Saturday, June 19, 2021

ಕೋಟಿ ಚೆನ್ನಯರು ಮತ್ತು ಅವರ ಕುಟುಂಬ ದೈವಗಳ ವಿಷಯದಲ್ಲಿರುವ ಗೊಂದಲ

 ಕೋಟಿ ಚೆನ್ನಯರು ಮತ್ತು ಅವರ ಕುಟುಂಬ ದೈವಗಳ ವಿಷಯದಲ್ಲಿರುವ ಗೊಂದಲ


ಬರಹ:ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ.


 ದೈವಾರಾಧನೆಯೆಂಬುದು ಹಿರಿಯರು ನಮಗೆ ನೀಡಿದ ಬಳುವಳಿಯೆ ಹೊರತು ನಾನು ಸೃಷ್ಟಿಸಿದ ಹೊಸ ಪಾಕವೇನು ಅಲ್ಲ. ಹಿರಿಯರು ನಮಗೆ ಬಿಟ್ಟು ಹೋದ ಎಲ್ಲಾ ಸಂಪ್ರದಾಯ ಮತ್ತು ಆರಾಧನೆಯನ್ನು ಜತನದಿಂದ ಕಾಪಾಡಿ ಸಂರಕ್ಷಿಸಿ ಮೂಲ ಕಟ್ಟಲೆಗೆ ಯಾವುದೇ ಚ್ಯುತಿ ಬಾರದಂತೆ ನಮ್ಮ ಬೆನ್ನ ಹಿಂದೆ ಬರುತ್ತಿರುವ ಪೀಳಿಗೆಗೆ ಹಸ್ತಾಂತರಿಸುವ ಪ್ರಕ್ರಿಯೆ ಕ್ರಮಬದ್ದವಾಗಿ ಆಗಬೇಕು. ಆದರೆ ಇಂದು ಈ ಪ್ರಕ್ರಿಯೆ ನಮ್ಮ ಹಿರಿಯರ ಕಾಲದಲ್ಲಿ ನಮಗೆ ಸಂಪ್ರದಾಯ ಬದ್ದವಾಗಿ ಆಗಿದೆ. ಆದರೆ ನಮ್ಮ ಕಾಲದಲ್ಲಿ ನಾವು ಹೊಸತರದ ಹುಡುಕಾಟದಲ್ಲಿ ಎಲ್ಲವನ್ನು ಕಲಸಮೇಲೋಗರ ಮಾಡುತ್ತಿದ್ದೇವೆ. ದೈವಾರಾಧನೆಯಲ್ಲಿ ಗೊಂದಲದ ಬೀಡಾಗಿರುವ ಅತೀ ಹೆಚ್ಚಿನ ಪಾಲು ಹೊಂದಿರುವುದು ಬೈದೇರುಗಳ ಕಥಾನಕ. ಇಲ್ಲಿ ಹುಟ್ಟಿನಿಂದ ಸಾಯುವವರೆಗೆ ಗೊಂದಲಗಳು ಬೆಂಬತ್ತಿ ಬರುತ್ತಲೇ ಇವೆ. ಎಲ್ಲಾ ಗೊಂದಲಗಳಿಗೆ ಸ್ವಲ್ಪ ತೆರೆ ಬಿದ್ದಿದೆ ಎಂದು ಕೊಳ್ಳುವ ಸಮಯದಲ್ಲಿ ಇವಾಗ ಅವರ ಕುಟುಂಬ ದೈವಗಳು ಯಾವುದು ಎನ್ನುವ ಹುಡುಕಾಟದಲ್ಲಿ ಹೊಸ ವಿಷಯಗಳ ಅನಾವರಣವಾಗುತ್ತಿದೆ. ಕೋಟಿ ಚೆನ್ನಯರ ಪಾರ್ದನದಲ್ಲಿ ನಾನು ತಿಳಿದ ಕೇಳಿದ ಓದಿದ ಅಡಿಯಲ್ಲಿ ಎಲ್ಲೂ ಕೂಡ ಕುಟುಂಬ ದೈವಗಳ ಉಲ್ಲೇಖವಿಲ್ಲ. ಅವರ ಕಥಾನಕದಲ್ಲಿ ಸರ್ವ ರೀತಿಯಲ್ಲಿ ವ್ಯಾಪಿಸಿಕೊಂಡಿದ್ದು ಬೆರ್ಮೆರ್ ಹೊರತಾಗಿ ಬೇರೆ ಯಾವುದರ ಉಲ್ಲೆಖವಿಲ್ಲ. ಅವರ ಕಥಾನಕದಲ್ಲಿ ಗಿಳಿರಾಮ ದೈಯಾರ್ ಹೆಣ್ಣು ಹೋಗಿ ಹೆಂಗಸು ಆಗುವುದಿಲ್ಲ ಎನ್ನುವಾಗ ಗುಂಡದಬ್ಬೆ ಹರಕೆ ಹೇಳುವುದು ಬೆರ್ಮರಿಗೆ. ದೈಯಾರ್ ಪೊಣ್ಣು ಪೋದು ಪೊಂಜೊವು ಆಯಲುಂಡ ಬೆರ್ಮರೆ ಅಂಗಣ ಅಡಿಪಾವೆ ಪುಂಡಿ ಪಣವು ಪಾಡಾವೆ ಎಂದು . ದೇಯಿ ಬೈದೆತಿಗೆ ಪ್ರಸವ ವೇದನೆ ಬರುತ್ತಿರುವಾಗ ತುಂಬೆ ನಾಡಿನ ಬೊಂಬೆ ಮುದರು ಹೇಳುತ್ತಾಳೆ ಓ ಬಲ್ಲಾಳೆರೆ ದೇಯಿನ ಬಂಜಿಗ್ ಒಂಜಿ ಕೊಂಡೆ ಎಣ್ಣೆ ಬುಡ್ನಗ ರಡ್ಡ್ ಕಬರಾದ್ ಜತ್ತುಂಡಿಯೆ  ಇರ್ವೆರ್ ಜೋಕುಲು ಉಲ್ಲೆರಿಯೆ ಎಂದು ಹೇಳುವಾಗ ಬೆರ್ಮೆರ್ ಹರಕೆ ಹೇಳುತ್ತಾರೆ ಓ ಜಯವುಳ್ಳ ಬೆರ್ಮೆರೆ ದೇಯಿನ ಬಂಜಿದ ನಂಜಿ ಸುಖಟ್ಟ್ ಭೂಮಿಗ್ ಜತ್ತುಂಡ ಇರೆನ ನೆತ್ತಿಗ್ 5 ಇಳೆದ ಬಂಗಾರಿನ ಸತ್ತಿಗೆ ಮನ್ಪವೆ ಎಂದು ಹೇಳುತ್ತಾರೆ. ಅದೇ ರೀತಿ ದೇಯಿ ಬೈದೆತಿ ಪ್ರಸವ ನೋವಿನಲ್ಲಿ ಬೆರ್ಮರಿಗೆ ಹರಕೆ ಹೇಳುತ್ತಾಳೆ; ಓ ಬೆರ್ಮೆರೆ ಯಾನ್ ಪೊರ್ಲುಡು ಪೆದಿಯೆಂಡ ಎನ್ನ ಜೋಕ್ಲೆನ ಕೈಟ್ ಈರೆಗ್ ಪುಂಡಿ ಪನವು ಪಾಡವೆ ಎಂದು. ಅದೇ ರೀತಿ ಚಂದುಗಿಡಿ ಮೋಸದಲ್ಲಿ ಪಂಜದ ಪದವಿನ ಕಾಡಿನಲ್ಲಿ ಸೆರೆಮನೆಗೆ ತಳ್ಳುವಾಗ ಅಲ್ಲಿ ಕೂಡ ಅವರು ಭಜಿಸಿ ತಪ್ಪಿಸಿಕೊಂಡಿದ್ದು ಇದೇ ಬೆರ್ಮರನ್ನು ಸ್ತುತಿಸಿ. ಈ ಎಲ್ಲಾ ಸಂದರ್ಭದಲ್ಲೂ ಕೂಡ ಬೇರೆ ದೈವ ದೇವರುಗಳ ಉಲ್ಲೇಖವಿಲ್ಲ. ಕುಜುಂಬ ಮುದ್ಯ ಬಲ್ಲಾಳನಿಗೆ ಮುಳ್ಳು ಚುಚ್ಚಿ ಕೆಂಪು ಬದಂಗಲೆ ಬಾವು ಬಂದಾಗಲು ದೇಯಿ ಬೈದೆತಿ ಇದೇ ಬೆರ್ಮರನ್ನು ಸ್ತುತಿಸಿ 7 ಕೈತ ಕೊಪ್ಪರಿಗೆಡ್ ಕಷಾಯ ಕಾಯಿಪಾಯಲ್ ಪುಡಿನ್ ಕಷಾಯಡ್ ದೆಕ್ಕಿಯಲ್ ಗಡಿನ್ ಕೆರೆತಾಲ್ ಗಡಿಕ್ಕ್ ಗಡಿ ಮರ್ದ್ ದೀಯಲ್ ಪುಡಿಕ್ಕ್ ಪುಡಿ ಮರ್ದ್ ದೀಯಲ್ ಎಂದು. ಈ ಎಲ್ಲಾ ಸಂದರ್ಭಗಳಲ್ಲಿಯೂ ಕೂಡ ಅವರ ಕುಟುಂಬ ದೈವ ಪಂಜುರ್ಲಿ ಅಥವ ಜುಮಾದಿಯ ಉಲ್ಲೇಖವಿಲ್ಲ. ಇಲ್ಲದ ಪಾತ್ರಗಳನ್ನು ತುರುಕಿಸಿ ಕಥೆಯಲ್ಲಿ ಹೊಸತನವನ್ನು ಸೃಷ್ಟಿಸಿ ಯಾರನ್ನು ಸಂತೋಷ ಪಡಿಸಲು ನಾವು ಹೊರಟಿದ್ದೇವೆ. ಕುಪ್ಪೆ ಪಂಜುರ್ಲಿ ಪಾರ್ದನದಲ್ಲಿ ಬರುವ ಬೀರೊಟ್ಟು ಬರ್ಕೆ ಕೋಟಿ ಕುಪ್ಪೆ ಚೆನ್ನಯ ಕುಪ್ಪೆ ಎಂಬುವವರ ಉಲ್ಲೇಖ ಬರುವಾಗ ಅದನ್ನು ಪೆರ್ಮಲೆಯ ಕೋಟಿ ಚೆನ್ನಯರ ಕಥೆಗೆ ತಳುಕು ಹಾಕಿಸಿ ಕುಪ್ಪೆ ಪಂಜುರ್ಲಿ ಅವರ ಕುಟುಂಬ ದೈವ ಎಂದು ಪ್ರಚಾರ ಪಡಿಸಿದ್ದು ಸೋಜಿಗವೆ ಸರಿ. ಒಂದೇ ಹೆಸರಿನ ಅನೇಕರ ಉಲ್ಲೇಖ ದೈವಗಳ ಪಾರ್ದನದಲ್ಲಿ ಬರುತ್ತದೆ. ದೇಯಿ ಎನ್ನುವ ಹೆಸರು ಕೆಲವು ದೈವಗಳ ಪಾರ್ದನದಲ್ಲಿ ಉಲ್ಲೇಖವಿದೆ, ಆದ ಮಾತ್ರಕ್ಕೆ ಆಕೆ ಕೋಟಿ ಚೆನ್ನಯರ ತಾಯಿಯೇ ಆಗಬೇಕೆಂದಿಲ್ಲ. ದೈವ ಜುಮಾದಿಯನ್ನು ಅವರು ಕಾಯದಲ್ಲಿ ಇರುವಾಗ ಭಜಿಸಿದ ಉಲ್ಲೇಖ ಎಲ್ಲಿಯು ಇಲ್ಲ ಆದರೆ ಮಾಯ ಸೇರಿದ ಮೇಲೆ ಮಾಣಿಬಾಲೆಯನ್ನು ತಂಗಿಯೆಂದು ಒಪ್ಪಿಕೊಂಡು ತಮ್ಮ ಸೇರಿಗೆಗೆ ಸೇರಿಸಿಕೊಳ್ಳುವ ಸಮಯದಲ್ಲಿ ಕೊಳತ್ತ(ಕಳತ್ತ) ಜುಮಾದಿಯಲ್ಲಿ ಕೇಳಿಕೊಳ್ಳುವ ಉಲ್ಲೇಖವಿದೆ. ಆದರೆ ಇಂದು ಕೋಟಿ ಚೆನ್ನಯರಿಗೆ ಆದಿ ದೈವ ಜುಮಾದಿ ಯಾವ ರೀತಿ ಆಗಿದ್ದು ಎಂದು ಸೃಷ್ಟಿಸಿದವರೆ ಉತ್ತರ ನೀಡಬೇಕು. ದಿನಕ್ಕೊಂದು ಕಥೆ ಸೃಷ್ಟಿಸುವುದರಲ್ಲಿ ಮನೋರಂಜನೆ ನೀಡುವುದರಲ್ಲಿ ನಾವು ನಿಸ್ಸೀಮರೆ ಇರಬಹುದು ಆದರೆ ಸಂದಿ ಪಾರ್ದನಗಳನ್ನು ತಿರಿಚುವ ಪ್ರಕ್ರಿಯೆ ದಯವಿಟ್ಟು ನಿಲ್ಲಿಸುವುದು ಒಳ್ಳೆಯದು. ಕೋಟಿ ಚೆನ್ನಯರ ಕುಟುಂಬ ದೈವಗಳ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಅವರ ಆರಾಧನಾ ಪದ್ದತಿಯಲ್ಲಿ ಆಗುವ ವ್ಯತ್ಯಾಸಗಳ ಬಗ್ಗೆ  ದ್ವನಿಯೆತ್ತದ್ದು ಸೋಜಿಗವೆ ಸರಿ. ಒಂದು ವೇಳೆ ಅವರಿಗೆ ಕುಟುಂಬ ದೈವಗಳು ಇದ್ದಿರಬಹುದು ಆದರೆ ಅದರ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ ಆಗಿರುವಾಗ ಇವಾಗ ಅವರ ಕುಟುಂಬ ದೈವಗಳ ಬಗ್ಗೆ ನಾವು ಹೊಸ ರೂಪ ಕೊಡುವ ಅರ್ಥ ಏನಿದೆ. ಮೊದಲು ಈ ಪ್ರಕ್ರಿಯೆಯನ್ನು ಇಲ್ಲಿಗೆ ನಿಲ್ಲಿಸೋಣ. ತುಳುನಾಡಿನ ಪ್ರತಿ ಜಾತಿ ಧರ್ಮದ ಭಕ್ತರ ಆರಾಧ್ಯ ಮೂರ್ತಿಗಳಾದ ಶಕ್ತಿಗಳನ್ನು ಯಾವುದೇ ಚ್ಯುತಿ ಬಾರದೆ ಆರಾಧಿಸಿಕೊಂಡು ಹೋಗುವತ್ತ ಮನಸ್ಸು ಮಾಡುವ. ಇಲ್ಲಿಯವರೆಗೆ ಅವರ ವಿಷಯದಲ್ಲಿ ಆದ ಗೊಂದಲಗಳೇ ಸಾಕು ಇನ್ನಷ್ಟು ಕಗ್ಗಂಟು ಮಾಡಿ ಗೊಂದಲಗಳಿಗೆ ಆಸ್ಪದ ಬೇಡ.


0 comments: