Sunday, July 7, 2019

ಅನಾದಿಯ ತುಳುನಾಡ ತಿನಸುಗಳು

ತುಳುನಾಡ ತಿನಸುಗಳ ಬಗ್ಗೆ ಬಹುಷ ನಾನು ತುಳುವಿನಲ್ಲಿ ಬರೆದಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತೇನೋ ಆದರೆ ತುಳು ಅರ್ಥ ಆಗದ ಕೆಲವರಿಗೆ ನನ್ನ ತುಳುನಾಡ ಹಳ್ಳಿಯ ತಿನಸುಗಳ ಬಗ್ಗೆ ತಿಳಿಸುವ ಹಂಬಲ ನನ್ನದು. ನಾವೆಲ್ಲ ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲಿ ಇವತ್ತಿಗೂ ನಮ್ಮ ಹಳ್ಳಿಗೆ ಪಟ್ಟಣದ ಸೋಂಕು ತಾಗಿದ್ದರು ಕೂಡ ನಮ್ಮ ತಿನಸುಗಳಲ್ಲಿ ಅಂತ ದೊಡ್ಡ ಬದಲಾವಣೆಗಳಾಗಿಲ್ಲ. ನಾವು ಸಣ್ಣವರಿರುವಾಗ ನಮ್ಮದು ತುಂಬು ಕುಟುಂಬ ಸುಮಾರು 30-40 ಮಂದಿ ಇದ್ದ ಕೂಡು ಕುಟುಂಬ. ಅಜ್ಜನೇ ನಮ್ಮ ಮನೆಯ ಯಜಮಾನರು. ಅಜ್ಜನಿಗೋ ಕೋಳಿ‌ ಅಂಕದ ಹುಚ್ಚು ಮನೆಯಲ್ಲಿ ಸಾಲಾಗಿ ಕಟ್ಟಿ ಸಾಕಿದ ಸುಮಾರು 10-20 ಕಟ್ಟದ ಕೋಳಿಗಳು. ಅವಕ್ಕೆ ಅಜ್ಜ ಮಾತ್ರ ಆಹಾರ ನೀಡುತ್ತಿದ್ದದ್ದು ತಪ್ಪಿದಲ್ಲಿ ನಮ್ಮ ಅಜ್ಜಿ ಅಮ್ಮಣಿ ಅಮ್ಮ ಅದು ಬಿಟ್ಟು ನಾವ್ಯಾರು ಹತ್ತಿರಕ್ಕೂ ಹೋಗುವಂತಿಲ್ಲ. ಅವರು ಅಂಕಕ್ಕೆ ಹೊರಟರೆ ಕೋಳಿ ಹಿಡಿದುಕೊಳ್ಳಲು, ಚೀಲ ಹಿಡಿದುಕೊಳ್ಳಲು, ಬಾಳು ಕತ್ತಿಯ ಪೆಟ್ಟಿಗೆ ಹಿಡಿದುಕೊಳ್ಳಲು ಜನ ರೆಡಿ, ಅಂಕಕ್ಕೆ ಹೋಗಲು ಬಾಡಿಗೆಯ ಅಂಬಾಸಿಡರ್ ಕಾರು. ಅಜ್ಜ ಕೋಳಿ ಹಿಡ್ಕೊಂಡು ಅಂಕಕ್ಕೆ ಹೊರಟರೆ ಅಜ್ಜಿ ನನ್ನ ತಾಯಿಯನ್ನು(ಮನೆಗೆ ನಾಲ್ಕು ಸೊಸೆಯಲ್ಲಿ ಹಿರಿಯವರು)ಕರೆದು ಒಟ್ಟೆ ಬಿಸಲೆ ದೆಕ್ಕ್ದ್ ದೀಲ ( ತೂತು ಮಡಿಕೆ ತೊಳೆದು ಇಡು) ಅಂತ ಹೇಳುವುದು. ಇದು ಶುಭ ಮಾತು ಅಂತ ಅರ್ಥ ಅಂದರೆ ಕೋಳಿ ಅಂಕದಲ್ಲಿ ಕೋಳಿ ಗೆದ್ದು ಬರಬೇಕೆಂಬ ಸೂಚನೆ. ಅವತ್ತು ಕೋಳಿ ಸಿಕ್ಕರೆ ಮನೆಯಲ್ಲಿ ಕೈಯಲ್ಲಿ ತಟ್ಟಿ ಮಾಡಿದ ರೊಟ್ಟಿ, ಇದೊಂದು ಅದ್ಬುತವಾದ ಅಹಾರದ ಹೊಂದಾಣಿಕೆ ಕೋಳಿ ರೊಟ್ಟಿ ತಿಂದರಂತು ಮತ್ಯಾವ ತಿನಸು ಬಾಯಿಗೆ ರುಚಿಯಾಗದು.

ಅದೇ ರೀತಿ ನಮ್ಮದು ಕಾಡಿನ ಸಮೀಪದ ವಾಸವಾದುದರಿಂದ ನಮಗೆ ಸರಕಾರವೇ ಕೃಷಿ ರಕ್ಷಣೆಗೆ ಕೋವಿ‌ ನೀಡಿತ್ತು. ಅಜ್ಜ ನೋಟ ಇಟ್ಟು ಕೋವಿ ಹೊಡೆಯುವುದರಲ್ಲಿ ಎತ್ತಿದ ಕೈ, ನಮ್ಮ ಕೋವಿ ಹೊಡೆದ ಶಬ್ದ ಕೇಳಿಯೆ ಜನ ಹೇಳುತ್ತಾ ಇದ್ದರು ಶೀನಪ್ಪ ಪೂಜಾರ್ಲೆನ ಬೆಡಿ ಪುಡಂಡು ಅಂತ ಹೇಳಿ ಮನೆಯ ಅಂಗಳದಲ್ಲಿ ತುಂಬ ಜನನು ಸೇರುತ್ತಾ ಇದ್ದರು. ಕೋವಿಗೆ ಹಂದಿ ಸಿಕ್ಕಿದರೆ ಅವತ್ತು ಅದಕ್ಕೆ ಸರಿಯಾಗಿ ನಮ್ಮ ತಾಯಿಯವರು ಕುಚಲಕ್ಕಿ ಕಡುಬು ತಯಾರು ಮಾಡಿಯು ಆಗುತ್ತಿತ್ತು. ಬಿಸಿ ಬಿಸಿ ಕಡುಬು ಮತ್ತು ಕಾಡು ಹಂದಿಯ ಪದಾರ್ಥ ತಿಂದವರಿಗೆ ಗೊತ್ತು ಅದರ ರುಚಿ. ಅದೇ ರೀತಿ‌ ಗುರ್ಮೆ ( ಪಾರಿವಾಳಕ್ಕಿಂತ ದೊಡ್ಡ ಪಕ್ಷಿ) ಸಿಕ್ಕರೆ ಅವತ್ತು ಗೆಂಡದ ಅಡ್ಯೆ( ಕಲ್ತಪ್ಪ) ರೆಡಿ. ನನ್ನ ತಾಯಿಗೆ ಯಾವುದು ಸಿಕ್ಕಾಗ ಯಾವುದು ಮಾಡಬೇಕೆಂದು ನನ್ನ ಅಮ್ಮಣಿ ಅಮ್ಮ ಚೆನ್ನಾಗಿ ಹೇಳಿ ಕೊಟ್ಟಿದ್ದರು. ಅದೇ ರೀತಿ ನನ್ನ ಅಜ್ಜನ ಸದ್ದಾಂ( ಅಜ್ಜ ಇರಾಕಿನ ಕಿರಾತಕ ಸದ್ದಾಂ ಹುಸೇನ್ನ ಬದ್ದ ವೈರಿ ಹಾಗಾಗಿ ನಾಯಿಗೆ ಆ ಹೆಸರು ಇಟ್ಟು ತಮ್ಮ ಸೇಡನ್ನು ತೀರಿಸ್ತಾ ಇದ್ರು) ಮತ್ತು ಮೋತಿ ಎನ್ನುವ ಬೇಟೆ ನಾಯಿಗಳಿಗೆ ಅದರದೇ ಆದ ಬೇಟೆಯ ಪಾಲು ಸಿಗುತ್ತಿತ್ತು ಅದೇ ರೀತಿ ನನ್ನ ಅಜ್ಜನಿಗೆ ಚಳಿಗಾಲ ಸುರುವಾದಾಗ ಬೆಳದಿಂಗಳಿಗೆ ಗ್ಯಾಸ ಲೈಟ್ ಹಿಡ್ಕೊಂಡು ಮೀನು ಕಡಿಯಲು ಹೋಗುವ ಹವ್ಯಾಸ. ಹೊಳೆ ಮೀನು ಸಿಕ್ಕಿದರೆ ಅವತ್ತು ತಾಯಿಯವರ ಪಜೆ ಮಡಿಕೆ( ಬಾಳೆ ಎಲೆಯಲ್ಲಿ ಮೆತ್ತಿ ಮಾಡುವ ತಿಂಡಿ) ರೆಡಿ.

ಅಪರೂಪದ ಚನಿಲ್ ( ಅಳಿಲಿಗಿಂತ ದೊಡ್ಡದಾದ ಪ್ರಾಣಿ) ಸಿಕ್ಕಲ್ಲಿ ಹಲಸಿನ ಹಣ್ಣಿನ ಗಟ್ಟಿ ರೆಡಿ. ಅದೇ ರೀತಿ ಬೇಟೆಯಲ್ಲಿ ಸಿಕ್ಕ ಮಾಂಸ ಉಳಿದರೆ ಅದನ್ನು ಅಜ್ಜಿ ಒಣಗಿಸಿ ಮನೆಯ ದೆಂಗದಲ್ಲಿ( ಆಹಾರ ಪದಾರ್ಥ ಒಣಗಿಸಲೆಂದೆ ಮಾಡಿದ ಅಟ್ಟಣಿಗೆ) ಇಡುತ್ತಿದ್ದರು. ಇದಕ್ಕಂತಲೇ ಊರಿನ ಕೆಲವು ಮಹಿಳೆಯರು, ಸಂಬಂದಿಕರು ಯೋಗ ಕ್ಷೇಮ ವಿಚಾರಿಸುವ ನೆಪದಲ್ಲಿ ಅಮ್ಮಣಿ‌ ಅಮ್ಮನಲ್ಲಿ ಮಾತನಾಡಿ ಹೋಗುವಾಗ ಒಣ ಮಾಂಸ ಹಿಡ್ಕೊಂಡು ಹೋಗ್ತಾ ಇದ್ರು. ಮನೆಯಲ್ಲಿ ಒಣ ಮಾಂಸ ಇದ್ದರೆ ಓಡು ರೊಟ್ಟಿಯ ಔತಣ. ಮೊಲದ ಮಾಂಸ ಸಿಕ್ಕರೆ ಅವತ್ತು ನೀರ್ ದೋಸೆ ರೆಡಿ. ಅದೇ ರೀತಿ ಚೌತಿ ಹಬ್ಬ ಬಂದರೆ ಸಿಹಿ ಕಡುಬು ರೆಡಿ. ನಾಗರ ಪಂಚಮಿಯ ದಿನ ಎರಡು ಇಡ್ಲಿ ಪಾತ್ರೆಯಲ್ಲಿ ಅರಸಿನ ಎಲೆಯ ತಿಂಡಿ ರೆಡಿ. ಅದರಲ್ಲಿ ಕೆಲಸದ ಮಕ್ಕಳಿಗೆ ಇಷ್ಟು ಅಂತ ಪಾಲು ಬೇರೆ ಇದೆ. ದೀಪಾವಳಿಗೆ ಪುಳಿ ದೋಸೆ, ಅಷ್ಟಮಿಗೆ ಹಲಸಿನ ಎಲೆಯ ಕೊಟ್ಟಿಗೆ ತಯಾರಾಗ್ತ ಇತ್ತು. ಮನೆ ತುಂಬ ಜನರಿದ್ದ ಸಮಯ ಯಾವತ್ತು ನಮ್ಮ ಮನೆಯ ಒಲೆ ಆರಿದ್ದೇ ಇಲ್ಲ, ಅಷ್ಟೇ ಅಲ್ಲದೆ ದಿನಾಲು ಯಾರದರೊಬ್ಬರು ನೆಂಟರು ಅಥವ ಅಜ್ಜನ‌ ಪರಿಯಸ್ಥರು ಬರುತ್ತಿದ್ದ ಕಾಲ ಅವರಿಗೆಲ್ಲ ಹೊಟ್ಟೆ ಊಟ ಹಾಕಬೇಕೆನ್ನುವುದು ನನ್ನ ಅಜ್ಜ ಅಜ್ಜಿಯ ಕಟ್ಟಪ್ಪಣೆ ಅದು ಭೂರಿ ಭೋಜನವಾಗಲೇ ಬೇಕು. ಕೊಕ್ಕಡದ ಕೋರಿ ಎನ್ನುವ ಕೋಳಿ ಅಂಕದ ಸಮಯದಲ್ಲಿ ಮೂರು ದಿನದ ಕೋಳಿ ಅಂಕದಲ್ಲಿ ದಿನಕ್ಕೆ ಕಮ್ಮಿ ಎಂದರು 5-6 ಕೋಳಿ ಸಿಗುತ್ತಿತ್ತು. ಮಕ್ಕಳಾದ ನಮಗೆಲ್ಲ ಅದನ್ನು ಮಾಂಸ ಮಾಡುವ ಕೆಲಸ, ಹೆಂಗಸರಿಗೆಲ್ಲ ಅದಕ್ಕೆ ಬೇಕಾದ ಮಸಾಲೆ ಅರಿಯುವ ಕೆಲಸ ಮಾಂಸ ಮಾಡಿದ ನಂತರ ಮಾಂಸ ಮಾಡಿದ ಸ್ಥಳದಲ್ಲಿ ಕೆಂಡವನ್ನು ಮುಟ್ಟಿಸಬೇಕು ಇದೆಲ್ಲ ಸಂಪ್ರದಾಯ ಇಲ್ಲದಿದ್ದರೆ ಇನ್ನೊಮ್ಮೆ ಕೋಳಿ ಸಿಗುವುದಿಲ್ಲ ಎನ್ನುವ ನಂಬಿಕೆ. ಅದನ್ನೆಲ್ಲ‌ ನಾವು ಚಾಚು ತಪ್ಪದೆ ಮಾಡುತ್ತಿದ್ದೆವು. ಕೋಳಿಯ ಸಣ್ಣ ಸಣ್ಣ ಮಾಂಸದ ಚೂರುಗಳನ್ನು ತೆಗೆದಿಡಬೇಕು ಅದನ್ನು ಅಜ್ಜ ಬಂದು ಜಯಿಸಿದ ಕೋಳಿಗಳಿಗೆ ತಿನ್ನಿಸುವ ವಾಡಿಕೆ ಯಾಕೆಂದರೆ ಅದಕ್ಕೆ ಮಾಂಸದ ರುಚಿ ಹತ್ತಿಸಿ ಧೈರ್ಯ ಹೆಚ್ಚಿಸುವ ವಿಧಾನ. ಅದಕ್ಕೆಲ್ಲ ಮಕ್ಕಳಾದ ನಮ್ಮೆಲ್ಲರ ಸಹಕಾರ.

ಬಹುಷ ಸಣ್ಣದಿರುವಾಗ ನಾವೆಲ್ಲ ತರಕಾರಿ ಎನ್ನುವ ಶಬ್ಧವನ್ನೇ ಕೇಳಿಲ್ಲ ಯಾವತ್ತು ಮನೆಯ ಒಲೆಯಲ್ಲಿ ಮಾಂಸವೆ. ಮನೆಯಲ್ಲಿ ಅಷ್ಟು ಜನರಿದ್ದರು ಕೂಡ ಅಮ್ಮಣಿ ಅಮ್ಮ ಎಲ್ಲರಿಗೂ ಒಂದೇ ರೀತಿಯಲ್ಲಿ ಒಟ್ಟಿಗೆ ಬಡಿಸುವ ಪರಿ ಅದ್ಬುತ. ಎಲ್ಲರೂ ಒಟ್ಟಿಗೆ ಕೂತು ಅಜ್ಜನ ಹಳೆ ರೇಡಿಯೋದಲ್ಲಿ ಆಕಾಶವಾಣಿ ಹಾಡುಗಳನ್ನು ಕೇಳುತ್ತಾ ಊಟ ಮಾಡುವ ಖುಷಿಯೇ ಒಂದು ಮಜ. ಇವತ್ತಿಗೆ ಅದೆಲ್ಲ ಬರಿ ನೆನಪುಗಳಾದರೂ ನಮ್ಮ ಹಳ್ಳಿಯ ತಿನಸುಗಳು ಬದಲಾಗಿಲ್ಲ. ಕಾಲದ ಹೊಡೆತ ಇದ್ದರು ಕೂಡ ಒಮ್ಮೊಮ್ಮೆ ಈ ಕಾಂಬಿನೇಷನ್ ತಯಾರು ಆಗ್ತಾ ಇರುತ್ತೆ. ಇವತ್ತಿಗೆ ನಮ್ಮ ಅಜ್ಜ ಮತ್ತು ಅಮ್ಮಣಿ ಅಮ್ಮ ಇಲ್ಲ ಆದರೆ ಅವರ ಸಿಹಿ ನೆನಪಲ್ಲಿ ಆ ದಿನಗಳನ್ನು ನೆನಪಿಸುತ್ತಾ ಎಲ್ಲರು ಒಟ್ಟು ಸೇರಿ ಆ ಸಿಹಿಯನ್ನು ಉಣ್ಣುತ್ತಿದ್ದೇವೆ.

ಬರಹ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

0 comments: