Friday, July 10, 2020

ತುಳುನಾಡಿನಿಂದ ಕರುನಾಡಿನ ಮಾಧ್ಯಮದವರೆಗೂ ಬೆಳೆದು ನಿಂತಿರುವ ಬಹುಮುಖ ಪ್ರತಿಭೆ ಅನ್ವಿಷಾ ಪೂಜಾರಿ ವಾಮಂಜೂರು

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಮಾತಿನಂತೆ ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ವಿಸ್ತರಿಸಿದಂತಹ ಅದ್ಭುತ ಪ್ರತಿಭೆ ಅನ್ವಿಷಾ ವಾಮಂಜೂರು.ಅನಿಲ್ ಮತ್ತು ಅನುಷಾ ದಂಪತಿಗಳ ಮುದ್ದಿನ ಮಗಳಾಗಿ ಜನವರಿ 21, 2011 ರಂದು ವಾಮಂಜೂರ್ ನಲ್ಲಿ ಜನಿಸಿದ ಇವರು ಶುಭೋದಯ ವಿದ್ಯಾಲಯ,ಮೂಡುಶೆಡ್ಡೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಕೇವಲ 9 ವರ್ಷ ವಯಸ್ಸಿನ ಈ ಪೋರಿ ರಾಜ್ಯದಾದ್ಯಂತ ಜನರ ಮನೆ ಮಾತಾಗಿದ್ದಾರೆ. ನೃತ್ಯ, ಯಕ್ಷಗಾನ, ಭರತನಾಟ್ಯ, ಯೋಗ, ಮಾಡೆಲಿಂಗ್, ಚಿತ್ರಕಲೆ, ರಂಗೋಲಿ, ಕೀಬೋರ್ಡ್ ನುಡಿಸುವುದು, ನಟನೆ, ಪೇಪರ್ ಕಟ್ಟಿಂಗ್, ಭಾಷಣ ಹೀಗೆ ಹಲವಾರು ವಿಷಯಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

3 ವರುಷದ ಕಿರಿ ವಯಸ್ಸಿನಲ್ಲಿ ಕೃಷ್ಣವೇಷ ಸ್ಪರ್ಧೆಗೆ ವೇದಿಕೆ ಏರಿದ ಅನ್ವಿಷಾರವರು ಮುಂದೆ ಹಂತ ಹಂತವಾಗಿ ಮೇಲೇರಿ ಇಂದು ಸಾಧನೆಯ ಮೇರು ಶಿಖರದಲ್ಲಿದ್ದಾರೆ.ಅನೇಕ ಛದ್ಮವೇಷ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.ಇವುಗಳಲ್ಲಿ ಪ್ರಮುಖವಾದವು ರಾಗತರಂಗ, ಭಾರತೀಯ ವಿದ್ಯಾಭವನ  ಇತ್ಯಾದಿ. ಕದ್ರಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕೃಷ್ಣವೇಷ ಸ್ಪರ್ಧೆಯಲ್ಲಿ ಸತತ ಮೂರು ವರ್ಷ ಪ್ರಥಮ ಸ್ಥಾನ,ಒಂದು ಬಾರಿ ದ್ವಿತೀಯ ಸ್ಥಾನ ಮತ್ತು ಅನೇಕ ಕಡೆಗಳಲ್ಲಿ ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿ 50 ಕ್ಕೂ ಹೆಚ್ಚು ಬಹುಮಾನವನ್ನು ಪಡೆದಿದ್ದಾರೆ.ಜಿಲ್ಲಾ ಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಹಾಗೂ ಹೂವಿನ ಅಲಂಕಾರ ಸ್ಪರ್ಧೆಯಲ್ಲಿ ಸುಮಾರು 5 ಬಾರಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ರಂಗೋಲಿ ಸ್ಪರ್ಧೆ, ಹಾಡುಗಾರಿಕೆ,ನೃತ್ಯ ಹೀಗೆ ಅನೇಕ ಸ್ಪರ್ಧೆಗಳಲ್ಲಿ ತಮ್ಮ ಅಸಾಧಾರಣ ಪ್ರತಿಭೆಯ ಮೂಲಕ ಹಲವಾರು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ರಾಜ್ಯದಾದ್ಯಂತ 500 ಕ್ಕೂ ಹೆಚ್ಚು ನೃತ್ಯ, ಹಾಡುಗಾರಿಕೆ ಮತ್ತು ನಾಟಕ ಕಲಾವಿದರಾಗಿ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ. ಉತ್ತಮ ವಾಗ್ಮಿಯಾಗಿಯೂ ಕೂಡ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಮಿಂಚಿದ್ದಾರೆ.

ಉಡುಪಿಯಲ್ಲಿ ನಡೆದ 'ಉಡುಪಿ ಕಿಡ್ಸ್ ಟ್ಯಾಲೆಂಟ್ ' ಡಾನ್ಸ್ ಶೋನಲ್ಲಿ ದ್ವಿತೀಯ ಸ್ಥಾನ,ಮಕ್ಕಳ ಹಬ್ಬದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಅಷ್ಟೇ ಅಲ್ಲದೆ ಓದುವ ಹವ್ಯಾಸವನ್ನು ರೂಢಿಸಿಕೊಂಡು ಓದಿನಲ್ಲಿಯೂ ಪ್ರಥಮ ಸ್ಥಾನ ಪಡೆಯುತ್ತಾ ಬಂದಿದ್ದಾರೆ. ಚಿತ್ರದುರ್ಗ ನವೋದಯ ಪ್ರಕಾಶನ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ದರ್ಜೆ,ಚಿತ್ರದುರ್ಗದ ಚಿಂತನ ಪ್ರಕಾಶನದ ಗಣಿತ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ,ದೈಜಿ ವರ್ಲ್ಡ್ ಮಾಧ್ಯಮ ನಡೆಸಿದ "ಜೂನಿಯರ್ ಮಸ್ತಿ ಸೀಸನ್ 2" ರಿಯಾಲಿಟಿ ಶೋ ಗೆ ಆಯ್ಕೆ,ಮಂಗಳೂರಿನ ಫಾರಂ ಪಿಜ್ಜಾ ಮಾಲ್ ಏರ್ಪಡಿಸಿದ 'ಮಾಡೆಲ್ಲಿಂಗ್ ಮ್ಯಾಕ್ಸ್ ಮಾಡೆಲ್ಲಿಂಗ್ " ನಲ್ಲಿ 'ಮ್ಯಾಕ್ಸ್ ಮಂಗಳೂರು ಸೂಪರ್ ಕಿಡ್ಸ್' ಟ್ರೋಫಿಯನ್ನು ಹಾಗೂ 'Mangalore Little Princess' ಟ್ರೋಫಿ ಗಳಿಸಿದ್ದಾರೆ.

ಅನ್ವಿಷಾರವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದೆ. ಕರ್ನಾಟಕ ಸರ್ಕಾರದ "ಜಿಲ್ಲಾ ಅಸಾಧಾರಣ ಪ್ರತಿಭೆ " ಪ್ರಶಸ್ತಿ, "ತುಳುನಾಡೋಚ್ಛಯ ಪ್ರಶಸ್ತಿ ", "ಕಲಾ ಸೇವಾ ರತ್ನ ಪುರಸ್ಕಾರ ", "ಕರ್ನಾಟಕ ಪ್ರತಿಭಾ ರತ್ನ ", "ಚಿಗುರು ಪ್ರಶಸ್ತಿ ", "ಜೇಸಿ ಸಾಧನಶ್ರೀ ಪ್ರಶಸ್ತಿ ", "ತೌಳವ ಕುಮಾರಿ ", "ಸಿದ್ಧಯ್ಯ ಪುರಾಣಿಕ ಪ್ರಶಸ್ತಿ ", "ಕರ್ನಾಟಕ ಕಲಾಶ್ರೀ ", "ರಾಜ್ಯೋತ್ಸವ ಪುರಸ್ಕಾರ ", "ಯುವ ಪ್ರತಿಭೆ ಪ್ರಶಸ್ತಿ ", "ನ್ಯಾಷನಲ್ ಬೆಸ್ಟ್ ಟ್ಯಾಲೆಂಟೆಡ್ ಪ್ರಶಸ್ತಿ ", "ಸ್ವಸ್ತಿ ಸಂಭ್ರಮ ಪುರಸ್ಕಾರ ", ಅಷ್ಟೇ ಅಲ್ಲದೆ "ನಾಟ್ಯ ಮಯೂರಿ ", "ಕರಾವಳಿ ಕಲಾ ಭಂಡಾರ ", "ಕರಾವಳಿ ಕಲಾ ಕುವರಿ " ಎಂಬ ಬಿರುದು ಇವೆಲ್ಲವೂ ಇವರ ಪ್ರತಿಭೆಗೆ ಸಂದ ಪ್ರತಿಫಲ ಎನ್ನಬಹುದು. ಕರ್ನಾಟಕದ ಪ್ರಸಿದ್ಧ ಚಾನೆಲ್ "ಜೀ ಕನ್ನಡ " ದ 'ಡ್ರಾಮಾ ಜೂನಿಯರ್ ' ನಲ್ಲಿ ನಾಗಿಣಿ ಪಾತ್ರದ ಮೂಲಕ ಜನಪ್ರಿಯತೆ ಪಡೆದು ' ಡಾನ್ಸ್ ಕರ್ನಾಟಕ ಡಾನ್ಸ್ ' ನಲ್ಲಿ ಎಕ್ಸ್ಪ್ರೆಷನ್ ಕ್ವೀನ್ ಆಗಿ ಪ್ರಖ್ಯಾತಿಗೊಂಡಿದ್ದಾರೆ.

"ಜಬರ್ದಸ್ತ್ ಶಂಕರ " ಎಂಬ ಚಲನಚಿತ್ರದಲ್ಲಿ ಕೂಡಾ ನಟಿಸಿ ಮಿಂಚಿದ್ದಾರೆ. ಅನ್ವಿಷಾರವರು ತುಳುನಾಡಿನ ಬಗ್ಗೆ ಮಾತನಾಡಿದಂತಹ ಒಂದು ವಿಡಿಯೋ ಎಲ್ಲಾ ಕಡೆಗಲ್ಲಿ ವೈರಲ್ ಆಗಿ ಪ್ರಖ್ಯಾತಿಗೊಂಡಿದೆ.ಸ್ವ ಅಭಿಮಾನಿ ಬಳಗವನ್ನು ಹೊಂದಿರುವ ಅನ್ವಿಷಾ ರವರ ಈ ಎಲ್ಲಾ ಸಾಧನೆಗೆ ತಾಯಿಯೇ ಮೊದಲ ಗುರು ಹಾಗೂ ಇವರ ಪೋಷಕರು ತಮ್ಮ ಮಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ.ಇಂತಹ ಅದ್ಭುತ ಪ್ರತಿಭೆಗೆ ಇನ್ನಷ್ಟು ಅವಕಾಶ ಒದಗಿ ಬರಲಿ ಮತ್ತು ಇವರ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂಬುದು ನಮ್ಮೆಲ್ಲರ ಶುಭಾಶಯ.
2 comments: