Thursday, June 3, 2021

ಯಕ್ಷರಂಗಸ್ಥಳವನ್ನೇರಿ ದಿಟ್ಟ ಹೆಜ್ಜೆ ಇಟ್ಟ ಯಕ್ಷಕನ್ಯೆ ಶಿವಪುರದ ಇಂಚರ

 ಸಾಧನೆಯ ಮೊದಲ ಹೆಜ್ಜೆ ಕನಸು ಕಾಣುವುದು. ಆದರೆ ಕೇವಲ ಕನಸು ಕಾಣುವುದರಿಂದ ಯಾವ ಸಾಧನೆಯೂ ಅಗುವುದಿಲ್ಲ. ಕಂಡ ಕನಸನ್ನು ನನಸಾಗಿಸುವ ಕಡೆಗೆ ನಾವು ಹೆಜ್ಜೆ ಇಡಬೇಕು. ಯಕ್ಷಗಾನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಿಂದ ಯಕ್ಷರಂಗಸ್ಥಳವನ್ನೇರಿ ದಿಟ್ಟ ಹೆಜ್ಜೆ ಇಟ್ಟ ಯಕ್ಷಕನ್ಯೆ ಶಿವಪುರದ ಇಂಚರ.

ಶಂಕರ ಪೂಜಾರಿ-ಉಷಾ ದಂಪತಿಯ ಮುದ್ದಿನ ಮಗಳಾದ ಇಂಚರ, ಎಳೆಯ ವಯಸ್ಸಿನಿಂದಲೇ ಯಕ್ಷಗಾನ ಪರಿಸರದಲ್ಲಿ ಬೆಳೆದವಳು. ತಂದೆ ಹವ್ಯಾಸಿ ಯಕ್ಷಗಾನ ಕಲಾವಿದರಾದ ಕಾರಣ ತಂದೆಯ ವೇಷವನ್ನು ನೋಡುತ್ತಾ ನೋಡುತ್ತಾ ಅವರಂತೆ ಗೆಜ್ಜೆ ಕಟ್ಟಿ ಬಣ್ಣ ಹಚ್ಚಬೇಕೆಂಬ ಆಸಕ್ತಿ ಅವಳಲ್ಲಿ ಹೆಚ್ಚಿತು.

ಹೆಬ್ರಿ ಅಮೃತ ಭಾರತಿ ವಿದ್ಯಾಲಯದಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುವ ಸಂದರ್ಭ ಯಕ್ಷಗುರು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಅವರಿಂದ ಬಡಗು ನಾಟ್ಯವನ್ನು ಕಲಿತು `ಪಾರಿಜಾತಾಪಹಾರ' ಪ್ರಸಂಗದ ದೇವೇಂದ್ರನಾಗಿ ಮೊದಲ ರಂಗ ಪ್ರವೇಶ ಮಾಡಿದಳು.

ಮುಂದೆ ಯಕ್ಷಲೋಕ, ಹೆಬ್ರಿ ಸಂಸ್ಥೆ ಅವಳ ಕನಸ್ಸಿನ ಹಕ್ಕಿಗೆ ರೆಕ್ಕೆಗಳನ್ನು ಮೂಡಿಸಿತು. ಅನೇಕ ಅವಕಾಶಗಳು ಒದಗಿ ಬಂದವು. ಯಕ್ಷದಿಗಂತದಲ್ಲಿ ಎತ್ತರೆತ್ತರಕ್ಕೆ ಹಾರುವ ಬಯಕೆ ಆಕೆಯದಾಯಿತು

ಮದನಾಕ್ಷಿ, ಮೀನಾಕ್ಷಿ, ದ್ರೋಣ, ಅರ್ಜುನ, ಕೃಷ್ಣ, ಪ್ರಸೇನ, ಲಕ್ಷ್ಮಣ ಹೀಗೆ ಹಲವಾರು ಪಾತ್ರಗಳನ್ನು ಧರಿಸಿ ಸಂಭ್ರಮಿಸಿದಳು. ಕುಣಿತದ ಜೊತೆ ಜೊತೆಗೆ ಭಾಗವತಿಕೆಯತ್ತವೂ ಈಕೆಯ ಒಲವು ಹರಿಯಿತು. ಇದೀಗ ಪೂರ್ವರಂಗದ ಭಾಗವನ್ನು ಪೂರೈಸಿ ಭಾಗವತಿಕೆಯಲ್ಲಿ ಹೆಚ್ಚಿನ ಅಭ್ಯಾಸಕ್ಕೆ ತೊಡಗಿಸಿಕೊಂಡಿದ್ದಾಳೆ. 

ಮೊದಮೊದಲು ಅಸಾಧ್ಯವೆಂದುಕೊಂಡದ್ದು ಇತ್ತೀಚೆಗೆ ಸಾಧ್ಯ್ಯವಾಗುತ್ತಿದೆ ಎಂಬ ಭಾವನೆಗಳು ದೃಢವಾಗುತ್ತಿದೆ ಎಂದು ಹೇಳುತ್ತಾಳೆ. ಅದಕ್ಕೆ ತಂದೆ-ತಾಯಿಯರ ಪ್ರೋತ್ಸಾಹವೇ ಕಾರಣ ಎಂಬ ವಿಧೇಯತೆ ಅವಳದ್ದು. ಪ್ರಸ್ತುತ ಉಡುಪಿಯ ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿನಿಯಾಗಿ ವಾಣಿಜ್ಯ ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಇಂಚರಳ ಕನಸುಗಳು ಯಕ್ಷಲೋಕದಲ್ಲಿ ಸಂಚರಿಸುತ್ತಿದೆ.

0 comments: