ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ವನಜಾ_ಪೂಜಾರಿ ಸ್ಮಶಾನದೊಳಗೇ ನೆಮ್ಮದಿ ಜಾಸ್ತಿ ಇದೆ ಮಾರ್ರೆ... - ಇದು ವೀರ ಮಹಿಳೆ ವಿಭಾಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸ್ವೀಕರಿಸಿದ ಉಡುಪಿ ಸ್ಮಶಾನ ಕಾಯುವ ವನಜಾ ಪೂಜಾರಿ ಮಾತು!ಕಳೆದ 27 ವರ್ಷಗಳಿಂದ ಉಡುಪಿಯ ಬೀಡನಗುಡ್ಡೆ ಹಿಂದೂ ಟ್ರಸ್ಟ್‌ನ ಸ್ಮಶಾನದ ಕಾವಲುಗಾರ್ತಿಯಾಗಿರುವ ವನಜಾ, ಈವರೆಗೂ 40 ಸಾವಿರಕ್ಕೂ ಅಧಿಕ ಶವಗಳ ದಹನ, 10 ಸಾವಿರಕ್ಕೂ ಹೆಚ್ಚು ಶವಗಳನ್ನು ಮಣ್ಣು ಮಾಡಿದ್ದಾರೆ. 27 ವರ್ಷಗಳ ಹಿಂದೆ ಪತಿ ಪೂವ ಪೂಜಾರಿ ನಿಧನರಾದ ಬಳಿಕ ಯಾರೊಬ್ಬರ ಹಂಗೂ ಬೇಡ ಎಂದು ಆತ ಮಾಡುತ್ತಿದ್ದ ಕಾಯಕವನ್ನೇ ಹೊಟ್ಟೆಪಾಡಿಗೆ ಆರಿಸಿಕೊಂಡರು. ಇಂದಿಗೂ ತನ್ನ 69ರ ಇಳಿ ವಯಸ್ಸಿನಲ್ಲಿಯೂ ನಿತ್ಯ ಬೆಳಗ್ಗೆ 7 ರಿಂದ ಸಂಜೆ 8ರವರೆಗೆ ಸ್ಮಶಾನ ಕಾಯುತ್ತಿದ್ದಾರೆ.
ಇಂದಿಗೂ ನಮ್ಮ ಸಂಸ್ಕೃತಿಯಲ್ಲಿ ಹೆಣ ಸುಡುವಾಗ ಹೆಣ್ಮಕ್ಕಳು ಸ್ಮಶಾನಕ್ಕೆ ಹೋಗುವಂತಿಲ್ಲ. ಆದರೆ, ಈ ಮಹಿಳೆ ಸ್ಮಶಾನವನ್ನೇ ಜೀವನೋಪಾಯ ಮಾಡಿಕೊಂಡಿದ್ದಾರೆ. ಈ ಹಿಂದೆ ರಾತ್ರಿ ಹಗಲು ಎನ್ನದೇ ಶವಶಂಸ್ಕಾರ ಮಾಡುತ್ತಿದ್ದರಂತೆ. ಇವರನ್ನು "ನಿಮಗೆ ಸ್ಮಶಾನದಲ್ಲಿ ಭಯವಾಗುವುದಿಲ್ಲವೇ?" ಎಂದು ಯಾರಾದರೂ ಕೇಳಿದರೆ, "ಹೊರ ಪ್ರಪಂಚಕ್ಕಿಂತ ಸ್ಮಶಾನದೊಳಗೇ ಶಾಂತಿ, ನೆಮ್ಮದಿ ಇದೆ' ಎನ್ನುತ್ತಾರೆ.
ಟ್ರಸ್ಟ್ ವತಿಯಿಂದ ಕೇವಲ ಮಾಸಿಕ 300 ರೂ.ಸಂಬಳ ಸಿಗುತ್ತಿದೆ. ಇದನ್ನು ಬಿಟ್ಟರೆ ಹೆಣ ತಂದವರು 100 ರೂ. ನಿಂದ 500 ರೂ ವರೆಗೂ ನೀಡುತ್ತಾರೆ. ಇದೇ ಸಂಪಾದನೆಯಿಂದಲೇ ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿಸಿದ್ದೇನೆ, ಮಗನನ್ನು ಓದಿಸಿ,ಆತ ಈಗ ಸ್ವಯಂ ಉದ್ಯೋಗದಲ್ಲಿದ್ದಾನೆ. ಅವರೆಲ್ಲ ಇಂದು "ಸಾಕು ಈ ಕೆಲಸ ಬಿಟ್ಟು ಮನೆಯಲ್ಲಿ ಆರಾಮವಾಗಿ ಇರಿ, ಎನ್ನುತ್ತಿದ್ದಾರೆ. ಆದರೆ, ನನ್ನ ಕೈಕಾಲು ಗಟ್ಟಿ ಇರೋವರೆಗೂ ನಾನು ಇಲ್ಲಿಯೇ ದುಡಿಯುತ್ತೇನೆ,' ಎನ್ನುವ ವನಜಾ ಅವರು ಸರ್ಕಾರ ನಮಗೆ ಈಗಲಾದರೂ ಗುರುತಿಸಿಇಂತಿಷ್ಟು ಮಾಸಿಕ ಸಹಾಯ ಧನ ನೀಡುಬಹುದು ಎಂಬ ನಿರೀಕ್ಷೆ ಹೊಂದಿದ್ದಾರೆ.ಮಲತಾಯಿಯೊಂದಿಗೆ ಬಾಲ್ಯ ಕಳೆದೆ, ಆನಂತರ ಮದುವೆಯಾಗಿ ಒಂದಿಷ್ಟು ಕಾಲ ಪತಿ ಜತೆಯಿದ್ದೆ. ಬಳಿಕ ಮಕ್ಕಳನ್ನು ಸಾಕುವ ಹೊಣೆಹೊತ್ತು ಪತಿಗೆ ಕೊಟ್ಟ ಮಾತಿನಂತೆ ಇಂದಿಗೂ ಸ್ಮಶಾನ ಕಾಯುತ್ತಿದ್ದೇನೆ. ಕೈಕಾಲು ಗಟ್ಟಿ ಇರೋವರೆಗೂ ಈ ಕಾಯಕ ನಿಲ್ಲಿಸುವುದಿಲ್ಲ.
ಇವರಿಗೆ ಜಿಲ್ಲಾಡಳಿತ ಈಗಿನ ಸಂಬಳ ಕೊಡಬೇಕಾಗಿದೆ. ಕನಿಷ್ಠ ಹತ್ತು ಸಾವಿರ ಸಂಬಳ ನಿಗದಿಮಾದಬೇಕು.
ReplyDelete