'ಕಾಡ ಪೂ ತೋಡ ನೀರ್' ಅಂದರೆ ಕಾಡಿನ ಹೂ ಮತ್ತು ತೋಡಿನ ನೀರಿನಿಂದ ನನ್ನನ್ನು ಪೂಜಿಸಿದರೆ ಸಾಕು ನಾನು ಒಲಿಯುತ್ತೇನೆ ಎಂದು ದೈವಗಳು ತಮ್ಮನ್ನು ನಂಬಿದವರಿಗೆ ಅಭಯವನ್ನು ನೀಡಿದ್ದು ಪಾಡ್ದನ ಮೂಲಗಳಲ್ಲಿ ತಿಳಿದು ಬರುತ್ತದೆ. ಅಂದಿನ ಕಾಲದಲ್ಲಿ ಕಾಡ ಹೂ ಮತ್ತು ತೋಡ ನೀರ್ ಅಷ್ಟು ಶುದ್ದ,ಪವಿತ್ರವಾಗಿತ್ತು. ತುಳುನಾಡಿನ ಪ್ರತಿಯೊಂದು ದೈವವು ಅಷ್ಟೇ ಸರಳವಾದ ಪೂಜೆ ಉನ್ನತವಾದ ಭಕ್ತಿಗೆ ಒಲಿಯುತ್ತದೆ ಎಂಬುದು ಪ್ರತೀತಿ. ಆರಂಭದಲ್ಲಿ ಹೊಳೆ, ಕೆರೆಬದಿಯಲ್ಲಿ ಕಾಟು ಕಲ್ಲಿನ ಮೂಲಕವೇ ದೈವಗಳನ್ನು ಆರಾಧಿಸಲಾಯಿತು. ಆದರೆ ಇಂದು ದೈವಗಳಿಗೆ ಖರ್ಚು ಮಾಡುವ ದುಡ್ಡನ್ನು ಲೆಕ್ಕ ಹಾಕಿದಾಗ ಈ ರೀತಿಯ ಆರಾಧನೆ ಬೇಕೆ ? ಎಂಬ ಜಿಜ್ಞಾಸೆಯು ಮನಸ್ಸಿನಲ್ಲಿ ಮೂಡಿದರೆ ಅಚ್ಚರಿಯೆನಲ್ಲ.
ನನ್ನ ಓರ್ವ ಮಿತ್ರರು ಸಂಕ್ರಮಣದ ಮುಂಚಿನ ದಿನ ಒಂದಷ್ಟು ಹೂಗಳನ್ನು ಹಿಡಿದುಕ್ಕೊಂಡು ಹೋಗುತಿರುವಾಗ ಹೂ ಯಾಕೆ ? ಎಂದು ಕೇಳಿದೆ. ಅದಕ್ಕೆ ಅವರು ನಾಳೆ ಸಂಕ್ರಮಣ ದೈವಕ್ಕೆ ಹಾಕುವೂದಕ್ಕೆ ಹೂ ಬೇಕು ಎಂದರು. ದೈವಕ್ಕೆ ದುಡ್ಡುಕೊಟ್ಟು ಹೂ ಹಾಕೂವೂದು ಸರಿಯೇ ? ಎಂದು ನಾನು ಪ್ರಶ್ನಿಸಿದಾಗ ಹಿಂದಿನ ಕಾಲದಲ್ಲಿ ಜನರಲ್ಲಿ ದುಡ್ಡು ಇರಲಿಲ್ಲ, ಮಾತ್ರವಲ್ಲದೆ ಹೂಗಳನ್ನು ಮಾರಾಟ ಮಾಡುವವರು ಕಡಿಮೆ ಇದ್ದರು ಆದರೆ ಇಂದು ನಮ್ಮ ಜನರು ವಿವಿಧ ಕೆಲಸಗಳನ್ನು ಮಾಡಿ ಕೈತುಂಬಾ ಹಣ ಗಳಿಸುತ್ತಾರೆ ಅದರ ಒಂದು ಭಾಗದಲ್ಲಿ ಹೂವನ್ನು ಖರೀದಿಸಿ ನಾವು ನಂಬುವ ದೈವಕ್ಕೆ ಹಾಕಬೇಕು. ನಾವು ಅಭಿವೃದ್ಧಿಯನ್ನು ಹೊಂದಿದ್ದೇವೆ ಅದೇ ರೀತಿ ದೈವದ ಆರಾಧನೆಯನ್ನು ಅಭಿವೃದ್ದಿ ಮಾಡೋಣ ಎಂದು ಹೇಳಿದರು.
ಇನ್ನೊಂದು ಕಡೆ ದೈವದ ಒಂದು ಆರಾಧನೆ ಆಗುವಲ್ಲಿಗೆ ಹೋಗಿದ್ದೆ. ಅಲ್ಲಿ ಒಂದು ದೈವದ ಮಂಚ ಸುತ್ತ ಮುತ್ತ ಹೂವಿನ ಜಲ್ಲಿ ಹಾಕಿ ಶೃಂಗಾರಮಾಡಿದ್ದರು ಓರ್ವ ಹಿರಿಯ ವಯಸ್ಸಿನ ಮುಕಾಲ್ದಿ ಅಲ್ಲಿ ಆರಾಧನೆ ನಡೆಸಿಕೊಡುವವರು ಇದ್ದರು. ಸಂಜೆ ಪೂಜೆಯ ಸಮಯಕ್ಕೆ ಅವರು ಅಲ್ಲಿಗೆ ಬಂದರು. ಪೂಜೆ ಆರಂಬಿಸಲು ತೊಡಗುತಿದ್ದಂತೆ ಕೇಪುಳ ಹೂ ಎಲ್ಲಿದೆ ? ಎಂದು ಪ್ರಶ್ನಿಸಿದರು. ನೀವು ಇಷ್ಟೆಲ್ಲ ಶೃಂಗಾರ ಮಾಡಿದ್ದೀರಿ ಒಲ್ಲೆಯದು. ಆದರೆ ದೈವಕ್ಕೆ ಇಷ್ಟವಾದುದನ್ನು ಕೊಡದೆ ನಿಮಗೆ ಇಷ್ಟವಾದುದನ್ನು ಹಾಕಿದ್ದೀರಿ ಇದು ಸರಿಯಲ್ಲ. ನಾನು ಪೂಜೆ ಮಾಡಬೇಕಾದರೆ ಕೇಪುಳ ಹೂ ಬೇಕೇ ಬೇಕು ಎಂದು ಹೇಳಿದರು. ಅಲ್ಲಿ ಸೇರಿದ್ದ ಕುಟುಂಬದ ದೈವದ ಭಕ್ತರಲ್ಲಿ ಗೊಣಗಾಟ ಆರಂಭವಾಯಿತು. ಮಲ್ಲಿಗೆ, ಸೇವಂತಿಗೆ ಎಲ್ಲವನ್ನು ರೇಟು ಎಷ್ಟಾದರು ತಂದಿದ್ದೇವೆ ಈ ಮುದಕನಿಗೆ ಯಾರಿಗೂ ಬೇಡವಾದ ಕೇಪುಳ ಹೂ ಬೇಕಂತೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
ಯಾರೋ ಒಬ್ಬರು ತನ್ನ ಮನೆಯ ಪಕ್ಕದ ಮನೆಯಲ್ಲಿರುವ ಕಸಿ ಕೇಪುಳದ ಗೊಂಚನ್ನು ತಂದು ಕೊಟ್ಟ ಮೇಲೆ ಆರಾಧನೆ ನಡೆಯಿತು. ಅಂಗಡಿಯಿಂದ ತಂದ ಹೂಗಳನ್ನು ದೈವದ ಮಂಚಕ್ಕೆ ಹಾಕದೆ ಅದನ್ನು ಹೊರಗೆ ಶೃಗಾರ ಮಾಡಿ ಎಂದು ಹೇಳಿ ದೈವದ ಮಂಚಕ್ಕೆ ಕೇಪುಳ ಹೂಗಳಿಂದಲೇ ಸರಳವಾಗಿ ಶೃಂಗಾರ ಮಾಡುವ ಕೆಲವು ಹಿರಿಯರನ್ನು ನಾನು ನನ್ನ ಬಾಲ್ಯದಲ್ಲಿ ನೋಡಿದ್ದೇನೆ. ಆದರೆ ಇಂದು ಈ ಎಲ್ಲಾ ಕ್ರಮಗಳು ಮಾಯವಾಗಿ ಎಲ್ಲಾ ಕಡೆ ಅಭಿವೃದ್ದಿಯಾಗಿದೆ.
ಇನ್ನು ಈ ಅಂಗಡಿ ಹೂಗಳ ಪರಿಸ್ಥಿತಿ ಏನು ? ಅದು ಯಾವ ಸ್ಥಿತಿಯಲ್ಲಿ ಇಲ್ಲಿಗೆ ಸರಬರಾಜಾಗುತ್ತದೆ ಎಂದು ನೋಡಿದರೆ ಓರ್ವ ದೈವ ಅಥವಾ ದೇವರ ಭಕ್ತನಾದವನು ಅದನ್ನು ದೈವ ದೇವರಿಗೆ ಅರ್ಪಿಸಲಾರ. ಸೇವಂತಿಗೆ, ಗೊಂಡೆಯಂತಹ ಹೂಗಳು ಹೊರಗಿನಿಂದ ನಮ್ಮ ಜಿಲ್ಲೆಗೆ ಬರುತ್ತವೆ. ಎಲ್ಲೋ ರಸ್ತೆಯ ಬದಿಯಲ್ಲಿ ಕತ್ತೆ, ಹಂದಿ, ನಾಯಿ ಮಲಮೂತ್ರ ವಿಸರ್ಜನೆ ಮಾಡಿದ ಕಡೆಯಲ್ಲಿ ಅದನ್ನು ರಾಶಿಹಾಕಿ ಕಟ್ಟಲಾಗುತ್ತದೆ. ಅದನ್ನು ಕಟ್ಟುವವರು, ಒಟ್ಟು ಮಾಡುವವರು ಗುಟ್ಕಾ, ಎಲೆಅಡಕೆ ತಿಂದು ಅಲ್ಲಿ ಇಲ್ಲಿ ಉಗಿಯುತ್ತಾ ಕೆಲಸ ಮಾಡುತ್ತಾರೆ. ಮಾಲೆಯಾದ ಎಲ್ಲಾ ಹೂಗಳನ್ನು ಗೋಣಿ ಚೀಲದಲ್ಲಿ ಒಟ್ಟು ಗೂಡಿಸಿ ಬಸ್ಸಿನ ಟಾಪ್'ಗೆ ಹೇರಿ ಮಂಗಳೂರಿನ ಕಡೆಗೆ ಸಾಗಿಸುತ್ತಾರೆ. ಇದು ನಮ್ಮ ಮಾರುಕಟ್ಟೆಗೆ ಬೆಳಿಗ್ಗೆ ಮೂರು ನಾಲ್ಕು ಗಂಟೆಯ ಹೊತ್ತಿಗೆ ಬರುತ್ತದೆ. ಹೂವಿನ ಬಂಡಲುಗಳನ್ನು ಬಸ್ಸಿನ ಟಾಪಿನಿಂದ ಎಲ್ಲೆಂದರಲ್ಲಿ ಕೆಳಗೆ ಬಿಸಾಡಲಾಗುತ್ತದೆ. ಅಲ್ಲಿ ನಾಯಿಯ ಹೊಲಸು, ಸಗಣಿ, ಚರಂಡಿ ನೀರು, ಮಾನವ ಮೂತ್ರ ಇದ್ದರೂ ಅದರ ಪರಿವೇ ಇರುವುದಿಲ್ಲ. ಅನಂತರ ಅದು ಮಾರುಕಟ್ಟೆಗೆ ಬರುತ್ತದೆ. ಕೆಲವು ವ್ಯಾಪಾರಿಗಳು ರಸ್ತೆಯ ಬದಿಯಲ್ಲಿ ಇದನ್ನು ಮಾರಾಟ ಮಾಡುತ್ತಾರೆ. ಇಲ್ಲಿ ಯಾವ ಸ್ವಚ್ಛತೆಯೂ ಇರುವುದಿಲ್ಲ. ಇನ್ನೂ ಒಂದು ವಿಚಾರ ಏನೆಂದರೆ ಅನಾರೋಗ್ಯದಿಂದ ಬಿಳುಚಿಕೊಂಡು ಬಣ್ಣ ಕಳೆದುಕೊಂಡ ಹೂಗಳಿಗೆ ಹಳದಿ ಬಣ್ಣವನ್ನು ಮಿಶ್ರಮಾಡಲಾಗುತ್ತದೆ. ಯಾವ ಯಾವ ಹೂ ಯಾವ ಯಾವ ಬಣ್ಣ ಬರಬೇಕೋ ಆಯಾಯ ಬಣ್ಣದಿಂದ ಅದನ್ನು ಅದ್ದಿ ತೆಗೆಯಲಾಗುತ್ತದೆ. ಆ ಬಣ್ಣವನ್ನು ಯಾವುದರಿಂದ ಹೇಗೆ ತಯಾರಿಸಿದ್ದಾರೆ ಎಂಬುದನ್ನು ಆ ದೇವರೆ ಬಲ್ಲ. ಇಂತಹ ಹೂಗಳನ್ನು ನಾವು ಮಾರುಕಟ್ಟೆಯಲ್ಲಿ ಖರೀದಿಸಿ ಭಯ ಭಕ್ತಿಯಿಂದ ಮನೆಗೆ ತಂದು ಅದು ಶದ್ಧವಾಗಲು ನೀರು ಚಿಮುಕಿಸಿ ದೈವ ದೇವರ ಮುಡಿಗೇರುಸುತ್ತಿದ್ದೇವೆ.
ಇನ್ನು ಸಂಕ್ರಮಣ ಮತ್ತು ಇತರ ಹಬ್ಬ ಹರಿದಿನಗಳ ಸಂಧರ್ಭದಲ್ಲಿ ಸಿಗುವ ಮಲ್ಲಿಗೆಯ ಕತೆಯೇ ಬೇರೆ.ಮಲ್ಲಿಗೆಯನ್ನು ಮನೆಯಲ್ಲಿ ಬೆಳೆಸಲಾಗುತ್ತದೆ. ಕೆಲವು ಕಡೆ ಮಲ್ಲಿಗೆಯನ್ನು ಆಯಾ ದಿನ ಮಾರುಕಟ್ಟೆಗೆ ಕೊಡುವವರಿದ್ದಾರೆ. ಆದರೆ ಹೆಚ್ಚಿನ ಕಡೆಗಳಲ್ಲಿ ಸಂಕ್ರಮಣಕ್ಕೆ ಒಂದೆರಡು ದಿನಕ್ಕೆ ಮೊದಲು ಮಲ್ಲಿಗೆಯನ್ನು ಮಾರುಕಟ್ಟೆಯಿಂದ ತರುತ್ತಾರೆ ಯಾಕೆಂದರೆ ಸಂಕ್ರಮಣದ ದಿನ ಮಲ್ಲಿಗೆಯ ರೇಟು ಹೆಚ್ಚಾಗುತ್ತದೆ ಎಂದು ಅವರಿಗೆ ಗೊತ್ತಿದೆ. ಅದಕ್ಕಾಗಿ ಮಲ್ಲಿಗೆಯನ್ನು ಮುಂಚಿತವಾಗಿ ತಂದು ಮನೆಯಲ್ಲಿರುವ ಫ್ರಿಜ್'ನಲ್ಲಿ ಕಾಯ್ದಿರಿಸುತ್ತಾರೆ. ಈ ಸಂಧರ್ಭದಲ್ಲಿ ಫ್ರೀಜ್'ನಲ್ಲಿ ಮೀನು, ಕೋಳಿಮಾಂಸ, ಹಂದಿ ಮಾಂಸ, ಮುಂತಾದವು ಇರುವ ಸಾದ್ಯತೆ ಇದೆ. ಇದರ ಜೊತೆಗೆ ಇದ್ದ ಮಲ್ಲಿಗೆಯನ್ನು ನಾವು ಸಂಕ್ರಮಣದ ದಿನ ಭಯ ಭಕ್ತಿಯಿಂದ ದೈವ ದೇವರ ಮಣೆ ಮಂಚ, ಮುಗ ಮೂರ್ತಿಗಳಿಗೆ ಏರಿಸುತ್ತೇವೆ. ನಾವು ಎಷ್ಟು ಮೂರ್ಖರು ಎಂದರೆ ನಮ್ಮ ಮನೆಯ ಮುಂದೆ ಶುದ್ದ ನೀರು ಹಾಕಿ ಬೆಳೆಸಿದ ವಿವಿಧ ರೀತಿಯ ಹೂಗಳನ್ನು, ನಮ್ಮ ಮನೆಯ ಹಿತ್ತಿಲಲ್ಲಿ ಬೆಳೆದ ಕೇಪುಳ ಹೂವನ್ನು ನಾವು ಅಶುದ್ದ ಎಂದು ಭಾವಿಸುತ್ತೇವೆ. ಅವು ದೈವ ದೇವರಿಗೆ ನಿಷಿದ್ದ ಎಂದು ತಿಳಿಯುತಿದ್ದೇವೆ.
ನಮ್ಮ ದೈವ ದೇವರುಗಳು ಹಳೆಯ ಮನೆಯಲ್ಲಿ ಇದ್ದುದ್ದನ್ನು ಜೀರ್ಣೋದ್ದಾರ ಮಾಡಿ ಹೊಸ ಗುಡಿ ಕಟ್ಟಿ ಗೌಜಿಯಿಂದ ಸಂಕ್ರಮಣ ಮತ್ತು ಇತರ ಕೆಲಸ ಕಾರ್ಯ ಮಾಡುತಿದ್ದೇವೆ. ಆದರೆ ನಮ್ಮ ಕಣ್ಣು ಕೈ ಕಾಲುಗಳಿಗೆ ಹಿಂದೆ ಇದ್ದ ಸುಖ ಈಗ ಇಲ್ಲ ಯಾಕೆ ? ಎಂದು ಕೆಲವು ಮನೆತನದವರು ಕೊರಗುವುದನ್ನು ನಾವು ಕಾಣಬಹುದು. ಆದರೆ ಇಲ್ಲಿ ಕೆಲವೊಂದು ಆಡಂಬರದ ಆಚರಣೆಗಳು ದೈವಕ್ಕೆ ಇಷ್ಟವಿಲ್ಲ. ಅದೆಲ್ಲ ಆಯಾ ಮನೆತನದವರಿಗೆ ಇಷ್ಟವಾದದ್ದು. ಎಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರತೀ ಸಂಧರ್ಭದಲ್ಲೂ ದೈವದ ಮಣೆ ಮಂಚ, ಮುಗವನ್ನು ಅಂಗಡಿ, ಮಾರುಕಟ್ಟೆ ಹೂಗಳಿಂದ ಅಲಂಕರಿಸಿ ಮಲಿನ ಮಾಡುತಿರುವಾಗ ನಮಗೆ ದೈವದ ಕೃಪೆ ಸಿಗಬಹುದೇ ಯೋಚಿಸಿ.
ದೈವ ದೇವರು ಇರುವ ಪ್ರತಿಯೊಂದು ಮನೆಯವರು ಅಂಗಳದಲ್ಲಿ ವಿವಿಧ ರೀತಿಯ ಹೂವಿನ ಗಿಡಗಳನ್ನು ಬೆಳಸಬೇಕು. ಸುತ್ತ ಮುತ್ತ ಬೆಳೆದ ಕೇಪುಳ ಹೂವಿನ ಗಿಡವನ್ನು ಕಡಿಯದೆ ಬಿಡಬೇಕು. ಸಂಕ್ರಮಣದ ಅಥವಾ ದೈವ ದೇವರ ಇತರ ಕಾರ್ಯಕ್ರಮಗಳಂದು ಮಣೆ ಮಂಚಾವಿಗೆ ತಾವೇ ಬೆಳೆಸಿದ ಹೂಗಳನ್ನು ಇಟ್ಟು ಅಲಂಕರಿಸಬೇಕು. ಯಾವುದೇ ಕಾರಣಕ್ಕೂಮಾರುಕಟ್ಟೆಯ ಹೂಗಳನ್ನು ಮಣೆ ಮಂಚಾವಿಗೆ ಸೋಕುವಂತೆ ಮಾಡಬಾರದು. ಇತರರು ಯಾರಾದರು ದೊಡ್ಡ ಭಕ್ತಿಯಿಂದ ದುಡ್ಡು ಕೊಟ್ಟು ಮಾರುಕಟ್ಟೆಯ ಹೂ ತಂದಿದ್ದರೆ ಅದನ್ನು ದೈವದ ಕೋಣೆಯ ಬಾಗಿಳನ್ನು ಶೃಗರಿಸುವಂತೆ ಮಾಡಿ ಅವರನ್ನು ಸಮಾಧಾನ ಪಡಿಸಬೇಕು. ನಮ್ಮ ತುಳುನಾಡಿನ ದೈವದ ಸರಳತೆ ತಾಜಾ ತನವನ್ನು ತುಳುವರಾದ ನಾವು ಕಾಪಾಡಿಕೊಳ್ಳಬೇಕು. ಎಲ್ಲಾ ಊರಿನ ದೈವಕ್ಕೆ ಸಂಬಂಧಪಟ್ಟ ಗುತ್ತಿನಾರ್, ಮುಕಾಲ್ದಿ ಮನೆತನದವರು ದೈವದ ಮಣೆ ಮಂಚಾವಿಗೆ ಮಾರುಕಟ್ಟೆಯ ಹೂವನ್ನು ಸೋಕಿಸದೇ ಇರುವ ಕೆಲಸವನ್ನು ಮಾಡಿದರೆ ಮಂಚಾವಿನಲ್ಲಿ ಕೇಪುಳ ಹೂವನ್ನು ಇಡುವ ಸಂಪ್ರದಾಯ ಆರಂಭಿಸಿದರೆ ಅದರಿಂದ ಎಲ್ಲರಿಗೂ ಸುಖ ಸಿಗಲಿದೆ ದಯವಿಟ್ಟು ಇದನ್ನು ಗಮನಿಸಿ.
0 comments: