಯೇ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಹತ್ಯೆಯಾದ ಅನಂತು ಅವರ ಪಾರ್ಥಿವ ಶರೀರವನ್ನು ಮನೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ದಾರಿಯಲ್ಲಿ ಮತ್ತೆ ವಿರೋಧಿಗಳಿಂದ ದಾಳಿ ಆಗುತ್ತದೆ, ಈ‌ ಸಂದರ್ಭದಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸುತ್ತಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಪಾರ್ಥಿವ ಶರೀರವನ್ನು ಮನೆಗೆ ಸುರಕ್ಷಿತವಾಗಿ ಸಾಗಿಸುವಲ್ಲಿ ಸತ್ಯಜಿತ್‌ ಸುರತ್ಕಲ್ ಯಶಸ್ವಿಯಾಗುತ್ತಾರೆ.‌ ಅಷ್ಟೇ ಅಲ್ಲದೆ ಅನಂತು ಅವರ ಸಹೋದರಿಯ ಮದುವೆಗೆ ಆರ್ಥಿಕ‌ ಸಹಾಯದ ಜೊತೆಗೆ ಸಂಪೂರ್ಣ ಮನೆಯವರ ಬೆಂಬಲಕ್ಕೆ ನಿಂತು ಹಿಂದೂ ಜಾಗರಣ ವೇದಿಕೆಯ ಮೂಲಕ ಒಂದು ಮನೆಯನ್ನೂ ಕಟ್ಟಿಸಿ ಕೊಡುತ್ತಾರೆ. ಇವಿಷ್ಟು ಸತ್ಯಜಿತ್‌ ಸುರತ್ಕಲ್ ಎಂಬ ನಾಯಕನ ಮಾನವೀಯ ಗುಣ.

ಅಷ್ಟೇ ಅಲ್ಲದೆ ಎಂಆರ್‌ಪಿಎಲ್ ಕಂಪನಿಯಲ್ಲಿ ಯುವಕರಿಗೆ ಕೆಲಸ ನೀಡುತ್ತೇವೆ ಎಂದು ಹೇಳಿ ಮೋಸ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಸಾರ್ವಜನಿಕರು ಪ್ರತಿಭಟನೆಗೆ ನಿರ್ಧರಿಸಿದಾಗಲೂ ಈ‌ ಪ್ರತಿಭಟನೆಯ ನಾಯಕತ್ವ ಸತ್ಯಜಿತ್‌ ಸುರತ್ಕಲ್ ವಹಿಸಿಕೊಳ್ಳುತ್ತಾರೆ. ನ್ಯಾಯಕ್ಕಾಗಿ ಹೋರಾಟ ಪ್ರಾರಂಭಿಸಿದರೆ ನ್ಯಾಯ ಒದಗಿಸದೇ ನಾನಂತೂ ಈ ಹೋರಾಟದಿಂದ ಹಿಂಜರಿಯುವುದಿಲ್ಲ, ನೀವೂ ನನ್ನ ಜೊತೆ ಇರುತ್ತೀರಿ ಎಂದಾದರೆ ಮಾತ್ರ ನಾಯಕತ್ವ ವಹಿಸಿಕೊಳ್ಳುತ್ತೇನೆ ಎಂದು ತೀವ್ರ ಹೋರಾಟ ನಡೆಸಿ, ಜಿಲ್ಲಾಧಿಕಾರಿಯಿಂದ ಹಿಡಿದು ಎಲ್ಲಾ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಅನ್ಯಾಯಕ್ಕೊಳಗಾದ ಮಕ್ಕಳಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದರು.‌ ಈ ಸಂದರ್ಭದಲ್ಲಿ ಸ್ವತಃ ತಾವೇ ಪ್ರತಿಭಟನಾಕಾರರಿಗೆ ಗಂಜಿ ಊಟದ ವ್ಯವಸ್ಥೆ ಮಾಡಿ, ಯಾರಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದರು.

ಅದೇ ರೀತಿ ಬಂಟ್ವಾಳದಲ್ಲಿ ಶರತ್ ಮಡಿವಾಳ ಎಂಬ ಕಾರ್ಯಕರ್ತನ ಹತ್ಯೆಯಾದ ಸಂದರ್ಭದಲ್ಲೂ ಪಾರ್ಥಿವ ಶರೀರರ ಮೆರವಣಿಗೆ ಸಮಯದಲ್ಲಿ ಮಸೀದಿಯ ಬಳಿ ಕಲ್ಲೂ ತೂರಾಟ ನಡೆಯುತ್ತದೆ, ಈ‌ ಸಂದರ್ಭದಲ್ಲಿ ಪೊಲೀಸರು ಕೂಡ ಲಾಠಿಚಾರ್ಜ್ ನಡೆಸುತ್ತಾರೆ, ಆದರೆ ಪಾರ್ಥಿವ ಶರೀರವನ್ನು ಮನೆಗೆ ತಲುಪಿಸಿ ಎಲ್ಲಾ ಕಾರ್ಯಕರ್ತರು ಸ್ಥಳದಿಂದ ಹೋದ ನಂತರ ಸತ್ಯಜಿತ್‌ ಅಲ್ಲಿಂದ ಹೋಗಿದ್ದರು.‌ಯಾವೊಬ್ಬ ಕಾರಗಯಕರ್ತನಿಗೂ ತೊಂದರೆಯಾಗದಂತೆ ನೋಡಿಕೊಂಡು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಇನ್ನೊಂದು ವಿಶೇಷವೆಂದರೆ ಸತ್ಯಜಿತ್‌ ಸುರತ್ಕಲ್ ಅವರಿಗೆ ಭಾರತೀಯ ಸೈನಿಕರ ಮೇಲೆ ವಿಶೇಷ ಗೌರವ, ಅದೇ ಕಾರಣಕ್ಕೆ ಮಂಗಳೂರಿನಲ್ಲಿ “ರಾಷ್ಟ್ರಭಕ್ತ ನಾಗರಿಕ ವೇದಿಕೆ” ಎಂಬ ಒಂದು ಗ್ರೂಪ್ ರಚಿಸಿ ಪ್ರತೀ ವರ್ಷ ಸೈನಿಕರನ್ನು ಗೌರವಿಸುವ ವಿಶೇಷ ಕಾರ್ಯಕ್ರಮ ನಡೆಸುತ್ತಾ ಬಂದಿರುವ ಇವರು, ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಅಂಗವೈಕಲ್ಯ ಅಥವಾ ಯಾವುದೇ ರೀತಿಯ ತೊಂದರೆ ಉಂಟಾಗಿರುವ ಸೈನಿಕರ ಕುಟುಂಬಕ್ಕೆ ತಲಾ 25,000 ಧನಸಹಾಯ ನೀಡುವ ಮೂಲಕ ಸೈನಿಕರನ್ನು ಗೌರವಿಸುತ್ತಾ ಬಂದಿದ್ದಾರೆ. ಈವರೆಗೆ ಅದೆಷ್ಟೋ ಲಕ್ಷ ಧನಸಹಾಯ ಮಾಡಿರುವ ಸತ್ಯಜಿತ್‌ ಸುರತ್ಕಲ್, ಯಾವ ವೇದಿಕೆಯಲ್ಲೂ ತಾನು ಮಾಡಿದ ಸಹಾಯದ ಬಗ್ಗೆ ಹೇಳಿಕೊಂಡವರಲ್ಲ.

ಇಷ್ಟಾದರೂ ಕೂಡ ಸತ್ಯಜಿತ್‌ ಸುರತ್ಕಲ್ ಇವರು ನನಗೆ ಟಿಕೆಟ್ ನೀಡಬೇಕು ಎಂದು ಕೇಳಿದವರಲ್ಲ, ಆದರೆ ಇದೀಗ ಕಾರ್ಯಕರ್ತರ ಒತ್ತಡ ಹೆಚ್ಚಾಗುತ್ತಿದೆ, ಸತ್ಯಜಿತ್‌ ಅವರು ರಾಜಕೀಯಕ್ಕೆ ಕಾಲಿಡಬೇಕೆಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ‌ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಸತ್ಯಜಿತ್ ಸುರತ್ಕಲ್‌ಗೆ ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂಬ ಸುದ್ಧಿ ಬಲವಾಗಿತ್ತು.‌ಆದರೆ ಪಕ್ಷದ ತೀರ್ಮಾನ ಬೇರೆಯೇ ಆಗಿದ್ದರಿಂದ ಸತ್ಯಜಿತ್‌ ಟಿಕೆಟ್ ವಂಚಿತರಾದರು. ಇದೀಗ ಲೋಕಸಭಾ ಚುನಾವಣೆಗೆ ಮಂಗಳೂರು ಕ್ಷೇತ್ರದಿಂದ ಸತ್ಯಜಿತ್‌ ಅವರ ಹೆಸರು ಬಲವಾಗಿ ಕೇಳಿ ಬಂದಿದೆ, ಈ ಬಾರಿ ಭಾರತೀಯ ಜನತಾ ಪಕ್ಷ ಅಭ್ಯರ್ಥಿ ಬದಲಿಸಬೇಕು ಮತ್ತು ಸತ್ಯಜಿತ್‌ ಸುರತ್ಕಲ್‌ಗೆ ಅವಕಾಶ ನೀಡಲೇಬೇಕು ಎಂಬ ಬ್ಯಾನರ್‌ಗಳು ಕೂಡ ಮಂಗಳೂರು ಆಸುಪಾಸಿನಲ್ಲಿ ಕಂಡು ಬರುತ್ತಿದೆ.‌ ಕಾರ್ಯಕರ್ತರಿಗಾಗಿ ಮತ್ತು ಸಂಘಟನೆಗಾಗಿ ಕೆಲಸ ಮಾಡಿದ ಸತ್ಯಜಿತ್‌ ಸುರತ್ಕಲ್‌ಗೆ ಈ ಬಾರಿ ಆದರೂ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಗುತ್ತದೆಯೇ ಎಂಬುದು ಕಾದು ನೋಡಬೇಕಿದೆ. ಪಕ್ಷದ ಹೈಕಮಾಂಡ್ ಹಾಲಿ ಸಂಸದರನ್ನೇ ಆಯ್ಕೆ ಮಾಡಲಿದೆಯೇ ಅಥವಾ ಹೊಸ ಮುಖಗಳಿಗೆ ಅವಕಾಶ ನೀಡುತ್ತದೆಯೇ ಎಂಬುದು ಕೊನೆಯ ಗಳಿಗೆಯಲ್ಲೇ ತಿಳಿಯಲಿದೆ.

0 comments: