*ಬಿಲ್ಲವರಲ್ಲಿ ಮರೆಯಾಗುತ್ತಿರುವ ಗುರು ಕಾರ್ನವರಿಗೆ ವಸ್ತ್ರ ಇಡುವ ಸಂಪ್ರದಾಯ*
ಬರಹ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ
ಬಹುಷ ಈ ಕ್ರಮದ ಬಗ್ಗೆ ಬರೆಯಲು ಸ್ಪೂರ್ತಿ ನನ್ನ ತಾಯಿಯ ತಾಯಿ. ನನ್ನ ತಾಯಿಯ ತಾಯಿ ವಾರ್ಷಿಕ ದೈವಗಳ ಅಗೇಲು ಮತ್ತು ಗುರುಕಾರ್ನವರಿಗೆ ಅಗೇಲು ಬಡಿಸಿದ ಮಾರನೆ ದಿನ ಗುರುಕಾರ್ನವರಿಗೆ ಇಡಲು ಕುಟುಂಬಿಕರು ತಂದ ಬಿಳಿ ವಸ್ತ್ರವನ್ನು ಒಂದು ಮಣ್ಣಿನ ಮಡಕೆಯಲ್ಲಿ ಎಲ್ಲಾ ಇಟ್ಟು ಅದನ್ನು ಮನೆಯ ಅಟ್ಟದಲ್ಲಿ ನೇತು ಹಾಕುತ್ತಿದ್ದರು. ಇದನ್ನು ಮುಂದಿನ ವರ್ಷ ಅಗೇಲು ಬಡಿಸಿದ ಮಾರನೆ ದಿವಸ ತೆಗೆದು ಬಟ್ಟೆಗಳನ್ನು ಎಲ್ಲರಿಗೂ ಪ್ರಸಾದ ರೂಪದಲ್ಲಿ ನೀಡಿ ಆ ವರ್ಷ ಬಂದ ಹೊಸ ಬಟ್ಟೆಗಳನ್ನು ಮಡಕೆಯಲ್ಲಿ ಇಟ್ಟು ಯಥಾ ಸ್ಥಾನದಲ್ಲಿ ಕಟ್ಟಿ ಇಡುತ್ತಿದ್ದರು. ಅದು ಕೂಡ ಮದುವೆಯಾಗದ ಗಂಡು ಮತ್ತು ಹೆಣ್ಣುಮಕ್ಕಳಿಗೆ ಆ ವಸ್ತ್ರಗಳನ್ನು ನೀಡುತ್ತಿರಲಿಲ್ಲ. ಆದರೆ ಈ ಕ್ರಮಗಳು ಅವರೊಂದಿಗೆ ಹೊರಟು ಹೋಗಿ ಆ ನಂತರ ಅದನ್ನು ಯಾರು ಪಾಲಿಸಲಿಲ್ಲ ಹೆಚ್ಚಾಗಿ ಯಾರಿಗೂ ಅದರ ಬಗ್ಗೆ ಅಷ್ಟಾಗಿ ಒಲವು ಇರಲಿಲ್ಲ. ತುಳುನಾಡಿನಲ್ಲಿ ಎಲ್ಲಾ ಆಚರಣರಗಳು ಕೂಡ ನಂಬಿಕೆ ಮತ್ತು ಶ್ರದ್ದೆಯಿಂದ ಕೂಡಿರುವಂತಹುದು ಮತ್ತು ಪ್ರಾದೇಶಿಕ ಭಿನ್ನತೆಗಳನ್ನು ಒಳಗೊಂಡ ಆಚರಣೆಗಳೇ ಹೆಚ್ಚು. ಅದೇ ರೀತಿ ನಂಬಿಕೆಗಳು ಕೂಡ ಜಾತಿಯಿಂದ ಜಾತಿಗೆ ಭಿನ್ನ ಇದ್ದರೂ ಈ ಅಳಿಯ( ತಾಯಿ ಕಟ್ಟು) ಕಟ್ಟಿನಲ್ಲಿ ಸಾಮಾನ್ಯವಾಗಿ ರೀತಿ ರಿವಾಜು ಮತ್ತು ಪಾಲನೆಗಳು ಒಂದೇ ರೀತಿಯದ್ದಾಗಿರುತ್ತದೆ. ಆದರೆ ಸಂಪ್ರದಾಯಗಳ ವಿಷಯಕ್ಕೆ ಬಂದಾಗ ಬಿಲ್ಲವರು ತಮ್ಮದೇ ಆದ ಕೊಡುಗೆಯನ್ನು ಮತ್ತು ಸಂಪ್ರದಾಯಗಳನ್ನು ಸಮಾಜಕ್ಕೆ ನೀಡಿದ್ದಾರೆ. ಆದರೆ ಕಾಲನ ಕೈಗೆ ಸಿಕ್ಕಿ ಅದನ್ನು ಎಷ್ಟು ಮುಂದುವರೆಸಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆ. ಇಲ್ಲಿ ಈ ಅಗಲಿದ ಆತ್ಮಗಳಿಗೆ ಈ ಬಟ್ಟೆ ಇಡುವ ಶಾಸ್ತ್ರ ಯಾಕೆ ಬಂದಿರಬಹುದೆನ್ನುವುದರ ಬಗ್ಗೆ ಆಳಕ್ಕೆ ಇಳಿದಾಗ ಇಲ್ಲಿ ನಂಬಿಕೆಗಳು ಹೆಚ್ಚಾಗಿ ಮೂರ್ತ ರೂಪಕ್ಕೆ ಬರುತ್ತವೆ. ತುಳುವರಲ್ಲಿ ಒಂದು ನಂಬಿಕೆಯಿದೆ ಸತ್ತವರು ಆತ್ಮಗಳಾಗಿ ನಮ್ಮೊಂದಿಗೆ ಇರುತ್ತಾರೆ ಎನ್ನುವುದು. ಅವರಿಗೂ ಶರೀರ ಸಹಜ ಆಸೆಗಳು ಸತ್ತ ಮೇಲು ಇರುತ್ತವೆ ಎನ್ನುವ ನಂಬಿಕೆ ಹಾಗಾಗಿ ಅವರು ವಸ್ತ್ರಗಳ ಮೇಲೆ ಹೆಚ್ವಿನ ಆಸೆಯನ್ನು ಇಟ್ಟುಕೊಂಡಿರುತ್ತಾರೆ ಎನ್ನುವ ನಂಬಿಕೆಯಿಂದ ಅವರಿಗಾಗಿ ಹೊಸ ಬಟ್ಟೆ ತೆಗೆದಿಟ್ಟು ಅದು ಅವರಿಗೆ ಮೀಸಲು ಎನ್ನುವ ರೀತಿಯಲ್ಲಿ ಈ ಬಟ್ಟೆ ತೆಗೆದಿಡುವುದು ವಾಡಿಕೆ. ಮದುವೆ ಮತ್ತು ಯಾವುದೇ ಶುಭ ಸಮಾರಂಭಗಳಲ್ಲಿ ಇವತ್ತಿಗೂ ಕೂಡ ಗುರುಕಾರ್ನವರಿಗೆ ಬಡಿಸಿ ಹೊಸ ಮದುಮಗಳ/ ಮಗನ ಬಟ್ಟೆಗಳನ್ನು ಬಡಿಸಿದ ಆಹಾರದೊಂದಿಗೆ ಇಡುತ್ತಾರೆ. ಇದರ ಅರ್ಥ ಗುರು ಕಾರ್ನವರು ಒಪ್ಪಿಸಿಕೊಂಡು ಅದನ್ನು ಮುಂದೆ ಉಟ್ಟವರಿಗೆ ಯಾವುದೇ ರೀತಿಯ ಸಮಸ್ಯೆಗಳನ್ನು ಅಂದರೆ ಸೋಂಕುಗಳು ಆಗದಿರಲಿ ಎನ್ನುವ ಭಾವನೆ. ಹೊಸ ಬಟ್ಟೆಗಳಿಗೆ ಅಗಲಿದವರು ಬೇಗ ಆಕರ್ಷಿತರಾಗುತ್ತಾರೆ ಎನ್ನುವ ಶಿಷ್ಟ ನಂಬಿಕೆ. ಈ ದೃಷ್ಟಿಯಿಂದ ಮನೆಯಲ್ಲಿ ಪದೇ ಪದೇ ಹೊಸ ಬಟ್ಟೆಗಳ ಕೊಂಡುಕೊಳ್ಳುವಿಕೆ ಆಗುತ್ತಲೇ ಇರುತ್ತದೆ ಆದರೆ ಪದೇ ಪದೇ ಅವುಗಳನ್ನು ಇಟ್ಟು ಭಜಿಸಲು ಆಗುವುದಿಲ್ಲ ಈ ದೃಷ್ಟಿಯಿಂದ ಈ ರೀತಿಯ ಮೀಸಲು ಇಡುವ ನಂಬಿಕೆಗಳು ಬೆಳೆದು ಬಂತು. ಅದೇ ರೀತಿಯಲ್ಲಿ ಇಲ್ಲಿ ಹಿರಿಯರು ಹೇಳಿದ ಇನ್ನೊಂದು ಮಾತು ಕೂಡ ನಂಬಿಕೆಯ ಹಿಂದೆ ಇರುವ ಸತ್ಯವನ್ನು ಅನಾವರಣಗೊಳಿಸುತ್ತದೆ. ಹಿಂದಿನ ಕಾಲದಲ್ಲಿ ಈ ಬಟ್ಟೆಬರೆಗಳು ಎಲ್ಲವೂ ಕೂಡ ಕನಿಷ್ಟ ಮಟ್ಟದಲ್ಲಿ ಇರುತ್ತಿದ್ದ ಕಾಲ. ಒಂದು ಮನೆಯಲ್ಲಿ ಕಾರ್ಯಕ್ರಮ ನಡೆದಾಗ ಬಂದ ಎಲ್ಲರಿಗೂ ಉಡಲು ಕೊಡುವಷ್ಟು ಯಾರು ಶಕ್ತರಲ್ಲ. ಆದುದರಿಂದ ಈ ನಂಬಿಕೆಯ ತಳಗಟ್ಟಿನಲ್ಲಿ ಈ ರೀತಿಯ ರಿವಾಜು ಬೆಳೆದು ಬಂದು ಅದು ಕೊರತೆಯನ್ನು ನೀಗಿಸುತ್ತಿತ್ತು ಮತ್ತು ಆದಷ್ಟು ಹಿರಿಯರಿಗೆ ಇದು ಪ್ರಸಾದ ರೂಪವಾಗಿ ಸಿಗುತ್ತಿದ್ದುದರ ಮರ್ಮವು ಏನೆಂದರೆ ಕಿರಿಯರು ಎಲ್ಲಿಯಾದರು ಸಂಪಾದಿಸಲು ಶಕ್ತರು ಆದರೆ ಹಿರಿ ಜೀವಗಳಿಗೆ ಉಟ್ಟ ಎರಡು ತುಂಡು ಬಟ್ಟೆಗಳೆ ಅತೀ ಪ್ರಾಮುಖ್ಯದ್ದು. ಆದುದರಿಂದ ಮದುವೆಯಾಗದವರಿಗೆ ಈ ಬಟ್ಟೆ ತೊಡುವುದು ನಿಷಿದ್ದ ಎನ್ನುವ ನಂಬಿಕೆ ಬೆಳೆದು ಬಂದಿದೆ ಎನ್ನುವುದು ಅವರ ವಾದ.ಆದರೆ ಇಂದು ನಂಬಿಕೆಗಳು ಸಂಕುಚಿತಗೊಂಡು ಕೇವಲ ಬಡಿಸುವಾಗ ಮಾತ್ರ ವಸ್ತ್ರ ಇಟ್ಟು ಅಲ್ಲಿಗೆ ಸಂಪ್ರದಾಯವನ್ನು ಮಾಡಿ ಕೈ ತೊಳೆದುಕೊಂಡಿದ್ದಾರೆ. ಏನೇ ಇರಲಿ ಈ ನಂಬಿಕೆಗಳು ತಿಳಿದವನಿಗೆ ಪಥ್ಯವಾದರು ಕೂಡ ಅದನ್ನು ಉಳಿಸಿ ಬೆಳೆಸಿದರೆ ಮಾತ್ರ ಯಾವುದಕ್ಕೂ ಅರ್ಥ. ಆದರೆ ಮುಂದುವರೆಸುವ ಮನಸ್ಸುಗಳು ಆಧುನಿಕ ಪ್ರಪಂಚದಲ್ಲಿ ಕಡಿಮೆಯಾಗುತ್ತಿದೆ, ಪಾಲಿಸಿದ ಹಿರಿ ಜೀವಗಳು ಆಕಾಶಕ್ಕೆ ಹೊಗೆ ಭೂಮಿಗೆ ಬೂದಿಯಾಗಿ ನೇಪಥ್ಯಕ್ಕೆ ಸರಿದಿದ್ದಾರೆ. ಇನ್ನಾದರು ಯುವ ಜನಾಂಗ ಪಾಲಿಸಿದರೆ ಅದೇ ದೊಡ್ಡದು ಯಾವುದಕ್ಕೂ ಕಾಲವೇ ಉತ್ತರ ನೀಡಬೇಕು.
0 comments: