ಕರಾವಳಿಯ ಹಾಡು ಕೋಗಿಲೆ ಸಚಿತ್ ಪೂಜಾರಿ ನಂದಳಿಕೆ...
ಬರಹ:-ಶ್ರವಣ್ ಬಿ.ಸಿ.ರೋಡ್
ಸಂಗೀತ ಎಂತಹ ಕಲ್ಲು ಮನಸ್ಸಿನ ವ್ಯಕ್ತಿಯನ್ನು ಕರಗಿಸಬಲ್ಲ ಒಂದು ಅದ್ಭುತ ಕಲೆ... ಇದರ ಹಿಂದೆ ಸತತ ಪರಿಶ್ರಮ ಇದ್ದರೆ ಮಾತ್ರ ಈ ಕಲೆ ದಕ್ಕುತ್ತದೆ. ಇಂತಹ ಕಲೆಯನ್ನು ಒಲಿಸಿಕೊಂಡವರೇ ಮಧುರ ಕಂಠದ ಗಾಯಕ ಕರಾವಳಿ ಕೋಗಿಲೆ ಸಚಿತ್ ಪೂಜಾರಿ ನಂದಳಿಕೆ...
ಬಾಲ್ಯ ಜೀವನದಲ್ಲೇ ಅಮ್ಮನ ಪ್ರೋತ್ಸಾಹದಿಂದ ಭಜನೆಯ ಮೂಲಕ ಹಾಡುಗಾರಿಕೆ ಆರಂಭಿಸಿದ ಇವರು, ಶಾಲಾ ಮೆಟ್ಟಿಲು ಹತ್ತಿದ ನಂತರ ಪ್ರತಿಭಾ ಕಾರಂಜಿಯ ಮೂಲಕ ತನಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು, ಯಾವುದೇ ಗುರುವಿನ ಮಾರ್ಗದರ್ಶನವಿಲ್ಲದೆ ತನ್ನದೇಯಾದ ಪರಿಶ್ರಮದ ಮೂಲಕ ಇದು ಪ್ರಸಿದ್ಧ ಗಾಯಕರಾಗಿ ಗುರುತಿಸಿಕೊಂಡಿರುವ ಸಾಧಕ...
ಸಂಗೀತವನ್ನು ಅತಿಯಾಗಿ ಪ್ರೀತಿಸುವ ಇವರು, ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆಯ ಮಾವಿನಕಟ್ಟೆಯವರು. ಭೋಜ ಪೂಜಾರಿ ಮತ್ತು ವಿನೋದ ದಂಪತಿಗಳಿಗೆ ದಿನಾಂಕ 05.09.1993 ರಂದು ಜನಿಸಿ, ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಕಲ್ಯಾ, ಪ್ರೌಢಶಿಕ್ಷಣವನ್ನು ಸರ್ಕಾರಿ ಉನ್ನತ ಶಾಲೆ ಬೆಳ್ಮಣ್ ನಲ್ಲಿ ಮುಗಿಸಿ ಪದವಿಪೂರ್ವ ಶಿಕ್ಷಣವನ್ನು ಸರ್ಕಾರಿ ಪಿಯು ಕಾಲೇಜು ಬೆಳ್ಮಣ್ ಮತ್ತು , ಪದವಿಯನ್ನು (ಬಿಬಿಎಂ) N.S.A.M F.G.C ನಿಟ್ಟೆ ಕಾಲೇಜಿನಲ್ಲಿ ಪಡೆದರು.
ಇವರ ಸಂಗೀತದ ಪಯಣದಲ್ಲಿ, 2012ರಲ್ಲಿ "ರೇಡಿಯೋ ಮಿರ್ಚಿ" 98.3 FM ರವರಿಂದ "ಮಿ. ಕ್ಯಾಪಂಸ್ ಸ್ಟಾರ್ 2012" ಪ್ರಶಸ್ತಿಯನ್ನು ಮುಡಿಗೇರಿಸಿ, 2013 ರಲ್ಲಿ "ಉದಯ ಚಾನೆಲ್ ಅಕ್ಷರಾ ಮಾಲೆ" ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾಗಿ, "N.S.A. M first grade college ನಿಟ್ಟೆ" ಇವರಿಂದ "ಅತ್ಯುತ್ತಮ ಸಾಂಸ್ಕೃತಿಕ ಪ್ರದರ್ಶಕ" ಎಂಬ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಮೈಸೂರಿನಲ್ಲಿ ನಡೆದ ಯುವಜನ ಮೇಳ ಭಾವಗೀತೆ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರಲ್ಲದೆ, 3 ವರ್ಷಗಳಿಂದ ನಿರಂತರವಾಗಿ ಉಡುಪಿ ಜಿಲ್ಲಾಮಟ್ಟದ ಯುವಜನ ಮೇಳದಲ್ಲಿ ಭಾವಗೀತೆ , ರಂಗಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಇದರ ಜೊತೆ ನಾಟಕದ ಟೈಟಲ್ ಹಾಡುಗಳಿಗೆ ಧ್ವನಿಯಾದ ಇವರು "ಪಿರ ತೂನಗ" ತುಳುನಾಟಕದ ಶೀರ್ಷಿಕೆ ಗೀತೆ, "ಟೀಮ್ ಬಂಗದ ಬೊಲ್ಪು" ಮಂಗಳೂರು ಇವರ ಶೀರ್ಷಿಕೆ ಗೀತೆ, ತುಳು ಆಲ್ಬಂ ಹಾಡು "ಪೊಸ ಬೊಲ್ಪು" ಹಾಗೂ ಇನ್ನಿತರ ಹಾಡುಗಳಿಗೆ ಧ್ವನಿಯಾಗಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ.
2016 ರಲ್ಲಿ "ನಮ್ಮ ಟಿ.ವಿ" ನಡೆಸಿದ "ನಮ್ಮ ಸೂಪರ್ ಸಿಂಗರ್" ರಿಯಾಲಿಟಿ ಶೋ ನಲ್ಲಿ 700 ಸ್ಪರ್ಧಿಗಳಲ್ಲಿ ಇವರು ಟಾಪ್ 25 ನೇ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. "ಕಾರ್ಕಳ ಸೂಪರ್ ಸಿಂಗರ್ 2012" ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಹಾಗೆಯೇ ಇತ್ತೀಚಿಗೆ "ಕಲರ್ಸ್ ಕನ್ನಡ" ವಾಹಿನಿ ನಡೆಸಿದ ಜನಪ್ರಿಯ ರಿಯಾಲಿಟಿ ಶೋ "ಹಾಡು ಕರ್ನಾಟಕ" ಎಂಬ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ 40000 ಸ್ಪರ್ಧಿಗಳಲ್ಲಿ ಟಾಪ್ 30 ನೇ ಸ್ಪರ್ಧಿಗಳ ಪೈಕಿ ಇವರೂ ಒಬ್ಬರು ಹಾಗೂ ಆಯ್ಕೆ ಪ್ರಕ್ರಿಯೆಯ ಅಂತಿಮ ಕಂತಿನಲ್ಲಿ ಕಲರ್ಸ್ ಕನ್ನಡ ವಾಹಿನಿಯ ಮೂಲಕ ತನ್ನ ಪ್ರತಿಭೆಯನ್ನು ದಕ್ಷಿಣ ಭಾರತದಾದ್ಯಂತ ಪಸರಿಸಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗಳೂ ಕೂಡ ಇವರನ್ನೂ ಹುಡುಕಿಕೊಂಡು ಬಂದಿದ್ದು,
2019 ರಲ್ಲಿ ಕುವೈಟ್ ನಲ್ಲಿ ನಡೆದ "ಬಿಲ್ಲವ ಸಂಘ ಕುವೈಟ್" ಇದರ ಕಾರ್ಯಕ್ರಮದಲ್ಲಿ ಸಂಗೀತದ ರಸದೌತಣವನ್ನು ಉಣಿಸುವುದರೊಂದಿಗೆ ಸನ್ಮಾನ ಸ್ವೀಕರಿಸಿದರಲ್ಲದೆ, ಯಕ್ಷ ಕಲಾ ಸಂಘ ವರಕೋಡಿ ಬಡಗಬೆಳ್ಳೂರು, J.C.I ಬೆಳ್ಮಣ್ ಹಾಗೂ ಹಲವಾರು ಸಂಘ ಸಂಸ್ಥೆಗಳು ಮತ್ತು ವಿವಿಧ ವೇದಿಕೆಗಳು ಇವರನ್ನು ಗೌರವಿಸಿವೆ..
ಇತ್ತೀಚೆಗೆ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ ಇವರಿಂದ "ಅಬ್ಬನಡ್ಕ ಗಾನ ಕೋಗಿಲೆ" ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟಿದ್ದಾರೆ.
ಪ್ರಸ್ತುತ ಮೋದಿಕೇರ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಉದ್ಯೋಗದೊಂದಿಗೆ ಸಂಗೀತ ಕ್ಷೇತ್ರದಲ್ಲಿ ಇವರ ಸಾಧನೆ ನಿಜಕ್ಕೂ ಮೆಚ್ಚುವಂತದ್ದು...
ಇವರ ಸಾಧನೆಯ ಹಾದಿ ಹೀಗೆ ಮುಂದುವರಿಲಿ. ಸಂಗೀತ ಕ್ಷೇತ್ರದಲ್ಲಿ ಉತ್ತಮ ಗಾಯಕರಾಗಿ ಮೂಡಿಬರಲಿ ಎಂಬುದೇ ನಮ್ಮ ಆಶಯ..
ಟೀಮ್ ನಮ್ಮ ಬಿಲ್ಲವೆರ್
0 comments: