Tuesday, February 5, 2019

ಬಿಲ್ಲವರು ಸಮಾವೇಶ ನಡೆಸಿದರೆ ಮಾತ್ರ ಅದು ಜಾತಿ ಸಮಾವೇಶ ಅಲ್ಲವೇ??


ಬಿಲ್ಲವರು ಸಮಾವೇಶ ಮಾಡಿದರೆ ಮಾತ್ರ ಜಾತಿ ಸಮಾವೇಶವೇ ? ಧರ್ಮದ ಹೆಸರಿನಲ್ಲಿ, ಧರ್ಮದ ಉಳಿಯುವಿನಲ್ಲಿ ಜಾತಿ ಬಿಟ್ಟು ಹೋರಾಟ ಮಾಡಿ, ಅದೆಷ್ಟೋ ಜೀವದಾನ ನೀಡುದಲ್ಲದೆ, ಧರ್ಮಕ್ಕಾಗಿ ಇಂದಿಗೂ ಸಾವಿರಕ್ಕೂ ಮಿಗಿಲಾದ ಬಿಲ್ಲವ ಯುವಕರು ಜೈಲಿನಲ್ಲೇ ಜೀವನ ನಡೆಸುತ್ತಿರುವಂತಹ ಪರಿಸ್ಥಿತಿಯನ್ನು ತಂದುಕೊಂಡಿರುವ ಬಿಲ್ಲವ ಸಮಾಜ ಗೊತ್ತಿದ್ದೊ ಗೊತ್ತಿಲ್ಲದೆಯೋ ಇದುವರೆಗೂ ಒಂದಲ್ಲ ಒಂದು ಶೋಷಣೆಯಲ್ಲೇ ಬದುಕುತ್ತಿದೆ. ಬಹು ಸಂಖ್ಯಾತರಾದ ಬಿಲ್ಲವ ಸಮಾಜ ಇದರಿಂದಾಗಿ ಎಲ್ಲೇಲ್ಲೋ ಚದುರಿ ಹೋಗಿತ್ತು. ಅಂತಹ ಬಿಲ್ಲವ ಸಮಾಜ ಇಂದು ನಿಧಾನವಾಗಿ ಸುಧಾರಿಸುತ್ತಿದೆ. ಒಗ್ಗಟ್ಟಾಗುತ್ತಿದೆ. ಕಾರಣ ಇಷ್ಟೇ. ಇದು ಜಾತಿ ಪ್ರೇಮವೆಂದಲ್ಲ. ಸಮಾಜದಲ್ಲಿ ಇರುವ ತೀರ ಬಡ ಕುಟುಂಬಗಳ ಉದ್ಧಾರ. ವಿದ್ಯೆ,‌ಉದ್ಯೋಗ ಮುಂತಾದ ಕ್ಷೇತ್ರದಲ್ಲಿ ‌ಎಲ್ಲರೂ ಮುಂದೆ ಬರಬೇಕು ಎಂಬ ಉದ್ದೇಶ. ಅದೇ‌ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಕೂಡ. ಯಾವುದೇ ಸಂಘಟನೆಗಳು ಇಂತಹ ಕೆಲಸಗಳನ್ನು ಮಾಡುವುದಿಲ್ಲ. ಜಾತಿ ಸಂಘಟನೆಗಳು ಮಾತ್ರ ತಮ್ಮ ಸಮಾಜದ ಬಡಕುಟುಂಬಗಳ ಉದ್ದಾರಕ್ಕೆ ನಿಲ್ಲುವುದು. ಇದುವರೆಗೆ ಬಿಲ್ಲವ ಸಮಾಜ ಧರ್ಮದ ಹೊರಾಟಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದೆ. ಅದರೆ ಬಿಲ್ಲವ ಸಮಾಜದ ಬಡಕುಟುಂಬಗಳ ಪರಿಸ್ಥಿತಿಯನ್ನು ಯಾರೂ ಕೇಳವವರಿಲ್ಲ. ಇದಕ್ಕಾಗಿ ಬಿಲ್ಲವ ಸಮಾಜ ತನ್ನ ಬುಡ ಗಟ್ಟಿ ಮಾಡಬೇಕಾಗಿದೆ.

ಬಿಲ್ಲವ ಸಮಾವೇಶ ಆಗಬೇಕಾಗಿದೆ. ಈಗಾಗಲೇ ಬಿಲ್ಲವರ ಒಗ್ಗೂಡುವಿಕೆಯ ಶಕ್ತಿ ಪ್ರದರ್ಶನ ಉಡುಪಿಯಲ್ಲಿ ಬಹಳ ಯಶಸ್ವಿಯಾಗಿ ನಡೆದಿದೆ. ಆದರೆ ಇದನ್ನು ಸಹಿಸದ ಕಿಡಿಗೇಡಿಗಳು ಅದಕ್ಕೂ ತಮ್ಮ ಕೆಟ್ಟ ದೃಷ್ಟಿಬೀರಿದ್ದಾರೆ. ಒಂದಾಗಿರುವ ಬಿಲ್ಲವ ಯುವ ಸಮಾಜವನ್ನು ಮತ್ತೆ ದಾರಿ ತಪ್ಪಿಸಲು ಪ್ರಯತ್ನ ಪಡುತ್ತಿದ್ದಾರೆ. ಬಿಲ್ಲವ ಸಮಾವೇಶ ಅದು ಜಾತಿ ಸಮಾಜವೇಶ. ಜಾತಿಗಿಂತ ಮೊದಲು ಧರ್ಮ ಮುಖ್ಯ. ಜಾತಿ ಸಮಾವೇಶಗಳು ನಡೆಯಬಾರದೆಂಬ ರೀತಿಯಲ್ಲಿ ಸಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಪೋಸ್ಟ್ ಕಮೆಂಟ್ ಗಳು ಸ್ವಜಾತಿ ವ್ಯಕ್ತಿಗಳಿಂದಲೇ ಕಾಣುತ್ತಿದೆ. ಬಾಹ್ಯ ಪ್ರೇರಣೆಯೋ ಅಥವೋ ಅಂಧ ಶ್ರದ್ಧೆಯೋ ಗೊತ್ತಾಗುತ್ತಿಲ್ಲ. ಇದುವರೆಗೆ ಅನ್ಯ ಜಾತಿಗಳ ಸಮಾವೇಶ ಅಥವಾ ಬೃಹತ್ ಕಾರ್ಯಕ್ರಮಗಳು ನಡೆದಾಗ ನೀವೆಲ್ಲಿದ್ದಿರಿ?. ಯಾಕೆ ಬಿಲ್ಲವ ಸಮಾಜ ಮಾಡುವ ಎಲ್ಲಾ ಕಾರ್ಯಕ್ರಮವನ್ನು ಧರ್ಮ ವಿರೋಧಿಯಾಗಿ ನೋಡಿ ಸಮಾಜದ ಯುವಕರ ದಾರಿ ತಪ್ಪಿಸುತ್ತಿದ್ದೀರಿ?. ಬಿಲ್ಲವರು ಸಮಾವೇಶ ನಡೆಸಿದರೆ ಮಾತ್ರ ಅದು ಜಾತಿ ಸಮಾವೇಶ ಅಲ್ಲವೇ?. ಒಂದು ವಿಷಯ ನೀವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.‌ ನಮ್ಮ ಜಿಲ್ಲೆಗಳಲ್ಲಿ ಹೆಚ್ಚಾಗಿ ಧರ್ಮ ಸಂಘಟನೆಗಲ್ಲಿ ತೊಡಗಿಸಿಕೊಂಡಿರುವವರು ಅಂದಿನಿಂದ ಇಂದಿನವರೆಗೂ ಬಿಲ್ಲವರೆ. ಬಿಲ್ಲವ ಸಮಾಜ ಯಾರದೋ ಕುತಂತ್ರಕ್ಕೆ ಬಲಿಯಾಗುತ್ತಿದ್ದರೂ ಇಂದಿಗೂ ನಮ್ಮ ಯುವಕರೂ ಜಾತಿಗಿಂತ  ಧರ್ಮ ಮೊದಲು  ಎಂದು ತಮ್ಮ ಕುಟುಂಬ, ಸಂಸಾರ ಮತ್ತು ಜೀವನವನ್ನು ತ್ಯಾಗ ಮಾಡಲು ಸದಾ ಸಿದ್ದರಾಗಿದ್ದಾರೆ.

ಆದರೆ ಇತರರು ಧರ್ಮ ಧರ್ಮ ಎಂದು ಹೇಳಿಕೊಂಡು ಜಾತಿ ಹೆಸರು ಹಾಕಿಕೊಂಡು ತಿರುಗುತ್ತಿದ್ದಾರೆ. ಇನ್ನು ಕೆಲವರು ಜಾತಿ ಹೆಸರು ಹಾಕಿಕೊಳ್ಳದಿದ್ದರು ಜಾತಿ ಪರವಾಗಿ ಮಾತ್ರ ಇದ್ದಾರೆ.  ಆದರೆ ಬಿಲ್ಲವರು ಯಾವತ್ತೂ ಅಂತಹ ಮನಸ್ಥಿತಿಯವರಲ್ಲ . ಅವರದು ಯಾವತ್ತಿದ್ದರೂ ನಿಷ್ಕ್ಮಲಶ ಧರ್ಮ ಪ್ರೇಮ. ಇಂದು ಬಿಲ್ಲವರು ಒಟ್ಟಾಗುತ್ತಿರುವುನ್ನು ನೋಡಿ ಎಲ್ಲಿ ತಮ್ಮ ಜಾತಿಗೆ ಪೆಟ್ಟು‌ ಬೀಳುವುದೋ ಎಂದು ಹೆದರಿ ಧರ್ಮದ ಹೆಸರಿನಲ್ಲಿ ಮತ್ತೆ ಬಿಲ್ಲವ ಸಮಾಜವನ್ನು ಒಡೆಯುವ ಪ್ರಯತ್ನ ‌ಬಿಲ್ಲವ ಯುವಕರ ಮುಖಾಂತರವೇ ಅಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಬಿಲ್ಲವರು ಇಂದು ಒಟ್ಟಾಗಿರುವುದು ತಮ್ಮ ಸಮುದಾಯದಲ್ಲಿರುವ ಅಶಕ್ತರ ಉದ್ಧಾರಕ್ಕಾಗಿಯೇ ಹೊರತು ಹಿಂದೂ ಧರ್ಮದ ವಿರುದ್ಧವಾಗಿ ನಿಂತು ಧರ್ಮ ಒಡೆಯುವುದಕ್ಕಾಗಿಯೋ ಅಥವಾ ಬೇರೆ ಧರ್ಮ ಕಟ್ಟುವುದಕ್ಕಾಗಿಯೋ ಅಲ್ಲ. ಧರ್ಮದ ವಿಚಾರ ಬಂದಾಗ ಬಿಲ್ಲವ ಸಮಾಜ ಎಂದಿಗೂ ಜಾತಿ ರಾಜಕೀಯ ಮಾಡಿಲ್ಲ, ಗುರುಗಳ ತತ್ವ ವಾದ ಒಂದೇ‌ ಜಾತಿ ಒಂದೇ ಮತ ಒಂದೇ ದೇವರು ಎಂಬ ದ್ಯೇಯ ವಾಕ್ಯವನ್ನು ಇದುವರೆಗೂ ಅಳವಡಿಸಿಕೊಂಡಿರುವುದು ಬಿಲ್ಲವ ಸಮಾಜ ಮಾತ್ರ ಹೊರತು ಬೇರೆ ಯಾವುದೇ ಧರ್ಮ ಸಂಘಟನೆಯಾಗಲಿ ಜಾತಿ ಸಂಘಟನೆಯಾಗಲಿ‌ ಮಾಡಿಲ್ಲ.  ನಮ್ಮ ಸಮಾಜದಲ್ಲಿ ನಮ್ಮದೇ ಆದ ಹಲವು ಸಮಸ್ಯೆಗಳಿವೆ. ಅದನ್ನು ಸರಿಪಡಿಸಲು ನಾವು ಒಂದಾಗ ಬೇಕಾಗಿದೆ.  ಇದನ್ನರಿತು ನಮ್ಮ ಯುವಕರು ಇನ್ನಾದರೂ ವಾಸ್ತವವನ್ನು ಅರಿತುಕೊಂಡು ನಡೆಯಬೇಕಾಗಿದೆ.

1 comment: