Saturday, May 22, 2021

ಚಿತ್ರಕಲೆಯನ್ನು ತಮ್ಮ ಜೀವನದ ಗುರಿಯನ್ನಾಗಿಸಿಕೊಂಡ ಚಿತ್ರಕಲಾ ಶಿಕ್ಷಕ ರಕ್ಷಿತ್ ಬಜಾಲ್

ನಮ್ಮ ಮನಸ್ಸು ಶಕ್ತಿಯುತವೂ, ಶಿಸ್ತುಬದ್ದವೂ ಆಗಿರುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು. ಮೊದಲು ' ನಿನ್ನ ನೀ ಅರಿ' ನಿನ್ನಲ್ಲೇ ಅತ್ಯದ್ಭುತ ಶಕ್ತಿ ಸಾಮರ್ಥ್ಯಗಳು ಅಡಗಿದೆ. ಜೀವ ನಮ್ಮ ಮಾತನ್ನು ಕೇಳುವುದಿಲ್ಲ ಯಾವಾಗ ಬೇಕಾದರೂ ಬಿಟ್ಟು ಹೋಗಬಹುದು ಆದರೆ ಜೀವನ ನಮ್ಮ ಮಾತನ್ನು ಕೇಳುತ್ತದೆ ನಿಷ್ಠೆ ಹಾಗೂ ಸಾಮರ್ಥ್ಯದಿಂದ ಜೀವನವನ್ನು ರೂಪಿಸಿಕೊಳ್ಳಬಹುದು. ಅಂತೆಯೇ ತಮ್ಮ ಶಕ್ತಿ, ಕಲೆಯ ಮೇಲಿನ ಪ್ರೀತಿ ಹಾಗೂ ನಿಷ್ಠೆಯಿಂದ, ಹಾಗೂ ತಮ್ಮ ಸಾಮರ್ಥ್ಯದಿಂದ ಜೀವನವನ್ನು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಉತ್ತಮ ನಿದರ್ಶನ ನಮ್ಮ ಇವತ್ತಿನ ಪ್ರತಿಭೆ. ಚಿತ್ರಕಲೆಯನ್ನು ತಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಚಿತ್ರ ಕಲಾವಿದರೂ, ಚಿತ್ರಕಲಾ ಶಿಕ್ಷಕರಾಗಿರುವ #ರಕ್ಷಿತ್ ಬಜಾಲ್. 




ಹಿಂದಿನ ಕಾಲದ ಚಿತ್ರಕಲಾ ಪ್ರಾಕಾರಗಳನ್ನ  ಯುವ ಜನತೆಗೆ ಪರಿಚಯಿಸುತ್ತಿದ್ದಾರೆ. ಹಾಗೆಯೇ ಅವುಗಳನ್ನು ಯುವ ಪೀಳಿಗೆಗೆ ಕಲಿಸುವ ಪ್ರಯತ್ನವನ್ನು ಕೂಡ  ಮಾಡುತ್ತಿದ್ದಾರೆ. ರಕ್ಷಿತ್ ಬಜಾಲ್ ರವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಾಜೇಶ್ ಹಾಗೂ ಶಶಿಕಲಾ ದಂಪತಿಗಳ ಮಗನಾಗಿ 19 ಡಿಸೆಂಬರ್ 1995 ರಂದು ಜನಿಸಿದರು. ಪ್ರಸ್ತುತ ಜಪ್ಪಿನ ಮುಗೆರು ಯನಪೋಯ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ.  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಜಾಲ್ ಸೈಂಟ್ ಜೋಸೆಫ್ ಶಾಲೆಯಲ್ಲಿ ಮುಗಿಸಿದರು. ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಕಪಿತಾನಿಯೋ ಪದವಿ ಪೂರ್ವ ಕಾಲೇಜುನಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ಮಹಾಲಸ ಆರ್ಟ್ ಕಾಲೇಜು ಕುದ್ರೋಳಿಯಲ್ಲಿ ಪಡೆದಿರುತ್ತಾರೆ. 



ವಿದ್ಯಾಭ್ಯಾಸದ ಸಮಯದಲ್ಲಿಯೇ ಚಿತ್ರಕಲೆಯಲ್ಲಿ ಗುರುಗಳ ಸ್ಪೂರ್ತಿಯ ಮಾತುಗಳಿಂದ ಆಸಕ್ತಿ ಬೆಳೆಸಿಕೊಂಡರು. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಹಾಗೂ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೂಂಡಿದ್ದಾರೆ. ಜೆ.ಪಿ ಆಚಾರ್ಯ ಕೋಟೆಕ್ಕಾರ್,  ಸತೀಶ್ ಮೆಲ್ಕರ್ ಮತ್ತು ಕಿರಣ್ ಬಜಾಲ್ ಇವರ ಸಹಕಾರ ಮತ್ತು ಪ್ರೋತ್ಸಾಹದಿಂದ ಚಿತ್ರಕಲೆಯಲ್ಲಿ ಸಾಧನೆಯ ಶಿಖರವನ್ನು ಏರುತ್ತಾ ಮುಂದುವರೆಯುತ್ತಿದ್ದಾರೆ.




* ಸತೀಶ್ ಮೆಲ್ಕರ್, ರಾಜೇಶ್, ಮೋಹನ್ ಕುಮಾರ್, ಯನ್. ಎಸ್. ಪತ್ತಾರ್, ಸೈಯದ್ ಆಸಿಫ್ ಅಲಿ, ನಾಗರಾಜ್, ಹಾಗೂ ತಮ್ಮ ಸಹಪಾಠಿಗಳ ಸಹಕಾರ ಹಾಗೂ ಪ್ರೋತ್ಸಾಹದಿಂದ ಚಿತ್ರಕಲೆಯಲ್ಲಿ ಸಾಧನೆ ಮಾಡಿದೆ. ಇವರೇ ನನಗೆ ಬೆಂಬಲಿಗರು ಎಂಬುದು ಅವರ ಮಾತು.

* ಇದುವರೆಗೆ ಸಾವಿರಕ್ಕೂ ಅಧಿಕ ಚಿತ್ರಗಳನ್ನು ಬಿಡಿಸಿರುವ ಇವರು ಸಾಂಪ್ರದಾಯಿಕ ಶೈಲಿಯ ಚಿತ್ರಕಲೆಯನ್ನು ಬರೆಯುವ ಹವ್ಯಾಸ ಹೊಂದಿದ್ದಾರೆ.

* ಪ್ರಾಚೀನ ಕಾಲದಲ್ಲಿ ಪ್ರಚಲಿತದಲ್ಲಿ ಇದ್ದ ಕಿನ್ನಾಳ ಆರ್ಟ್ ನಲ್ಲಿ ಪರಿಣತಿ ಹೊಂದಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ಅರಳಿ, ಕೊಪ್ಪಳ ತಾಲ್ಲೂಕಿನ ಪುಟ್ಟ ಗ್ರಾಮ ಕಿನ್ನಾಳದಲ್ಲಿ ರೂಪು ಪಡೆದುಕೊಂಡಿರುವ ಕಲೆಯೇ ಕಿನ್ನಾಳ ಕಲೆ. 

* ಕಲಂಕಾರಿ, ಇದೊಂದು ಕರಕುಶಲ ಕಲೆ ಆಗಿದ್ದು ಇದನ್ನು ಉಡುಪುಗಳ ತಯಾರಿಕೆಗೆ, ಮಡಕೆಗಳ ಮೇಲೆ ರೇಖಾ ಚಿತ್ರಗಳ ಮೂಲಕ ಬಿಡಿಸಲಾಗುತ್ತದೆ.
ಮಧುಬನಿ ಎಂಬ ಮಹಾರಾಷ್ಟ್ರ ಮೂಲದ ಚಿತ್ರಕಲೆ, ಪಟಚಿತ್ರ, ಜೈಪುರದ ಪಿಚುವೈ, ಅಜಂತಾ ಗುಹೆಯಲ್ಲಿನ ಬುದ್ಧನ ಚಿತ್ರ ,  ಅಂಧ್ರದ ಕಲಂಕಾರಿ ಹೀಗೇ ಅನೇಕ ಬಗೆಗಿನ ಚಿತ್ರಕಲೆಯನ್ನು ಬರೆಯುವ ವಿಭಿನ್ನ ರೀತಿಯ ಕಲಾವಿದ.

* ಕ್ಯಾನ್ವಾಸ್ ಚಿತ್ರಕಲೆ, ಪೆನ್ಸಿಲ್ ಆರ್ಟ್, ಕ್ರಾಫ್ಟ್, ಫೊಟೋ ರಿ ಪ್ರೊಡಕ್ಷನ್, ಇಂತಹ ವಿಭಿನ್ನ ರೀತಿಯ ಚಿತ್ರಗಳನ್ನು ಕೂಡ  ಬಿಡಿಸುತ್ತಾರೆ.

* "ನ್ಯಾಷನಲ್ ಆರ್ಟ್ ಕಾಂಟೆಸ್ಟ್"ನಲ್ಲಿ ಭಾಗವಹಿಸಿರುವ ಇವರು "ಮೆರಿಟ್ ಅವಾರ್ಡ್" ಅನ್ನು ಪಡೆದಿರುತ್ತಾರೆ.

* ಪಟ ಚಿತ್ರ ,ಕಲಂಕಾರಿ,ಕಿನ್ನಾಳ, ಆಯಿಲ್ ಚಿತ್ರ ಪ್ರದರ್ಶನ ಮಾತ್ರವೇ ಅಲ್ಲದೆ ಮಂಗಳೂರಿನ ಕುಡ್ಲ ಕಲಾ ಮೇಳ ,ಬೆಂಗಳೂರಿನ ಚಿತ್ರ ಸಂತೆ, ಫಿಯೋನಿಕ್ಸ್ ಮಾಲ್ನಲ್ಲಿ ನಡೆದ ಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. 

* ಚಿತ್ರಕಲಾ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ತಮ್ಮ ಅನುಭವಗಳನ್ನು ಸ್ಪರ್ದಿಗಳೊಂದಿಗೆ ಹಂಚಿಕೊಂಡು, ಅವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಇವರು ತಾವು ಕೇವಲ ಚಿತ್ರಕಲೆಯಲ್ಲಿ ಅಲ್ಲದೆ ಯಕ್ಷಗಾನ ಕ್ಷೇತ್ರದಲ್ಲಿಯೂ ಅಭಿರುಚಿಯನ್ನು ಹೊಂದಿದ್ದಾರೆ.

* ಅಶೋಕ್ ಬೋಳೂರು ಇವರ ಮಾರ್ಗದರ್ಶನದಲ್ಲಿ ಕಾವು ಬೈಲು ಪಂಚಲಿಂಗೇಶ್ವರ ಯಕ್ಷಗಾನ ಕಲಾವೃಂದ ಬಜಾಲ್ ಇದರ ಸದಸ್ಯರಾಗಿರುವ ಇವರು ಯಕ್ಷ ಪ್ರಿಯರು ಕೂಡ ಹೌದು.

* ಉಸ್ತಾದ್ ಮಾಧವ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ಕಾವು ಬೈಲು ರುದ್ರಂಜನೇಯ ವ್ಯಾಯಾಮ ಶಾಲೆಯಲ್ಲಿ ತಾಲಿಮು ಅಭ್ಯಾಸದಲ್ಲಿಯೂ ತೊಡಗುತ್ತಾರೆ.

ನಾವು ಕಲೆಯನ್ನು ಹಾಗೂ ಕಲಾವಿದರನ್ನು ಗೌರವಿಸಬೇಕು. ಕಲಾವಿದನ ಕಲೆಗೆ ಗೌರವ ದೊರಕಿದರೆ ಮಾತ್ರ  ಕಲಾವಿದನು ಮತ್ತಷ್ಟು ಆತ್ಮವಿಶ್ವಾಸ ಹಾಗೂ ಕಲೆಯ ಮೇಲಿನ ಅಭಿರುಚಿಯನ್ನು  ಬೆಳೆಸಿಕೊಂಡು ಅನೇಕ ರೀತಿಯ ಕಲೆಯನ್ನು ಕಲಿಯುವ ಆಸಕ್ತಿ ಬೆಳೆಸಿಕೊಳ್ಳುತ್ತಾನೆ. ಕಲೆಯಲ್ಲಿ ಪರಿಪೂರ್ಣತೆ ದೊರಕುವುದು ಆ ಕಲಾವಿದ ತನ್ನನ್ನು ತಾನು ಅ ಕಲೆಯ ಕಲಿಕೆಗೆ ಪ್ರೇರಣೆ ಕೊಟ್ಟರೆ ಮಾತ್ರ. ನಾವು ಕಲೆಯನ್ನು ಬೆಳೆಸಬೇಕು ಹಾಗೂ ಬೆಳೆಸುವುದರ ಜೊತೆಗೆ ಕಲೆಯನ್ನು ಗೌರವಿಸಬೇಕು ಎಂಬುದು ಇವರ ಮಾತು.

ಚಿತ್ರಕಲಾ ಶಿಕ್ಷಕರಾಗಿರುವ ರಕ್ಷಿತ್ ರವರು ಯಕ್ಷಗಾನ ಪ್ರೇಮಿಯೂ ಹೌದು. ಚಿತ್ರಕಲೆಯಲ್ಲಿ ಬೆಳೆಯುತ್ತಿರುವ ಇವರು ತಮ್ಮೊಂದಿಗೆ ಹಲವಾರು ಕಲಾವಿದರನ್ನು ಬಳಸಿಕೊಂಡು ಮುನ್ನಡೆಯತ್ತಿರುವ ಇವರು ತಮ್ಮ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಹಾಗೂ ತಮ್ಮ ಚಿತ್ರಕಲೆಯನ್ನ ಮತ್ತಷ್ಟು ಕಲಾವಿದರನ್ನು ಬೆಳೆಸಲಿ ಎಂಬುದು ನಮ್ಮ ಆಶಯ ಹಾಗೂ ಸಾಧನೆಯ ಹಾದಿಯಲಿ ಮುನ್ನಡೆಯಲಿ ಎಂಬುದು ನಮ್ಮ ತಂಡದ ಶುಭ ಹಾರೈಕೆಗಳು.

0 comments: