Monday, May 6, 2019

ಮಾನ್ಯ ಕೆರ್ಪಿನ ಮರ್ನೆದ ಚಿಟ್ಟೆಪಿಲಿ ಒಂದು ವಿಶ್ಲೇಷಣೆ

ನಾನು ಯಾವತ್ತು ತುಳು ಕಥೆ ಮತ್ತು ಬರಹಗಳನ್ನು ಓದುವಾಗ ಸರಾಗವಾಗಿ ಓದುತ್ತಾ ಹೋಗುತ್ತಿದ್ದವ. ಯಾಕೆಂದರೆ ಇಲ್ಲಿ ಕನ್ನಡ ಪದಗಳೆ ಹೆಚ್ಚಾಗಿ ಇದ್ದುದರಿಂದ ಅಷ್ಟೇನು ಕಷ್ಟವಾಗುತ್ತಿರಲಿಲ್ಲ. ಆದರೆ ಈ ಕಾದಂಬರಿಯಲ್ಲಿ ಮಾತ್ರ ಪ್ರತಿಯೊಂದು ಶಬ್ದವನ್ನು ಅರ್ಥೈಸಿಕೊಂಡು ಮುಂದುವರಿಯಬೇಕಿತ್ತು. ಯಾಕೆಂದರೆ ಇಲ್ಲಿ ಇದ್ದಿದ್ದು ಶುದ್ದ ತುಳು ಶಬ್ದಗಳು. ಅದರ ಸೊಗಡೆ ಬೇರೆ ಅದನ್ನು ಅರ್ಥೈಸಿಕೊಂಡು ಕಿರು ನಗೆ ಬೀರಿಯೆ ಮುಂದುವರಿಯಬೇಕು. ಕೆದಂಬಾಡಿ ಜತ್ತಪ್ಪ ರೈಗಳ ಬೇಟೆಯ ನೇನಪುಗಳು ಮತ್ತು ನರಭಕ್ಷಕ ಹುಲಿಗಳ ಬೇಟೆಯ ಬಗ್ಗೆ ಎಡ್ವರ್ಡ್ ಜೇಮ್ಸ್ ಕಾರ್ಬೆಟ್ ರವರು ಬರೆದ ಪುಸ್ತಕಗಳನ್ನು ಓದಿದ ನಮಗೆ ಇಂತಹುದೆ ಇನ್ನೊಂದು ಲೇಖಕ ಹುಟ್ಟಿಕೊಳ್ಳುತ್ತಾನೆ ಅಥವ ಇಂತಹ ಸನ್ನಿವೇಶಗಳು ನಮ್ಮ ಕಣ್ಣಿಗೆ ಕಟ್ಟಿದ ರೀತಿಯಲ್ಲಿ ವರ್ಣಿಸಲು ಬರುತ್ತಾರೆ ಎನ್ನುವ ಒಂದು ಸುಳಿವು ಇಲ್ಲದಿದ್ದ ಸಮಯದಲ್ಲಿ ಈ ಕಾದಂಬರಿ ರಸ ದೌತನ ಉಣಿಸಿದ್ದು ಸುಳ್ಳಲ್ಲ. ಇಲ್ಲಿ ಈ ಕಾದಂಬರಿ ಇನ್ನೂ ಯಾಕೆ ಹತ್ತಿರವಾಗುತ್ತೆ ಎಂದರೆ ತುಳುನಾಡಿನ ಸ್ಥಿತಿಯ ವರ್ಣನೆ ನೋಡಿದಾಗ ನಮ್ಮ ಆಸುಪಾಸಿನ ಕಥೆಯ ಎನ್ನುವಷ್ಟರ ಮಟ್ಟಿಗೆ ಭಾಷವಾಗುತ್ತೆ.

ಶುದ್ದ ತುಳುವನ್ನು ಈ ಚೊಚ್ಚಲ ಕೃತಿಯಲ್ಲಿ ಪರಿಶ್ರಮ ಪಟ್ಟು ಪೋಣಿಸಿದ್ದು ಅನನ್ಯವಾಗಿತ್ತು.ಬಾಷಾ ಸೊಗಡು ಕಾಣಬಹುದು, ಲೇಖಕರು ಉಡುಪಿ ಕಡೆಯವರಾಗಿದ್ದುದರಿಂದ ಉಡುಪಿ ತುಳುವಿನ‌ ಕಂಪನ್ನು ಕೇಳಬಹುದು. ಕೆಲವೊಮ್ಮೆ ಪದಬಳಕೆಯ ಅರ್ಥವನ್ನು ಅರ್ಥೈಸಿಕೊಳ್ಳಲು ಕಷ್ಟ ಎಣಿಸಿದರು ಕೂಡ ವಾಕ್ಯ ನೋಡಿ ಅರ್ಥ ಮಾಡಿಕೊಳ್ಳಬಹುದು. ಬೋಂಟ್ರ ಮನೆಯ ವರ್ಣನೆ ಅದ್ಬುತವಾಗಿದೆ. ತುಳುನಾಡ ಮನೆಯ‌ ಅನಾದಿಯ ಕಲ್ಪನೆ, ಕೃಷಿ ಸಂಬಂಧ ಪಟ್ಟ ಪರಿಕರಗಳು, ಮನೆಯ ವಿನ್ಯಾಸ, ಪಶು ಸಂಗೋಪನೆಯ ವ್ಯವಸ್ಥೆ ಕೇಳುವಾಗ ಆ ಕಾಲಘಟ್ಟಕ್ಕೆ ನಮ್ಮನ್ನು ತಲ್ಲುತ್ತದೆ. ಮಧ್ಯದಲ್ಲಿ ಬರುವ ಕೋಳಿ ಅಂಕ ದುಃಖದ ಮಡುವಿಗೆ ಬೀಳಿಸುವ ಮೊದಲ ಹೆಜ್ಜೆಯಾಗಿ ಮೂಡಿ ಬಂದಿದೆ. ಕೋಳಿ ಅಂಕ ಆ ಕಾಲದ ಮನೋರಂಜನೆಯಾದರು ಒಂದು ವ್ಯಕ್ತಿಯ ಜೀವಕ್ಕೆ ಹೇಗೆ ಕಂಟಕವಾಯಿತು ಎನ್ನುವುದನ್ನು ಲೇಖಕರು ಪರೋಕ್ಷವಾಗಿ ಜಾಣತನದಿಂದ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ.

ಮರ್ಣೆ ಪ್ರದೇಶದಲ್ಲಿ ಜಾತಿಯ ಹಂಗಿಲ್ಲದೆ ಒಟ್ಟಾಗಿ ಬದುಕುವ ಬಗ್ಗೆಗಿನ ಚಿತ್ರಣ ಇವತ್ತಿನ ಕಾಲಘಟ್ಟಕ್ಕೆ ಚಾಟಿ ಬೀಸಿದಂತಿದೆ. ಕುರುಂಬ ಬೋಂಟ್ರರ ಬೇಟೆಯ ಅನುಭವದ ಬಗ್ಗೆ ಲೇಖಕರು ವಿವರಿಸಿದ್ದು ಉತ್ತಮವಾಗಿದೆ. ಇಂತಹ ಅನುಭವದ ವರ್ಣನೆ ಕಾರ್ಬೆಟ್ ರವರ ಬರಹದಲ್ಲಿ ಕಾಣಬಹುದು. ಕುರುಂಬ ಬೋಂಟ್ರರ ಪರಿಸರದ ಬಗ್ಗೆಗಿನ ಕಾಲಜಿ ನೋಡುವಾಗ ಹಿಂದಿನವರು ಈಗೂ ಇದ್ದಾರ ಎನ್ನುವ ಬಗ್ಗೆ ಆಲೋಚನೆ ಮಾಡುವ ರೀತಿಯಲ್ಲಿ ಕೊಂಡೊಯ್ಯುತ್ತೆ.ಈ ಮಧ್ಯದಲ್ಲಿ ಪಕ್ಕನೆ ಹಾದು ಹೋಗುವುದು ಹುಡುಗಿ ಹೆಣ್ಣಾಗುವಾಗಿನ ನಂತರದ ಆಚರಣೆಗಳ ಬಗ್ಗೆ ಲೇಖಕರು ವರ್ಣಿಸಿದ ವಿಧಾನ. ಇಲ್ಲಿ ಕೂಡ ಆಚರಣೆಯೊಂದಿನ ಕೆಡುಕುಗಳು ಯಾವ ರೀತಿಯಲ್ಲಿ ನಮ್ಮನ್ನು ಅಥಪತನಕ್ಕೆ ಹೊಯ್ಯತ್ತದೆ ಎನ್ನುವುದನ್ನು ಮೂಲ ನಂಬಿಕೆಗೆ ದಕ್ಕೆ ಬರದ ರೀತಿಯಲ್ಲಿ ಜಾಣತನದಿಂದ ಚಿತ್ರಿಸಿದ್ದಾರೆ. ಇಲ್ಲಿ ನರಭಕ್ಷಕ ಹುಲಿಯ ಜಾಣತನ ಮತ್ತು ನರಭಕ್ಷಕನಾಗಲು ಯಾರು ಕಾರಣ ಎನ್ನುವುದನ್ನು ನೋಡುವಾಗ ಸ್ವಲ್ಲ ಭಾವುಕತೆಗೆ ಜಾರುವಂತೆ ಮಾಡಿದ್ದಾರೆ ಲೇಖಕರು.

ಮೂಲ ನಂಬಿಕೆಯಲ್ಲಿ ಆರಾಧನೆಗೊಳ್ಳುವ ದೈವಾರಾಧನೆ, ಮನುಷ್ಯರಿಗೆ ಪರಿಸರ ಕಾಲಜಿಯ ಬಗ್ಗೆ ಚಾಟಿ‌ ಏಟಿನ ಮಾತಿನ ಮೂಲಕ ವಿವರಿಸುವಾಗ ಮಾತಿಲ್ಲದೆ ಮೂಕರಾಗುವ ಸಂಧರ್ಭವನ್ನು ಅತೀ ಆಸ್ಥೆಯಿಂದ ಚಿತ್ರಿಸಿದ್ದಾರೆ. ಇನ್ನೇನು ಹುಲಿ ಬೋಂಟ್ರರ ಕೋವಿಗೆ ಸಿಕ್ಕೆ ಸಿಗುತ್ತೆ ಎನ್ನುವ ಕಾತರದಿಂದ ಕಾಯುವ ನಮಗೆ ಬೋಂಟ್ರರ ಕೋವಿಗೆ ಸಿಗದೆ ಹುಲಿ ಸಾಯುವಾಗ ಒಮ್ಮೆ ಬೇಸರ ಎಣಿಸಿದರೂ ಕಡೆಗೆ ಇಂತಹ ಅಂತ್ಯ ಉತ್ತಮವು ಹೌದು ಅನಿಸುತ್ತದೆ.ಒಟ್ಟಾರೆ ಲೇಖಕರು ವಿಭಿನ್ನವಾದ ಅಂತ್ಯವನ್ನು ಚಿತ್ರಿಸಿ ಕಡೆಯವರೆಗೂ ಓದುಗರನ್ನು ತುದಿ ಕಾಲಲ್ಲಿ ನಿಲ್ಲಿಸುವಂತೆ ಮಾಡಿದ್ದಾರೆ. ಭರವಸೆಯ ಲೇಖಕರೊಬ್ಬರು ನಮ್ಮ ನಡುವೆ ಮೂಡಿ ಬಂದದ್ದು ನೋಡುವಾಗ ಮತ್ತು ಈ ಕಾದಂಬರಿ ಸಂಪೂರ್ಣ ಓದಿ ಆದ ಮೇಲೆ ಇವರದ್ದು ಚೊಚ್ಚಲ ಕೃತಿಯಲ್ಲ ಪಕ್ವತೆ ತುಂಬಿದ ಲೇಖಕರು ಅನಿಸುವುದು ಅದೇನೂ ಅತಿಶಯೋಕ್ತಿ ಅಲ್ಲ.

ಬರಹ:- ಶೈಲು ಬಿರ್ವ ಅಗತ್ತಾಡಿ ದೋಲ‌ಬಾರಿಕೆ

0 comments: